
ಕುಟುಂಬದ ವಾಟ್ಸಾಪ್ ಗ್ರೂಪ್‌ಗೆ ಮಧ್ಯಾಹ್ನ ಒಂದು ಸಂದೇಶ ಬರುತ್ತದೆ. ಮಸುಕಾದ ವೀಡಿಯೊ ಒಂದರಲ್ಲಿ, ಹತ್ತಿರದ ನಗರವೊಂದರಲ್ಲಿ ಅಪರಿಚಿತರು ಮಗುವನ್ನು ಎಳೆದೊಯ್ಯುತ್ತಿರುವುದನ್ನು ತೋರಿಸಲಾಗಿದೆ. ಈ ಪ್ರದೇಶದಲ್ಲಿ ಮಗು ಅಪಹರಿಸುವ ಜಾಲ ಸಕ್ರಿಯವಾಗಿದೆ ಎಂದು ಅದರ ವಿವರಣೆ (ಕ್ಯಾಪ್ಷನ್) ಹೇಳುತ್ತದೆ. ಯಾರೋ ಅದನ್ನು ನೆರೆಹೊರೆಯವರ ಗ್ರೂಪ್‌ಗೆ ಫಾರ್ವರ್ಡ್ ಮಾಡುತ್ತಾರೆ. ಇನ್ನಾರೋ ಅದನ್ನು ಮತ್ತೆ ಫಾರ್ವರ್ಡ್ ಮಾಡುತ್ತಾರೆ.
ಕೆಲವೇ ಗಂಟೆಗಳಲ್ಲಿ, ಭಯದ ಆಧಾರದ ಮೇಲೆ ಜನರ ಗುಂಪು ಸೇರುತ್ತದೆ. ಅವರಿಗೆ ಸಾಕ್ಷ್ಯಾಧಾರಗಳು ಬೇಕೆನಿಸುವುದಿಲ್ಲ.
2017 ಮತ್ತು 2020 ರ ನಡುವೆ, ಭಾರತದಲ್ಲಿ ನಕಲಿ ವಾಟ್ಸಾಪ್ ಸಂದೇಶಗಳ ಆಧಾರದ ಮೇಲೆ ಪ್ರಚೋದಿತಗೊಂಡ ಗುಂಪುಗಳಿಂದ (Lynching) ಹತ್ಯೆಗೊಳಗಾದವರ ಸಂಖ್ಯೆ ಕನಿಷ್ಠ ಇಪ್ಪತ್ತಮೂರು. ಹತ್ತಿರದಲ್ಲಿ ಮಗು ಅಪಹರಿಸುವವರು ಅಥವಾ ಅಂಗಾಂಗ ಕಳ್ಳರು ಸಕ್ರಿಯರಾಗಿದ್ದಾರೆ ಎಂದು ಪ್ರತಿಪಾದಿಸುವ ವಾಟ್ಸಾಪ್ ಫಾರ್ವರ್ಡ್‌ಗಳೇ ಇದಕ್ಕೆ ಕಾರಣವಾಗಿದ್ದವು. ಈ ಹತ್ಯೆಗಳ ಹಿಂದಿದ್ದ ಬಹುತೇಕ ವೀಡಿಯೊಗಳು ಮತ್ತು ಸಂದೇಶಗಳು ಸುಳ್ಳಾಗಿದ್ದವು, ಸಂಬಂಧವಿಲ್ಲದ ಹಳೆಯ ವೀಡಿಯೊಗಳಾಗಿದ್ದವು ಅಥವಾ ಸಂಪೂರ್ಣವಾಗಿ ಹೆಣೆದ ಕಥೆಗಳಾಗಿದ್ದವು. ಕೊಲೆಯಾದವರು ಹೆಚ್ಚಾಗಿ ಹೊರಗಿನವರು, ಪ್ರಯಾಣಿಕರು ಅಥವಾ ಭಯಭೀತಗೊಂಡ ಗುಂಪಿಗೆ ಅಪರಿಚಿತರಾಗಿದ್ದ ಅಮಾಯಕರೇ.
