
ಬೆಂಗಳೂರು (ಮೇ. 09): ಮೇ 8 ರಂದು ಪಾಕಿಸ್ತಾನ ಸೇನೆಯು ಭಾರತದ ಗಡಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಕ್ಷಿಪಣಿ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ (India Pakistan) ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ. ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಳಸಿಕೊಂಡು ಭಾರತೀಯ ಸೇನೆಯು ಒಳಬರುವ ಎಲ್ಲಾ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆದು ನಾಶಪಡಿಸಿದೆ. ಅಲ್ಲದೆ ಭಾರತೀಯ ಸೇನೆಯು ವಾಯುಪ್ರದೇಶವನ್ನು ಉಲ್ಲಂಘಿಸಲು ಪ್ರಯತ್ನಿಸಿದ ಮೂರು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದೇ ಬಾರಿಗೆ ಅನೇಕ ಕ್ಷಿಪಣಿಗಳನ್ನು ರಿಲೀಸ್ ಮಾಡುತ್ತಿರುವುದನ್ನು ಕಾಣಬಹುದು. ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಪಾಕಿಸ್ತಾನದಿಂದ ಜಮ್ಮು ಮತ್ತು ಪಂಜಾಬ್ ಮೇಲೆ ಏಕಕಾಲಕ್ಕೆ 100 ಮಿಸೆಲ್ ನಿಂದ ದಾಳಿ. ಅದಕ್ಕೆ ಉತ್ತರವಾಗಿ ಸಾವಿರಾರು ಮಿಸೇಲ್ ಮೂಲಕ ಭಾರತದಿಂದ ದಾಳಿ ಆರಂಭ ಬೆಳಿಗ್ಗೆ ವೇಳೆಗೆ ಪಾಕಿಸ್ತಾನ ಏನಾಗುತ್ತೋ ಕಾದು ನೋಡಬೇಕು, ಹಿಂದೂಸ್ತಾನವನ್ನು ಕೆಣಕಿದ ಪಾಕಿಸ್ತಾನದ ನಾಶ ಕಟ್ಟಿಟ್ಟ ಬುತ್ತಿ’’ ಎಂದು ಬರೆದುಕೊಂಡಿದ್ದಾರೆ.
ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಈ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದೆ. ವೈರಲ್ ಆಗುತ್ತಿರುವ ವಿಡಿಯೋ ನಿಜವಾದ ಕ್ಷಿಪಣಿ ದಾಳಿಯದ್ದಲ್ಲ, ಬದಲಾಗಿ ಇದು ಗೇಮಿಂಗ್ ಕ್ಲಿಪ್ ಆಗಿದೆ. ಗ್ರಾಫಿಕ್ಸ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಜ-ಪ್ರಪಂಚದ ಘಟನೆಗಳನ್ನು ಅನುಕರಿಸುವ ಮೂಲಕ ರಚಿಸಲಾದ ವಿಡಿಯೋ ಇದಾಗಿದೆ.
Fact Check: ಭಾರತದ ಯುದ್ಧ ವಿಮಾನ ಪಾಕಿಸ್ತಾನದ ಮೇಲೆ ಬಾಂಬ್ ಹಾಕಿದೆ ಎಂದು ಜಾರ್ಜಿಯಾದ ವಿಡಿಯೋ ವೈರಲ್
ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಕೀ ಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, Compared Comparison ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವಿಡಿಯೋದ ಪೂರ್ಣ ಆವೃತ್ತಿಯನ್ನು ಉತ್ತಮ ಕ್ವಾಲಿಟಿಯಲ್ಲಿ ಕಂಡುಕೊಂಡಿದ್ದೇವೆ.
ಈ ಚಾನಲ್‌ನಲ್ಲಿ ನಾವು ಅಂತಹ ಹಲವಾರು ವಿಡಿಯೋಗಳನ್ನು ಕಂಡುಕೊಂಡಿದ್ದೇವೆ. ಈ ಎಲ್ಲಾ ವಿಡಿಯೋಗಳು ಗೇಮಿಂಗ್ ವಿಡಿಯೋಗಳಾಗಿವೆ. ನಮ್ಮ ತನಿಖೆಯಿಂದ ವೈರಲ್ ವಿಡಿಯೋ ನಿಜವಾದದ್ದಲ್ಲ, ಬದಲಾಗಿ ಇದು ಗ್ರಾಫಿಕ್ಸ್ ಗೇಮಿಂಗ್ ದೃಶ್ಯಾವಳಿಯಾಗಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.
ಪಾಕಿಸ್ತಾನಕ್ಕೆ ಭಾರತ ಇದೀಗ ಸಲಾಲ್ ಹಾಗೂ ಬಾಗ್ಲಿಹಾರ್ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಿದ್ದು, ಪ್ರವಾಹ ಭೀತಿ ಎದುರಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣವಿದೆ. ಮೇ 6-7ರ ರಾತ್ರಿ ಭಾರತ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿತ್ತು. ಭಾರತದ ವಾಯು ಸೇನೆ ಜೊತೆಗೆ ನೌಕಾಪಡೆಯು ಪಾಕಿಸ್ತಾನದ ವಿರುದ್ಧ ದಾಳಿಗೆ ಇಳಿದಿದೆ. ವಾಯು ಸೇನೆ ಹಾಗೂ ನೌಕಾಪಡೆಯು ಎರಡೂ ಜಂಟಿಯಾಗಿ ಅಟ್ಯಾಕ್ ಮಾಡುತ್ತಿವೆ. ವಿರೋಧಿ ರಾಷ್ಟ್ರದ ಪ್ರಮುಖ ನಗರಗಳಾದ ಇಸ್ಲಾಮಾಬಾದ್, ಬಂದರು ನಗರಿ ಕರಾಚಿ ಮೇಲೆ ಭಾರತ ಅಟ್ಯಾಕ್ ಮಾಡಿದೆ. ದಾಳಿ ಮುಂದಿರೆದಿದ್ದು ಪಾಕಿಸ್ತಾನದ ಮೇಲೆ ನಿರಂತರ ಕ್ಷಿಪಣಿ ದಾಳಿ ನಡೆಸಲಾಗುತ್ತಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Fri, 9 May 25