ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 03-01-2021
LIVE NEWS & UPDATES
-
ಸ್ಮಶಾನದ ಮೇಲ್ಛಾವಣಿ ಕುಸಿತ ಪ್ರಕರಣ: ಸಾವಿನ ಸಂಖ್ಯೆ 23ಕ್ಕೆ ಏರಿಕೆ
09:23 pm ಉತ್ತರಪ್ರದೇಶದ ಮುರಾದ್ ನಗರದಲ್ಲಿ ಸ್ಮಶಾನದಲ್ಲಿನ ಕಟ್ಟಡದ ಮೇಲ್ಛಾವಣಿ ಕುಸಿದ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆ ಆಗಿದೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
-
ಮದುವೆ ದಿಬ್ಬಣದ ಬಸ್ ಅಪಘಾತ ಪ್ರಕರಣ: ಮೃತರ ಸಂಖ್ಯೆ 8ಕ್ಕೆ ಏರಿಕೆ
09:05 pm ಕೇರಳದ ಕಾಸರಗೋಡು ಜಿಲ್ಲೆಯ ಕಲ್ಲಪ್ಪಳ್ಳಿ ಬಳಿ ಮದುವೆ ದಿಬ್ಬಣದ ಬಸ್ ಅಪಘಾತ ಪ್ರಕರಣದಲ್ಲಿ ಮೃತ ಪಟ್ಟವರ ಸಂಖ್ಯೆ 8ಕ್ಕೆ ಏರಿಕೆ. ಮದುವೆ ದಿಬ್ಬಣದ ಬಸ್ ಮನೆ ಮೇಲೆ ಉರುಳಿ ಬಿದ್ದಿತ್ತು. ರಾಜೇಶ್, ರವಿಚಂದ್ರ, ಆದರ್ಶ್, ಶ್ರೇಯಸ್, ಸುಮತಿ, ಶಶಿ, ಜಯಲಕ್ಷ್ಮೀ ಸೇರಿ 8 ಜನರು ಮೃತಪಟ್ಟಿದ್ದಾರೆ.
-
ರಾಜ್ಯದಲ್ಲಿ ಇಂದು ಹೊಸದಾಗಿ 810 ಜನರಿಗೆ ಕೊರೊನಾ ದೃಢ
08:01 pm ರಾಜ್ಯದಲ್ಲಿ ಇಂದು ಹೊಸದಾಗಿ 810 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 9,21,938ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 8 ಜನರು ಮೃತಪಟ್ಟಿದ್ದಾರೆ. ಇದುವರೆಗೆ ಕೊರೊನಾದಿಂದ 12,107 ಮಂದಿ ಕೊನೆ ಉಸಿರು ಎಳೆದಿದ್ದಾರೆ. ಸೋಂಕಿತರ ಪೈಕಿ 8,98,919 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದೆ.
ದೆಹಲಿ ಚಲೋ ಸೇರಿದ ಮಹಾರಾಷ್ಟ್ರದ ವಿದ್ಯಾರ್ಥಿಗಳು, ಮೃತ ರೈತರ ಪತ್ನಿಯರು
07:47 pm ಮಹಾರಾಷ್ಟ್ರದ ವಿವಿಧ ಪ್ರಾಂತ್ಯಗಳ ನೂರಾರು ರೈತರು, ವಿದ್ಯಾರ್ಥಿಗಳು ದೆಹಲಿ ಚಲೋ ಚಳುವಳಿ ಸೇರಿದ್ದಾರೆ. ಪೂರ್ವ ಮಹಾರಾಷ್ಟ್ರ ಮತ್ತು ಮರಾಠಾವಾಡಾ ಪ್ರಾಂತ್ಯಗಳಲ್ಲಿ ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಪತ್ನಿಯರು ಸಹ ದೆಹಲಿ ಚಲೋ ಬೆಂಬಲಿಸಿ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ ಎಂದು ಕಿಸಾನ್ ಸಭಾ ತಿಳಿಸಿದೆ.
‘ಈಗ ಆರಾಮವಾಗಿದ್ದೇನೆ’ ಡಿ.ವಿ.ಸದಾನಂದಗೌಡ ಟ್ವೀಟ್
07:36 pm ನನ್ನ ಆರೋಗ್ಯ ಸ್ಥಿರವಾಗಿದೆ. ಸಕ್ಕರೆ ಅಂಶ ಕಡಿಮೆಯಾಗಿ ಸ್ವಲ್ಪ ಸುಸ್ತಾಗಿತ್ತು. ಈಗ ಆರಾಮಾಗಿದ್ದೇನೆ. ಎಕೊ, ಇಸಿಜಿ ಸೇರಿದಂತೆ ಎಲ್ಲಾ ಪ್ಯಾರಾಮಿಟರ್ಗಳು ಸಹಜವಾಗಿವೆ. ಸದೃಢ ಆರೋಗ್ಯಕ್ಕಾಗಿ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.
ದೆಹಲಿ ಚಲೋಗೆ ತೊಂದರೆ ನೀಡುತ್ತಿರುವ ಮಳೆ
07:26 pm ಚಳುವಳಿ ನಡೆಯುತ್ತಿರುವ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು, ನೀರಿನಿಂದ ರಕ್ಷಣೆ ಪಡೆಯಲು ನೆನೆಯದ ಟೆಂಟ್ಗಳ ಮೊರೆ ಹೋಗಿದ್ದೇವೆ. ಕೇಂದ್ರ ಸರ್ಕಾರದ ಜೊತೆ ನಾಳೆ ನಡೆಯಲಿರುವ ಸಭೆಯಲ್ಲಿ ಕೃಷಿ ಕಾಯ್ದೆಗಳ ಸಂಪೂರ್ಣ ರದ್ಧತಿಗೆ ಆಗ್ರಹಿಸುತ್ತೇವೆ ಎಂದು ರೈತ ನಾಯಕ ಹರ್ಮೀತ್ ಸಿಂಗ್ ತಿಳಿಸಿದ್ದಾರೆ.
ಮುಂಬೈನಲ್ಲಿ 400 ಗ್ರಾಂ ಮಾದಕ ದ್ರವ್ಯ ವಶಪಡಿಸಿಕೊಂಡ ಎನ್ಸಿಬಿ
07:21 pm ಮುಂಬೈನ ಮೀರಾ ರಸ್ತೆಯಲ್ಲಿನ ಹೋಟೆಲ್ ಮೇಲೆ ಮಾದಕ ವಸ್ತು ನಿಯಂತ್ರಣ ಬ್ಯೂರೋ ದಾಳಿ ಮಾಡಿದೆ. ಈವೇಳೆ 8-10 ಲಕ್ಷ ಮೌಲ್ಯದ 400 ಗ್ರಾಂ ಮಾದಕ ದ್ರವ್ಯ ಸ್ವಾಧೀನಪಡಿಸಿಕೊಂಡಿದೆ. ದಾಳಿ ನಡೆಸಿದ್ದ ಮಾದಕ ವಸ್ತು ನಿಯಂತ್ರಣ ಬ್ಯೂರೋ ನಟಿಯೊಂದಿಗೆ, ಡ್ರಗ್ಸ್ ವಿಕ್ರಯ ಮಾಡುತ್ತಿದ್ದ ಚಾಂದ್ ಮಹಮ್ಮದ್ ಎಂಬಾತನನ್ನು ಬಂಧಿಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ನಟಿಯೋರ್ವರು ಡ್ರಗ್ ಪೆಡ್ಲರ್ ಜೊತೆ ಇದ್ದರು ಎಂದು ತಿಳಿಸಿದೆ. ಆದರೆ, ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ.
‘ಡಿ.ವಿ.ಸದಾನಂದಗೌಡರ ಆರೋಗ್ಯ ಸ್ಥಿರವಾಗಿದೆ’ : ಆಸ್ಟರ್ ಆಸ್ಪತ್ರೆ ವೈದ್ಯೆ ಡಾ.ಬೃಂದಾ
06:51 ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಗ್ಯ ಸ್ಥಿರವಾಗಿದೆ ಎಂದು ಬೆಂಗಳೂರಿನ ಆಸ್ಟರ್ ಆಸ್ಪತ್ರೆ ವೈದ್ಯೆ ಡಾ.ಬೃಂದಾ ತಿಳಿಸಿದ್ದಾರೆ. ಸಚಿವರ ಆರೋಗ್ಯದ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಕೇಂದ್ರ ಸಚಿವರು ಅಪಾಯದಿಂದ ಹೊರಬಂದಿದ್ದಾರೆ. ಲೋ ಶುಗರ್ಗೆ ಚಿಕಿತ್ಸೆ ನೀಡಲಾಗುತ್ತಿದೆ.ಕಾರ್ಡಿಯಾಕ್, ಇಸಿಜಿ ಟೆಸ್ಟ್ನಲ್ಲಿ ಎಲ್ಲವೂ ಸಹಜವಾಗಿದೆ. ಆದರೂ 24 ತಾಸುಗಳ ಕಾಲ ಡಿ.ವಿ. ಸದಾನಂದಗೌಡರು ನಿಗಾದಲ್ಲಿರಲಿದ್ದಾರೆ ಎಂದು ಬೆಂಗಳೂರಿನ ಆಸ್ಟರ್ ಆಸ್ಪತ್ರೆ ವೈದ್ಯೆ ಡಾ.ಬೃಂದಾ ಹೇಳಿಕೆ ತಿಳಿಸಿದ್ದಾರೆ.
ಕಬ್ಬಿಗೆ ಬೆಲೆ ನಿಗದಿ : ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ರನ್ನು ಆಗ್ರಹಿಸಿದ ರೈತರು
06:43 pm ಕಬ್ಬಿಗೆ ಬೆಲೆ ನಿಗದಿಪಡಿಸುವಂತೆ ಕೋರಿ ಪಂಜಾಬ್ ಸರ್ಕಾರಕ್ಕೆ ಅವರಿಗೆ 1.5 ತಿಂಗಳ ಹಿಂದೆ ಪತ್ರ ಬರೆದಿದ್ದೇವೆ. 1 ವಾರದಲ್ಲಿ ಉತ್ತರಿಸುವುದಾಗಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದರು. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ ಎಂದು ರೈತ ನಾಯಕ ಜಂಗ್ವೀರ್ ಸಿಂಗ್ ತಿಳಿಸಿದ್ದಾರೆ.
ನೂತನ ಕೃಷಿ ಕಾಯ್ದೆಗಳ ಪ್ರತಿಗಳನ್ನು ದಹಿಸಿ ಸಾಂಪ್ರದಾಯಿಕ ಹಬ್ಬ ಆಚರಿಸಲಿರುವ ಚಳುವಳಿ ನಿರತ ರೈತರು
06:37 pm ಜನವರಿ 13ರಂದು ಪಂಜಾಬ್ನ ಚಳಿಗಾಲದ ಸಾಂಪ್ರದಾಯಕ ಹಬ್ಬವನ್ನು ನೂತನ ಕೃಷಿ ಕಾಯ್ದೆಗಳ ಪ್ರತಿಗಳನ್ನು ದಹಿಸಿ ಆಚರಿಸುತ್ತೇವೆ ಎಂದು ರೈತ ನಾಯಕ ಮನ್ಜೀತ್ ಸಿಂಗ್ ರೈ ತಿಳಿಸಿದ್ದಾರೆ. ಜೊತೆಗೆ, ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಕಿಸಾನ್ ದಿನವನ್ನಾಗಿ ಆಚರಿಸುತ್ತೇವೆ ಎಂದು ರೈತ ನಾಯಕರು ತಿಳಿಸಿದ್ದಾರೆ.