ಇದು ತೀರಾ ತೀವ್ರ ಸ್ವರೂಪದ ಪರಿಣಾಮ. ಆದರೆ ಇದರ ಹಿಂದಿರುವ ಅಭ್ಯಾಸ — ಅಂದರೆ, ಒಂದು ಸಂದೇಶವು ತುರ್ತು ಅನಿಸಿದ್ದಕ್ಕಾಗಿ ಅದನ್ನು ನಂಬುವುದು ಮತ್ತು ಫಾರ್ವರ್ಡ್ ಮಾಡುವುದು — ಅತ್ಯಂತ ಸಾಮಾನ್ಯವಾದದ್ದು ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಮಾರಕವಲ್ಲ. ಆದರೆ ಅದು ಲಕ್ಷಾಂತರ ಜನರು ಯಾವುದನ್ನು ಸತ್ಯವೆಂದು ನಂಬುತ್ತಾರೆ ಎಂಬುದನ್ನು ಸೈಲೆಂಟ್ ಆಗಿ ರೂಪಿಸುತ್ತದೆ.
ಮೈಕ್ರೋಸಾಫ್ಟ್‌ನ ಜಾಗತಿಕ ಸಮೀಕ್ಷೆಯೊಂದರ ಪ್ರಕಾರ, ಶೇಕಡಾ 60 ಕ್ಕಿಂತ ಹೆಚ್ಚು ಭಾರತೀಯರು ಆನ್‌ಲೈನ್‌ನಲ್ಲಿ ಸುಳ್ಳು ಸುದ್ದಿಗಳನ್ನು (Fake News) ಎದುರಿಸುತ್ತಿರುವುದಾಗಿ ವರದಿ ಮಾಡಿದ್ದಾರೆ, ಇದು ಜಾಗತಿಕ ಸರಾಸರಿಯಾದ ಶೇಕಡಾ 57 ಕ್ಕಿಂತ ಹೆಚ್ಚಾಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಾಟ್ಸಾಪ್ ಬಳಕೆದಾರರನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಮತ್ತು ಈ ಪ್ಲಾಟ್‌ಫಾರ್ಮ್ ಕಾರ್ಯಾಚರಿಸುವ ದೇಶಗಳ ಪೈಕಿ ಅತಿ ಹೆಚ್ಚು ಫಾರ್ವರ್ಡ್ ವಿಷಯಗಳನ್ನು ಹಂಚಿಕೊಳ್ಳುವ ದೇಶಗಳಲ್ಲಿ ಒಂದಾಗಿದೆ. ಪ್ರತ್ಯೇಕವಾಗಿ ನಡೆಸಿದ ಸಮೀಕ್ಷೆಯೊಂದರಲ್ಲಿ, ಶೇಕಡಾ 88 ರಷ್ಟು ಪ್ರಥಮ ಬಾರಿಯ ಭಾರತೀಯ ಮತದಾರರು ಸುಳ್ಳು ಸುದ್ದಿಗಳನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಿದ್ದಾರೆ, ಆದಾಗ್ಯೂ ತಾವು ಕಾಣುವ ಸುದ್ದಿಯ ಸತ್ಯಾಸತ್ಯತೆಯನ್ನು ಗುರುತಿಸಲು ಕಷ್ಟಪಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಪಾದಚಾರಿ ಮಾರ್ಗ ಯಾರಿಗೆ ಸೇರಿದ್ದು? ಭಾರತದ ಫುಟ್‌ಪಾತ್ ಹಕ್ಕು, ಭದ್ರತೆ ಮತ್ತು ವ್ಯಾಪಾರಿಗಳ ಸಂಘರ್ಷ
ಹಾಗಾದರೆ ನಿಜವಾದ ಪ್ರಶ್ನೆ ಇಲ್ಲಿದೆ. ತಪ್ಪು ಮಾಹಿತಿ/ವದಂತಿ (Misinformation) ಒಂದು ಸಮಸ್ಯೆ ಎಂದು ನಮ್ಮಲ್ಲಿ ಹೆಚ್ಚಿನವರು ಒಪ್ಪಿಕೊಳ್ಳುವುದಾದರೆ, ಅದು ದೇಶಾದ್ಯಂತ ಹೀಗೆ ಹರಡುತ್ತಲೇ ಇರುವುದೇಕೆ?
