Explainer: ಭಾರತದಲ್ಲಿ ಪೆಟ್ರೋಲ್ ಬೆಲೆ ಏರುತ್ತಲೇ ಇದೆ! ಯಾಕೆ?

| Updated By: ganapathi bhat

Updated on: Apr 07, 2022 | 5:47 PM

Petrol Price Hike Explainer ದೇಶದಲ್ಲಿ ಇಂಧನ ದರ ಏಕೆ ಏರಿಕೆಯಾಗುತ್ತಿದೆ? ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ, ಭಾರತದಲ್ಲಿ ಏಕೆ ತೈಲ ಬೆಲೆ ಹೆಚ್ಚಾಗಿದೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇರಿರುವ ತೆರಿಗೆಯ ಮೊತ್ತವೇ ಇದಕ್ಕೆ ಕಾರಣವೇ?

Explainer: ಭಾರತದಲ್ಲಿ ಪೆಟ್ರೋಲ್ ಬೆಲೆ ಏರುತ್ತಲೇ ಇದೆ! ಯಾಕೆ?
ಸಾಂದರ್ಭಿಕ ಚಿತ್ರ
Follow us on

ದೆಹಲಿ: ದೇಶದಲ್ಲಿ ಇಂಧನ ದರ ಏರಿಕೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ಭಾರತದ ಮುಂಬೈ, ಜೈಪುರದಂಥಾ ಕೆಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 90 ರೂ. ಗಡಿ ದಾಟಿದೆ. ಉಳಿದ ಹಲವು ಪ್ರದೇಶಗಳಲ್ಲಿ ಇಂಧನ ದರ 80 ರೂ.ಗಿಂತ ಹೆಚ್ಚಿದೆ. ಡೀಸೆಲ್ ದರ ಕೂಡ ಏರಿಕೆಯ ಗತಿಯಲ್ಲಿ ಸಾಗುತ್ತಿದೆ. ಜೈಪುರದಂಥಾ ನಗರಗಳಲ್ಲಿ ಡೀಸೆಲ್ ಬೆಲೆ ರೂ. 80 ದಾಟಿದೆ. ಕೊರೊನಾದಿಂದ ಹದಗೆಟ್ಟು, ಸದ್ಯ ಚೇತರಿಕೆಯತ್ತ ಮುಖಮಾಡಿರುವ ಭಾರತದ ಆರ್ಥಿಕ ಪರಿಸ್ಥಿತಿಯಲ್ಲಿ, ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಸಾಮಾನ್ಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆದರೆ, ಇಂಧನ ದರ ಏಕೆ ಹೆಚ್ಚಾಗುತ್ತಿದೆ ಎಂಬ ಪ್ರಶ್ನೆಗೆ ಎರಡು ವಿವರಣೆಗಳನ್ನು ಗಮನಿಸಬಹುದು. ಜಾಗತಿಕವಾಗಿ ತೈಲ ಬೆಲೆ ಏರಿಕೆ ಆಗುವುದು ಒಂದು ಕಾರಣವಾದರೆ, ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿದ ತೆರಿಗೆಯಿಂದ ಇಂಧನ ಬೆಲೆ ಏರಿಕೆಯಾಗುವುದು ಇನ್ನೊಂದು ಕಾರಣ.

ದೇಶದಲ್ಲಿ, ಎರಡು ವಾರಗಳ ಹಿಂದೆ ಇಂಧನ ದರ ಏರಿಕೆಯತ್ತ ಮುಖಮಾಡಲು ತೊಡಗಿತು. ಕಚ್ಚಾ ತೈಲದ ಬೆಲೆ ಐದು ದಿನಗಳ ಹಿಂದೆ, ಮಾರ್ಚ್ ನಂತರದಲ್ಲೇ ಅತೀ ಹೆಚ್ಚು ಏರಿಕೆಯನ್ನು ಕಂಡಿತು. ಇಂದು ಇಂಧನ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬರದಿದ್ದರೂ ಕಳೆದ 17 ದಿನಗಳಲ್ಲಿ, ಪೆಟ್ರೋಲ್ ಲೀಟರ್​ಗೆ 2-3 ರೂ. ಹಾಗೂ ಡೀಸೆಲ್ ಲೀಟರ್​ಗೆ 3 ರೂ. ಏರಿಕೆಯಾಗಿದೆ.