ಲವ್ ಜಿಹಾದ್ ಕಾಯ್ದೆ ಕುರಿತು ಚರ್ಚೆ ನಡೆಸಿಲ್ಲ : ಅರವಿಂದ ಲಿಂಬಾವಳಿ
06:32 pm ಶಿವಮೊಗ್ಗದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಲವ್ ಜಿಹಾದ್ ಕಾಯ್ದೆಯ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ಕಾಯ್ದೆ ಬಗ್ಗೆ ಚರ್ಚೆ ನಡೆಸಲಾಗುವುದು. ಇಂದು ನಡೆದ ಸಭೆಯಲ್ಲಿ ಈ ಕುರಿತು ಯಾವ ಚರ್ಚೆಯೂ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ. ಲವ್ ಜಿಹಾದ್ ಕಾಯ್ದೆಯನ್ನು ಬಿಜೆಪಿ ಆಡಳಿತದ ಕೆಲ ರಾಜ್ಯಗಳು ಜಾರಿಗೊಳಿಸುತ್ತಿರುವ ಬೆನ್ನಲ್ಲೇ ಕರ್ನಾಟಕ ಬಿಜೆಪಿ ಸರ್ಕಾರದ ನಡೆ ಕುರಿತು ಕುತೂಹಲ ಮೂಡಿತ್ತು.
ಬ್ರಿಟನ್ನಲ್ಲಿ ಲಾಕ್ಡೌನ್ ನಿಯಮಗಳು ಇನ್ನಷ್ಟು ಬಿಗಿಗೊಳ್ಳುವ ಸಂಭವ
06:27 pm ಹೊಸ ಕೊರೊನಾ ತಳಿ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈಗ ಜಾರಿಯಲ್ಲಿರುವ ಲಾಕ್ಡೌನ್ ನಿಯಮಗಳನ್ನು ಬಿಗಿಗೊಳಿಸುವ ಸುಳಿವು ನೀಡಿದ್ದಾರೆ. ಈಗಾಗಲೇ ಶಾಲಾ ಶಿಕ್ಷಕರ ಒಕ್ಕೂಟ ಕೆಲ ವಾರಗಳ ಕಾಲ ಶಾಲೆಗಳನ್ನು ಮುಚ್ಚಲು ಅನುಮತಿ ಕೋರಿ ಮನವಿ ಮಾಡಿದೆ.
500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದ ಶನಿ ಮಹಾದೇವಪ್ಪ ನಿಧನ
06:18 pm ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶನಿ ಮಹದೇವಪ್ಪ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶನಿ ಮಹದೇವಪ್ಪರಿಗೆ 90 ವರ್ಷವಾಗಿತ್ತು. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ,ಶ್ರೀನಿವಾಸ ಕಲ್ಯಾಣ ಮುಂತಾದವುಗಳು ಅವರು ನಟಿಸಿದ್ದ ಪ್ರಮುಖ ಚಿತ್ರಗಳಾಗಿವೆ. ಡಾ. ರಾಜ್ ಕುಮಾರ್ ಜತೆಯಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಮೆ ಅವರದ್ದಾಗಿತ್ತು.
ಪ್ರತಿ 3 ತಿಂಗಳಿಗೊಮ್ಮೆ ಕಾರ್ಯಕಾರಿಣಿ ಸಭೆ ಆಯೋಜನೆ : ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್
06:09 pm ಮುಂದಿನ ದಿನಗಳಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಕಾರ್ಯಕಾರಿಣಿ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ. ಜೊತೆಗೆ ಪ್ರತಿ ತಿಂಗಳೂ ಪದಾಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಇಂದಿನ ಸಭೆ ಯಶಸ್ವಿಯಾಗಿ ನಡೆದಿದ್ದು, ಶೇ.90 ರಷ್ಟು ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆತ್ಮನಿರ್ಭರ ಭಾರತ ಸಾಧನೆಗೆ ಕೊರೊನಾ ಲಸಿಕೆ ಬಳಕೆ ಅನುಮತಿ ಸಹಕಾರಿ : ವಿ.ಕೆ.ಪೌಲ್
06:05 pm ಕೊರೊನಾ ಲಸಿಕೆ ಬಳಕೆಗೆ ಅನುಮತಿ ನೀಡಿರುವುದು ಭಾರತದ ಪಾಲಿಗೆ ಮಹತ್ವದ ಘಟ್ಟವಾಗಲಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಭಾನುವಾರ ಹೇಳಿದ್ದಾರೆ. ಆತ್ಮನಿರ್ಭರ ಭಾರತ ಸಾಧನೆಗೆ ಈ ನಿರ್ಧಾರ ಸಹಕಾರಿಯಾಗಲಿದೆ. ಸಂಶೋಧಕರು ಮತ್ತು ಉದ್ಯಮ ರಂಗದ ನಡುವಿನ ಸಹಕಾರ ಹೆಚ್ಚಿಸಲು ಈ ನಡೆ ಪ್ರೇರಣೆ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೈತರ ಚಳುವಳಿಯಿಂದ ವಿಚಲಿತಗೊಂಡಿದ್ದೇನೆ : ಸೋನಿಯಾ ಗಾಂಧಿ ಕಳವಳ
05:55 pm ದೆಹಲಿಯ ಚಳಿಯಲ್ಲಿ 39 ದಿನಗಳಿಂದ ಚಳುವಳಿ ನಡೆಸುತ್ತಿರುವ ಪಂಜಾಬ್ ರೈತರ ಪರಿಸ್ಥಿತಿ ಕಂಡು ನಾನು ವಿಚಲಿತನಾಗಿದ್ದೇನೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. ದೇಶವಾಸಿಗಳಂತೆ ನಾನೂ ಚಿಂತಿತನಾಗಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರು ಮತ್ತು ರೈತರ ಹಿತ ಕಾಯುವುದು ಪ್ರಜಾಪ್ರಭುತ್ವದ ನಿಯಮ ಎಂಬುದು ಕೇಂದ್ರ ಸರ್ಕಾರಕ್ಕೆ ಅರಿವಿರಬೇಕಿತ್ತು ಎಂದು ಅವರು ಟೀಕಿಸಿದ್ದಾರೆ.
‘ಅಪ್ಪ ಆರಾಮಾಗಿದ್ದಾರೆ’ : ಕಾರ್ತಿಕ್ ಗೌಡ
05:58 pm ಲೋ ಶುಗರ್ನಿಂದ ಅಪ್ಪ ಅಸ್ವಸ್ಥರಾಗಿದ್ದರು. ಅಪ್ಪನ ಜತೆ ಮಾತಾಡಿದ್ದೇನೆ.ಅವರು ಸೌಖ್ಯವಾಗಿದ್ದಾರೆ. ವೈದ್ಯರು ಈಗ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಆಸ್ಟರ್ ಆಸ್ಪತ್ರೆಗೆ ಭೇಟಿ ನೀಡಿದ ಡಿ.ವಿ. ಸದಾನಂದಗೌಡರ ಪುತ್ರ ಕಾರ್ತಿಕ್ಗೌಡ ಹೇಳಿಕೆ ನೀಡಿದ್ದಾರೆ.
ಯುವ ಧಾರ್ಮಿಕ ಮುಖಂಡ ಅಬ್ಬಾಸ್ ಸಿದ್ದಿಕಿ ನಿರ್ಧಾರ ಆಧರಿಸಿ ಸ್ಪರ್ಧಿಸುತ್ತೇವೆ : ಅಸಾದುದ್ದೀನ್ ಒವೈಸಿ
05:30 pm ಬಂಗಾಳದ ಯುವ ಧಾರ್ಮಿಕ ಮುಖಂಡ ಅಬ್ಬಾಸ್ ಸಿದ್ದಕಿಯವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಮುಂದಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅವರ ನಿರ್ಧಾರದಂತೆ ನಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಭೇಟಿಯ ನಂತರ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಗೆದ್ದರೆ ಶೈಕ್ಷಣಿಕ ಸಾಲ ಮನ್ನಾ ಮಾಡುತ್ತೇವೆ : ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಘೋಷಣೆ
05: 18 pm ಡಿಎಂಕೆ ಅಧಿಕಾರಕ್ಕೆ ಬಂದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡುವುದಾಗಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಭಾನುವಾರ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಘೋಷಿಸಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಡಿಎಂಕೆ ಅಧಿಕಾರಕ್ಕೆ ಬಂದಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ಗೆ ಗರ್ವದಿಂದ ಹೇಳಿಕೊಳ್ಳುವಂತಹ ಓರ್ವ ನಾಯಕರೂ ಇಲ್ಲ : ಅರುಣ ಸಿಂಗ್
05:10 pm ರಾಜ್ಯದಲ್ಲಿ ಬಿಜೆಪಿ ಗ್ರಾಫ್ ಏರುತ್ತಿದ್ದು, ಜೆಡಿಎಸ್ ಗ್ರಾಫ್ ಕುಸಿಯುತ್ತಿದೆ. ಅದಕ್ಕಾಗಿ ಅವರು ಮೈತ್ರಿ ಮಾತುಗಳನ್ನು ತೇಲಿ ಬಿಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ಗೆ ಗರ್ವದಿಂದ ಹೇಳಿಕೊಳ್ಳುವಂತಹ ಓರ್ವ ನಾಯಕರೂ ಇಲ್ಲ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಹ ಬಿಜೆಪಿ ಸಾಧನೆ ಮಾಡಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ಮುಂದೆಯೂ ಸ್ವಂತ ಬಲದಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ. ಹೀಗಾಗಿ, ಬೂತ್ ಮಟ್ಟದಿಂದಲೇ ಬಿಜೆಪಿಯನ್ನು ಬಲಪಡಿಸುವಂತೆ ಎಂದು ಅವರು ಕರೆಕೊಟ್ಟರು.
