ಭಾರತದಲ್ಲಿ ಕೋವಿಡ್-19 ರೋಗದ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡಿದ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನಾಳೆ (ಶನಿವಾರ) ಕೋವಿಡ್ ಲಸಿಕೆ ನೀಡಲಾಗುವುದು. ಮೊದಲ ಹಂತದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುವುದು. ಇಲ್ಲಿಯವರಿಗೆ ಸುಮಾರು 5.27 ಲಕ್ಷಕ್ಕಿಂತಲೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗಲಿದ್ದು 1.52 ಲಕ್ಷದಷ್ಟು ಜನ ಕೋವಿಡ್ನಿಂದ ಸಾವಿಗೀಡಾಗಿದ್ದಾರೆ. ನಾಳೆ ಬೆಳಿಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. 3,006 ಲಸಿಕೆ ವಿತರಣೆ ಕೇಂದ್ರಗಳಲ್ಲಿ ಈ ಲಸಿಕೆ ನೀಡಲಾಗುವುದು.
ಶನಿವಾರ ಯಾರಿಗೆ ಕೋವಿಡ್- 19 ಲಸಿಕೆ ಸಿಗುತ್ತದೆ?
ಆರೋಗ್ಯ ಕಾರ್ಯಕರ್ತರು, ಸಫಾಯಿ ಕರ್ಮಚಾರಿ (ಪೌರಕಾರ್ಮಿಕರು), ಸೇನೆ ಮತ್ತು ವಿಪತ್ತು ನಿರ್ವಹಣೆ ಕಾರ್ಯಕರ್ತರಿಗೆ ಲಸಿಕೆ ಸಿಗಲಿದೆ. 3,006 ಲಸಿಕೆ ಕೇಂದ್ರಗಳಲ್ಲಿ ಲಸಿಕೆ ವಿತರಣೆ ನಡೆಯಲಿದ್ದು ಪ್ರತಿ ಕೇಂದ್ರದಲ್ಲಿ 100 ಮಂದಿಗೆ ಲಸಿಕೆ ನೀಡಲಾಗುವುದು.
ಲಸಿಕೆ ವಿತರಣೆ ಯಾರು ಮಾಡುತ್ತಾರೆ?
ದೇಶದಲ್ಲಿ 130 ಕೋಟಿ ಜನರಿದ್ದಾರೆ. ನಮ್ಮ ದೇಶದಲ್ಲಿ ಚುನಾವಣೆ ಪ್ರಕ್ರಿಯೆಗೆ ಬಳಸುವ ಮಾಹಿತಿಯನ್ನು ಲಸಿಕೆ ವಿತರಣೆಗೆ ಬಳಸಲಾಗಿದೆ. ಅಂದರೆ ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ದೇಶದಲ್ಲಿ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ನೀಡಬೇಕು ಎಂದು ಮನವಿ ಮಾಡಿತ್ತು. ಮತದಾರರ ಪಟ್ಟಿಯಲ್ಲಿ ನಮೂದಾಗಿರುವ ವಯಸ್ಸು ನೋಡಿ ಅವರಿಗೆ ಆದ್ಯತೆ ಮೇಲೆ ಲಸಿಕೆ ನೀಡಲಾಗುವುದು. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಪ್ರತಿಯೊಂದು ಲಸಿಕೆ ಕೇಂದ್ರದಲ್ಲಿಯೂ ಮತಗಟ್ಟೆಯಂತೆ ಕಾರ್ಯ ನಿರ್ವಹಿಸುವ ಕೇಂದ್ರಗಳಿರುತ್ತವೆ. ಇವರಲ್ಲಿ ಫಲಾನುಭವಿಗಳ ಮಾಹಿತಿ ಇರುತ್ತದೆ. ಫಲಾನುಭವಿಗಳ ಹೆಸರು ಸರ್ಕಾರದ Co-Win portalನಲ್ಲಿರುತ್ತದೆ. ಲಸಿಕೆ ವಿತರಣೆಗೆ ಎರಡು ದಿನ ಮುಂಚೆ ಫಲಾನುಭವಿಗಳ ಪಟ್ಟಿ ಪ್ರಕಟವಾಗುತ್ತದೆ. ಲಸಿಕೆ ವಿತರಣೆ ಪ್ರಕ್ರಿಯೆಯು ಬೆಳಗ್ಗೆ 9ರಿಂದ 5ರವರೆಗೆ ನಡೆಯಲಿದೆ. 5 ಗಂಟೆವರೆಗೆ ಲಸಿಕೆ ವಿತರಣೆ ಕೇಂದ್ರಕ್ಕೆ ಬಂದವರಿಗೆ 5 ಗಂಟೆಯ ನಂತರವೂ ಅವರಿಗೆ ಲಸಿಕೆ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಲಸಿಕೆ ಉಚಿತವಾಗಿ ಸಿಗುತ್ತಿದೆಯೇ?
ಮೊದಲ ಹಂತದಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. 3 ಕೋಟಿ ಜನರಿಗೆ ನೀಡುವ ಲಸಿಕೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು.
ಭಾರತೀಯರಿಗೆ ನೀಡುತ್ತಿರುವುದು ಯಾವ ಲಸಿಕೆ?
