
ಬೆಂಗಳೂರು (ಮೇ. 19): ಭಾರತ ಮತ್ತು ಪಾಕಿಸ್ತಾನ (India and Pakistan) ನಡುವೆ ಪ್ರಸ್ತುತ ಕದನ ವಿರಾಮವಿದೆ. ಆದರೆ, ಎರಡೂ ದೇಶಗಳ ನಡುವಿನ ವಿವಾದ ಇನ್ನೂ ರಾಜತಾಂತ್ರಿಕ ಮಟ್ಟದಲ್ಲಿ ಮುಂದುವರೆದಿದೆ. ಭಾರತದ ‘ಆಪರೇಷನ್ ಸಿಂಧೂರ್’ ನಿಂದಾಗಿ ತನಗೆ ಆಗಿರುವ ಅಪಾರ ನಷ್ಟವನ್ನು ಮರೆಮಾಚಲು ಪಾಕಿಸ್ತಾನ ಅನೇಕ ರೀತಿಯ ಸುಳ್ಳುಗಳನ್ನು ಹೇಳುತ್ತಿದೆ. ಭಾರತದ ರಫೇಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ ಆದರೆ ಇದುವರೆಗೆ ಇದಕ್ಕೆ ಯಾವುದೇ ದೃಢವಾದ ಪುರಾವೆಗಳನ್ನು ನೀಡಿಲ್ಲ.
ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಫೈಟರ್ ಜೆಟ್ ವಸತಿ ಪ್ರದೇಶದ ಮನೆಯ ಮೇಲೆ ಪತನಗೊಂಡಿರುವುದನ್ನು ಕಾಣಬಹುದು. ಜೆಟ್ ಬೆಂಕಿಗೆ ಆಹುತಿಯಾಗುತ್ತಿದ್ದು, ಹೊಗೆ ಬರುತ್ತಿರುವುದನ್ನು ಕಾಣಬಹುದು. ಅಲ್ಲದೆ ಹತ್ತಿರದಲ್ಲಿ ದೊಡ್ಡ ಜನಸಮೂಹ ಜಮಾಯಿಸಿದೆ. ಭಾರತದ ಧ್ವಜವನ್ನೂ ಜೆಟ್ನಲ್ಲಿ ಕಾಣಬಹುದು.
ಈ ಸುದ್ದಿಯನ್ನು ತನಿಖೆ ನಡೆಸಿರುವ ಟಿವಿ9 ಕನ್ನಡ ಇದು ನಿಜವಾದ ಘಟನೆಯಲ್ಲ, ಬದಲಾಗಿ ಕೃತಕ ಬುದ್ದಿಮತ್ತೆ (AI) ಯಿಂದ ರಚಿಸಿದ ವಿಡಿಯೋ ಎಂದು ಕಂಡುಕೊಂಡಿದೆ. ಈ ಉದ್ವಿಗ್ನತೆಯ ಮಧ್ಯೆ, ಪಾಕಿಸ್ತಾನದಲ್ಲಿ ಭಾರತೀಯ ವಿಮಾನ ಪತನಗೊಂಡ ನಿಜವಾದ ವಿಡಿಯೋ ಹೊರಬಂದಿದ್ದರೆ, ಖಂಡಿತವಾಗಿಯೂ ಅದರ ಬಗ್ಗೆ ಸುದ್ದಿ ಪ್ರಕಟವಾಗುತ್ತಿತ್ತು. ಮಾಧ್ಯಮದಲ್ಲಿ ಇದು ದೊಡ್ಡ ಸುದ್ದಿ ಆಗಿರುತ್ತಿತ್ತು. ಕೇವಲ ಭಾರತೀಯ ಮಾಧ್ಯಮವಲ್ಲದೆ ಅನೇಕ ವಿದೇಶಿ ಮಾಧ್ಯಮ ಕೂಡ ಈ ಘಟನೆಯ ಕುರಿತು ಸುದ್ದಿ ಮಾಡುತ್ತಿತ್ತು. ಆದರೆ, ನಮಗೆ ಅಂತಹ ಯಾವುದೇ ಸುದ್ದಿ ವರದಿ ಸಿಗಲಿಲ್ಲ.
