ನೆಲ್ಲೂರು: ಕಳೆದ 15 ವರ್ಷಗಳಿಂದ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೋರ್ವ ಈಗ ಲಾಕ್ಡೌನ್ನಿಂದ ಬಾಳೆಹಣ್ಣು ಮಾರುವ ಪರಿಸ್ಥಿತಿ ಎದುರಾಗಿರುವ ಘಟನೆ ಆಂಧ್ರದ ನೆಲ್ಲೂರು ಪಟ್ಟಣದಲ್ಲಿ ಕಂಡು ಬಂದಿದೆ.
ಲಾಕ್ಡೌನ್ ವೇಳೆಯಲ್ಲಿ ಕೆಲಸ ಕಳೆದುಕೊಂಡ ಸ್ನಾತಕೋತ್ತರ ಪದವೀಧರ ಸುಬ್ಬಯ್ಯ
ಆಂಧ್ರ ಪ್ರದೇಶದ ನೆಲ್ಲೂರಿನ 43 ವರ್ಷದ ಪಟ್ಟೆಂ ವೆಂಕಟ ಸುಬ್ಬಯ್ಯನವರು ರಾಜ್ಯಶಾಸ್ತ್ರ ಮತ್ತು ತೆಲುಗು ಭಾಷೆಯಲ್ಲಿ ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದು ಕಳೆದ 15 ವರ್ಷಗಳಿಂದ ಶಿಕ್ಷಣ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ತೆಲುಗು ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಘೋಷಿಸಿದ ಲಾಕ್ಡೌನ್ ವೇಳೆಯಲ್ಲಿ ಅವರ ಶಾಲೆಯನ್ನೂ ಸಹ ಮುಚ್ಚಲಾಯಿತು. ಅಲ್ಲಿಂದಲೇ ಶುರುವಾಯ್ತು ನೋಡಿ ಅವರ ಸಂಕಷ್ಟಗಳು.
ಲಾಕ್ಡೌನ್ ಕಾಲದಲ್ಲಿ ಏಪ್ರಿಲ್ ತಿಂಗಳವರೆಗೆ ಕೇವಲ ಅರ್ಧ ವೇತನವನ್ನ ನೀಡುತ್ತಿದ್ದ ಶಾಲೆಯ ಆಡಳಿತ ಮಂಡಳಿ ಮೇ ತಿಂಗಳಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಕನಿಷ್ಠ 6ರಿಂದ 7 ಹೊಸ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಸಬೇಕು ಎಂಬ ಷರತ್ತನ್ನು ಹಾಕಿದರಂತೆ. ಬಹಳ ಪ್ರಯಾಸ ನಡೆಸಿದರೂ ಕೊರೊನಾ ಮಹಾಮಾರಿಯ ಭೀತಿಯಿಂದ ಯಾವ ಪೋಷಕರು ಅಡ್ಮಿಷನ್ ಮಾಡಿಸಲು ಮುಂದಾಗಲಿಲ್ಲ. ಇದನ್ನು ಮಂಡಳಿಗೆ ಮನವರಿಕೆ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ ಅವರು ಕೇಳದೆ ಕೊನೆಗೆ ಅವರನ್ನು ಕೆಲಸದಿಂದ ವಜಾ ಮಾಡಿದ್ದಾರಂತೆ.
