Fact Check | ರೈತರ ಪ್ರತಿಭಟನಾ ಸ್ಥಳದಲ್ಲಿ ಇದ್ದದ್ದು ಜೀಪ್, ₹1.5 ಕೋಟಿ ಮೌಲ್ಯದ ಬೆಂಜ್ ಕಾರು ಅಲ್ಲ

ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತರಲ್ಲಿ ಮೆರ್ಸಿಡೆಸ್ ಬೆಂಜ್ ಕಾರು ಇದೆ ಎಂಬ ಶೀರ್ಷಿಕೆಯಲ್ಲಿ ಹರಿದಾಡಿದ ವೈರಲ್ ಪೋಸ್ಟ್​ನ ಫ್ಯಾಕ್ಟ್​​ಚೆಕ್ ಇಲ್ಲಿದೆ.

Fact Check | ರೈತರ ಪ್ರತಿಭಟನಾ ಸ್ಥಳದಲ್ಲಿ ಇದ್ದದ್ದು ಜೀಪ್, ₹1.5 ಕೋಟಿ ಮೌಲ್ಯದ ಬೆಂಜ್ ಕಾರು ಅಲ್ಲ
ವೈರಲ್ ಆಗಿರುವ ಪೋಸ್ಟ್
Edited By:

Updated on: Jan 03, 2021 | 8:23 PM

ಕೇಂದ್ರದ ಕೃಷಿ ಕಾನೂನು ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಜೀಪ್ ಒಂದರ ಸುತ್ತಲೂ ಸಿಖ್ ಸಮುದಾಯದ ಜನರು ಕುಳಿತುಕೊಂಡಿರುವ ಫೋಟೊವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ಜೀಪ್​​ನಲ್ಲಿ ಮೆರ್ಸಿಡೆಸ್ ಬೆಂಜ್ ಲೋಗೊ ಇತ್ತು.

ಈ ಕಾರಣದಿಂದಾಗಿಯೇ ‘ಇದು ಮೆರ್ಸಿಡೆಸ್ ಬೆಂಜ್ ಜಿ ಕ್ಲಾಸ್ ಕಾರು, ಅದರ ಮೌಲ್ಯ ₹1.5 ಕೋಟಿಗಿಂತಲೂ ಹೆಚ್ಚು. ಸಿಂಘು ಗಡಿಭಾಗದಲ್ಲಿ ಪ್ರತಿಭಟನಾ ನಿರತ ರೈತರ ಆರ್ಥಿಕ ಸ್ಥಿತಿ ಹೇಗಿದೆ ನೋಡಿ ‘ಎಂಬ ಹಲವಾರು ಪೋಸ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ಟ್ವಿಟರ್​ನಲ್ಲಿ ಈ ಫೋಟೊ ಮೊದಲು ಟ್ವೀಟ್ ಆಗಿದ್ದು, ಇದೇ ಫೋಟೊ ಫೇಸ್​ಬುಕ್​ನಲ್ಲಿಯೂ ಪೋಸ್ಟ್ ಆಗಿತ್ತು. ಹಲವಾರು ಶೀರ್ಷಿಕೆಗಳೊಂದಿಗೆ ಹರಿದಾಡಿದ ಈ ಫೋಸ್ಟ್​ನಲ್ಲಿ ದೇಶದ ಬಡ ರೈತನ ಕಡಿಮೆ ಬೆಲೆಯ ಜೀಪ್ ನೋಡಿ ಎಂದು ಬರೆಯಲಾಗಿತ್ತು.

ಡಿಸೆಂಬರ್ 22ರಂದು ಟ್ವಿಟರ್ ಬಳಕೆದಾರ @iPardeepDhiman ಎಂಬವರು ಇದೇ ವೈರಲ್ ಪೋಟೊವನ್ನು ಶೇರ್ ಮಾಡಿ, ಈ ಜೀಪ್ ಮಾಲೀಕ ಮನ್​ಪ್ರೀತ್​ಸಿಂಗ್ ಅವರ ಇನ್ ಸ್ಟಾಗ್ರಾಂ ಪ್ರೊಫೈಲ್​ನ್ನು ಆಲ್ಟ್ ನ್ಯೂಸ್​ಗೆ​​ ನೀಡಿದ್ದರು. ಮನ್​ಪ್ರೀತ್​ಸಿಂಗ್ ಡಿಸೆಂಬರ್ 19ರಂದು ಈ ಫೋಟೊವನ್ನು ಪೋಸ್ಟ್ ಮಾಡಿದ್ದರು.

