AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾದಚಾರಿ ಮಾರ್ಗ ಯಾರಿಗೆ ಸೇರಿದ್ದು? ಭಾರತದ ಫುಟ್‌ಪಾತ್ ಹಕ್ಕು, ಭದ್ರತೆ ಮತ್ತು ವ್ಯಾಪಾರಿಗಳ ಸಂಘರ್ಷ

Santosh Nair's article in 'Your India' series: ಭಾರತದ ಫುಟ್‌ಪಾತ್‌ಗಳು ಪಾದಚಾರಿಗಳು, ವಾಹನ ಪಾರ್ಕಿಂಗ್ ಮತ್ತು ಬೀದಿಬದಿ ವ್ಯಾಪಾರಿಗಳಿಂದಾಗಿ ದೈನಂದಿನ ಸಂಘರ್ಷದ ಸ್ಥಳಗಳಾಗಿವೆ. ಸುಪ್ರೀಂ ಕೋರ್ಟ್‌ನ ತೀರ್ಪುಗಳು ಪಾದಚಾರಿಗಳಿಗೆ ಸಂಚರಿಸುವ ಹಕ್ಕು ಮತ್ತು ವ್ಯಾಪಾರಿಗಳಿಗೆ ಜೀವನೋಪಾಯದ ಹಕ್ಕನ್ನು ಖಚಿತಪಡಿಸುತ್ತವೆ. ಆದರೆ, ಫುಟ್‌ಪಾತ್ ಬಳಕೆಗಾಗಿ ಸ್ಪಷ್ಟ ನಿಯಮಗಳಿಲ್ಲದಿರುವುದು ಅಪಾಯ ಮತ್ತು ಗೊಂದಲಗಳಿಗೆ ಕಾರಣವಾಗಿದೆ. ಈ ಸಮಸ್ಯೆಗೆ ಸಮಗ್ರ ಪರಿಹಾರ ಅಗತ್ಯ.

ಪಾದಚಾರಿ ಮಾರ್ಗ ಯಾರಿಗೆ ಸೇರಿದ್ದು? ಭಾರತದ ಫುಟ್‌ಪಾತ್ ಹಕ್ಕು, ಭದ್ರತೆ ಮತ್ತು ವ್ಯಾಪಾರಿಗಳ ಸಂಘರ್ಷ
ಫುಟ್‌ಪಾತ್‌Image Credit source: PTI
Santosh Nair
| Edited By: |

Updated on: Oct 07, 2026 | 3:37 PM

Share

ಒಂದು ದಿನ ಬೆಳಿಗ್ಗೆ ತಾಯಿಯೊಬ್ಬರು ತಮ್ಮ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗಬೇಕು. ಅವರ ಮನೆಯ ಹೊರಗಿನ ಫುಟ್‌ಪಾತ್ ಅರ್ಧದಷ್ಟು ಭಾಗವು ಕಾರೊಂದರ ಪಾರ್ಕಿಂಗ್‌ನಿಂದ ತುಂಬಿದೆ. ಹಾಗೂ ಇನ್ನರ್ಧದಷ್ಟು ಭಾಗವು ಹಣ್ಣಿನ ವ್ಯಾಪಾರಿಯ ತಳ್ಳುಗಾಡಿಯಿಂದ ಮುಚ್ಚಿಹೋಗಿದೆ. ಆ ತಾಯಿ ತನ್ನ ಮಗುವನ್ನು ಫುಟ್​ಪಾತ್ ಮೇಲೆ ಕರೆದುಕೊಂಡು ಹೋಗುವ ಅವಕಾಶ ಇಲ್ಲದೆ ರಸ್ತೆಯಲ್ಲಿ ಹೆಜ್ಜೆ ಹಾಕ ತೊಡಗುತ್ತಾರೆ. ಯಾವ ವಾಹನ ಎತ್ತ ಕಡೆಯಿಂದ ಬಂದು ಅಪ್ಪಳಿಸುತ್ತದೋ ಎನ್ನುವ ಹೆದರಿಕೆಯಲ್ಲಿ ಎಂದಿಗಿಂತ ಹೆಚ್ಚು ಬಿಗಿಯಾಗಿ ಮಗುವನ್ನು ಹಿಡಿದುಕೊಂಡು ಹೋಗುತ್ತಾರೆ.

ಇದು ಭಾರತದಾದ್ಯಂತ ಪ್ರತಿದಿನವೂ, ಪ್ರತಿಯೊಂದು ರಸ್ತೆಯಲ್ಲೂ ನಡೆಯುವ ಘಟನೆ. ಆದರೆ ಒಂದು ಸರಳವಾದ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ: ಆ ಫುಟ್‌ಪಾತ್ ನಿಜವಾಗಿಯೂ ಯಾರಿಗೆ ಸೇರಿದ್ದು?

