ಕಾರು ಅಪಘಾತದ ಮೂಲಕ ಮುಸ್ಲಿಂ ವ್ಯಕ್ತಿ ಹಿಂದೂ ಹುಡುಗಿಯರನ್ನು ಕೊಲ್ಲಲು ಮುಂದಾಗಿದ್ದು ನಿಜವೇ?

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 04, 2024 | 3:47 PM

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ದುರ್ಘಟನೆಯಲ್ಲಿ ಯಾವುದೇ ಕೋಮು ಕೋನ ಇಲ್ಲ. ಇಂದೋರ್‌ನಲ್ಲಿ ಇಬ್ಬರು ಸಹೋದರಿಯರು ತಮ್ಮ ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಇಬ್ಬರ ಮೇಲೆ ಹರಿದು ಹೋಗಿದೆ.

ಕಾರು ಅಪಘಾತದ ಮೂಲಕ ಮುಸ್ಲಿಂ ವ್ಯಕ್ತಿ ಹಿಂದೂ ಹುಡುಗಿಯರನ್ನು ಕೊಲ್ಲಲು ಮುಂದಾಗಿದ್ದು ನಿಜವೇ?
ವೈರಲ್​​ ವಿಡಿಯೋ
Follow us on

ಸಿಸಿಟಿವಿ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ನಿಯಂತ್ರಣ ಕಳೆದುಕೊಂಡ ಕಾರೊಂದು ಇಬ್ಬರು ಬಾಲಕಿಯರ ಮೇಲೆ ಹರಿದುಕೊಂಡು ಹೋಗುವುದನ್ನು ಕಾಣಬಹುದು. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬಳಕೆದಾರರು ಈ ಕ್ಲಿಪ್ ಅನ್ನು ಕೋಮು ಕೋನದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಿಂದೂ ಹೆಣ್ಣು ಮಕ್ಕಳನ್ನು ಮುಸ್ಲಿಂ ವ್ಯಕ್ತಿಗಳು ಬೇಕೆಂದೇ ಈ ರೀತಿ ಅಪಘಾತ ಎಸಗುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಇದೆಲ್ಲ ಈ ಜಿಹಾದಿಗಳ ಪ್ಲಾನ್. ಹಿಂದೂಗಳು ಮತ್ತು ಹಿಂದೂಗಳ ಸಹೋದರಿಯರು ಮತ್ತು ಹಿಂದೂಗಳ ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತಿದೆ, ಇದು ಅಪಘಾತ ಎಂದು ಹಿಂದೂಗಳು ಭಾವಿಸುತ್ತಿದ್ದಾರೆ. ಈ ವೀಡಿಯೋ ಎಲ್ಲಿಂದ ಬಂದಿದೆಯೋ ಗೊತ್ತಿಲ್ಲ, ಆದರೆ ಹೆಣ್ಣಿನ ಮೇಲೆ ವಾಹನಗಳನ್ನು ಓಡಿಸುವ ಉದ್ದೇಶವೂ ಅದೇ, ಈ ಮುಸ್ಲಿಂ ಯುವಕರು ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದಾರೆ. ಹಿಂದೂಗಳು ಶಾಂತಿಯುತವಾಗಿ ಮೇಣದ ಬತ್ತಿಗಳನ್ನು ಬೆಳಗಿಸುವುದು ಬಿಟ್ಟು ಬೇರೇನೂ ಮಾಡಲ್ಲ ಅಂತ ಅವರಿಗೂ ಗೊತ್ತು,’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ದುರ್ಘಟನೆಯಲ್ಲಿ ಯಾವುದೇ ಕೋಮು ಕೋನ ಇಲ್ಲ. ಇಂದೋರ್‌ನಲ್ಲಿ ಇಬ್ಬರು ಸಹೋದರಿಯರು ತಮ್ಮ ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಇಬ್ಬರ ಮೇಲೆ ಹರಿದು ಹೋಗಿದೆ. ಆರೋಪಿ ತುಷಾರ್ ಅಗರ್ವಾಲ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ಈ ಸುದ್ದಿಯ ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದ್ದೇವೆ. ಈ ಸಂದರ್ಭ ಈ ಘಟನೆಯ ಬಗ್ಗೆ ಅನೇಕ ಮಾಧ್ಯಮ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಟಿವಿ-9 ಭಾರತ್ ವರ್ಷ ಅಕ್ಟೋಬರ್ 29, 2024 ರಂದು ಮಾಡಿರುವ ವರದಿಯ ಪಕ್ರಾರ, ಈ ಘಟನೆಯಲ್ಲಿ ಆರೋಪಿ ಕಾರು ಚಾಲಕನ ಹೆಸರನ್ನು ತುಷಾರ್ ಅಗರ್ವಾಲ್ ಎಂದು ಉಲ್ಲೇಖಿಸಲಾಗಿದೆ.