ಇಂಧನ ದರ ಏರಿಕೆ- ಕೆಲವು ಅಂಕಿ ಅಂಶಗಳು
ಪೆಟ್ರೋಲ್ ಮತ್ತು ಡೀಸೆಲ್ ಎರಡು ವರ್ಷಗಳಲ್ಲೇ ಅತಿ ಹೆಚ್ಚು ಬೆಲೆಯತ್ತ ಮುಖಮಾಡಿರುವ ಕಾರಣದಿಂದ ಇಂಧನ ಬಳಕೆಯ ಪ್ರಮಾಣದಲ್ಲಿಯೂ ವ್ಯತ್ಯಾಸ ಉಂಟಾಗುವ ಸಾಧ್ಯತೆಗಳನ್ನು ಅಂದಾಜಿಸಲಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 83.71 ರೂ. ಆಗಿದೆ. ಕನಿಷ್ಠ ಭಾರತದ 11 ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ, ರಾಷ್ಟ್ರ ರಾಜಧಾನಿಗಿಂತ ಹೆಚ್ಚಾಗಿದೆ. ದೆಹಲಿ ಪೆಟ್ರೋಲ್ ದರದಲ್ಲಿ ಇನ್ನು ಕೇವಲ 29 ಪೈಸೆ ಏರಿಕೆಯಾದರೆ, ಪೆಟ್ರೋಲ್ ಸಾರ್ವಕಾಲಿಕ ಗರಿಷ್ಠ ಮೊತ್ತವನ್ನು ಕಾಣಲಿದೆ. ಈ ಹಿಂದೆ, 2018 ಅಕ್ಟೋಬರ್ 4ರಂದು ಲೀಟರ್ ಪೆಟ್ರೋಲ್ ದರ 84 ರೂ. ಆಗಿತ್ತು.

ಮುಂಬೈನಲ್ಲಿ 91.34 ರೂ. ಪೆಟ್ರೋಲ್ ದರ ದಾಖಲಾಗಿದೆ. ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಗರಿಷ್ಠ ಮೊತ್ತದತ್ತ ಇಂಧನ ದರ ದಾಪುಗಾಲಿಡುತ್ತಿದೆ. ಮುಂಬೈ, ಜೈಪುರ, ಹೈದರಾಬಾದ್, ಭುವನೇಶ್ವರ ನಗರಗಳಲ್ಲಿ ಡೀಸೆಲ್ ಬೆಲೆ ಕೂಡ ಗರಿಷ್ಠ 80 ರೂ.ಗಳ ಗಡಿ ದಾಟಿದೆ.

ಜಾಗತಿಕ ಕಚ್ಚಾ ತೈಲ ಬೆಲೆಯನ್ನು ಗಮನಿಸುವುದಾದರೆ, 2018ರಲ್ಲಿ ಬ್ಯಾರೆಲ್ ಇಂಧನ ದರ 70 ಡಾಲರ್​ಗಳಾಗಿತ್ತು. ಸದ್ಯ ಬ್ಯಾರೆಲ್ ಕಚ್ಚಾ ತೈಲದ ಬೆಲೆ 49 ಡಾಲರ್​ಗಳಾಗಿವೆ. ಈ ನೆಲೆಯಲ್ಲಿ ಗಮನಿಸಿದರೆ, 2018ರಲ್ಲಿ ಬ್ಯಾರೆಲ್ ಕಚ್ಚಾ ತೈಲದ ದರ ಇಂದಿಗಿಂತ ಅತಿಹೆಚ್ಚಾಗಿತ್ತು.

ಇದನ್ನೂ ಓದಿ: Petrol Price ಶ್ರೀರಾಮನ ಭಾರತದಲ್ಲಿ ರೂ. 93, ಸೀತೆಯ ನೇಪಾಳದಲ್ಲಿ 53, ರಾವಣನ ಶ್ರೀಲಂಕಾದಲ್ಲಿ ಎಷ್ಟು ಗೊತ್ತಾ..!

ಭಾರತದಲ್ಲಿ ಇಂಧನ ದರ ಏರಿಕೆಗೆ ಕಾರಣವೇನು?
ಇಷ್ಟಾಗಿಯೂ ದೇಶದಲ್ಲಿ ಇಂಧನ ದರ ಏಕೆ ಏರಿಕೆಯಾಗುತ್ತಿದೆ? ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ, ಭಾರತದಲ್ಲಿ ಏಕೆ ತೈಲ ಬೆಲೆ ಹೆಚ್ಚಾಗಿದೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇರಿರುವ ತೆರಿಗೆಯ ಮೊತ್ತವೇ ಇದಕ್ಕೆ ಕಾರಣ ಎನ್ನಬಹುದು.