ದೈನಂದಿನ ಜೀವನದಲ್ಲಿ ಇದು ಪ್ರತಿಫಲಿಸುವುದು ವಿರಳವಾದರೂ, ಕಾನೂನಾತ್ಮಕವಾಗಿ ಇದಕ್ಕೆ ಉತ್ತರ ಅತ್ಯಂತ ಸ್ಪಷ್ಟವಾಗಿದೆ.

1985ರಲ್ಲಿ ನಡೆದ ‘ಓಲ್ಗಾ ಟೆಲ್ಲಿಸ್ vs ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್’ ಪ್ರಕರಣದಲ್ಲಿ, ಸಂವಿಧಾನದ ವಿಧಿ 21ರ ಅಡಿಯಲ್ಲಿ ಸಿಗುವ ಜೀವನ ನಡೆಸುವ ಹಕ್ಕಿನಲ್ಲಿ (Right to Life) ಜೀವನಾಧಾರ ಕಂಡುಕೊಳ್ಳುವ ಹಕ್ಕೂ (Right to Livelihood) ಸೇರಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಏಕೆಂದರೆ ಯಾವುದೇ ವ್ಯಕ್ತಿ ಯಾವುದಾದರೂ ಸಂಪಾದನೆಯ ಮಾರ್ಗವಿಲ್ಲದೆ ಜೀವಿಸಲು ಸಾಧ್ಯವಿಲ್ಲ. ಆ ಪ್ರಕರಣವು ಬೀದಿಬದಿ ನಿವಾಸಿಗಳನ್ನು (pavement dwellers) ತೆರವುಗೊಳಿಸುವುದಕ್ಕೆ ಸಂಬಂಧಿಸಿದ್ದಾಗಿತ್ತು. ಸೂಕ್ತ ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ ಅವರನ್ನು ರಸ್ತೆಯಿಂದ ಹೊರಹಾಕುವಂತಿಲ್ಲ ಎಂದು ನ್ಯಾಯಾಲಯ ಹೇಳಿತು. ಆದರೆ, ಈ ಹಕ್ಕು ಸಂಪೂರ್ಣವೇನೂ ಅಲ್ಲ ಎಂಬುದನ್ನೂ ಕೋರ್ಟ್ ಸ್ಪಷ್ಟಪಡಿಸಿತ್ತು. ಪಾದಚಾರಿ ಮಾರ್ಗವು ಸಾರ್ವಜನಿಕ ಸ್ಥಳವಾಗಿದ್ದು, ಸಾರ್ವಜನಿಕ ಉದ್ದೇಶಕ್ಕಾಗಿಯೇ ಮೀಸಲಾಗಿದೆ; ಹಾಗಾಗಿ ಅದರ ಯಾವುದೇ ಬಳಕೆ ಆ ಉದ್ದೇಶಕ್ಕೆ ಬದ್ಧವಾಗಿರಬೇಕು.

ಇದನ್ನೂ ಓದಿ: ಮನೆ ಮುಂಭಾಗದ ರಸ್ತೆಗುಂಡಿಗೆ ನಿಜವಾಗಿ ಯಾರು ಹೊಣೆ? ಯಾರೋ ಒಬ್ಬರಿಗೆ ಶಪಿಸುವ ಮುನ್ನ ಈ ವಿಚಾರಗಳನ್ನು ತಿಳಿದಿರಿ

ಇತ್ತೀಚೆಗೆ 2026ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಇನ್ನಷ್ಟು ಮುಂದುವರಿಯಿತು. ಸುರಕ್ಷಿತವಾದ, ಮತ್ತು ಸ್ಪಷ್ಟವಾಗಿ ಗುರುತಿಸಲಾದ ಫುಟ್‌ಪಾತ್ ಮೇಲೆ ನಡೆಯುವುದು ಸಂವಿಧಾನದ ವಿಧಿ 19 (ಸಂಚಾರ ಸ್ವಾತಂತ್ರ್ಯ) ಹಾಗೂ ವಿಧಿ 21ರ (ಜೀವಿಸುವ ಹಕ್ಕು) ಅಡಿಯಲ್ಲಿ ರಕ್ಷಿಸಲ್ಪಟ್ಟಿರುವ ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿತು. ಇದರ ಬೆನ್ನಲ್ಲೇ ಸರ್ಕಾರವು ‘ಭಾರತ ಜನಪಥ್ ಯೋಜನೆ’ ಎಂದು ಹೆಸರುವಾಸಿಯಾಗಿರುವ ರಾಷ್ಟ್ರೀಯ ಅಭಿಯಾನ ಶುರು ಮಾಡಿತು. ದೇಶದ ನೂರು ನಗರಗಳಲ್ಲಿ ಸುಮಾರು ಹತ್ತು ಸಾವಿರ ಕಿಲೋಮೀಟರ್‌ಗಳಷ್ಟು ಸುಸಜ್ಜಿತ, ಸಂಪರ್ಕಿತ ಮತ್ತು ಸುಲಭವಾಗಿ ನಡೆಯಬಹುದಾದ ಪಾದಚಾರಿ ಹಾದಿಗಳನ್ನು ನಿರ್ಮಿಸುವುದು ಇದರ ಗುರಿಯಾಗಿತ್ತು.