ಬಿಜೆಪಿ- ಜೆಡಿಎಸ್ ವಿಲೀನ ವದಂತಿ ಹಿಂದಿರುವವರ ಹೆಸರು ಹೇಳಿದ ಸಚಿವ ಆರ್. ಅಶೋಕ್
04:58 pm ಜೆಡಿಎಸ್ ಜೊತೆ ವಿಲೀನ, ಹೊಂದಾಣಿಕೆ ಸುತಾರಾಂ ಇಲ್ಲ. ವಿಲೀನದ ವದಂತಿಗಳನ್ನು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹಬ್ಬಿಸುತ್ತಿದ್ದಾರೆ. ಬಿಜೆಪಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. ಬಿಜೆಪಿ- ಜೆಡಿಎಸ್ಗೆ ಯಾವುದೇ ಸಂಬಂಧ ಇಲ್ಲ; ಮುಂದೆಯೂ ಇರುವುದಿಲ್ಲ. ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಆಗಬಹುದೇ ಹೊರತು, ಬೇರೆ ಯಾವುದೇ ಚುನಾವಣೆಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಎಚ್.ಡಿ. ಕುಮಾರಸ್ವಾಮಿಯವರನ್ನು ಕೇಂದ್ರ ಮಂತ್ರಿ ಮಾಡುವ ಯಾವುದೇ ಉದ್ದೇಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ಡಾಟಿ ಸದಾನಂದಗೌಡ ಆಗಮನ
04:50 pm ಬೆಂಗಳೂರಿನ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರನ್ನು ದಾಖಲಿಸುವ ಸಿದ್ಧತೆ ನಡೆಸಿದ್ದು, ಅವರ ಪತ್ನಿ ಡಾಟಿ ಸದಾನಂದಗೌಡ ಆಸ್ಟರ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಭದ್ರತೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಎಮರ್ಜೆನ್ಸಿ ವಾರ್ಡ್ ನಲ್ಲಿ ದಾಖಲಿಸಲು ವೈದ್ಯರು ತಯಾರಿ ನಡೆಸಿದ್ದಾರೆ.
ಸಾವಿತ್ರಿಬಾಯಿ ಫುಲೆ ಜನ್ಮದಿನಕ್ಕೆ ಗೌರವ ಸಲ್ಲಿಸಿದ ನಾಯಕರು
04:43 pm ಸಾಮಾಜಿಕ ಸುಧಾರಕಿ ಸಾವಿತ್ರಿಬಾಯಿ ಫುಲೆಯವರ 189ನೇ ಜನ್ಮದಿನದಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್ಸಿಪಿ ನಾಯಕ ಶರದ್ ಪವಾರ್ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಗೌರವ ಸಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಮಹಿಳಾ ಶಿಕ್ಷಣ ದಿನವೆಂದು ಆಚರಿಸಲಾಗುತ್ತದೆ.
ಯಕಶ್ಚಿತ್ ಮಂತ್ರಿ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
04:32 pm ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ಗಳ ಮೂಲಕ ಸದ್ಯದ ರಾಜಕೀಯ ಸವಾಲುಗಳಿಗೆ ಉತ್ತರಿಸುವ ಯತ್ನವೆಸಗಿದ್ದಾರೆ.1997ರಲ್ಲಿ ದೇವೇಗೌಡರು ಪ್ರಧಾನಿ ಸ್ಥಾನದಿಂದ ಇಳಿಯುವಾಗ ಇದೇ ಬಿಜೆಪಿಯ ಅಗ್ರಮಾನ್ಯ ಸಾರ್ವಕಾಲಿಕ ನಾಯಕ ದಿ. ವಾಜಪೇಯಿ ಅವರು ದೇವೇಗೌಡರಿಗೆ, ಜನತಾದಳಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆಗಲೇ ಪ್ರಧಾನಿ ಹುದ್ದೆ, ಕೇಂದ್ರದ ಅಧಿಕಾರ ತಿರಸ್ಕರಿಸಿ ಬಂದವರು ನಾವು. ಇನ್ನು ಯಕಶ್ಚಿತ್ ಮಂತ್ರಿ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ಮದುವೆ ದಿಬ್ಬಣ ಅಪಘಾತದಲ್ಲಿ ಮೃತರ ಸಂಖ್ಯೆ 8 ಕ್ಕೇರಿಕೆ
04:29 pm ಮದುವೆ ದಿಬ್ಬಣ ಬಸ್ ಅಪಘಾತದಲ್ಲಿ ಮೃತರ ಸಂಖ್ಯೆ ಎಂಟಕ್ಕೇರಿದೆ. 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹತ್ತಕ್ಕೂ ಹೆಚ್ಚು ಜನರ ಪರಿಸ್ಥಿತಿ ಗಂಭೀರಗೊಂಡಿದೆ. ರಾಜೇಶ್, ರವಿಚಂದ್ರ, ಆದರ್ಶ್, ಶ್ರೇಯಸ್, ಸುಮತಿ, ಶಶಿ, ಜಯಲಕ್ಷ್ಮಿ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ: ಮೇಲ್ಚಾವಣೆ ಕುಸಿದು 18 ಸಾವು, 25ಕ್ಕೂ ಅಧಿಕ ಮಂದಿಗೆ ಗಾಯ
04:23 pm ಉತ್ತರಪ್ರದೇಶದ ಮುರಾದ್ ನಗರದಲ್ಲಿ ಸ್ಮಶಾನದಲ್ಲಿ ಕಟ್ಟಡದ ಮೇಲ್ಚಾವಣೆ ಕುಸಿದು 18 ಜನರು ಮೃತಪಟ್ಟಿದ್ದಾರೆ. ಛಾವಣಿ ಕುಸಿದ ವೇಳೆ ಸ್ಥಳದಲ್ಲಿ 100 ಜನರಿದ್ದು, ಜೊತೆಗೆ, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ರಾಮ ಧನ್ ಎನ್ನೋ ವ್ಯಕ್ತಿಯೋರ್ವನ ಅಂತ್ಯಕ್ರಿಯೆಗೆ ಹೋದಾಗ, ಮಳೆ ಸುರಿಯತೊಡಗಿತ್ತು. ಮಳೆಯಿಂದ ರಕ್ಷಣೆಗಾಗಿ ಸ್ಮಶಾನದಲ್ಲಿದ್ದ ಕಟ್ಟಡ ಮೇಲ್ಚಾವಣಿ ಅಡಿ ನಿಂತಿದ್ದರು. ಘಟನೆಯ ಕುರಿತು ವಿಚಾರಣೆಗೆ, ಅವಶ್ಯಕ ನೆರವಿಗೆ ಉತ್ತರ ಪ್ರದೇಶ ಸಿ.ಎಂ ಯೋಗಿ ಆದಿತ್ಯನಾಥ್ ಅದೇಶ ನೀಡಿದ್ದಾರೆ.
ಕಾರ್ಯಕರ್ತರಿಗೆ ರಾಜ್ಯ ಪ್ರವಾಸ ಮಾಡಲು ಕರೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
04:14 pm ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೀತಿಯಲ್ಲೇ ರಾಜ್ಯ ಪ್ರವಾಸ ಮಾಡಬೇಕು. ಜನಸೇವಕ ಯಾತ್ರೆಯ ನೇತೃತ್ವವನ್ನು ಸಿಎಂ ಬಿಎಸ್ವೈ ಹೋರಲಿದ್ದು, ಅವರ ನೇತೃತ್ವದಲ್ಲಿ ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಹೊಸ ಸಂದೇಶ ಕೊಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯ ಕಾರ್ಯಕಾರಿಣಿ ಸಭೆಯ ನಂತರ ಹೇಳಿದ್ದಾರೆ.
ಮದುವೆ ದಿಬ್ಬಣದ ಬಸ್ ಅಪಘಾತ :7 ಕ್ಕೇರಿದ ಮೃತರ ಸಂಖ್ಯೆ
04:07 pm ಕಲ್ಲಪ್ಪಳ್ಳಿ ಬಳಿ ಮದುವೆ ದಿಬ್ಬಣದ ಬಸ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಗಾಯಾಳುಗಳಿಗೆ ಕೇರಳ, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪುತ್ತೂರಿನಿಂದ ಕೇರಳದ ಪಾಣತ್ತೂರಿಗೆ ತೆರಳುತ್ತಿದ್ದ ಮದುವೆ ದಿಬ್ಬಣದ ಬಸ್‌ನಲ್ಲಿ 63 ಜನ ಪ್ರಯಾಣಿಸುತ್ತಿದ್ದರು.
ಆದ್ಯವೀರಗೆ ಮೂರನೇ ಹುಟ್ಟುಹಬ್ಬದ ಸಂಭ್ರಮ
04:05 pm ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುತ್ರ ಆದ್ಯವೀರ ಅವರ ಮೂರನೇ ವರ್ಷದ ಹುಟ್ಟುಹಬ್ಬವನ್ನು ಮೈಸೂರು ಅರಮನೆಯಲ್ಲಿ ಆಚರಿಸಲಾಯಿತು. ಈ ಕುರಿತು ಫೇಸ್ ಬುಕ್ ಖಾತೆಯಲ್ಲಿ ಸಂತಸ ಹಂಚಿಕೊಂಡ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುತ್ರ ಆದ್ಯವೀರ ಪೋಟೊಗಳನ್ನು ಹಾಕಿ ಸಂಭ್ರಮಿಸಿದ್ದಾರೆ.
ದರೋಡೆ ಪ್ರಕರಣದ ಆರೋಪಿ ಮೇಲೆ ಆತ್ಮ ರಕ್ಷಣೆಗಾಗಿ ಪೊಲೀಸರಿಂದ ಗುಂಡಿನ ದಾಳಿ
03:59 pm ದರೋಡೆ ಪ್ರಕರಣದ ಆರೋಪಿ ಇಮ್ರಾನ್ ಅಲಿಯಾಸ್ ಲಾರಿ ಮುಲಾಮನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗೋಪಿಚಂದ್ ಎಂಬಾತನಿಗೆ ಚಾಕು ತೋರಿಸಿ ಹಣ ಸುಲಿಗೆ ಮಾಡಿದ ದೂರು ದಾಖಲಾಗಿತ್ತು. ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಇಮ್ರಾನ್ ಹಲ್ಲೆಗೆ ಮುಂದಾಗಿದ್ದ. ಆತ್ಮರಕ್ಷಣೆಗಾಗಿ ಸಂಪಿಗೆಹಳ್ಳಿ ಇನ್ಸ್ಪೆಕ್ಟರ್ ಗುಂಡಿನ ದಾಳಿ ಮಾಡಿದ್ದಾರೆ. ಆರೋಪಿ ಇಮ್ರಾನ್ನ ಕಾಲಿಗೆ ಗುಂಡು ತಗುಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಸಿಕೆ ಬಳಕೆಗೆ ಒಪ್ಪಿಗೆ : ಟೀಕಿಸಿದ ನಾಯಕರ ಮೇಲೆ ಹರಿಹಾಯ್ದ ಕೇಂದ್ರ ಸಚಿವ
03:53 pm ಶಶಿ ತರೂರ್, ಅಖಿಲೇಶ್ ಯಾದವ್ ಮತ್ತು ಜೈರಾಮ್ ರಮೇಶ್ ನಮ್ಮ ದೇಶದೊಳಗಿನ ಸಿನಿಕ ರಾಜಕಾರಣಿಗಳು. ಕೊರೊನಾ ಲಸಿಕೆಗೆ ಅನುಮತಿ ನೀಡಿರುವುದನ್ನು ಅವರ ಬಳಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಈ ನಾಯಕರು ದೀರ್ಘಕಾಲದ ರಾಜಕೀಯ ದುರುದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.
