ನವದೆಹಲಿ: ಜಗತ್ತನ್ನು ಕೊರೊನಾ ವೈರಸ್ ಬಿಟ್ಟರೂ ಬಿಡದೀ ಮಾಯೆ ಎಂಬಂತೆ ಕಾಡುತ್ತಿದೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಪ್ರಭೇದದ ಭಯ, ಆತಂಕದ ಬಳಿಕ ಈಗ ಓಮಿಕ್ರಾನ್ ಎಂಬ ಹೊಸ ಪ್ರಭೇದದ ಕೊರೊನಾ ವೈರಸ್ ಆತಂಕ ಶುರುವಾಗಿದೆ. ಓಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಬಹಳ ವೇಗವಾಗಿ ಹರಡುತ್ತದೆ. ಜೊತೆಗೆ ಕೊರೊನಾ ಲಸಿಕೆಯು ಈ ವೈರಸ್ ವಿರುದ್ಧ ಪರಿಣಾಮಕಾರಿಯಾಗುತ್ತಾ? ಇಲ್ಲವಾ? ಎಂಬುದು ಇನ್ನೂ ದೃಢಪಟ್ಟಿಲ್ಲ.
ಜಗತ್ತಿನಲ್ಲಿ ಈಗ ಕೊರೊನಾ ವೈರಸ್ ನ ಹೊಸ ಪ್ರಭೇದ ಬಿ.1.1.529 ವೈರಸ್ ಅನ್ನು ಓಮಿಕ್ರಾನ್ ಎಂದು ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದೆ. ಈ ಹೊಸ ಪ್ರಭೇದದ ವೈರಸ್ ಈಗಾಗಲೇ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ದಕ್ಷಿಣ ಆಫ್ರಿಕಾದಿಂದ ಹಿಡಿದು ಯುರೋಪ್ವರೆಗೆ, ಯುರೋಪ್ನಿಂದ ಹಿಡಿದು ಅಮೆರಿಕಾ, ಭಾರತದವರೆಗೆ ಎಲ್ಲ ರಾಷ್ಟ್ರಗಳು ಹೊಸ ಪ್ರಭೇದದ ಓಮಿಕ್ರಾನ್ ಪ್ರಭೇದದ ವೈರಸ್ ಬಗ್ಗೆೆ ಕೇಳಿ ನಡುಗಿ ಹೋಗಿವೆ. ಹೊಸ ಪ್ರಭೇದದ ಓಮಿಕ್ರಾನ್ ಆರ್ಥಿಕವಾಗಿಯೂ ಭಾರತ ಮಾತ್ರವಲ್ಲದೆ, ಅನೇಕ ದೇಶಗಳಲ್ಲಿ ಭಾರೀ ನಷ್ಟವನ್ನೇ ಉಂಟು ಮಾಡಿದೆ. ಇದನ್ನು ಮೂಲತಃ ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಹಚ್ಚಲಾಗಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ‘ಕಳವಳಕಾರಿ ರೂಪಾಂತರ ಪ್ರಭೇದ’ ಎಂದು ವರ್ಗೀಕರಿಸಿದೆ. ಪ್ರಸ್ತುತ ಡೆಲ್ಟಾ ಪ್ರಭೇದ ಸೇರಿದಂತೆ ಹಿಂದಿನ ರೂಪಾಂತರಗಳಿಗಿಂತ ಹೆಚ್ಚು ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದು ದಕ್ಷಿಣ ಆಫ್ರಿಕಾದ ಆಚೆಗೆ ಹರಡುವ ಬಗ್ಗೆ ಕಳವಳಗಳು ಇರುವುದರಿಂದ ಹಲವಾರು ದೇಶಗಳು ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಸುತ್ತಲಿನ ದೇಶಗಳಿಗೆ ವಿಮಾನ ಸಂಚಾರ ನಿಷೇಧಿಸಿವೆ.
ಓಮಿಕ್ರಾನ್ ಪ್ರಭೇದವನ್ನು ಮೊದಲು ನವೆಂಬರ್ 24ರಂದು ದಕ್ಷಿಣ ಆಫ್ರಿಕಾದಿಂದ WHOಗೆ ವರದಿ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆ ಹೇಳಿದೆ. “ಈ ಪ್ರಭೇದ ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿದೆ. ಪ್ರಾಥಮಿಕ ಪುರಾವೆಗಳು ಈ ರೂಪಾಂತರದೊಂದಿಗೆ ಮರುಸೋಂಕಿನ ಅಪಾಯವನ್ನು ಸೂಚಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಹೊಸ ಪ್ರಭೇದವು ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾ, ಬೋಟ್ಸ್ ವಾನ, ಇಸ್ರೇಲ್, ಹಾಂಗ್ ಕಾಂಗ್, ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ನಲ್ಲಿ ಪತ್ತೆಯಾಗಿದೆ. ಹೊಸ ಪ್ರಭೇದದ ವೈರಸ್ ಈಗ ದಕ್ಷಿಣ ಆಫ್ರಿಕಾದ ಪ್ರತಿಯೊಂದು ಪ್ರಾಂತ್ಯಕ್ಕೂ ಹರಡಿದೆ ಎಂದು WHO ಹೇಳಿದೆ.