ಇಂಧನಕ್ಕೆ ಬಳಕೆದಾರರು ತೆರುವ ಹಣದಲ್ಲಿ ದೊಡ್ಡ ಮೊತ್ತ ತೆರಿಗೆಗಾಗಿ ಬಳಕೆಯಾಗುತ್ತದೆ. ದೊಡ್ಡ ಪ್ರಮಾಣದ ಅಬಕಾರಿ ಸುಂಕ ಮತ್ತು VAT (Value Added Tax) ಇಂಧನ ದರದ ಮೇಲೆ ಪರಿಣಾಮ ಬೀರುತ್ತದೆ. ಪೆಟ್ರೋಲ್​ಗೆ ಶೇ. 63ರಷ್ಟು ಮತ್ತು ಡೀಸೆಲ್​ಗೆ ಶೇ. 60ರಷ್ಟು ಅಬಕಾರಿ ಸುಂಕ ಹಾಗೂ VAT ಅನ್ವಯವಾಗುತ್ತದೆ. ಅಂದರೆ, ಗ್ರಾಹಕರು ಒಂದು ಲೀಟರ್ ಪೆಟ್ರೋಲ್​ಗೆ ತೆರುವ ಮೊತ್ತದಲ್ಲಿ ರೂ. 50ಕ್ಕಿಂತ ಹೆಚ್ಚು ಮತ್ತು ಡೀಸೆಲ್​ಗೆ ನೀಡುವ ಮೊತ್ತದಲ್ಲಿ ರೂ. 40ಕ್ಕಿಂತ ಹೆಚ್ಚು ದರ ತೆರಿಗೆಗಾಗಿಯೇ ವಿನಿಯೋಗವಾಗುತ್ತದೆ.

ಲಾಕ್​ಡೌನ್ ಆರಂಭದಲ್ಲಿ ತೈಲ ಬೆಲೆ ಏರಿಕೆ ಪರಿಣಾಮ ಬಳಕೆದಾರರ ಮೇಲೆ ಆಗಿರಲಿಲ್ಲ. ಜಾಗತಿಕ ಕಚ್ಚಾ ತೈಲದ ಬೆಲೆಯೂ ಕುಸಿತ ಕಂಡಿದ್ದರಿಂದ ಇಂಧನ ದರ ಇಳಿಕೆಯಾಗಿತ್ತು. ಇದೀಗ ಜಾಗತಿಕ ಚಟುವಟಿಕೆಗಳು ಗರಿಗೆದರಿದ ಬಳಿಕ ಇಂಧನ ಬೆಲೆಯೂ ಹೆಚ್ಚಾಗುತ್ತಿದೆ.

ರಾಜಸ್ಥಾನ ಅತಿ ಹೆಚ್ಚು ಇಂಧನ ಬೆಲೆ (ರೂ. 94) ಹೊಂದಿರುವ ರಾಜ್ಯ
ಜೊತೆಗೆ, ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ರೂ. 13ರಷ್ಟು ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ರೂ. 16ರಷ್ಟು ಕೆಲವಾರು ಸುತ್ತಿನಲ್ಲಿ ಹೆಚ್ಚಿಸಿತ್ತು. ಹಲವು ರಾಜ್ಯಗಳು VAT ಮೌಲ್ಯವನ್ನೂ ಹೆಚ್ಚು ಮಾಡಿತ್ತು. ಲಾಕ್​ಡೌನ್ ವೇಳೆ ಉಂಟಾದ ನಷ್ಟವನ್ನು ಸರಿದೂಗಿಸಲು ಸರ್ಕಾರಗಳು ಈ ದಾರಿ ಹಿಡಿದಿದ್ದವು. ರಾಜ್ಯ ಸರ್ಕಾರ ಹೇರಿರುವ ತೆರಿಗೆಯ ಪರಿಣಾಮವಾಗಿ ರಾಜಸ್ಥಾನವು ಅತಿ ಹೆಚ್ಚು ಇಂಧನ ಬೆಲೆ ಹೊಂದಿರುವ ರಾಜ್ಯವಾಗಿದೆ.

Petrol Price Today: ದೂರದ ಪ್ರಯಾಣಕ್ಕೆ ಪ್ಲಾನ್​ ಮಾಡಿದ್ದೀರಾ? ಒಮ್ಮೆ ಗಮನಿಸಿ ಪೆಟ್ರೋಲ್​, ಡೀಸೆಲ್ ದರದ ಮಾಹಿತಿ ಇಲ್ಲಿದೆ

Published On - 5:02 pm, Wed, 10 February 21