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಆಕ್ಸ್‌ಫರ್ಡ್ ವಿವಿ) ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳನ್ನು ಬಳಕೆ ಮಾಡಲು ಭಾರತೀಯ ಪ್ರಧಾನ ಔಷಧ ನಿಯಂತ್ರಣ ಇಲಾಖೆ (ಡಿಸಿಜಿಐ) ತುರ್ತು ಪರಿಸ್ಥಿತಿ ಬಳಕೆಯ ಅನುಮೋದನೆ ನೀಡಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ AZD1222 ಲಸಿಕೆಯ ಭಾರತೀಯ ರೂಪಾಂತರವಾದ ಕೊವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸಿದೆ. ಕೋವ್ಯಾಕ್ಸಿನ್ ನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಪ್ರಸ್ತುತ ಸೀರಮ್ ಇನ್ಸಿಟ್ಯೂಟ್ ನಿಂದ 1.1 ಕೋಟಿ ಮತ್ತು ಭಾರತ್ ಬಯೋಟೆಕ್ ನಿಂದ 55 ಲಕ್ಷ ಡೋಸ್ಗಳು ಲಭಿಸಿವೆ. ಒಬ್ಬ ವ್ಯಕ್ತಿಗೆ ಮೊದಲ ಡೋಸ್ ಲಸಿಕೆ ನೀಡಿ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುವುದು.
ದೇಶದಾದ್ಯಂತ ಈ ಲಸಿಕೆಗಳನ್ನು ಯಾವ ರೀತಿ ವಿತರಿಸಲಾಗುತ್ತಿದೆ?
ಭೌಗೋಳಿಕ ಆದ್ಯತೆ ಅಥವಾ ಕೊರೊನಾ ಸೋಂಕು ಅತಿಹೆಚ್ಚು ವ್ಯಾಪಿಸಿರುವ ಪ್ರದೇಶಗಳಿಗೆ ಆದ್ಯತೆ ನೀಡಿ ಕೇಂದ್ರ ಸರ್ಕಾರ ಲಸಿಕೆ ವಿತರಣೆ ಮಾಡುತ್ತದೆ. ಅಂದರೆ ಮಹಾರಾಷ್ಟ್ರ, ಕೇರಳದಲ್ಲಿ ಅತಿಹೆಚ್ಚು ಸೋಂಕಿತರು ಇರುವ ಕಾರಣ ಈ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಲಸಿಕೆ ಪೂರೈಸಲಾಗುವುದು. ರಾಜ್ಯಗಳಿಗೆ ಲಸಿಕೆ ವಿತರಣೆ ಆದ ನಂತರ ಆ ರಾಜ್ಯದ ಸರ್ಕಾರವು ಯಾವ ಜಿಲ್ಲೆಗಳಲ್ಲಿ ಸೋಂಕಿತರು ಜಾಸ್ತಿ ಇದ್ದಾರೆ ಎಂಬುದನ್ನು ನೋಡಿ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಮಾಡಲಿದೆ. ಫಲಾನುಭವಿಗಳಿಗೆ ಒಂದೇ ಲಸಿಕೆಯ ಎರಡು ಡೋಸ್ ಕೂಡಾ ಸಿಕ್ಕಿದೆ ಎಂಬುದನ್ನು ಜಿಲ್ಲಾಡಳಿತ ಖಚಿತ ಪಡಿಸಿಕೊಳ್ಳಬೇಕಿದೆ.
ಲಸಿಕೆ ಪಡೆದುಕೊಂಡ ನಂತರ?
ಜನರಿಗೆ ಲಸಿಕೆ ನೀಡಿದ ನಂತರ ಅವರ ಮಾಹಿತಿ ಆಗಲೇ Co-Win ಪ್ಲಾಟ್ಫಾರಂನಲ್ಲಿ ಅಪ್ಲೋಡ್ ಆಗುತ್ತದೆ. ಫಲಾನುಭವಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲು ಮತ್ತು ನಿಗಾ ಇಡಲು ಸರ್ಕಾರ ಆಧಾರ್ ಮಾಹಿತಿಯನ್ನು ಬಳಸುತ್ತದೆ. ಲಸಿಕೆ ಪಡೆದುಕೊಂಡವರಿಗೆ ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುವುದು. ಮುಂದಿನ ಡೋಸ್ ಪಡೆಯುವುದಕ್ಕೆ ನೆನಪಿಸಲು ಇದು ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲದೆ ಯಾರಿಗೆ ಲಸಿಕೆ ನೀಡಲಾಗಿದೆ ಎಂಬುದಕ್ಕೆ ಸರ್ಕಾರದ ಬಳಿ ಇರುವ ಮಾಹಿತಿಯೂ ಇದೇ ಆಗಿರುತ್ತದೆ. ಎರಡನೇ ಡೋಸ್ ಪಡೆದ ನಂತರ ಬೇರೊಂದು ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುವುದು.
ಲಸಿಕೆ ಪಡೆದುಕೊಂಡ ನಂತರ ಏನಾದರೂ ಸಮಸ್ಯೆ ಆದರೆ ಅಥವಾ ಈ ಬಗ್ಗೆ ತಪ್ಪು ಮಾಹಿತಿ, ವದಂತಿ ಹಬ್ಬಿದರೆ Co-Win ನಲ್ಲಿರುವ ಮಾಹಿತಿ ಬಳಸಿ ವದಂತಿಗಳಿಗೆ ಕಡಿವಾಣ ಹಾಕಲಾಗುವುದು. ಲಸಿಕೆ ವಿತರಣೆ ಬಗ್ಗೆ ಸಂದೇಹ ಪರಿಹರಿಸಲು ಸರ್ಕಾರ 1075 ಎಂಬ ಸಹಾಯವಾಣಿ ಆರಂಭಿಸಿದೆ.
Explainer | ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ಸಿಕ್ಕಿದ್ದಾಯ್ತು; ಮುಂದೇನು?
Published On - 8:24 pm, Fri, 15 January 21