ಇಂದೋರ್‌ನ ಜೈಭವಾನಿ ನಗರದಲ್ಲಿ ಇಬ್ಬರು ಹುಡುಗಿಯರು ತಮ್ಮ ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದರು ಎಂದು ಇಂದೋರ್ ವಲಯ-1 ಡಿಸಿಪಿ ವಿನೋದ್ ಕುಮಾರ್ ಮೀನಾ ಉಲ್ಲೇಖಿಸಿದ್ದಾರೆ, ಆಗ ಚಾಲಕ ಅತಿವೇಗದಲ್ಲಿ ಬಂದು ಹುಡುಗಿಯರ ಮೇಲೆ ಕಾರು ಹತ್ತಿಸಿದ್ದಾನೆ. ಕಾರು ಮಾಲೀಕನ ಹೆಸರು ತುಷಾರ್ ಅಗರ್ವಾಲ್ ಅವರು ಹುಕುಮಚಂದ್ ಕಾಲೋನಿ ನಿವಾಸಿ. ಆತ ಸ್ಥಳದಿಂದ ಪರಾರಿಯಾಗಿದ್ದಾನೆ, ಆದರೆ ಹುಡುಕಾಟದ ನಂತರ ಅವನನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.

ತನಿಖೆಯ ಸಮಯದಲ್ಲಿ, ANI ಹಿಂದಿ ನ್ಯೂಸ್‌ನ ಎಕ್ಸ್ ಹ್ಯಾಂಡಲ್‌ನಲ್ಲಿ ಇಂದೋರ್ ವಲಯ-1 ಡಿಸಿಪಿ ವಿನೋದ್ ಕುಮಾರ್ ಮೀನಾ ಅವರ ಹೇಳಿಕೆಯನ್ನು ನಾವು ಕಂಡುಕೊಂಡಿದ್ದೇವೆ. ಹುಡುಗಿಯರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 19 ವರ್ಷದ ಬಾಲಕಿಯ ಸ್ಥಿತಿ ಸ್ಥಿರವಾಗಿದ್ದು, 13 ವರ್ಷದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಟಿವಿ9 ಕನ್ನಡ ತನಿಖೆಯಲ್ಲಿ, ವೈರಲ್ ಪೋಸ್ಟ್ ತಪ್ಪುದಾರಿಗೆಳೆಯುವಂತಿದೆ ಎಂಬುದು ಕಂಡುಬಂದಿದೆ. ಇಂದೋರ್‌ನಲ್ಲಿ ಅತಿವೇಗವಾಗಿ ಬಂದ ಕಾರು ಇಬ್ಬರು ಹುಡುಗಿಯರ ಮೇಲೆ ಹರಿದಿದೆ. ಈ ಘಟನೆಯಲ್ಲಿ ಆರೋಪಿಯ ಹೆಸರು ತುಷಾರ್ ಅಗರ್ವಾಲ್. ಇದರಲ್ಲಿ ಯಾವುದೇ ಕೋಮುವಾದಿ ಕೋನವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