ಸಾಲ ತೀರಿಸಲು ಬಾಳೆಹಣ್ಣು ವ್ಯಾಪಾರ
ತುಂಬು ಕುಟುಂಬ ಹೊಂದಿರುವ ಸುಬ್ಬಯ್ಯನವರಿಗೆ ಇಬ್ಬರು ಚಿಕ್ಕ ಮಕ್ಕಳು. ಅದರಲ್ಲೂ ದೊಡ್ಡ ಮಗನಿಗೆ ಕೆಲ ಆರೋಗ್ಯ ಸಮಸ್ಯೆಗಳಿವೆ. ಆತನ ಚಿಕಿತ್ಸೆಗಾಗಿ ಸುಮಾರು ಮೂರು ಲಕ್ಷ ರೂಪಾಯಿ ಸಾಲ ಮಾಡಿದ್ದರು. ಹಾಗಾಗಿ ಸುಬ್ಬಯ್ಯನವರಿಗೆ ಮುಂದೇನು ಮಾಡುವುದು ಎಂಬ ಯೋಚನೆ ಶುರುವಾದಾಗ ಸ್ನೇಹಿತನೊಬ್ಬನ ಸಲಹೆ ಪಡೆಯಲು ಮುಂದಾದರು. ಆತ ನೀಡಿದ ಸಲಹೆಯಂತೆ ಕಡಿಮೆ ಬಂಡವಾಳ ಬೇಕಿರುವ ಬಾಳೆಹಣ್ಣಿನ ವ್ಯಾಪಾರ ಪ್ರಾರಂಭಿಸಿದರು. ಹೊಟ್ಟೆ ತುಂಬಿಸಿಕೊಳ್ಳಲು ಯಾವ ಕೆಲಸವಾದರೇನು ಎಂಬ ನಂಬಿಕೆಯಲ್ಲೇ ಸುಬ್ಬಯ್ಯ ಈಗ ಬಾಳೆಹಣ್ಣು ಮಾರಿ ಜೀವನ ಸಾಗಿಸುತ್ತಿದ್ದಾರೆ.
ಸಂತಸವೆಂದರೆ ಸುಬ್ಬಯ್ಯ ಪಾಠ ಮಾಡುತ್ತಿದ್ದ ವಿದ್ಯಾರ್ಥಿಗಳು ಅವರ ಪಾಡು ನೋಡಿ ನೆರವಿಗೆ ಮುಂದಾದರು. ತಮ್ಮ ಕೈಯಲ್ಲಿ ಆದಷ್ಟು ಆರ್ಥಿಕ ನೆರವನ್ನೂ ಸಹ ನೀಡಿದ್ದಾರಂತೆ. ಹಾಗಾಗಿ ಮಗನ ಚಿಕಿತ್ಸೆಗಾಗಿ ಪಡೆದಿದ್ದ ಸಾಲವನ್ನ ತೀರಿಸಲು ಕೊಂಚ ಸಹಾಯವಾಗಿದೆ. ಈ ಒಂದು ಸಂಗತಿ ಸುಬ್ಬಯ್ಯರಿಗೆ ಬಹಳಷ್ಟು ಸಂತಸ ತಂದುಕೊಟ್ಟಿದೆ. ಇದೀಗ ಸುಬ್ಬಯ್ಯ ಕೊಂಚ ಧೈರ್ಯ ಮಾಡಿ ತಮ್ಮ ಸಹೋದ್ಯೋಗಿಗಳ ಸಹಾಯಕ್ಕೆ ಮುಂದಾಗಿದ್ದಾರೆ. ಮಂಡಳಿಯ ಷರತ್ತಿನಿಂದ ಕಷ್ಟ ಅನುಭವಿಸಿದ್ದ ಶಾಲೆಯ ಇತರೆ ಶಿಕ್ಷಕರು ತಮ್ಮ ಜೇಬಿನಿಂದಲೇ ಶುಲ್ಕ ಕಟ್ಟಿ ನಕಲಿ ದಾಖಲಾತಿ ಮಾಡಿಸಿದ್ದರಂತೆ. ಹಾಗಾಗಿ ಇವರ ಎದುರಿಸಿದ ತೊಂದರೆಗಳನ್ನೂ ಬೆಳಕಿಗೆ ತರಲು ಮುಂದಾಗಿದ್ದಾರೆ. ಸರ್ಕಾರ ಕೂಡಲೇ ತಮ್ಮ ಸಹಾಯಕ್ಕೆ ಬರಬೇಕೆಂದು ಆಗ್ರಹಿಸಿದ್ದಾರೆ.