ಇದಕ್ಕೆ ಭಾಗಶಃ ಉತ್ತರ ಮಾನವನ ಸಹಜ ಮನಸ್ಥಿತಿಯಲ್ಲಿದೆ. ನಮ್ಮಲ್ಲಿ ಭಯ, ಕೋಪ ಅಥವಾ ಹೆಮ್ಮೆಯನ್ನು ಉಂಟುಮಾಡುವ ಸಂದೇಶವು, ನಮ್ಮನ್ನು ಯೋಚಿಸುವಂತೆ ಮಾಡುವ ಸಂದೇಶಕ್ಕಿಂತ ವೇಗವಾಗಿ ಚಲಿಸುತ್ತದೆ. ಭಯವು, “ಇದನ್ನು ತಕ್ಷಣ ಶೇರ್ ಮಾಡಿ, ನಿಮ್ಮ ಪ್ರೀತಿಪಾತ್ರರು ಅಪಾಯದಲ್ಲಿರಬಹುದು” ಎಂದು ಹೇಳುತ್ತದೆ. ಹೆಮ್ಮೆಯು, “ಇದನ್ನು ತಕ್ಷಣ ಶೇರ್ ಮಾಡಿ, ನೀವು ಈಗಾಗಲೇ ನಂಬಿದ್ದನ್ನು ಇದು ನಿರೂಪಿಸುತ್ತದೆ” ಎನ್ನುತ್ತದೆ. ಆದರೆ ಯಾವುದೇ ಸಂದೇಶವೂ “ದಯವಿಟ್ಟು ನಿಲ್ಲಿ, ಮತ್ತು ಇದನ್ನು ಮೊದಲು ಪರಿಶೀಲಿಸಿ” ಎಂದು ಹೇಳುವುದಿಲ್ಲ; ಏಕೆಂದರೆ ಮುನ್ನೆಚ್ಚರಿಕೆಯು ಎಚ್ಚರಿಕೆಯಷ್ಟು ತುರ್ತು ಎಂದು ಎಂದಿಗೂ ಅನಿಸುವುದಿಲ್ಲ.
ಇದಕ್ಕೊಂದು ನಿಶ್ಶಬ್ದ ಕಾರಣವೂ ಇದೆ. ಅನೇಕ ಜನರಿಗೆ ಒಂದನ್ನು ತ್ವರಿತವಾಗಿ ಹೇಗೆ ಪರಿಶೀಲಿಸಬೇಕು ಎಂಬುದು ನಿಜವಾಗಿಯೂ ತಿಳಿದಿರುವುದಿಲ್ಲ, ಮತ್ತು ಸತ್ಯಾಸತ್ಯತೆ ತಪಾಸಣೆಗೆ (Verification) ತಜ್ಞರ ಉಪಕರಣಗಳು ಅಥವಾ ಪತ್ರಕರ್ತರ ತರಬೇತಿ ಅಗತ್ಯವಿದೆ ಎಂದು ಭಾವಿಸುತ್ತಾರೆ. ಆದರೆ ಸಾಮಾನ್ಯವಾಗಿ ಹಾಗೇನೂ ಬೇಕಾಗಿಲ್ಲ.
ಕೆಲವು ಸರಳ ಅಭ್ಯಾಸಗಳು ಅಚ್ಚರಿಗೊಳಿಸುವಷ್ಟು ನಕಲಿ ವಿಷಯಗಳನ್ನು ತಡೆಯಬಲ್ಲವು. ವಾಟ್ಸಾಪ್‌ನಲ್ಲಿ, “ಫಾರ್ವರ್ಡ್ ಮಾಡಲಾಗಿದೆ (Forwarded many times)” ಎಂದು ಲೇಬಲ್ ಮಾಡಲಾದ ಸಂದೇಶವು ವೇಗವನ್ನು ಹೆಚ್ಚಿಸುವುದಕ್ಕಲ್ಲ, ಬದಲಿಗೆ ನಿಧಾನಗೊಳಿಸುವುದಕ್ಕಿರುವ ಸೂಚನೆಯಾಗಿದೆ; ಏಕೆಂದರೆ ಅಂತಹ ಸಂದೇಶಗಳನ್ನು ಯಾರೂ ಪರಿಶೀಲಿಸುವುದಕ್ಕಿಂತ ಹೆಚ್ಚಾಗಿ ಹರಡಲಾಗುತ್ತದೆ ಎಂಬ ಕಾರಣಕ್ಕಾಗಿಯೇ ಆ ಲೇಬಲ್ ಇಡಲಾಗಿದೆ. ಫೋಟೋ ಅಥವಾ ವೀಡಿಯೊವನ್ನು ಸಾಮಾನ್ಯವಾಗಿ ‘ರಿವರ್ಸ್ ಇಮೇಜ್ ಸರ್ಚ್’ (Reverse Image Search) ಮೂಲಕ ಪರಿಶೀಲಿಸಬಹುದು, ಇದು “ಇತ್ತೀಚಿನದು” ಎಂದು ಪ್ರತಿಪಾದಿಸಲಾದ ವೀಡಿಯೊ ನಿಜವಾಗಿ ಹಲವು ವರ್ಷಗಳಷ್ಟು ಹಳೆಯದ್ದು ಅಥವಾ ಸಂಪೂರ್ಣವಾಗಿ ಬೇರೆ ದೇಶದ್ದು ಎಂಬುದನ್ನು ಆಗಾಗ ಬಯಲು ಮಾಡುತ್ತದೆ. ಮತ್ತು ನೀವು ಯೋಚಿಸುವ ಮೊದಲು ತಕ್ಷಣದ ಕ್ರಮಕ್ಕೆ ಆಗ್ರಹಿಸುವ ಸಂದೇಶವನ್ನು ಹೆಚ್ಚಿನ ಸಂಶಯದಿಂದ ನೋಡಬೇಕೇ ಹೊರತು ಕಡಿಮೆ ಸಂಶಯದಿಂದಲ್ಲ.