ಹೀಗಾಗಿ, ಒಂದು ಕಡೆ ಸಂವಿಧಾನವು ಸುರಕ್ಷಿತವಾಗಿ ನಡೆಯುವ ಪ್ರಜೆಯ ಹಕ್ಕನ್ನು ರಕ್ಷಿಸುತ್ತದೆ. ಇನ್ನೊಂದು ಕಡೆ, 2014ರ ಬೀದಿ ಬದಿ ವ್ಯಾಪಾರಿಗಳ ಕಾಯ್ದೆಯಡಿ (Street Vendors Act, 2014) ಗುರುತಿಸಲಾದ ವ್ಯಾಪಾರಿಯ ಜೀವನಾಧಾರದ ಹಕ್ಕನ್ನೂ ಅದು ರಕ್ಷಿಸುತ್ತದೆ. ಈ ಕಾಯ್ದೆಯು, ವ್ಯಾಪಾರಿಗಳ ಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ಸಮಿತಿಗಳು ನಿರ್ಧರಿಸಿದ ನಿರ್ದಿಷ್ಟ ವಲಯಗಳಲ್ಲಿ ವ್ಯಾಪಾರ ಮಾಡಲು ನೋಂದಾಯಿತ ವ್ಯಾಪಾರಿಗಳಿಗೆ ಕಾನೂನುಬದ್ಧ ಹಕ್ಕನ್ನು ನೀಡುತ್ತದೆ.

ಈ ಎರಡೂ ಹಕ್ಕುಗಳು ನೈಜ ಮತ್ತು ನ್ಯಾಯಸಮ್ಮತವಾದವು. ಇದರಲ್ಲಿ ಯಾವುದೇ ಒಂದು ಕಡೆಯದ್ದು ಸಂಪೂರ್ಣ ತಪ್ಪು ಎಂದು ಹೇಳಲಾಗುವುದಿಲ್ಲ.

ಭಾರತದ ಬಹುತೇಕ ನಗರಗಳಲ್ಲಿ ಎದುರಾಗಿರುವ ನೈಜ ಸಮಸ್ಯೆಯೆಂದರೆ, ಫುಟ್‌ಪಾತ್‌ಗೆ ಹಕ್ಕುದಾರರು ಹೆಚ್ಚಾಗಿದ್ದಾರೆ ಎಂದಲ್ಲ. ಬದಲಿಗೆ, ಫುಟ್‌ಪಾತ್‌ನ ಎಷ್ಟು ಭಾಗ ನಡೆದಾಡಲು, ಎಷ್ಟು ಭಾಗ ವ್ಯಾಪಾರಕ್ಕೆ ಮತ್ತು ಎಷ್ಟು ಭಾಗ ಕಾರು ಪಾರ್ಕಿಂಗ್‌ಗೆ (ಇದ್ದರೆ) ಸೇರಿದ್ದು ಎಂಬುದನ್ನು ಯಾರೂ ಸ್ಪಷ್ಟವಾಗಿ ನಿರ್ಧರಿಸದಿರುವುದೇ ಮೂಲ ಕಾರಣ. ಅಂತಹ ಸ್ಪಷ್ಟ ನಿರ್ಧಾರವಿಲ್ಲದೆ ಮತ್ತು ಅದನ್ನು ಸತತವಾಗಿ ಜಾರಿಗೊಳಿಸದೆ ಇದ್ದಾಗ, ಪ್ರತಿಯೊಬ್ಬರೂ ಅದೇ ಮೂರು ಅಡಿ ಜಾಗಕ್ಕಾಗಿ ಅನೌಪಚಾರಿಕವಾಗಿ ಸ್ಪರ್ಧಿಸಬೇಕಾಗುತ್ತದೆ; ಕೊನೆಗೆ ಹಾರ್ನ್ ಮಾಡಲು, ಜಗಳವಾಡಲು ಅಥವಾ ಲೈಸೆನ್ಸ್ ತೋರಿಸಲು ಸಾಧ್ಯವಾಗದ ಪಾದಚಾರಿಗಳೇ ಮೊದಲು ಸೋಲುತ್ತಾರೆ.