‘ಕೊವಿಡ್ ನಿಯಮ ಪಾಲಿಸದಿದ್ರೆ ನೀವು ಬರೋದೇ ಬೇಡ’ : ಭಾರತ ಕ್ರಿಕೆಟ್ ತಂಡಕ್ಕೆ ಎಚ್ಚರಿಕೆ
03:42 pm ‘ಕೊವಿಡ್ ನಿಯಮ ಪಾಲಿಸದಿದ್ರೆ ನೀವು ಬರೋದೇ ಬೇಡ.ಎಲ್ಲರಿಗೂ ನಮ್ಮ ನಿಯಮಗಳು ಸಮಾನವಾಗಿ ಅನ್ವಯವಾಗುತ್ತವೆ’ಎಂದು ಕ್ವೀನ್ಸ್ಲೆಂಡ್ ಆರೋಗ್ಯ ಸಚಿವೆ ರೋಸ್ ಬೇಟ್ಸ್ ಭಾರತ ಕ್ರಿಕೆಟ್ ತಂಡಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಮತ್ತೆ ಕ್ವಾರಂಟೈನ್ ಆಗಲು ಟೀಂ ಇಂಡಿಯಾಗೆ ಸೂಚನೆ ನೀಡಿದ್ದು, ಈಗಾಗಲೇ ಸಿಡ್ನಿಯಲ್ಲಿ 14 ದಿನ ಕ್ವಾರಂಟೈನ್ ಆಗಿದ್ದ ಕಾರಣ ಭಾರತೀಯ ಆಟಗಾರರು ಕ್ವಾರಂಟೈನ್ಗೆ ನಿರಾಕರಿಸಿದ್ದರು ಎನ್ನಲಾಗಿದೆ. ಜ.15ರಿಂದ ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಪಂದ್ಯ ಆರಂಭವಾಗಲಿದೆ.
’ರೈತರ ಪ್ರತಿಭಟನೆ ದಾರಿ ತಪ್ಪುತ್ತಿದೆ‘ : ಬಿಜೆಪಿ ಕಾರ್ಯಕಾರಿಣಿಯಲ್ಲಿ ನಿರ್ಣಯ ಮಂಡನೆ
03:31 pm ಶಿವಮೊಗ್ಗದಲ್ಲಿ ನಡೆದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ನಂತರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.ಒಟ್ಟು 2 ರಾಜಕೀಯ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ರೈತರ ಪ್ರತಿಭಟನೆ ದಾರಿ ತಪ್ಪುತ್ತಿದೆ ಎಂಬ ನಿರ್ಣಯವನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಂಡಿಸಿದ್ದರು.
‘ಅಖಿಲೇಶ್ ಯಾದವ್ ಹೇಳಿಕೆ ತಪ್ಪೆಂದು ಅನಿಸುತ್ತಿಲ್ಲ‘ : ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ
03:24 pm ಸಿಬಿಐ,ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳನ್ನು ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಸರ್ಕಾರ ದುರ್ಬಳಕೆ ಮಾಡುತ್ತಿದೆ. ಅದನ್ನು ಗಮನಿಸಿದರೆ, ಅಖಿಲೇಶ್ ಯಾದವ್ರ ಕೊರೊನಾ ಲಸಿಕೆ ಕುರಿತ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎನಿಸುತ್ತದೆ ಎಂದು ಕಾಂಗ್ರೆಸ್ನ ರಶೀದ್ ಅಲ್ವಿ ಹೇಳಿದ್ದಾರೆ.
ಕಾಸರಗೋಡು ಕಲ್ಲಪ್ಪಳ್ಳಿ ಬಳಿ ಉರುಳಿ ಬಿದ್ದ ಮದುವೆ ದಿಬ್ಬಣದ ಬಸ್
03:20 pm ಮನೆ ಮೇಲೆ ದಿಬ್ಬಣದ ಬಸ್ ಉರುಳಿ ಬಿದ್ದು ಐವರ ಸಾವನ್ನಪ್ಪಿರುವ ಘಟನೆ ಕರ್ನಾಟಕ-ಕೇರಳ ಗಡಿಭಾಗದ ಕಲ್ಲಪ್ಪಳ್ಳಿ ಬಳಿ ನಡೆದಿದೆ.ಕೇರಳದ ಕಾಸರಗೋಡು ಜಿಲ್ಲೆಯ ಕಲ್ಲಪ್ಪಳ್ಳಿ ಬಳಿ ಈ ಅವಘಡ ಸಂಭವಿಸಿದ್ದು, ಪುತ್ತೂರಿನಿಂದ ಕೇರಳದ ಪಾಣತ್ತೂರಿಗೆ ಬಸ್ ತೆರಳುತ್ತಿತ್ತು. ಮದುವೆ ದಿಬ್ಬಣದ ಬಸ್‌ನಲ್ಲಿ 63 ಜನ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
‘ಇದು ಭಾರತದ ಮಹತ್ವದ ಸಾಧನೆ’ : ಗೃಹ ಸಚಿವ ಅಮಿತ್ ಶಾ
03:13 pm ಭಾರತದಲ್ಲಿ ಕೊರೊನಾ ಲಸಿಕೆ ತುರ್ತು ಬಳಕೆಗೆ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ‘ಇದು ಭಾರತದ ಮಹತ್ವದ ಸಾಧನೆ’ ಎಂದು ಅಭಿನಂದನೆ ಸಲ್ಲಿಸಿದ್ದಾರೆ. ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ.
ಸಂಜೆ ಸದಾನಂದ ಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುವೆ : ಜಗದೀಶ್ ಶೆಟ್ಟರ್
03:10 pm ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಅವರು ಬೆಳಗ್ಗೆ ನಮ್ಮ ಜತೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಸಂಜೆ ಆಸ್ಪತ್ರೆಗೆ ತೆರಳಿ ಡಿವಿಎಸ್ರನ್ನು ಭೇಟಿಯಾಗುತ್ತೇನೆ ಎಂದು ಶಿವಮೊಗ್ಗದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಬೆಂಗಳೂರಿನ ಆಸ್ಪತ್ರೆಗೆ ಸದಾನಂದಗೌಡ ರವಾನೆ
03:05 pm ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ಅಸ್ವಸ್ಥರಾದ ಕುರಿತು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯ ಡಾ.ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದಾರೆ. ಲೋ ಶುಗರ್ ನಿಂದ ಸದಾನಂದಗೌಡರು ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ಬರುವ ವೇಳೆ ಎಚ್ಚರ ತಪ್ಪಿದ್ದರು. ಚಿಕಿತ್ಸೆ ಬಳಿಕ ಸುಧಾರಣೆ ಕಂಡಿದ್ದಾರೆ. ಜ್ಯೂಸ್ ಕುಡಿದಿದ್ದಾರೆ.ಸದಾನಂದಗೌಡರು ಆರೋಗ್ಯವಾಗಿದ್ದಾರೆ. ಸದ್ಯ ಎಲ್ಲಾ ವರದಿಗಳು ಸಹಜವಾಗಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಡಿ.ವಿ.ಸದಾನಂದಗೌಡರನ್ನು ಝೀರೋ ಟ್ರಾಫಿಕ್ನಲ್ಲಿ ಬೆಂಗಳೂರಿಗೆ ಕರೆ ತರಲು ನಿರ್ಧಾರ
o2:48 pm ರಕ್ತದೊತ್ತಡದಲ್ಲಿ ಕುಸಿತದಿಂದ ಅಸ್ವಸ್ಥರಾಗಿ ಚಿತ್ರದುರ್ಗದ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರನ್ನು ಹೆಚ್ಚಿನ ಚಿಕಿತ್ಸೆಗಾಗಿ ಌಂಬುಲೆನ್ಸ್ನಲ್ಲಿ ಝೀರೋ ಟ್ರಾಫಿಕ್ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕರೆತರಲು ನಿರ್ಧರಿಸಲಾಗಿದೆ.
ಸದಾನಂದಗೌಡರು ಕ್ಷೇಮವಾಗಿದ್ದಾರೆ, ಆತಂಕ ಪಡುವ ಅಗತ್ಯವಿಲ್ಲ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
02:59 pm ಸದಾನಂದಗೌಡರ ಭೇಟಿ ಬಳಿಕ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಆತಂಕ ಪಡುವ ಅಗತ್ಯ ಇಲ್ಲ, ಸದಾನಂದಗೌಡರು ಕ್ಷೇಮವಾಗಿದ್ದಾರೆ. ಲೋ ಶುಗರ್ ನಿಂದ ಅಸ್ವಸ್ಥರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಜ್ಯೂಸ್ ಕುಡಿದಿದ್ದು ಮಾತಾಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಬೆಂಗಳೂರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು ಝೀರೋ ಟ್ರಾಫಿಕ್ ಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಡಿ.ವಿ.ಸದಾನಂದಗೌಡ ಅಸ್ವಸ್ಥ
02:44 pm ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅಸ್ವಸ್ಥರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಏರ್‌ಲಿಫ್ಟ್ ಮೂಲಕ ಸಾಗಿಸಲು ನಿರ್ಧರಿಸಲಾಗಿದ್ದು, ಸದ್ಯ ಸ್ಥಳೀಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ದೆಹಲಿ ಚಲೋವನ್ನು ಚಂಪಾರಣ್ಯ ಚಳುವಳಿಗೆ ಹೋಲಿಸಿದ ರಾಹುಲ್ ಗಾಂಧಿ
02:38 pm ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿ ಚಲೋ ಚಳುವಳಿಯನ್ನು ಬ್ರಿಟಿಷರ ವಿರುದ್ಧ ನಡೆದ ಚಂಪಾರಣ್ಯ ಚಳುವಳಿಗೆ ಹೋಲಿಸಿದ್ದಾರೆ. ದೇಶದ ಎಲ್ಲಾ ಕೃಷಿ ಕಾರ್ಮಿಕರೂ ದೆಹಲಿ ಚಲೋ ಚಳುವಳಿಯ ಭಾಗವಾಗಿದ್ದಾರೆ ಎಂದು ಅವರು ಪಂಜಾಬ್ ರೈತರನ್ನು ಬೆಂಬಲಿಸಿದ್ದಾರೆ. 1917ರಲ್ಲಿ ಮಹಾತ್ಮಾ ಗಾಂಧೀಜಿಯವರು ಕೈಗೊಂಡ ಚಂಪಾರಣ್ಯ ಚಳುವಳಿ ಸ್ವಾತಂತ್ರ್ಯ ಹೋರಾಟದಲ್ಲಿ ಚಿರಸ್ಮರಣೀಯ ಘಟನೆಯಾಗಿ ದಾಖಲಾಗಿದೆ.
