ನಕಲಿ ಪುರಾತನ ವಸ್ತು ವಂಚನೆ ಪ್ರಕರಣ: ಕೇರಳ ಪಿಸಿಸಿ ಅಧ್ಯಕ್ಷ ಇ.ಸುಧಾಕರನ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ

|

Updated on: Jun 23, 2023 | 9:25 PM

ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆಯಿದ್ದು, ಎಲ್ಲವನ್ನೂ ಸ್ವೀಕರಿಸಲು ಮನಸ್ಸನ್ನು ಸಿದ್ಧಗೊಳಿಸುತ್ತಿದ್ದೇನೆ ಎಂದು ಕೇರಳ ಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಹೇಳಿದ್ದಾರೆ. ಜಾಮೀನು ಪಡೆದು ಬಿಡುಗಡೆಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದಿದ್ದಾರೆ.

ನಕಲಿ ಪುರಾತನ ವಸ್ತು ವಂಚನೆ ಪ್ರಕರಣ: ಕೇರಳ ಪಿಸಿಸಿ ಅಧ್ಯಕ್ಷ ಇ.ಸುಧಾಕರನ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ
ಕೆ. ಸುಧಾಕರನ್
Follow us on

ಕೊಚ್ಚಿ: ಮೊನ್ಸನ್ ಮಾವುಂಗಲ್ (Monson Mavunkal)  ಪ್ರಮುಖ ಆರೋಪಿಯಾಗಿರುವ ನಕಲಿ ಪುರಾತನ ವಸ್ತು ವಂಚನೆ ಪ್ರಕರಣದಲ್ಲಿ ಕೇರಳ ಪ್ರದೇಶ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷ ಇ.ಸುಧಾಕರನ್ (K Sudhakaran) ಬಂಧನಕ್ಕೊಳಗಾಗಿ ಕೆಲವೇ ಹೊತ್ತಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಕಳಮಶ್ಶೇರಿಯಲ್ಲಿರುವ ಅಪರಾಧ ವಿಭಾಗದ ಕಚೇರಿಯಲ್ಲಿ ಏಳೂವರೆ ಗಂಟೆಗಳ ವಿಚಾರಣೆಯ ನಂತರ ಸುಧಾಕರನ್ ಅವರನ್ನು ಶುಕ್ರವಾರ ಬಂಧಿಸಲಾಗಿತ್ತು. ಸುಧಾಕರನ್ ಬಂಧನದ ವಿರುದ್ಧ ವ್ಯಾಪಕ ಪ್ರತಿಭಟನೆ ಕೇರಳದಲ್ಲಿ ನಡೆದಿದ್ದು, ಶನಿವಾರ ಮತ್ತು ಭಾನುವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಕರೆ ನೀಡಿದೆ.

ಮೊನ್ಸನ್ ಮೊದಲ ಆರೋಪಿಯಾಗಿರುವ ಪ್ರಕರಣದಲ್ಲಿ ಸುಧಾಕರನ್ ಎರಡನೇ ಆರೋಪಿಯಾಗಿದ್ದಾರೆ. 50,000 ಮತ್ತು ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ನೀಡಿ ಈ ಪ್ರಕರಣದಲ್ಲಿ ಜಾಮೀನು ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸುಧಾಕರನ್ ಹೈಕೋರ್ಟ್‌ನಲ್ಲಿ ಅಫಿಡವಿಟ್ ಕೂಡ ನೀಡಿದ್ದರು. ಡಿವೈಎಸ್ಪಿ ವೈ.ಆರ್.ರುಸ್ತಂ ಪ್ರಸ್ತುತ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. ಮೂರನೇ ಆರೋಪಿ, ಐಜಿ ಜಿ.ಲಕ್ಷ್ಮಣ್ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದರೂ ಅವರ ವಿಚಾರಣೆ ಯಾವಾಗ ಎಂಬುದರ ಬಗ್ಗೆ ಕ್ರೈ ಬ್ರಾಂಚ್ ಮಾಹಿತಿ ನೀಡಿಲ್ಲ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ಏನಿದು ಪ್ರಕರಣ?

ಗಲ್ಫ್‌ನ ರಾಜಮನೆತನದ್ದು ಎಂದು ಹೇಳುವ ವಿಶೇಷ ಪುರಾತನ ವಸ್ತುಗಳ ಮಾರಾಟದಿಂದ ಸಿಕ್ಕಿದ  2.62 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಮೊನ್ಸನ್ ನಮ್ಮಲ್ಲಿ ಹೇಳಿದ್ದರು ಎಂದು ದೂರುದಾರರು ಹೇಳಿದ್ದಾರೆ. ಬ್ಯಾಂಕ್‌ನಲ್ಲಿರುವ ಈ ಮೊತ್ತವನ್ನು ಹಿಂಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸಲು ಮೊನ್ಸನ್ ಹಲವಾರು ಬಾರಿ 10 ಕೋಟಿ ರೂ ಪಡೆದಿದ್ದಾರೆ. 2018 ನವೆಂಬರ್ 22ರಂದು, ಕೊಚ್ಚಿಯ ಕಾಲೂರಿನಲ್ಲಿರುವ ಮೊನ್ಸನ್  ಮನೆಯಲ್ಲಿ ಸುಧಾಕರನ್ ಭೇಟಿಯಾಗಿದ್ದು, ದೆಹಲಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂಬ ಆಧಾರದ ಮೇಲೆ ತಾನು ಮೊನ್ಸನ್‌ಗೆ ಹಣ ನೀಡಿದ್ದೆ ಎಂದು ದೂರುದಾರರು ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರಕ್ಕಾಗಿ ಮಾತನಾಡುವಾಗ ಎಲ್ಲರೂ ಒಂದಾಗಬೇಕು: ಅಮೆರಿಕದಲ್ಲಿ ರಾಹುಲ್ ಗಾಂಧಿಗೆ ಮೋದಿ ಟಾಂಗ್?

ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆ ಇದೆ: ಸುಧಾಕರನ್

ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆಯಿದ್ದು, ಎಲ್ಲವನ್ನೂ ಸ್ವೀಕರಿಸಲು ಮನಸ್ಸನ್ನು ಸಿದ್ಧಗೊಳಿಸುತ್ತಿದ್ದೇನೆ ಎಂದು ಕೇರಳ ಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಹೇಳಿದ್ದಾರೆ. ಜಾಮೀನು ಪಡೆದು ಬಿಡುಗಡೆಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಪ್ರಕರಣ ನ್ಯಾಯಾಲಯದ ವ್ಯಾಪ್ತಿಗೆ ಬರಲಿ. ನ್ಯಾಯಾಲಯವು ಪ್ರಕರಣದ ಅರ್ಹತೆ ಮತ್ತು ದೋಷವನ್ನು ನಿರ್ಣಯಿಸಲಿ. ಅದಕ್ಕೆ ತಕ್ಕಂತೆ ನನ್ನ ಮನಸ್ಸು ಎಲ್ಲವನ್ನೂ ಸ್ವೀಕರಿಸಲು ಸಿದ್ಧವಾಗಿದೆ. ತನಿಖಾ ತಂಡ ನನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿವೆ ಎಂದು ಹೇಳಿಲ್ಲ. ಅವರು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕಾಗಿತ್ತು. ಕೇಳಿದ ಎಲ್ಲದಕ್ಕೂ ಉತ್ತರಿಸಿದೆ. ಆ ಬಗ್ಗೆ ನಾನೇನೂ ಹೇಳಲು ಬಯಸುವುದಿಲ್ಲ ಎಂದು ಸುಧಾಕರನ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