ನವದೆಹಲಿ: ಪ್ರತಿಭಟನಾ ನಿರತ ರೈತರು ಹೋರಾಟ ಮಾಡುವುದರ ಜೊತೆಗೆ ಪ್ರತಿಭಟನೆಯ ಬಗ್ಗೆ ಎಲ್ಲರಿಗೂ ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಲೈವ್ ಬಂದ ಖಾತೆಗಳನ್ನು ಫೇಸ್ಬುಕ್ ಬ್ಲಾಕ್ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕಿಸಾನ್ ಏಕ್ತಾ ಮೋರ್ಚಾ ಹೆಸರಿನ ಫೇಸ್ಬುಕ್ ಪೇಜ್ಗೆ 7 ಲಕ್ಷ ಜನ ಹಿಂಬಾಲಕರಿದ್ದರು. ರೈತರು ಪ್ರತಿಭಟನೆ ಮಾಡುತ್ತಿರುವಾಗ ಈ ಫೇಸ್ಬುಕ್ ಖಾತೆಯಿಂದ ಲೈವ್ ಬರಲಾಗುತ್ತಿತ್ತು. ಆದರೆ, ಈ ಫೇಸ್ಬುಕ್ ಪೇಜ್ಅನ್ನು ಈಗ ತೆಗೆದು ಹಾಕಲಾಗಿದೆ. ಕಮ್ಯುನಿಟಿ ಸ್ಟ್ಯಾಂಡರ್ಡ್ಗಳನ್ನು ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ಈ ಫೇಸ್ಬುಕ್ ಪೇಜ್ಗಳನ್ನು ಡಿಲೀಟ್ ಮಾಡಲಾಗಿದೆಯಂತೆ.
ಇನ್ನು, ಕಿಸಾನ್ ಏಕ್ತಾ ಮೋರ್ಚಾ ಇನ್ಸ್ಟಾಗ್ರಾಂ ಖಾತೆಗೂ ತೊಂದರೆ ಉಂಟಾಗಿದೆ. ಇನ್ಸ್ಟಾಗ್ರಾಂ ಖಾತೆ ಮೂಲಕವೂ ರೈತರು ಲೈವ್ ಬರುತ್ತಿದ್ದರು. ಆದರೆ, ಈಗ ಯಾವುದೇ ಹೊಸ ಪೋಸ್ಟ್ಗಳನ್ನು ಹಾಕಲು ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಲಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡುವಂತೆ ಆಗ್ರಹಿಸಿ ಕಳೆದ ಮೂರು ವಾರಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. 40ಕ್ಕೂ ಹೆಚ್ಚು ರೈತರ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ. ದಿನದಿಂದ ದಿನಕ್ಕೆ ಪ್ರತಿಭಟನೆ ಕಾವು ಹೆಚ್ಚುತ್ತಲೇ ಇರುವುದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
Delhi Chalo | ದೆಹಲಿ ಗಡಿಭಾಗದಲ್ಲಿ ವಿಪರೀತ ಚಳಿಗೆ ಪ್ರತಿಭಟನಾ ನಿರತ ರೈತ ಸಾವು