ಕಡು ಬಡವರಿಗೆ, ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ವಿತರಿಸಿ : ಮಾಯಾವತಿ ಆಗ್ರಹ
02:32 pm ಕೊರೊನಾ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿರುವುದನ್ನು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಸ್ವಾಗತಿಸಿದ್ದಾರೆ. ‘ಸ್ವದೇಶಿ’ ಮತ್ತು ಕೊರೊನಾ ಪ್ರತಿರೋಧಕ ಲಸಿಕೆಯ ತಯಾರಿಸಿದ ಸಂಶೋಧಕರನ್ನು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಕಾರ್ಯಕರ್ತರಿಗೆ ಮತ್ತು ಕಡು ಬಡವರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ವಿತರಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
अति-घातक कोरोनावायरस महामारी को लेकर आए स्वदेशी वैक्सीन (टीके) का स्वागत व वैज्ञानिकों को बहुत-बहुत बधाई। साथ ही, केन्द्र सरकार से विशेष अनुरोध भी है कि देश में सभी स्वास्थ्यकर्मियों के साथ-साथ सर्वसमाज के अति-गरीबों को भी इस टीके की मुफ्त व्यवस्था की जाए तो यह उचित होगा।
— Mayawati (@Mayawati) January 3, 2021
ಕಾಂಗ್ರೆಸ್ಗಿಂತಲೂ ಹೆಚ್ಚು ಗುಂಪುಗಳು ಬಿಜೆಪಿಯಲ್ಲಿವೆ : ರಾಮಲಿಂಗಾರೆಡ್ಡಿ
02:20 pm ಕಾಂಗ್ರೆಸ್‌ನಲ್ಲೂ ಗುಂಪುಗಳಿದ್ದರೂ ಬಿಜೆಪಿಯಷ್ಟಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲಿ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರಿಗೆ ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಗುಂಪುಗಾರಿಕೆಯಿಂದ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿಲ್ಲ. ಬಿಜೆಪಿ ಮಿಷನ್-2020 ನೆರವೇರಿಲ್ಲ ಎಂದು ಅವರು ಟೀಕಿಸಿದ್ದಾರೆ.
ಕೊವ್ಯಾಕ್ಸಿನ್ ಬಳಕೆಗೆ ಅನುಮತಿ: ಆತಂಕ ವ್ಯಕ್ತಪಡಿಸಿದ ಶಶಿ ತರೂರ್
02:04 pm ಇನ್ನೂ ಪ್ರಯೋಗದ ಹಂತದಲ್ಲಿರುವ ಕೊವ್ಯಾಕ್ಸಿನ್ ಲಸಿಕೆ ಬಳಕೆಗೆ ತುರ್ತು ಬಳಕೆಗೆ ಅನುಮತಿ ನೀಡಿರುವುದರ ಕುರಿತು ಸಂಸದ ಶಶಿ ತರೂರ್ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಯೋಗ ಪೂರ್ಣವಾಗುವುದಕ್ಕೆ ಮುನ್ನವೇ ಅನುಮತಿ ನೀಡಲಾಗಿದೆ. ಆತುರ ಪಟ್ಟು ಅನುಮತಿ ನೀಡುವುದು ಸರಿಯಾದ ನಿರ್ಧಾರವಲ್ಲ ಎಂದಿರುವ ಅವರು ಟ್ವಿಟ್ಟರ್ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
The Covaxin has not yet had Phase 3 trials. Approval was premature and could be dangerous. @drharshvardhan should please clarify. Its use should be avoided till full trials are over. India can start with the AstraZeneca vaccine in the meantime. https://t.co/H7Gis9UTQb
— Shashi Tharoor (@ShashiTharoor) January 3, 2021
ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಲಿರುವ ಸಿಎಂ
01:19 pm ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನವರಿ ೬ ರಂದು ಬಸವಕಲ್ಯಾಣಕ್ಕೆ ಭೇಟಿ ನೀಡಲಿದ್ದಾರೆ. ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿರುವ ಸಿಎಂ,ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನೆರವೇರಿಸಿ ಒಂದೇ ದಿನ ಬೀದರ್ ಮತ್ತು ಯಾದಗಿರಿ ಜಿಲ್ಲಾ ಪ್ರವಾಸ ನಡೆಸಲಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ನಿಧನ
01:07 pm ಬೆಂಗಳೂರು ಪೊಲೀಸ್ ಕಮಿಷನರ್ ಅಗಿ ಸೇವೆ ಸಲ್ಲಿಸಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಹರ್ಲಂಕರ್ ಪಿ ಜಿ (೮೮) ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದಾರೆ. ನಿನ್ನೆ ತಡರಾತ್ರಿ ವಿಕ್ರಂ ಅಸ್ಪತ್ರೆಯಲ್ಲಿ ಹರ್ಲಂಕರ್ ಪಿ. ಜಿ.ಯವರು ಮೃತಪಟ್ಟಿದ್ದು, ಅವರ ಅಂತಿಮ ಇಚ್ಛೆಯಂತೆ ಮೃತದೇಹವನ್ನು ಸೇಂಟ್ ಜಾನ್ಸ್ ಅಸ್ಪತ್ರೆಗೆ ನೀಡಲಾಗಿದೆ.
ಮಧ್ಯಪ್ರದೇಶ: ಮುಖ್ಯಮಂತ್ರಿ ಶಿವ್ರಾಜ್ ಸಿಂಗ್ ಚೌವ್ಹಾಣ್ ಸಂಪುಟ ಮತ್ತೊಮ್ಮೆ ವಿಸ್ತರಣೆ
12:59 pm ಮಧ್ಯಪ್ರದೇಶ ಸಂಪುಟ ಸಭೆ ಮತ್ತೊಮ್ಮೆ ವಿಸ್ತರಣೆಯಾಗಿದೆ. ಶಾಸಕರಾದ ತುಳ್ಸಿ ಸಿಲಾವತ್ ಮತ್ತು ಗೋವಿಂದ್ ಸಿಂಗ್ ರಜಪೂತ್ ಸಚಿವರಾಗಿ ಭೋಪಾಲ್ನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈಮೂಲಕ ಮಾರ್ಚ್ ನಂತರ ಶಿವ್ರಾಜ್ ಸಿಂಗ್ ಚೌವ್ಹಾಣ್ ಸಂಪುಟಕ್ಕೆ ಮೂರನೇ ಬಾರಿಗೆ ಸಂಪುಟ ವಿಸ್ತರಣೆ ನಡೆದಂತಾಗಿದೆ.
Madhya Pradesh: Bharatiya Janata Party MLAs Tulsi Silawat and Govind Singh Rajput take oath as Cabinet Ministers at the Raj Bhavan in Bhopal. pic.twitter.com/vGDxN9NN3S
— ANI (@ANI) January 3, 2021
ಅಜಿಂಕ್ಯಾ ರಹಾನೆಯನ್ನು ಹಾಡಿ ಹೊಗಳಿದ ಇಯಾನ್ ಚಾಪೆಲ್
12:52 pm ಅಜಿಂಕ್ಯಾ ರಹಾನೆಯವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣಗಳಿವೆ ಎಂದು ಕ್ರಿಕೆಟ್ ಲೋಕದ ದಿಗ್ಗಜ, ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಹೇಳಿದ್ದಾರೆ. ESPNನ ಕ್ರಿಕ್ ಇನ್ಫೋ ಅಂಕಣದಲ್ಲಿ ಅಜಿಂಕ್ಯಾ ರಹಾನೆಯವರನ್ನು ಹೊಗಳಿ ಬರೆದಿರುವ ಇಯಾನ್ ಚಾಪೆಲ್, 2017ರ ಧರ್ಮಶಾಲಾದಲ್ಲಿ ನಡೆ ಪಂದ್ಯದಲ್ಲೇ ಇದು ಸಾಬೀತಾಗಿತ್ತು. ಇತ್ತೀಚಿನ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದಲ್ಲೂ ಮತ್ತೊಮ್ಮೆ ಅವರ ನಾಯಕತ್ವ ಗುಣಗಳು ಸಾಬೀತಾಗಿವೆ ಎಂದಿದ್ದಾರೆ.
ಬೆಂಗಳೂರು: ಖಾಲಿ ಸ್ಥಳದಲ್ಲಿ ಪತ್ತೆಯಾದ ಪ್ರಾಚೀನ ವಿಗ್ರಹ, ಫಿರಂಗಿ
12:44 pm ಬೆಂಗಳೂರಿನ ವಾಣಿ ವಿಲಾಸ್ ಕಾಲೇಜು ಬಳಿಯ ಖಾಲಿ ಜಾಗದಲ್ಲಿ ಪುರಾತನ ಕಾಲದ ವಿಗ್ರಹ ಮತ್ತು ಪಿರಂಗಿ ಗುಂಡುಗಳು ಪತ್ತೆಯಾಗಿವೆ. ಈಗ ಸರ್ಕಾರಿ ಸ್ವಾಮ್ಯದ ವಾಣಿ ವಿಲಾಸ್ ಹಿರಿಯ ಪ್ರಾಥಮಿಕ ಶಾಲೆ ಹಾಗು ಪದವಿ ಪೂರ್ವ ಕಾಲೇಜಿಗೆ ನೀಡಲಾದ ಸ್ಥಳದಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ದಶಕದ ಕಾಲದಿಂದ ಸ್ಥಳ ಕಾಲೇಜು ಒಡೆತನದಲ್ಲಿ ಇದ್ದು, ಈಗ ಹೊಸ ಕಟ್ಟೆ ಕಟ್ಟಲು ಕಟ್ಟಲು ಪಾಯ ತೆಗೆದಾಗ ಕಲ್ಯಾಣಿಯ ಕುರುಹುಗಳು ಪತ್ತೆಯಾಗಿವೆ. ಪುರಾತತ್ವ ಮತ್ತು ಮುಜರಾಯಿ ಇಲಾಖೆಯಿಂದ ಪ್ರಾಚೀನ ವಸ್ತುಗಳ ರಕ್ಷಣೆಗೆ ಮುಂದಾಗುವಂತೆ ಸ್ಥಳೀಯರ ಬೇಡಿಕೆಯಿಟ್ಟಿದ್ದಾರೆ.