ಭಾರತವು ಸ್ವತಂತ್ರ ಫ್ಯಾಕ್ಟ್-ಚೆಕಿಂಗ್ (Fact-checking) ಸಂಸ್ಥೆಗಳನ್ನು ಹೊಂದಿದೆ. ಜೊತೆಗೆ ಸರ್ಕಾರದ ಸ್ವಂತ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಫ್ಯಾಕ್ಟ್-ಚೆಕ್ ಚಾನೆಲ್ ಸಹ ಇದೆ. ಇವು ವೈರಲ್ ಪ್ರತಿಪಾದನೆಗಳ ದೃಢೀಕೃತ ಸತ್ಯಾಸತ್ಯತೆಯನ್ನು ದಿನನಿತ್ಯ ಪ್ರಕಟಿಸುತ್ತವೆ. ಇವುಗಳಲ್ಲಿ ಯಾವುದೂ ಎಲ್ಲಾ ವದಂತಿಗಳನ್ನು, ನಕಲಿ ಸುದ್ದಿಗಳನ್ನು ಪತ್ತೆಮಾಡಲು ಸಾಧ್ಯವಿಲ್ಲ. ಆದರೆ ಅನುಮಾನಾಸ್ಪದ ಪ್ರತಿಪಾದನೆಯನ್ನು ಮತ್ತಷ್ಟು ಫಾರ್ವರ್ಡ್ ಮಾಡುವ ಮೊದಲು ಈ ಆಧಾರಗಳಲ್ಲಿ ಕನಿಷ್ಠ ಒಂದರ ಜೊತೆ ಪರಿಶೀಲಿಸುವುದು ನಮ್ಮಲ್ಲಿ ಹೆಚ್ಚಿನವರು ಅಂದುಕೊಂಡಿದ್ದಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: ಮನೆ ಮುಂಭಾಗದ ರಸ್ತೆಗುಂಡಿಗೆ ನಿಜವಾಗಿ ಯಾರು ಹೊಣೆ? ಯಾರೋ ಒಬ್ಬರಿಗೆ ಶಪಿಸುವ ಮುನ್ನ ಈ ವಿಚಾರಗಳನ್ನು ತಿಳಿದಿರಿ
ಇದರರ್ಥ ಪರಿಶೀಲಿಸದ ಪ್ರತಿಯೊಂದು ಸಂದೇಶವೂ ಸುಳ್ಳು ಎಂದಲ್ಲ, ಅಥವಾ ಬೇರೆ ಜನರ ಮೇಲಿನ ವಿಶ್ವಾಸಾರ್ಹತೆ ಬಗ್ಗೆಯೇ ಅನುಮಾನ ಪಡಬೇಕೆಂದೂ ಅಲ್ಲ. ಜನರು ಹಂಚಿಕೊಳ್ಳುವ ಹೆಚ್ಚಿನ ಸಂದೇಶಗಳು ತಪ್ಪಾಗಿದ್ದರೂ ಸಹ ಹಾನಿಕರವಲ್ಲ. ಕೆಲವೊಮ್ಮೆ ವದಂತಿ ಮತ್ತು ವಾಸ್ತವದ ಮಧ್ಯೆ ಅಂತರವು ಮುಜುಗರಕ್ಕಿಂತ ಹೆಚ್ಚಾಗಿ ಗಂಭೀರವಾಗಿರುತ್ತದೆ. ಇದು 2017 ಮತ್ತು 2020 ರ ನಡುವೆ ನಷ್ಟವಾದ ಇಪ್ಪತ್ತಮೂರು ಜೀವಗಳು ಸಾಕ್ಷಿ ಎನಿಸುತ್ತವೆ.