ಹಾಂಗ್ ಕಾಂಗ್‌ನಲ್ಲಿ ಮೊದಲ ದೃಢಪಡಿಸಿದ ಪ್ರಕರಣವು ದಕ್ಷಿಣ ಆಫ್ರಿಕಾದ ಪ್ರಯಾಣಿಕನದ್ದಾಗಿದೆ ಮತ್ತು ಅಧಿಕಾರಿಗಳು ಈಗ ಅದೇ ಹೋಟೆಲ್‌ನಲ್ಲಿ ಕ್ವಾರಂಟೈನ್ ಹೋಟೆಲ್ ಎಂದು ಗೊತ್ತುಪಡಿಸಿದ ಎರಡನೇ ಪ್ರಕರಣವನ್ನು ಗುರುತಿಸಿದ್ದಾರೆ. ಇತರ ಹೋಟೆಲ್ ನಿವಾಸಿಗಳಿಗೆ ಈಗ ಕಡ್ಡಾಯ COVID-19 ಪರೀಕ್ಷೆಗೆ ಒಳಗಾಗಲು ಆದೇಶಿಸಲಾಗಿದೆ. ಈಜಿಪ್ಟ್‌ನಿಂದ ಬೆಲ್ಜಿಯಂಗೆ ಪ್ರಯಾಣಿಸಿದ ಲಸಿಕೆ ಹಾಕದ ವ್ಯಕ್ತಿಯಲ್ಲಿ ತನ್ನ ಮೊದಲ ದೃಢಪಡಿಸಿದ ಪ್ರಕರಣವಾಗಿದೆ ಎಂದು ಬೆಲ್ಜಿಯಂ ಸರ್ಕಾರ ಘೋಷಿಸಿತು.
ಡೆಲ್ಟಾ ಪ್ರಭೇದದ ವೈರಸ್ 16 ರೂಪಾಂತರಗಳನ್ನು ಹೊಂದುವ ಸಾಮರ್ಥ್ಯ ಹೊಂದಿದೆ. ಆದರೆ, ಹೊಸ ಪ್ರಭೇದ ಓಮಿಕ್ರಾನ್ 32 ರೂಪಾಂತರ ಹೊಂದುವ ಸಾಮರ್ಥ್ಯ ಹೊಂದಿದೆ. ಜಗತ್ತಿನಲ್ಲಿ ಈಗಾಗಲೇ ಸಂಶೋಧನೆಯಾಗಿ ಬಳಕೆಯಲ್ಲಿರುವ ಕೊರೊನಾ ಲಸಿಕೆಗಳು ಡೆಲ್ಟಾ ಪ್ರಭೇದದ ವಿರುದ್ಧ ಪರಿಣಾಮಕಾರಿಯಾಗಿವೆ. ಆದರೇ ಓಮಿಕ್ರಾನ್ ಪ್ರಭೇದದ ವಿರುದ್ಧ ಕೊರೊನಾ ಲಸಿಕೆಗಳು ಪರಿಣಾಮಕಾರಿಯಾಗಿರಲ್ಲ. ಕೊರೊನಾ ಲಸಿಕೆಗಳು ಹಾಗೂ ಪ್ರತಿಕಾಯಗಳಿಂದ ಎಸ್ಕೇಪ್ ಆಗುವ ಸಾಮರ್ಥ್ಯವನ್ನು ಓಮಿಕ್ರಾನ್ ಪ್ರಭೇದದ ವೈರಸ್ ಹೊಂದಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೂ, ಈ ಬಗ್ಗೆ ಇನ್ನೂ ಸ್ಪಲ್ಪ ಅಧ್ಯಯನ, ಸಂಶೋಧನೆ ನಡೆಯಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಓಮಿಕ್ರಾನ್ ಪ್ರಭೇದದ ವೈರಸ್ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವುದರಿಂದ ಜಗತ್ತಿನಲ್ಲಿ ಮತ್ತೊಂದು ಕೊರೊನಾ ಅಲೆಗೆ ಕಾರಣವಾಗಬಹುದು ಎಂಬ ಭಯ, ಭೀತಿ ಎಲ್ಲ ದೇಶಗಳಿಗೂ ಇದೆ. ಹೀಗಾಗಿ ಈ ಹೊಸ ಪ್ರಭೇದದ ವೈರಸ್ ಪತ್ತೆಯಾಗಿರುವ ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್, ನೆದರ್ ಲ್ಯಾಂಡ್, ಇಸ್ರೇಲ್, ಈಜಿಪ್ಟ್ ದೇಶಗಳಿಗೆ ಪ್ರಮುಖ ದೇಶಗಳು ವಿಮಾನ ಸಂಚಾರ ನಿಷೇಧಿಸುತ್ತಿವೆ. ಆದರೆ ಈ ತೀರ್ಮಾನ ಸಮರ್ಥನೀಯವಲ್ಲ ಎಂದು ದಕ್ಷಿಣ ಆಫ್ರಿಕಾ ಹೇಳಿದೆ.
ಇದನ್ನೂ ಓದಿ: ಭಾರತದಲ್ಲಿ ಮತ್ತೊಂದು ಸೋಂಕಿನ ಭೀತಿ; ಈ ಕೊವಿಡ್ ಹೊಸ ರೂಪಾಂತರಿ ಡೆಲ್ಟಾ ವೈರಸ್ಗಿಂತಲೂ ಅಪಾಯಕಾರಿ!
Published On - 8:13 pm, Sat, 27 November 21