‘ತಿನ್ನಬಾರದ್ದನ್ನು ತಿಂದು ಮನುಷ್ಯ ಸಂಕಷ್ಟಕ್ಕೆ ಸಿಲುಕಿದ್ದಾನೆ’ : ಡಾ.ಸಿ.ಎನ್. ಮಂಜುನಾಥ್ ಮಾರ್ಮಿಕ ನುಡಿ
12:38 pm ಮನುಷ್ಯ ತಿನ್ನಬಾರದ್ದನ್ನು ತಿಂದು ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂದು ಬೆಂಗಳೂರಿನ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಒಂದು ಕಾಲದಲ್ಲಿ ಬ್ರಿಟನ್ನಿಂದ ಆಗಮಿಸಿದರೆ ಹೂಬೊಕೆ ಕೊಡುತ್ತಿದ್ದೆವು. ಆದರೆ ಈಗ ಅಂತರ ಕಾಪಾಡಿಕೊಳ್ಳುತ್ತೇವೆ.ಮದುವೆಗೆ ಮೊದಲೇ ಮಧುಮೇಹ ಬರುತ್ತಿದೆ. ಜೀವನ ಶೈಲಿ ಬದಲಾವಣೆ ಆಗಿದೆ. ಹೀಗಾಗಿಯೇ ಇಲ್ಲದ ರೋಗಗಳು ಬರುತ್ತಿವೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ಕಚೇರಿ ಆರಂಭಕ್ಕೆ ಸ್ಥಳ ಹುಡುಕಾಟ: ಕುಸಿದ ಬೇಡಿಕೆ
12:33 pm ಕೊರೊನಾ ತಂದೊಡ್ಡಿದ ಆರ್ಥಿಕ ಕುಸಿತದಿಂದ ಭಾರತದ ಪ್ರಮುಖ ನಗರಗಳಲ್ಲಿ ಕಚೇರಿ ಕೆಲಸಕ್ಕಾಗಿ ಹೊಸ ಸ್ಥಳಕ್ಕೆ ಬೇಡಿಕೆ ಶೇ.30ರಿಂದ 35ರಷ್ಟು ಕುಸಿದಿದೆ ಎಂದು ವರದಿಯೊಂದು ತಿಳಿಸಿದೆ. ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿ ಹೆಚ್ಚುತ್ತಿದ್ದು, ಹೊಸ ಕಚೇರಿ ಆರಂಭಕ್ಕೆ ಸ್ಥಳ ಹುಡುಕುವವರ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದೆ.
ತಮಿಳುನಾಡು: ಜಲ್ಲಿಕಟ್ಟು ಸ್ಪರ್ಧೆಗೆ ಭರ್ಜರಿ ತಯಾರಿ
12:27 pm ಮುಂದಿನ ವಾರದಿಂದ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಜರುಗಲಿದ್ದು, ಸ್ಥಳೀಯರು ತಮ್ಮ ಎತ್ತುಗಳಿಗೆ ತರಬೇತಿ ನೀಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ದಿನಕ್ಕೆ ಎರಡು ಬಾರಿ ತರಬೇತಿ ನೀಡುತ್ತಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದೊಂದಿಗೆ ಜಲ್ಲಿಕಟ್ಟು ಆಯೋಜನೆಗೆ ತಮಿಳುನಾಡು ಸರ್ಕಾರ ಇತ್ತೀಚಿಗಷ್ಟೇ ಅನುಮತಿ ನೀಡಿತ್ತು.
ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ವಿತರಣೆಗೆ ಆದ್ಯತೆ
12:22 pm 3 ಲಕ್ಷ ಆರೋಗ್ಯ ಕಾರ್ಯಕರ್ತರು, ಕೊರೊನಾ ಸೇನಾನಿಗಳಿಗೆ ಕೊರೊನಾ ಲಸಿಕೆ ವಿತರಣೆಗೆ ಆದ್ಯತೆ ನೀಡಲಾಗುವುದು ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ. ಭಾರತದಲ್ಲಿ ಕೊರೊನಾ ಲಸಿಕೆ ಬಳಕೆಗೆ ಅನುಮತಿ ನೀಡಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
18ನೇ ಚಿತ್ರಸಂತೆಗೆ ವರ್ಚುವಲ್ ಮೂಲಕ ಚಾಲನೆ
12.16 pm ಚಿತ್ರಕಲಾ ಪರಿಷತ್‌ನ 18ನೇ ಚಿತ್ರಸಂತೆಗೆ ವರ್ಚ್ಯುಯಲ್ ಮೂಲಕ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಚಾಲನೆ ನೀಡಿದರು.ಕೊರೊನಾ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಚಿತ್ರಸಂತೆ ಆಯೋಜಿಸಲಾಗಿದೆ. ಕಲಾವಿದರಿಗೆ ನನ್ನ ಬೆಂಬಲ ಯಾವಾಗಲೂ ಇದೆ. ಕೊರೊನಾ ಮುಗಿದ ಬಳಿಕ ಮತ್ತೊಮ್ಮೆ ಚಿತ್ರಸಂತೆ ಆಯೋಜಿಸುವಂತೆ ಸುಧಾಮೂರ್ತಿ ಹೇಳಿದರು. ಮಾಜಿ ಸಿಎಂ ಎಸ್ ಎಂ ಕೃಷ್ಣ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಲಸಿಕೆಗೆ ಅನುಮತಿ ನೀಡಿದ ಭಾರತದ ಕ್ರಮಕ್ಕೆ ಸ್ವಾಗತಿಸಿದ ವಿಶ್ವ ಆರೋಗ್ಯ ಸಂಸ್ಥೆ
12:10 pm ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಬಳಕೆಗೆ ಹಸಿರು ನಿಶಾನೆ ಸೂಚಿಸಿದ ಭಾರತದ ನಡೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಡಾ.ಪೂನಮ್ ಖೇತ್ರಪಾಲ್ ಈ ವಿಷಯ ತಿಳಿಸಿದ್ದಾರೆ.
World Health Organization welcomes India's decision giving emergency use authorization to #COVID19 vaccines: Dr Poonam Khetrapal Singh, Regional Director, WHO South-East Asia Region pic.twitter.com/UPPatGoJuI
— ANI (@ANI) January 3, 2021
ಪಂಚಾಯತ್ ಚುನಾವಣೆ ವಿಜೇತರಿಗೆ ಬಿರಿಯಾನಿ ಪಾರ್ಟಿ ಆಯೋಜಿಸಿದ ಮಾಜಿ ಸಚಿವ ವರ್ತೂರ್ ಪ್ರಕಾಶ್
12:04 pm ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದವರಿಗೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಬಿರಿಯಾನಿ ಪಾರ್ಟಿ ಆಯೋಜಿಸಿದ್ದಾರೆ.ಕೋಲಾರದ ಕೋಗಿಲಹಳ್ಳಿ ಬಳಿ ಇರುವ ತಮ್ಮ ನಿವಾಸದಲ್ಲಿ ಎರಡು ಸಾವಿರ ಜನರಿಗಾಗಿ ಭರ್ಜರಿ ದಮ್ ಬಿರಿಯಾನಿ ತಯಾರಿಸಿ ಸಂತೋಷ ಕೂಟ ಆಯೋಜಿಸಿದ್ದಾರೆ. 500 ಕೆಜಿ ಚಿಕನ್, 300 ಕೆಜಿ ಮಟನ್ ಬಿರಿಯಾನಿ ತಯಾರಿಸಲಾಗಿದೆ.
ಕೊವಿಶೀಲ್ಡ್ ಲಸಿಕೆಗೆ ಅನುಮತಿ : ಹರ್ಷ ವ್ಯಕ್ತಪಡಿಸಿದ ಅದಾರ್ ಪೂನಾವಾಲಾ
11:56 am ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಬಳಕೆಗೆ ಹಸಿರು ನಿಸಾನೆ ದೊರಕಿದ ಬೆನ್ನಲ್ಲೇ ಸೆರಂ ಇನ್ಸ್ಟಿಟ್ಯೂಟ್ನ ಸಿಇಒ ಅದಾರ್ ಪೂನಾವಾಲಾ ಟ್ವೀಟ್ಟಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ‘ಹೊಸ ವರ್ಷಕ್ಕೆ ಶುಭ ಸುದ್ದಿ ಸಿಕ್ಕಿದೆ. ಕೊವಿಶೀಲ್ಡ್ ಬಳಕೆಗೆ ಅನುಮತಿ ನೀಡಿದ ಎಲ್ಲರಿಗೂ ಧನ್ಯವಾದಗಳು. ಅತ್ಯಂತ ಸುರಕ್ಷಿತ ಕೊವಿಶೀಲ್ಡ್ ಲಸಿಕೆ ಕೆಲ ವಾರಗಳಲ್ಲಿ ದೊರೆಯಲಿದೆ ಎಂದು ಬರೆದುಕೊಂಡಿದ್ದಾರೆ.
Happy new year, everyone! All the risks @SerumInstIndia took with stockpiling the vaccine, have finally paid off. COVISHIELD, India's first COVID-19 vaccine is approved, safe, effective and ready to roll-out in the coming weeks. pic.twitter.com/TcKh4bZIKK
— Adar Poonawalla (@adarpoonawalla) January 3, 2021
ಮೆಣಸಿನಕಾಯಿ ಗಿಡಗಳ ನಡುವೆ ಗಾಂಜಾ ಬೆಳೆದ ರೈತ
11:45 am ಮೆಣಸಿನಕಾಯಿ ಗಿಡಗಳ ಮಧ್ಯೆ ಬೆಳೆದಿದ್ದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದಿದೆ. 15 ಕೆಜಿ ತೂಕದ 16 ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಜಾ ಗಿಡಗಳನ್ನು ಬೆಳೆದಿದ್ದ ರೈತ ರಾಜೇಂದ್ರನ್ ನಾಪತ್ತೆಯಾಗಿದ್ದು, ರಾಜೇಂದ್ರನ್ ವಿರುದ್ಧ ಹನೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕೊರೊನಾ ಲಸಿಕೆಯಿಂದ ಗಂಭೀರ ಅಡ್ಡ ಪರಿಣಾಮ: ಕೇವಲ ವದಂತಿ ಎಂದ ವಿ.ಜಿ.ಸೋಮಾನಿ
10:40 am ಚಿಕ್ಕ ಅಡ್ಡಪರಿಣಾಮಗಳಾದ ಜ್ವರ, ನೋವು ಅಥವಾ ಅಲರ್ಜಿಗಳು ಬಹುತೇಕ ಎಲ್ಲ ಲಸಿಕೆಗಳಿಂದಲೂ ಉಂಟಾಗುತ್ತವೆ. ಆದರೆ ಕೊರೊನಾ ಲಸಿಕೆಯಿಂದ ಯಾವುದೇ ಗಂಭೀರ ದುಷ್ಪರಿಣಾಮವಿಲ್ಲ ಎಂಬುದು ಸಾಬೀತಾಗಿದೆ. ಪುರುಷತ್ವದ ಮೇಲೆ ಅಡ್ಡ ಪರಿಣಾಮ ಬೀರಲಿದೆ ಎಂಬುದು ಸಂಪೂರ್ಣ ಸುಳ್ಳು ಸುದ್ದಿ ಎಂದು ಭಾರತೀಯ ಪ್ರಧಾನ ಔಷಧ ನಿಯಂತ್ರಣ ಇಲಾಖೆಯ ಅಧ್ಯಕ್ಷ ವಿ.ಜಿ.ಸೋಮಾನಿ ತಿಳಿಸಿದರು.
ಕೊರೊನಾ ಲಸಿಕೆ ವಿತರಣೆ: ಇಂದೂ ನಡೆಯಲಿದೆ ತಾಲೀಮು
11:31 am ದೇಶಾದ್ಯಂತ ಇಂದು ಸಹ ಕೊರೊನಾ ಲಸಿಕೆ ವಿತರಣೆ ತಾಲೀಮು ನಡೆಯಲಿದೆ. ದೇಶದ 116 ಜಿಲ್ಲೆಗಳ 259 ಕೇಂದ್ರಗಳಲ್ಲಿ ಲಸಿಕೆ ವಿತರಣೆ ತಾಲೀಮು ನಡೆಯಲಿದೆಯೆಂದು ಆರೋಗ್ಯ, ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾ ಲಸಿಕೆಗೆ ಅನುಮತಿ : ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
11:27 am ಕೊವಿಶೀಲ್ಡ್, ಕೊವ್ಯಾಕ್ಸಿನ್ ಬಳಕೆಗೆ ಡಿಸಿಜಿಐ ಅನುಮತಿ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.
