ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ (BJP) ಜಯಗಳಿಸಿದ ನಂತರ ಕಾಂಗ್ರೆಸ್ (Congress) ವಿರುದ್ಧ ಟೀಕಾ ಪ್ರಹಾರ ಮಾಡಿದ ತೃಣಮೂಲ ಕಾಂಗ್ರೆಸ್ (TMC) ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ವಿಫಲವಾಗಿದೆ ಎಂದು ಹೇಳಿದೆ. ಕಾಂಗ್ರೆಸ್ ಟಿಎಂಸಿ ಜತೆ ವಿಲೀನವಾಗಬೇಕು ಮತ್ತು ಬಿಜೆಪಿಯನ್ನು ಸೋಲಿಸಬಲ್ಲ ಏಕೈಕ ವ್ಯಕ್ತಿಯಾದ ತಮ್ಮ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ನೇತೃತ್ವಕ್ಕೆ ಕೈಜೋಡಿಸುವಂತೆ ಕಾಂಗ್ರೆಸ್ ನಾಯಕರಿಗೆ ಕರೆ ನೀಡಿದೆ. “ಕಾಂಗ್ರೆಸ್‌ನಂತಹ ಹಳೆಯ ಪಕ್ಷ ಏಕೆ ಕಣ್ಮರೆಯಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾವು ಕೂಡ ಈ ಪಕ್ಷದ ಭಾಗವಾಗಿದ್ದೇವೆ. ಕಾಂಗ್ರೆಸ್ ಟಿಎಂಸಿ ಜೊತೆ ವಿಲೀನವಾಗಬೇಕು. ಇದೇ ಸರಿಯಾದ ಸಮಯ. ನಂತರ ರಾಷ್ಟ್ರಮಟ್ಟದಲ್ಲಿ ಮಹಾತ್ಮ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್ ಅವರ ತತ್ವಗಳಿಂದ ನಾವು ನಾವು (ನಾಥೂರಾಂ) ಗೋಡ್ಸೆಯ ತತ್ವಗಳ ವಿರುದ್ಧ ಹೋರಾಡಬಹುದು ಎಂದು ಟಿಎಂಸಿ ನಾಯಕ ಮತ್ತು ರಾಜ್ಯ ಸಾರಿಗೆ ಮತ್ತು ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ. ಟಿಎಂಸಿಯ ವಕ್ತಾರ ಕುನಾಲ್ ಘೋಷ್ ಕೂಡ ಹಕೀಮ್‌ಗೆ ಮಾತಿಗೆ ದನಿಗೂಡಿಸಿದ್ದಾರೆ. ಬಿಜೆಪಿಯಂತಹ ಶಕ್ತಿ ವಿರುದ್ಧ ಕಾಂಗ್ರೆಸ್ ಹೋರಾಡಲು ಸಾಧ್ಯವಿಲ್ಲ ಎಂದು ನಾವು ಬಹಳ ದಿನಗಳಿಂದ ಹೇಳುತ್ತಲೇ ಬಂದಿದ್ದೇವೆ. ಬಿಜೆಪಿ ವಿರುದ್ಧ ಹೋರಾಡಲು ಮಮತಾ ಬ್ಯಾನರ್ಜಿಯಂತಹ ನಾಯಕಿ ಬೇಕು. ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಘೋಷ್ ಹೇಳಿದ್ದಾರೆ.
ಈ ಹಿಂದೆ ಟಿಎಂಸಿ ಮುಖವಾಣಿ ‘ಜಾಗೋ ಬಾಂಗ್ಲಾ’ ಹಲವು ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಪ್ರತಿಪಕ್ಷ ಪಡೆಗಳ ಪ್ರಬಲ ಒಕ್ಕೂಟವನ್ನು ನಿರ್ಮಿಸುವ ಬದಲು ಟ್ವಿಟರ್‌ಗೆ ಸೀಮಿತವಾಗಿದೆ” ಎಂದು ಆರೋಪಿಸಿತ್ತು. ಪತ್ರಿಕೆಯು ಸಂಪಾದಕೀಯದಲ್ಲಿ, “ನಾವು ಬಿಜೆಪಿಗೆ ಪರ್ಯಾಯವನ್ನು ಬಯಸುತ್ತೇವೆ, ಬಿಜೆಪಿ ವಿರುದ್ಧ ಮೈತ್ರಿಯನ್ನು ಬಯಸುತ್ತೇವೆ ಎಂದು ಹೇಳಿತ್ತು.
ಕಾಂಗ್ರೆಸ್‌ನವರಿಗೂ ನಾವು ಹಲವಾರು ಬಾರಿ ಹೇಳಿದ್ದೇವೆ. ಆದಾಗ್ಯೂ, ಇದು ಈ ಬಗ್ಗೆ ತಲೆಕೆಡಿಸಿಕೊಂಡಂತೆ ತೋರುತ್ತಿಲ್ಲ ನಮ್ಮ ನಾಯಕಿ (ಮಮತಾ ಬ್ಯಾನರ್ಜಿ) ಮೈತ್ರಿಗಾಗಿ ಒಂದು ಫ್ರೇಮ್ ವರ್ಕ್ , ಸ್ಟೀರಿಂಗ್ ಕಮಿಟಿ, ನೀತಿ ಮತ್ತು ಈ ನಿಟ್ಟಿನಲ್ಲಿ ಕ್ರಮದ ಮಾರ್ಗವನ್ನು ಹುಡುಕಿದ್ದಾರೆ. ಆದರೆ ಕಾಂಗ್ರೆಸ್ ಟ್ವಿಟರ್‌ಗೆ ಸೀಮಿತವಾಗಿರುವುದರಲ್ಲಿ ಸಂತೋಷವಾಗಿದೆ ಎಂದು ತೋರುತ್ತದೆ ಎಂದು ಹೇಳಿದೆ.
ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಲುಯಿಜಿನ್ಹೋ ಫಲೈರೊ ಅವರನ್ನು ತನ್ನ ತೆಕ್ಕೆಗೆ ಸೆಳೆಯುವ ಮೂಲಕ ಟಿಎಂಸಿ ಕರಾವಳಿ ರಾಜ್ಯವಾದ ಗೋವಾದಲ್ಲಿ ಕಾಂಗ್ರೆಸ್‌ಗೆ ಹೊಡೆತವನ್ನು ನೀಡಿತು.
ಆದರೆ ಗೋವಾದಲ್ಲಿ ಟಿಎಂಸಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಒಂದೇ ಒಂದು ಸ್ಥಾನವನ್ನು ಪಡೆಯಲಿಲ್ಲ. ಅವರ ಚುನಾವಣಾ ಮಿತ್ರ ಪಕ್ಷವಾದ ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ (ಎಂಜಿಪಿ) ಎರಡು ಸ್ಥಾನಗಳನ್ನು ಗೆದ್ದು ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿದೆ. ಇದು ಕೂಡ ಟಿಎಂಸಿ ಕೆಂಗಣ್ಣಿಗೆ ಗುರಿಯಾಗಿದೆ. ಕುನಾಲ್ ಘೋಷ್, “ನಾವು ಗೋವಾದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ ಮತ್ತು ನಾವು ಪಡೆದ ಮತಗಳ ಹಂಚಿಕೆಯಿಂದ ನಾವು ತೃಪ್ತರಾಗಿದ್ದೇವೆ. ಆದರೆ, ಎಂಜಿಪಿ ಏನು ನಿರ್ಧರಿಸಿದೆ ಎಂಬುದರ ಕುರಿತು ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆ ನಿರ್ಧಾರದ ಬಗ್ಗೆ ನಮಗೆ ಯಾವುದೇ ಸುಳಿವು ಇಲ್ಲ ಎಂದಿದ್ದಾರೆ.
ಏತನ್ಮಧ್ಯೆ, ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಟಿಎಂಸಿಯ ಪ್ರಸ್ತಾಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, “ಟಿಎಂಸಿ ಬಿಜೆಪಿಯ ದೊಡ್ಡ ಏಜೆಂಟ್. ಅವರು ಬಿಜೆಪಿ ವಿರುದ್ಧ ಹೋರಾಡುವ ಬಗ್ಗೆ ಗಂಭೀರವಾಗಿದ್ದರೆ, ಅವರು ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲಿ ಎಂದಿದ್ದಾರೆ.
ಆದಾಗ್ಯೂ, ಗೋವಾ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯ ಸಾಧನೆಯನ್ನು ಬಿಜೆಪಿ ನಾಯಕತ್ವವು ಗೇಲಿ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರು, ‘ಮುಂದಿನ ಲೋಕಸಭೆ ಚುನಾವಣೆಯಲ್ಲಿ (2024ರಲ್ಲಿ) ನರೇಂದ್ರ ಮೋದಿಯೇ ನಮ್ಮ ಪ್ರಧಾನಮಂತ್ರಿಯಾಗಲಿದ್ದಾರೆ. ಗುರುವಾರದ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಪಶ್ಚಿಮ ಬಂಗಾಳದ ಹೊರಗೆ ಟಿಎಂಸಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಮತ್ತೊಂದೆಡೆ, ದೆಹಲಿ ಸಿಎ ಅರವಿಂದ್ ಕೇಜ್ರಿವಾಲ್ ಅವರ ಪಕ್ಷ ಎಎಪಿ ಈಗ ಪಂಜಾಬ್‌ನಲ್ಲಿಯೂ ಸರ್ಕಾರ ರಚಿಸಲಿದೆ. ಪರಿಣಾಮವಾಗಿ, ಈಗ ಅವರು ವಿರೋಧ ಪಕ್ಷದ ಮುಖ, ಮಮತಾ ಅಥವಾ ಕೇಜ್ರಿವಾಲ್ ಇವರಿಬ್ಬರಲ್ಲಿ ಯಾರು ಎಂದು ನಿರ್ಧರಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಆಕಸ್ಮಿಕವಾಗಿ ಉಡಾವಣೆಯಾದ ಕ್ಷಿಪಣಿ ಪಾಕಿಸ್ತಾನಕ್ಕೆ ಬಿದ್ದ ಪ್ರಕರಣ: ವಿಷಾದ ವ್ಯಕ್ತಪಡಿಸಿದ ಭಾರತ, ತನಿಖೆಗೆ ಆದೇಶ