ಫ್ಯಾಕ್ಟ್ ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿ ಚಿತ್ರದಲ್ಲಿರುವುದು ಜೀಪ್, ಮೆರ್ಸಿಡೆಸ್ ಬೆಂಜ್  ಕಾರು ಅಲ್ಲ ಎಂದು ಹೇಳಿದೆ. ಸಿಂಗ್ ಅವರ ಇನ್ ಸ್ಟಾಗ್ರಾಂನಲ್ಲಿ ಇದೇ ಜೀಪ್ ನ ಬೇರೆ ಬೇರೆ ಫೋಟೊಗಳಿವೆ. ಒಂದು ಫೋಟೊದಲ್ಲಿ ಜೀಪ್ ನ ಸಂಖ್ಯೆ PB 12Z 8282 ಎಂದು ಕಾಣುತ್ತದೆ. ಈ ಬಗ್ಗೆ ಆಲ್ಟ್ ನ್ಯೂಸ್ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ವಾಹನ್ ಪೋರ್ಟಲ್ ನಲ್ಲಿ ಹುಡುಕಿದಾಗ ಪ್ರಸ್ತುತ ವಾಹನದ ಆರ್​ಟಿ ಒ ಮಾಹಿತಿ ಲಭ್ಯವಾಗಿದೆ.

ಕಾರುಗಳನ್ನು ಬೇರೆ ಮಾಡೆಲ್​ನ ಕಾರುಗಳಾಗಿ ಪರಿವರ್ತಿಸುವ ಕಲರ್ ಗ್ಲೋ ಕೇರಳ ಎಂಬ ಕಂಪನಿ ಫೋರ್ಸ್ ಗೂರ್ಖಾ ಎಸ್ ಯುವಿಯನ್ನು ಮೆರ್ಸಿಡೆಸ್ ಜಿ ವ್ಯಾಗನ್ ಆಗಿ ಪರಿವರ್ತಿಸಿದ್ದ ಬಗ್ಗೆ 2017ರಲ್ಲಿ ಸಿಎನ್ಎನ್ ನ್ಯೂಸ್ 18 ವರದಿ ಮಾಡಿತ್ತು. ಈ ವರದಿ ಪ್ರಕಾರ ಈ ರೀತಿ ಪರಿವರ್ತಿಸಲು ಬೇಕಾದ ಹಣ 8.5 ಲಕ್ಷ.

ಆನಂದ್ ಪುರ್ ನಿವಾಸ ಮನ್​ಪ್ರೀತ್​ಸಿಂಗ್ ಅವರಲ್ಲಿ ಆಲ್ಟ್ ನ್ಯೂಸ್ ವೈರಲ್ ಆಗಿರುವ ವಾಹನದ ಬಗ್ಗೆ ಮಾತನಾಡಿದೆ. ಸಿಂಗ್ ಅವರು ವಾಣಿಜ್ಯೋದ್ಯಮಿ ಆಗಿದ್ದು ಇವರ ಕುಟುಂಬದವರು ರೈತರಾಗಿದ್ದಾರೆ. ಪ್ರತಿಭಟನೆ ನಿರತ ರೈತರಿಗೆ ಬೆಂಬಲ ನೀಡಲು ನಾನು ಡಿಸೆಂಬರ್ 5ರಿಂದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದೆ. ಹಲವಾರು ಜನರು ಇಲ್ಲಿಗೆ ಬರುತ್ತಿದ್ದರು. ವೈರಲ್ ಆಗಿರುವ ಫೋಟೊ ನನ್ನದೇ. ಅದು ಮೆರ್ಸಿಡೆಸ್ ಬೆಂಜ್ ಡಿ ವ್ಯಾಗನ್ ನಂತೇ ಇರುವ ವಾಹನ. ನನಗೆ ಮುಚ್ಚಿಡುವಂತದ್ದೇನೂ ಇಲ್ಲ. ನಾನೂ ತೆರಿಗೆ ಪಾವತಿ ಮಾಡುತ್ತೇನೆ. ರೈತರ ಪ್ರತಿಭಟನೆಯನ್ನು ಹಳಿಯಲು ನನ್ನ ಕಾರಿನ ಫೋಟೊ ಬಳಕೆಯಾಯಿತು ಎಂಬುದರ ಬಗ್ಗೆ ಬೇಸರವಿದೆ. ಈ ಕಾರಿನ ಚಿತ್ರ ನೋಡಿ ಟೀಕೆ ಮಾಡುವುದರಿಂದ ರೈತರ ಪ್ರತಿಭಟನೆಗೆ ಬೆಂಬಲ ನೀಡುವ ನನ್ನ ಉತ್ಸಾಹ ಕಡಿಮೆಯಾಗುವುದಿಲ್ಲ ಎಂದಿದ್ದಾರೆ.

Fact Check | ವೈರಲ್ ಆಯ್ತು ಜಿಯೊ ಗೋಧಿ ಹಿಟ್ಟು, ಪ್ಯಾಕೆಟ್ ಮೇಲಿರುವ ರಿಲಯನ್ಸ್ ಲೋಗೊ ಫೇಕ್