A decisive turning point to strengthen a spirited fight!
DCGI granting approval to vaccines of @SerumInstIndia and @BharatBiotech accelerates the road to a healthier and COVID-free nation.
Congratulations India.
Congratulations to our hardworking scientists and innovators.
— Narendra Modi (@narendramodi) January 3, 2021
It would make every Indian proud that the two vaccines that have been given emergency use approval are made in India! This shows the eagerness of our scientific community to fulfil the dream of an Aatmanirbhar Bharat, at the root of which is care and compassion.
— Narendra Modi (@narendramodi) January 3, 2021
ಕೊರೊನಾ ಲಸಿಕೆ ಬಳಕೆಗೆ ಅಧಿಕೃತ ಹಸಿರು ನಿಶಾನೆ
11:22 am ಭಾರತದಲ್ಲಿ ಕೊರೊನಾ ಲಸಿಕೆ ಬಳಕೆಗೆ ಕೊನೆಗೂ ಹಸಿರು ನಿಶಾನೆ ದೊರಕಿದೆ. ಆಸ್ಟ್ರಾಜೆನಿಕಾ, ಆಕ್ಸ್‌ಫರ್ಡ್ ವಿವಿಯ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಣ ಇಲಾಖೆಯ ಅಧ್ಯಕ್ಷ ವಿ.ಜಿ.ಸೋಮಾನಿ ಅನುಮತಿ ನೀಡಿದ್ದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಹೊಸ ವರ್ಷದ ಆರಂಭದ ದಿನಗಳಲ್ಲೇ ಲಸಿಕೆ ಬಳಕೆಗೆ ಅನುಮತಿ ದೊರಕಿರುವುದು ನಿರೀಕ್ಷೆ ಹುಟ್ಟಿಸಿದೆ. ಎಂದಿನಿಂದ ಲಸಿಕೆ ವಿತರಣೆ ಕಾರ್ಯಕ್ರಮ ಆರಂಭವಾಗಲಿದೆ ಎಂಬುದು ಇನ್ನಷ್ಟೇ ಖಚಿತಪಡಬೇಕಿದೆ.
ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಬಳಕೆಗೆ ಅನುಮತಿ
11:08 am ತುರ್ತು ಸಂದರ್ಭದಲ್ಲಿ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಣ ಇಲಾಖೆಯ ಅಧ್ಯಕ್ಷ ವಿ.ಜಿ.ಸೋಮಾನಿ ಅನುಮತಿ ನೀಡಿದ್ದಾಗಿ ತಿಳಿಸಿದ್ದಾರೆ. ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಮತ್ತು ಆಸ್ಟ್ರಾಜೆನಿಕಾ, ಆಕ್ಸ್‌ಫರ್ಡ್ ವಿವಿಯ ಕೊವಿಶೀಲ್ಡ್ ಲಸಿಕೆ ಬಳಕೆಗೆ ಅನುಮತಿ ದೊರೆತಿದೆ.
ಟ್ವಿಟ್ಟರ್ನಲ್ಲಿ ಸದ್ದು ಮಾಡಿದ ಕ್ರಿಕೆಟ್ ಆಟಗಾರರ ಊಟದ ಬಿಲ್
11: 01 am ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಾದ ರೋಹಿತ್ ಶರ್ಮ, ರಿಷಭ್ ಪಂತ್, ನವದೀಪ್ ಸೈನಿ ಮತ್ತು ಶುಭಮನ್ ಗಿಲ್ ಹೊಸವರ್ಷದ ಮೊದಲ ದಿನದಂದು ಮೆಲ್ಬರ್ನ್ ನಗರದ ಹೋಟೆಲ್ನಲ್ಲಿ ಊಟ ಮಾಡಿದ ಬಿಲ್ನ್ನು ಅಭಿಮಾನಿಯೊಬ್ಬರು ಪಾವತಿಸಿದ್ದು ಸುದ್ದಿಯಾದ ಬೆನ್ನಲ್ಲೇ ಇದೀಗ ಅದೇ ಬಿಲ್ ಟ್ವಿಟರ್ ನಲ್ಲಿ ವೈರಲ್ ಆಗಿದೆ.
ಬಿಲ್ನಲ್ಲಿ ಬೀಫ್ ಇದೆ. ಭಾರತೀಯ ಆಟಗಾರರು ವಿದೇಶದಲ್ಲಿ ಬೀಫ್ ತಿಂದಿದ್ದಾರೆ ಎಂದು ಆರೋಪಿಸಿ ನೆಟ್ಟಿಗರು ಕ್ರಿಕೆಟಿಗರನ್ನು ಟ್ರೋಲ್ ಮಾಡಿದ್ದಾರೆ. ಟ್ವಿಟರ್ನಲ್ಲಿ ವೈರಲ್ ಆಗಿರುವ ಬಿಲ್ನಲ್ಲಿ ಪೋರ್ಕ್ (ಹಂದಿಮಾಂಸ) ಕೂಡಾ ಇದೆ. ಹೋಟೆಲ್ಗೆ ಹೋಗಿ ಬೀಫ್ ಮತ್ತು ಪೋರ್ಕ್ ತಿಂದವರು ಯಾರು ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ.
ರಾಜಕೀಯ ಪ್ರತಿನಿಧಿ ಆಯ್ಕೆಗೆ ಮತ ಚಲಾಯಿಸಿದ ಟಿಬೇಟಿಯನ್ನರು
10:56 am ಧರ್ಮಶಾಲಾದಲ್ಲಿ ನೆಲೆಸಿರುವ ಟಿಬೇಟಿಯನ್ನರಿಗೆ ಇಂದು ಚುನಾವಣೆಯ ಸಂಭ್ರಮ. 17 ನೇ ಟಿಬೇಟಿಯನ್ ಸಂಸತ್ನ ಪ್ರತಿನಿಧಿಯ ಆಯ್ಕೆಗೋಸ್ಕರ ಇಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ.ತಮ್ಮ ರಾಜಕೀಯ ನಾಯಕ ‘ಸಿಕ್ಯೋಂಗ್’ರನ್ನು ಆರಿಸಲು ಟಿಬೇಟಿಯನ್ನರು ಮತ ಚಲಾಯಿಸಿದರು.
ಜನವರಿ 17ರಂದು ಬೆಂಗಳೂರಿಗೆ ಅಮಿತ್ ಶಾ
10:51 am ಜನವರಿ 17 ರಂದು ಬೆಂಗಳೂರಿನಲ್ಲಿ ಬಿಜೆಪಿ ಜನ ಸೇವಕ್ ಸಮಾವೇಶ ಆಯೋಜಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದಾರೆ. ಜನವರಿ ೧೬ ರಂದೇ ಅವರು ಬೆಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
CAT 2020ರ ಫಲಿತಾಂಶ ಪ್ರಕಟ
10:46 am CAT 2020ರ ( ಸಾಮಾನ್ಯ ಪ್ರವೇಶಾತಿ ಪರೀಕ್ಷೆ) ಫಲಿತಾಂಶ ಘೋಷಣೆಯಾಗಿದೆ. iimcat.ac.in ಜಾಲತಾಣದಲ್ಲಿ ಫಲಿತಾಂಶ ಲಭ್ಯವಿದ್ದು, 9 ಅಭ್ಯರ್ಥಿಗಳು ಶೇ.100ರಷ್ಟು ಸಾಧನೆ ಮಾಡಿದ್ದಾರೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಸರಳವಾಗಿ iimcat.ac.in ಜಾಲತಾಣದಲ್ಲಿ ಲಾಗಿನ್ ಆಗುವ ಮೂಲಕ ವೀಕ್ಷಿಸಬಹುದಾಗಿದೆ.
643 ಹೊಸ ಬಸ್ಗಳ ಖರೀದಿಗೆ ಟೆಂಡರ್ ಕರೆದ ಬಿಎಂಟಿಸಿ
10:39 am ಹೊಸದಾಗಿ 643 ಬಸ್ ಖರೀದಿಸಲು ಬಿಎಂಟಿಸಿ ಟೆಂಡರ್ ಕರೆದಿದೆ. ನೌಕರರ ಸಂಬಳಕ್ಕಾಗಿ ಸಾಲಮಾಡಲು ಮುಂದಾಗಿದ್ದ ಬಿಎಂಟಿಸಿ ಈಗ ಹೊಸ ಬಸ್ ಖರೀದಿಗೆ ಮುಂದಾಗಿದೆ. ಸದ್ಯ ಪ್ರತಿನಿತ್ಯ 6500 ಬಸ್ಗಳಲ್ಲಿ 4000 ಬಸ್ಗಳು ಮಾತ್ರ ರಸ್ತೆಗಿಳಿಯುತ್ತಿವೆ. ಹೀಗಾಗಿ ಹೊಸ ಬಸ್ ಖರೀದಿಗೆ ಟೆಂಡರ್ ಕರೆದಿರುವುದು ಸುದ್ದಿ ಮಾಡುತ್ತಿದೆ.
ಮಧ್ಯಪ್ರದೇಶ ಪ್ರವೇಶಿಸಿದ ನಕ್ಸಲರು : ಅರೆ ಮಿಲಿಟರಿ ಪಡೆ ನಿಯೋಜನೆ
10:30 am ಕಳೆದ ಕೆಲ ತಿಂಗಳಲ್ಲಿ ತಮ್ಮ ನೆಲೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಸುಮಾರು 100 ನಕ್ಸಲರು ಛತ್ತೀಸ್ಗಢ ಮತ್ತು ಮಹಾರಾಷ್ಟ್ರದಿಂದ ಮಧ್ಯಪ್ರದೇಶ ಪ್ರವೇಶಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈ ಬೆನ್ನಲ್ಲೇ ಬಾಲಾಘಟ್ ಮತ್ತು ಮಂಡ್ಲಾ ಪ್ರದೇಶಗಳಲ್ಲಿ ಸರ್ಕಾರ ಆರು ಅರೆ ಮಿಲಿಟರಿ ಪಡೆಗಳನ್ನು ನಿಯೋಜಿಸಿದೆ.