ಒಬ್ಬ ವ್ಯಕ್ತಿ ತನ್ನ ಫೋನ್‌ಗೆ ಬರುವ ಪ್ರತಿಯೊಂದು ಸಂದೇಶವನ್ನೂ ಫ್ಯಾಕ್ಟ್-ಚೆಕ್ ಮಾಡುವ ಅಗತ್ಯವಿಲ್ಲ. ಆದರೆ ತಮಗೆ ಭಯ ಅಥವಾ ಕೋಪ ತರಿಸುವ ವಸ್ತುವನ್ನು ಫಾರ್ವರ್ಡ್ ಮಾಡುವ ಮೊದಲು ಸ್ವಲ್ಪ ತಡೆದು, “ಇದು ನಿಜವಾಗಿಯೂ ಸತ್ಯವೇ” ಎಂದು ಕೇಳಿಕೊಳ್ಳುವುದು ಪ್ರತಿಯೊಬ್ಬರೂ ಮಾಡಬಹುದಾದ ಕನಿಷ್ಠ ಕರ್ತವ್ಯವಾಗಿದೆ.
ಮುಂದಿನ ಬಾರಿ ತಕ್ಷಣವೇ ಶೇರ್ ಮಾಡಲು ಕೋರುವ ಸಂದೇಶ ಬಂದಾಗ, ನಿಮ್ಮ ಬೆರಳು ಚಲಿಸುವ ಮೊದಲು, “ನಾನು ಇದನ್ನು ಪರಿಶೀಲಿಸಿದ್ದೇನೆ ಎಂಬ ಕಾರಣಕ್ಕೆ ಶೇರ್ ಮಾಡುತ್ತಿದ್ದೇನೆಯೇ, ಅಥವಾ ಇದು ನನ್ನಲ್ಲಿ ಏನೋ ಒಂದು ಭಾವನೆಯನ್ನು ಮೂಡಿಸಿತು ಎಂಬ ಕಾರಣಕ್ಕೇ ಶೇರ್ ಮಾಡುತ್ತಿದ್ದೇನೆಯೇ”? ಎಂದು ಪ್ರಶ್ನೆ ಕೇಳಿಕೊಳ್ಳುವುದು ಸೂಕ್ತ.
ಆಧಾರಗಳು: ವಿಕಿಪೀಡಿಯಾ, “ಇಂಡಿಯನ್ ವಾಟ್ಸಾಪ್ ಲಿಂಚಿಂಗ್ಸ್,” ದಾಖಲಾದ ಪ್ರಕರಣಗಳು 2017–2020; ಭಾರತದಲ್ಲಿ ನಕಲಿ ಸುದ್ದಿಗಳ ಕುರಿತ ಮೈಕ್ರೋಸಾಫ್ಟ್ ಡಿಜಿಟಲ್ ಸಿವಿಲಿಟಿ ಇಂಡೆಕ್ಸ್ ಸಮೀಕ್ಷೆಯ ಸಂಶೋಧನೆಗಳು; ಸ್ಟಾಟಿಸ್ಟಾ, 2019 ರ ಪ್ರಥಮ ಬಾರಿಯ ಭಾರತೀಯ ಮತದಾರರು ಮತ್ತು ನಕಲಿ ಸುದ್ದಿಗಳ ಸಮೀಕ್ಷೆ; ಭಾರತದಲ್ಲಿ ಪರಿಚಯಿಸಲಾದ ಫಾರ್ವರ್ಡ್-ಸಂದೇಶ ಲೇಬಲಿಂಗ್ ಮತ್ತು ಫಾರ್ವರ್ಡ್ ಮಿತಿಗಳ ಕುರಿತು ವಾಟ್ಸಾಪ್‌ನ ಸಾರ್ವಜನಿಕ ಹೇಳಿಕೆಗಳು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