ಹಿರಿಯ ನಾಗರಿಕರು, ದೃಷ್ಟಿಹೀನರು ಅಥವಾ ಸಣ್ಣ ಮಗುವಿನೊಂದಿಗೆ ನಡೆಯುವವರಿಗೆ ಇದರ ಪರಿಣಾಮ ಏನಾಗಬಹುದು ಎಂಬುದನ್ನು ಯೋಚಿಸಿ. ಹೆಚ್ಚಿನ ಜನರಿಗೆ ಅಡೆತಡೆಗಳನ್ನು ದಾಟಲು ರಸ್ತೆಗೆ ಇಳಿಯುವುದು ಕಿರಿಕಿರಿಯಷ್ಟೇ ಅನಿಸಬಹುದು; ಆದರೆ ಇಂತವರಿಗೆ ಅದು ನಿಜಕ್ಕೂ ಅಪಾಯಕಾರಿ.

ಈ ಎಲ್ಲದರ ನಡುವೆ ಮುಚ್ಚಿದಂತಿರುವ ಒಂದು ವಿಪರ್ಯಾಸ ಗಮನಿಸಬಹುದು. ಭಾರತವು ಅಸಾಧಾರಣ ವೇಗದಲ್ಲಿ ಹೆದ್ದಾರಿಗಳು, ಫ್ಲೈಓವರ್‌ಗಳು ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸುತ್ತಿದೆ. ಪ್ರತಿ ವರ್ಷ ನಿರ್ಮಾಣವಾಗುವ ರಸ್ತೆಯ ಉದ್ದದಲ್ಲಿ ಇದು ವಿಶ್ವದಲ್ಲೇ ಅತಿ ವೇಗದ ನಿರ್ಮಾಣಗಳಲ್ಲಿ ಒಂದಾಗಿದೆ. ಆದರೆ, ಪ್ರತಿಯೊಬ್ಬ ಭಾರತೀಯನೂ ತನ್ನ ದೈನಂದಿನ ಜೀವನದಲ್ಲಿ ಯಾವುದೋ ಒಂದು ಹಂತದಲ್ಲಿ ಬಳಸುವ ಸಾಮಾನ್ಯ ಫುಟ್‌ಪಾತ್ ಮಾತ್ರ, ದೇಶದಲ್ಲೇ ಅತ್ಯಂತ ನಿರ್ಲಕ್ಷಿತ ಹಾಗೂ ವಿವಾದಾಸ್ಪದ ಸಾರ್ವಜನಿಕ ಮೂಲಸೌಕರ್ಯವಾಗಿ ಉಳಿದುಹೋಗಿದೆ.

ಇದನ್ನೂ ಓದಿ: ಬೀದಿ ದೀಪ ಕೆಟ್ಟರೆ ಯಾರು ಸರಿಪಡಿಸಬೇಕು? ಯಾರಿಗೆ ದೂರು ಕೊಡಬೇಕು? ಮೂರು ಹಂತಗಳ ಆಡಳಿತ ವ್ಯವಸ್ಥೆ ತಿಳಿದಿರಿ

ಕೆಲವು ನಗರಗಳು ಫುಟ್‌ಪಾತ್‌ಗಳನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿವೆ. ನಡೆದಾಡಲು ಬಳಸಬಹುದಾದ ಹಾದಿಯ ಅಗಲವನ್ನು ಮ್ಯಾಪ್ ಮಾಡುವುದು, ವ್ಯಾಪಾರ ಜಾಗವನ್ನು ಅಧಿಕೃತವಾಗಿ ಹಂಚಿಕೆ ಮಾಡುವುದು ಮತ್ತು ಪಾರ್ಕಿಂಗ್ ಜಾಗವನ್ನು ಪಾದಚಾರಿ ಹಾದಿಯಿಂದ ಸಂಪೂರ್ಣವಾಗಿ ದೂರವಿಡುವ ಕೆಲಸ ಮಾಡುತ್ತಿವೆ. ಇದನ್ನು ಸರಿಯಾಗಿ ಪ್ರಯತ್ನಿಸಿದ ಕಡೆಗಳಲ್ಲಿ ಪಾದಚಾರಿಗಳು ಮತ್ತು ವ್ಯಾಪಾರಿಗಳಿಬ್ಬರಿಗೂ ಅನುಕೂಲವೇ ಆಗಿದೆ ಹೊರತು ನಷ್ಟವಾಗಿಲ್ಲ; ಏಕೆಂದರೆ ಸ್ಪಷ್ಟತೆಯು ಸಂಘರ್ಷವನ್ನು ಸೃಷ್ಟಿಸುವ ಬದಲು ಕಡಿಮೆ ಮಾಡುತ್ತದೆ.