26 ಸಾವಿರ ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗ ಮಾಡಲಿರುವ ಭಾರತ್ ಬಯೋಟೆಕ್
10:20 am ಕೊರೊನಾ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಭಾರತ್ ಬಯೋಟೆಕ್, 23 ಸಾವಿರ ಸ್ವಯಂ ಸೇವಕರನ್ನು ನೇಮಿಸಿಕೊಂಡಿದೆ. ಮೂರನೇ ಹಂತದ ಕೋವ್ಯಾಕ್ಸಿನ್ ಪರೀಕ್ಷೆ ನಡೆಸುವ ವೇಳೆಗೆ ಸ್ವಯಂ ಸೇವಕರ ಸಂಖ್ಯೆಯನ್ನು 26 ಸಾವಿರಕ್ಕೆ ಹೆಚ್ಚಿಸುವ ನಿರೀಕ್ಷೆಯಲ್ಲಿದೆ. ನವೆಂಬರ್ ವೇಳೆಗೆ ಮೂರನೇ ಹಂತದ ಪರೀಕ್ಷೆ ನಡೆಯುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ.
ಮುಂದಿನ ವಿಧಾನಸಬಾ ಚುನಾವಣೆಯಲ್ಲಿ 150 ಕ್ಷೇತ್ರ ಗೆಲ್ಲಬೇಕು : ಕಾರ್ಯಕರ್ತರಿಗೆ ಕರೆ ಕೊಟ್ಟ ಸಿಎಂ
10:08 am ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸೀಟ್ ಗೆಲ್ಲಬೇಕು. ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಕರ್ತರಿಗೆ ಕರೆ ಕೊಟ್ಟರು.
ಕಾಡಾನೆ ತುಳಿತಕ್ಕೆ ರೈತ ಬಲಿ
10:04 am ಚಾಮರಾಜನಗರದ ಯಣಗುಂಬ ಬಳಿ ಕಾಡಾನೆ ತುಳಿದು ರೈತರೋರ್ವರು ದುರ್ಮರಣಕ್ಕೀಡಾಗಿದ್ದಾರೆ. ಬೆಳೆ ಕಾಯಲು ಜಮೀನಲ್ಲಿ ಮಲಗಿದ್ದ ಸ್ವಾಮಿಗೌಡ (63) ಅವರೇ ಕಾಡಾನೆ ತುಳಿದು ಮೃತಪಟ್ಟ ದುರ್ದೈವಿ. ಚಾಮರಾಜನಗರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಹಿನ್ನೆಲೆ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಸನ್ಮಾನ
09:58 am ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಸನ್ಮಾನಿಸಲಾಯಿತು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ,ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರ ಮೂರ್ತಿ, ಸಚಿವ ಕೆ.ಎಸ್. ಈಶ್ವರಪ್ಪ, ಸಂಸದರಾದ ಬಿ.ವೈ. ರಾಘವೇಂದ್ರ, ಭಗವಂತ್ ಖೂಬಾ, ಬಿಜೆಪಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಮೇಘರಾಜ್ ಉಪಸ್ಥಿತರಿದ್ದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಜೀನಾಮೆಗೆ ಆಗ್ರಹ
9:53 am ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ರಾಜೀನಾಮೆಗೆ ಒತ್ತಾಯಿಸಿ ಇಸ್ರೆಲ್ನಲ್ಲಿ ಪ್ರತಿಭಟನೆ ಜೋರಾಗುತ್ತಿದೆ. ದೀರ್ಘಕಾಲದಿಂದ ಆಡಳಿತ ನಡೆಸುತ್ತಿರುವ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರದ ವಿರುದ್ಧ ಭೃಷ್ಟಾಚಾರದ ಆರೋಪ ಕೇಳಿಬಂದಿದೆ. ಅಲ್ಲದೇ, ಕೊರೊನಾ ವಿರುದ್ಧದ ಹೋರಾಟದಲ್ಲೂ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಈ ವರ್ಷದ ಮಾರ್ಚ್ನಲ್ಲಿ ಇಸ್ರೇಲ್ನಲ್ಲಿ ಚುನಾವಣೆ ನಡೆಯಲಿದೆ.
ಹಿಮಪಾತದಲ್ಲಿ ಸಿಲುಕಿದ್ದ ಪ್ರವಾಸಿಗರ ನೆರವಿಗೆ ಧಾವಿಸಿದ ರಕ್ಷಣಾ ಪಡೆಗಳು
09:48 am ಮನಾಲಿಯಲ್ಲಿ ಹಿಮಪಾತದಲ್ಲಿ ಸಿಲುಕಿರುವ 500 ಪ್ರವಾಸಿಗರು ರಕ್ಷಿಸಲು ರಕ್ಷಣಾ ತಂಡಗಳು ಧಾವಿಸಿವೆ. 20ಕ್ಕೂ ಹೆಚ್ಚು ರಕ್ಷಣಾ ವಾಹನಗಳನ್ನು ಒಳಗೊಂಡ ರಕ್ಷಣಾ ತಂಡ ಪ್ರವಾಸಿಗರ ರಕ್ಷಣಾ ಕಾರ್ಯಕ್ಕೆ ಮುಂದಾಗಿದೆ.
ಹಿಂದೂ ದೇವಾಲಯ ಧ್ವಂಸ ಖಂಡಿಸಿ ಪ್ರತಿಭಟನೆ
09:40 am ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ ಪ್ರಕರಣ ಖಂಡಿಸಿ ಭಜರಂಗದಳದ ಕಾರ್ಯಕರ್ತರು ಅಲಿಗಢದಲ್ಲಿ ಪ್ರತಿಭಟನೆ ನಡೆಸಿದರು.ಘಟನೆ ಖಂಡಿಸಿ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಾಕಿಸ್ತಾನ ಧ್ವಜವನ್ನು ರಸ್ತೆಯಲ್ಲಿ ಚಿತ್ರಿಸಿ ಅಗೌರವ ತೋರಿದರು.
ಒಂದೇ ಹೊಟೇಲ್ನ 85 ಉದ್ಯೋಗಿಗಳಿಗೆ ಕೊರೊನಾ ಸೋಂಕು
09:32 am ಚೆನ್ನೈನ ಐಟಿಸಿ ಗ್ರಾಂಡ್ ಚೋಳ ಹೊಟೆಲ್ನ 85 ಉದ್ಯೋಗಿಗಳು ಡಿಸೆಂಬರ್ 15 ರಿಂದ ಜನವರಿ1 ರ ಅವಧಿಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ವಿಷಯವನ್ನು ಚೆನ್ನೈ ಮಹಾನಗರ ಪಾಲಿಕೆ ಬಹಿರಂಗಪಡಿಸಿದೆ.
96 ಸಾವಿರ ಕೊರೊನಾ ಲಸಿಕೆ ವಿತರಕರಿಗೆ ತರಬೇತಿ ನೀಡಲಾಗಿದೆ : ಡಾ. ಹರ್ಷವರ್ಧನ್
09:28 am ನಿನ್ನೆ ನಡೆದ ಕೊರೊನಾ ಲಸಿಕೆ ವಿತರಣಾ ತಾಲೀಮಿನ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಬೂತ್ ಮಟ್ಟದಲ್ಲಿ ನಡೆಯುವ ಚುನಾವಣೆಗಳಂತೆಯೇ ಕೊರೊನಾ ಲಸಿಕೆ ವಿತರಣಾ ತಾಲೀಮು ನಡೆಸಲಾಗಿದೆ. 719 ಜಿಲ್ಲೆಗಳಲ್ಲಿ ನಡೆದ ತಾಲೀಮಿನಲ್ಲಿ 57 ಸಾವಿರ ಜನ ಭಾಗವಹಿಸಿದ್ದಾರೆ 96 ಸಾವಿರ ಲಸಿಕೆ ವಿತರಣಾ ಕಾರ್ಯಕರ್ತರು ತರಬೇತಿ ಪಡೆದಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಚಳಿಗೆ ಸಾಥ್ ನೀಡಿದ ಮಳೆ
09:10 am ದೆಹಲಿಯಲ್ಲಿ ಬೆಳ್ಳಂ ಬೆಳಗ್ಗೆ ಭರ್ಜರಿ ಮಳೆ ಸುರಿದಿದೆ. ಕಳೆದ ಕೆಲ ದಿನಗಳಿಂದ ಚಳಿಗೆ ನಲುಗಿದ್ದ ರಾಷ್ಟ್ರ ರಾಜಧಾನಿಗೆ ಈಗ ಮಳೆಯೂ ಜೊತೆ ನೀಡಿದಂತಾಗಿದೆ. ದೆಹಲಿಯ ಗಡಿಭಾಗದಲ್ಲಿ ಚಳುವಳಿ ನಡೆಸುತ್ತಿರುವ ರೈತರು ಮಳೆಯ ನಡುವೆಯೇ ಮುಂಜಾನೆಯನ್ನು ಬರಮಾಡಿಕೊಂಡರು. ಏಕಾಏಕಿ ಮಳೆ ಸುರಿದ ಕಾರಣ ವಾಹನ ಸವಾರರು ಪರದಾಡುವಂತಾಯಿತು.
ಕೋವ್ಯಾಕ್ಸಿನ್ ಲಸಿಕೆ ಬಳಕೆ ಅನುಮತಿ ಕುರಿತು ಪತ್ರಿಕಾಗೋಷ್ಠಿ
09:18 am ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಅಧ್ಯಕ್ಷ ವಿ.ಜಿ.ಸೋಮಾನಿಯವರು ಇಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ನಲ್ಲಿ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡುವ ಬಗ್ಗೆ ಘೋಷಣೆ ನಿರೀಕ್ಷೆಯಿದೆ. ಈಗಾಗಲೇ ವಿಷಯ ತಜ್ಞರ ಸಮಿತಿ ಎರಡು ಕಂಪನಿಗಳ ಲಸಿಕೆಯ ತುರ್ತು ಬಳಕೆಗೆ ಶಿಫಾರಸು ನೀಡಿದೆ.
ನಮ್ಮ ಓದುಗರಿಗೆ ಹೊಸ ವರ್ಷದ ಶುಭ ಹಾರೈಕೆಗಳು. ನಿಮ್ಮ ಓದು ನಮ್ಮ ಹುಮ್ಮಸ್ಸು. ಹೊಸ ಯೋಚನೆಗೆ ತಿದಿಯೊತ್ತುವ ಈ ಸಮಯದಲ್ಲಿ ನಾವು ಟಿವಿ9 ಕನ್ನಡ ಡಿಜಿಟಲ್ Live Blog ಪ್ರಾರಂಭಿಸಿದ್ದೇವೆ. ಸುತ್ತಲಿನ ಗದ್ದಲದಿಂದ ದೂರ ಕುಳಿತು ಕ್ಷಣ ಕ್ಷಣದ ಸುದ್ದಿ ಓದುವ, ನೋಡುವ ಅವಕಾಶ ನಿಮಗೆ. ಹಳ್ಳಿಯಿಂದ ದಿಲ್ಲಿಯೇನು ಇಡೀ ಪ್ರಪಂಚದ ಸುದ್ದಿ ಟಿವಿ9 ಕನ್ನಡ ಡಿಜಿಟಲ್ Live Blog ನಲ್ಲಿ ಪ್ರತಿ ದಿನ ಹರಿದು ಬರಲಿದೆ. ಬನ್ನಿ ಇಂದಿನ ಸುದ್ದಿಯ ಹರಿವನ್ನು ಆನಂದಿಸೋಣ.
Published On - Jan 03,2021 9:23 PM