ಬಳಿಕ ನಾವು ಮೇ 8, 2025 ರಂದು ಇದೇ ವೈರಲ್ ವೀಡಿಯೊವನ್ನು ಯೂಟ್ಯೂಬ್ ಒಂದರಲ್ಲಿ ಅಪ್ಲೋಡ್ ಮಾಡಿರುವುದನ್ನು ಕಂಡುಕೊಂಡೆವು. ಈ ವೀಡಿಯೊದಲ್ಲಿಯೂ ಸಹ, ವೈರಲ್ ಕ್ಲಿಪ್‌ನಂತೆ, ಜನರ ಗುಂಪು ಮತ್ತು ಅನೇಕ ಮನೆಗಳು ಹತ್ತಿರದಲ್ಲಿ ಕಂಡುಬರುತ್ತವೆ. ಆದರೆ, ಈ ವಿಡಿಯೋದಲ್ಲಿ, ಉರಿಯುತ್ತಿರುವ ಜೆಟ್ನ ಒಂದು ಭಾಗವು ಇದ್ದಕ್ಕಿದ್ದಂತೆ ವಿಚಿತ್ರ ರೀತಿಯಲ್ಲಿ ಬೇರ್ಪಡುತ್ತದೆ. ಇದನ್ನು ನೋಡಿದರೆ ಈ ವಿಡಿಯೋವನ್ನು AI ಬಳಸಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
Fact Check: ಜಮ್ಮುವಿನ ಜನರು ಪಾಕಿಸ್ತಾನಿ ರೈಲನ್ನು ಸುಟ್ಟುಹಾಕಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ
ನೀವು ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ , ಜನರ ಮುಖ ಮತ್ತು ಚಲನವಲನಗಳಲ್ಲಿ ಕೆಲವು ವಿಚಿತ್ರ ವಿಷಯಗಳನ್ನು ನೀವು ನೋಡಬಹುದು. ಉದಾಹರಣೆಗೆ, ವೀಡಿಯೊದಲ್ಲಿ ಕೆಲವು ಸೆಕೆಂಡುಗಳ ಕಾಲ, ಒಬ್ಬ ವ್ಯಕ್ತಿಗೆ ಎರಡು ತಲೆಗಳು ಇರುವಂತೆ ಕಾಣುತ್ತದೆ. ಇದು ವೈರಲ್ ವೀಡಿಯೊವನ್ನು AI ಬಳಸಿ ಮಾಡಲಾಗಿದೆ ಎಂದು ತೋರಿಸುತ್ತದೆ.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಈ ವೀಡಿಯೊವನ್ನು ಕೆಲವು AI ಪರಿಕರಗಳೊಂದಿಗೆ ಪರೀಕ್ಷಿಸಿದ್ದೇವೆ. ‘ಹೈವ್ ಮಾಡರೇಶನ್’ ಮತ್ತು ‘ಸೈಟ್‌ಎಂಜಿನ್’ ಎರಡೂ ಪರಿಕರಗಳು ಈ ವೀಡಿಯೊ AI ನಿಂದ ರಚಿಸಲಾಗಿದೆ ಎಂದು ಹೇಳಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಭಾರತೀಯ ವಿಮಾನ ಪತನಗೊಂಡ ವೈರಲ್ ವಿಡಿಯೋವನ್ನು AI ಸಹಾಯದಿಂದ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಗೋಲ್ಡನ್ ಟೆಂಪಲ್ ಮೇಲೆ ಪಾಕ್ ಸೇನೆ ದಾಳಿಗೆ ಯತ್ನಿಸಿತ್ತು:
ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ 9 ಸ್ಥಳಗಳಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ, ಪಂಜಾಬ್ನ ಅಮೃತಸರದಲ್ಲಿರುವ ಸ್ವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಕ್ಷಿಪಣಿಗಳು ಮತ್ತು ಡ್ರೋನ್ ಮೂಲಕ ದಾಳಿ ಮಾಡಿತ್ತು. ಈ ಕುರಿತು ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ ಈ ಮಾಹಿತಿ ನೀಡಿದ್ದು, ಸೇನಾ ವಾಯು ರಕ್ಷಣಾ ಗನ್ನರ್‌ಗಳು ಸುವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ನಡೆಸಿದ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದಾರೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಸ್ವರ್ಣ ಮಂದಿರದಂತಹ ಧಾರ್ಮಿಕ ಸ್ಥಳಗಳು ಸೇರಿದಂತೆ, ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಬಹುದು ಎಂದು ಸೇನೆ ಆಗಲೇ ನಿರೀಕ್ಷಿಸಿತ್ತು, ಅದಕ್ಕೆ ಬೇಕಾದ ಕ್ರಮಗಳನ್ನು ಕೂಡ ತೆಗೆದುಕೊಂಡಿತ್ತು. ಪಾಕಿಸ್ತಾನ ಸೇನೆಯು ಯಾವುದೇ ಸಮರ್ಪಕ ಗುರಿಗಳನ್ನು ಹೊಂದಿಲ್ಲ ಎಂದು ತಿಳಿದಿದ್ದರೂ, ಕೆಲವು ನಿರೀಕ್ಷೆಗಳಿದ್ದವು ಇವುಗಳಲ್ಲಿ, ಗೋಲ್ಡನ್ ಟೆಂಪಲ್ ಅತ್ಯಂತ ಪ್ರಮುಖವಾದದ್ದು ಎಂದು ಕಂಡುಬಂದಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