ಇದು ಜೀವನಾಧಾರಕ್ಕಾಗಿ ಯತ್ನಿಸುತ್ತಿರುವ ವ್ಯಾಪಾರಿಯನ್ನಾಗಲಿ ಅಥವಾ ಪಾರ್ಕಿಂಗ್ ಜಾಗ ಹುಡುಕುತ್ತಿರುವ ಚಾಲಕನನ್ನಾಗಲಿ ದೂಷಿಸುವ ವಿಚಾರವಲ್ಲ. ಇದು ಕಾನೂನಾತ್ಮಕವಾಗಿ ಎಲ್ಲರಿಗೂ ಸೇರಬೇಕಾದ, ಆದರೆ ಪ್ರಾಯೋಗಿಕವಾಗಿ ಪ್ರತಿದಿನ ಬೆಳಿಗ್ಗೆ ಯಾರು ಮೊದಲು ವಶಪಡಿಸಿಕೊಳ್ಳುತ್ತಾರೋ ಅವರಿಗೆ ಸೇರಿಹೋಗುವ ಸಾರ್ವಜನಿಕ ಸ್ಥಳದ ಕುರಿತಾದ ವಿಷಯವಾಗಿದೆ.

ಮುಂದಿನ ಬಾರಿ ನೀವು ಫುಟ್‌ಪಾತ್ ಬಿಟ್ಟು ವಾಹನ ದಟ್ಟಣೆಯ ರಸ್ತೆಗೆ ಇಳಿಯುವಾಗ, ‘ನಿಮ್ಮ ದಾರಿಗೆ ಯಾರು ಅಡ್ಡ ಬಂದಿದ್ದಾರೆ’ ಎಂದು ಯೋಚಿಸುವುದಕ್ಕಿಂತಲೂ ಮೌನವಾಗಿ ಈ ಪ್ರಶ್ನೆಯನ್ನು ಕೇಳಿಕೊಳ್ಳಿ: “ನನ್ನ ನಗರದಲ್ಲಿ, ಈ ಫುಟ್‌ಪಾತ್ ಯಾರಿಗೆ ಮೀಸಲಾಗಿದೆಯೋ ಅವರೆಲ್ಲರಿಗೂ ಸರಿಯಾಗಿ ತಲುಪುವಂತೆ ಮಾಡಲು ಇಂದಿಗೂ ಯಾಕೆ ಸಾಧ್ಯವಾಗಿಲ್ಲ?”

ಆಧಾರಗಳು: ಓಲ್ಗಾ ಟೆಲ್ಲಿಸ್ ಮತ್ತು ಇತರರು ವಿರುದ್ಧ ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್, ಭಾರತದ ಸರ್ವೋಚ್ಚ ನ್ಯಾಯಾಲಯ, 1985; ಭಾರತದ ಸರ್ವೋಚ್ಚ ನ್ಯಾಯಾಲಯದ 2026ರ ತೀರ್ಪು (ಸಂವಿಧಾನದ ವಿಧಿ 19(1)(d) ಮತ್ತು 21ರ ಅಡಿಯಲ್ಲಿ ಪಾದಚಾರಿಗಳ ಸುರಕ್ಷತೆಯನ್ನು ಮೂಲಭೂತ ಹಕ್ಕು ಎಂದು ಗುರುತಿಸಿರುವುದು); ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಕಾಯ್ದೆ, 2014; ಭಾರತದ “ನಡೆಯುವ ಹಕ್ಕು” (Right to Walk) ಸುಧಾರಣೆಯ ಕುರಿತು ‘ಇನ್‌ಸ್ಟಿಟ್ಯೂಟ್ ಫಾರ್ ಟ್ರಾನ್ಸ್‌ಪೋರ್ಟೇಶನ್ ಅಂಡ್ ಡೆವಲಪ್‌ಮೆಂಟ್ ಪಾಲಿಸಿ’ (ITDP) ವರದಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Santosh Nair
Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!