ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಲಂಡನ್​​ನಲ್ಲಿ ಬೆಂಬಲ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?

| Updated By: ರಶ್ಮಿ ಕಲ್ಲಕಟ್ಟ

Updated on: May 04, 2022 | 3:32 PM

Fact Check ನಿನ್ನೆ ಲಂಡನ್‌ನ ಟವರ್ ಬ್ರಿಡ್ಜ್ ಮೇಲೆ ಹನುಮಾನ್ ಚಾಲೀಸಾ ಪಠಣ. ಇದನ್ನು ನಮ್ಮ ನ್ಯಾಯಾಲಯಗಳು, ಸಂಜಯ್ ರಾವುತ್ ಮತ್ತು ಎಂವಿಎ ಸರ್ಕಾರದೊಂದಿಗೆ ಹಂಚಿಕೊಳ್ಳಬೇಕಾಗಿದೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಶೇರ್ ಆಗುತ್ತಿದೆ.

ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಲಂಡನ್​​ನಲ್ಲಿ ಬೆಂಬಲ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?
ವೈರಲ್ ವಿಡಿಯೊದ ಚಿತ್ರ
Follow us on

ಲಂಡನ್‌ನ ಟವರ್ ಬ್ರಿಡ್ಜ್‌ನಲ್ಲಿ (Tower Bridge London )ಭಾರತೀಯರು ಮತ್ತು ವಿದೇಶಿ ಪ್ರಜೆಗಳ ಗುಂಪು ಹಿಂದೂ ಭಕ್ತಿ ಸ್ತೋತ್ರಗಳನ್ನು ಪಠಿಸುವ ಫೋಟೋಗಳು ಮತ್ತು ದೃಶ್ಯಗಳನ್ನು ಒಳಗೊಂಡಿರುವ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ(Maharashtra) ಹನುಮಾನ್ ಚಾಲೀಸಾ (Hanuman Chalisa) ಕುರಿತು ನಡೆಯುತ್ತಿರುವ ಗಲಾಟೆಯ ಸಂದರ್ಭದಲ್ಲಿ ಲಂಡನ್​​ನಲ್ಲಿ ಆಯೋಜಿಸಲಾದ ಕಾರ್ಯಕ್ರಮ ಇದು ಎಂಬ ಶೀರ್ಷಿಕೆಯೊಂದಿಗೆ ಇದು ಶೇರ್ ಆಗುತ್ತಿದೆ. “ನಿನ್ನೆ ಲಂಡನ್‌ನ ಟವರ್ ಬ್ರಿಡ್ಜ್ ಮೇಲೆ ಹನುಮಾನ್ ಚಾಲೀಸಾ ಪಠಣ. ಇದನ್ನು ನಮ್ಮ ನ್ಯಾಯಾಲಯಗಳು, ಸಂಜಯ್ ರಾವುತ್ ಮತ್ತು ಎಂವಿಎ ಸರ್ಕಾರದೊಂದಿಗೆ ಹಂಚಿಕೊಳ್ಳಬೇಕಾಗಿದೆ. ನವನೀತ್ ರಾಣಾ ಮತ್ತು ರವಿರಾಣಾ ಅವರು ಪಠಿಸಿಲ್ಲ ಆದರೆ ಅವರನ್ನು ಮನೆಯಿಂದ ಬಂಧಿಸಲಾಗಿದೆ ಎಂಬ ಬರಹದೊಂದಿಗೆ ಹಲವಾರು ನೆಟ್ಟಿಗರು ಶೇರ್ ಮಾಡಿದ್ದಾರೆ. ಕಳೆದ ತಿಂಗಳು ಮಹಾರಾಷ್ಟ್ರದ ಅಮರಾವತಿಯ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ ಮಾತೋಶ್ರೀಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿದ ನಂತರ ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಯಿತು.


ಫ್ಯಾಕ್ಟ್ ಚೆಕ್
ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ಈ ವಿಡಿಯೊ ಹಳೆಯದು ಮತ್ತು ಈಗ ನಡೆಯುತ್ತಿರುವ ಹನುಮಾನ್ ಚಾಲೀಸಾ ವಿವಾದಕ್ಕೆ ಸಂಬಂಧಿಸಿಲ್ಲ ಎಂದು ಕಂಡುಹಿಡಿದಿದೆ. ವಿಡಿಯೊದ ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಸೆಪ್ಟೆಂಬರ್ 2021 ರಲ್ಲಿ ” Hindus in the UK ” ಎಂಬ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊ ಲಭಿಸಿದೆ. ಈ ಪೋಸ್ಟ್‌ನ ಪ್ರಕಾರ ಪ್ರಸ್ತುತ ವಿಡಿಯೊವು ಶ್ರಾವಣ ಮಾಸ ಮತ್ತು ಲಂಡನ್​​ನ ಟವರ್ ಬ್ರಿಡ್ಜ್‌ನಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ವೇಳೆಯದ್ದು. ಲಂಡನ್‌ನ ಹ್ಯಾರೋದಲ್ಲಿರುವ ಅಂತರಾಷ್ಟ್ರೀಯ ಸಿದ್ಧಾಶ್ರಮ ಶಕ್ತಿ ಕೇಂದ್ರ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಿದ್ಧಾಶ್ರಮ ಶಕ್ತಿ ಕೇಂದ್ರದ ವೆಬ್‌ಸೈಟ್‌ನಲ್ಲಿಯೂ ಈ ಚಿತ್ರವಿದೆ.

ಅಂತರಾಷ್ಟ್ರೀಯ ಸಿದ್ಧಾಶ್ರಮ ಶಕ್ತಿ ಕೇಂದ್ರದ ಸಂಸ್ಥಾಪಕರಾದ ಶ್ರೀ ರಾಜರಾಜೇಶ್ವರ್ ಗುರೂಜಿಯವರ ಚಟುವಟಿಕೆಗಳನ್ನು ಪೋಸ್ಟ್ ಮಾಡುವ @gurudevrkp ಟ್ವಿಟರ್ ಖಾತೆಯು ಈ ಚಿತ್ರಗಳನ್ನು ಆಗಸ್ಟ್ 31, 2021 ರಂದು ಹಂಚಿಕೊಂಡಿದೆ. ಈ ಟ್ವಿಟರ್ ಖಾತೆಯ ಪ್ರಕಾರ, ವಿಡಿಯೊದಲ್ಲಿ ಕಂಡುಬರುವ ಕಾರ್ಯಕ್ರಮವು 2021ಆಗಸ್ಟ್ 30 ರಂದು ನಡೆದಿದೆ. ವಿಡಿಯೊವನ್ನು 2021 ರಲ್ಲಿ ಹಲವಾರು ನೆಟ್ಟಿಗರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.


ಹೀಗಾಗಿ ಈ ವಿಡಿಯೊ ಹಳೆಯದ್ದು. ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾ ಕುರಿತು ನಡೆಯುತ್ತಿರುವ ಗಲಾಟೆಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ

ಹೆಚ್ಚಿನ ಫ್ಯಾಕ್ಟ್ ಚೆಕ್  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:47 pm, Tue, 3 May 22