ಕಾಲ ಮೊದಲಿನಂತೆ ಇಲ್ಲ. ಗಂಡು ಮಗುವೇ ಬೇಕೆಂಬ ಬಯಕೆ ಸ್ವಲ್ಪ ದೂರವಾಗುತ್ತಿದೆ. ಹೆಣ್ಣು ಮಗು ಹುಟ್ಟಿದರೆ ಮನಸ್ಪೂರ್ತಿಯಾಗಿ ಸಂಭ್ರಮಿಸುವ ಜನರು ಹೆಚ್ಚಾಗುತ್ತಿದ್ದಾರೆ. ಹೀಗೆ ಪುಣೆಯಲ್ಲೊಬ್ಬರು ರೈತ ತನಗೆ ಹೆಣ್ಣು ಮೊಮ್ಮಗು ಹುಟ್ಟಿತು ಎಂಬ ಸಂತೋಷಕ್ಕೆ ಸಿಕ್ಕಾಪಟೆ ಖುಷಿಗೊಂಡು, ಆಕೆಯನ್ನು ಕರೆದುಕೊಂಡು ಬರಲು ಒಂದು ಹೆಲಿಕಾಪ್ಟರ್ನ್ನೇ ಬಾಡಿಗೆಗೆ ಪಡೆದಿದ್ದಾರೆ. ಹೆಲಿಕಾಪ್ಟರ್ ಬಾಡಿಗೆ ಪಡೆದವರು, ಬಾಳೆವಾಡಿ ಪ್ರದೇಶದ ನಿವಾಸಿ ಅಜಿತ್ ಪಾಂಡುರಂಗ ಬಾಲ್ವಾಡ್ಕರ್ ಎಂಬುವರು. ಸೊಸೆಗೆ ಹೆಣ್ಣು ಮಗು ಹುಟ್ಟಿತು ಎಂಬುದನ್ನು ಸಂಭ್ರಮಿಸುತ್ತಿರುವ ಇವರೀಗ ಮೊಮ್ಮಗಳನ್ನು ಮನೆಗೆ ಬರಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಸದ್ಯ ಸೊಸೆ ತನ್ನ ಮಗುವೊಂದಿಗೆ ತವರು ಮನೆಯಾದ ಶೇವಲ್ ವಾಡಿಯಲ್ಲಿ ಇದ್ದು, ಅವರಿಬ್ಬರನ್ನೂ ಹೆಲಿಕಾಪ್ಟರ್ನಲ್ಲಿ ಕರೆದುಕೊಂಡು ಬರಬೇಕು ಎಂಬುದು ಅಜಿತ್ ಪಾಂಡುರಂಗ ಅವರ ಆಸೆ. ಹೀಗಾಗಿ ಈಗಾಗಲೇ ಹೆಲಿಕಾಪ್ಟರ್ ಬಾಡಿಗೆ ಪಡೆದು ಸಿದ್ಧವಾಗಿಟ್ಟುಕೊಂಡಿದ್ದಾರೆ.
ಸ್ವಲ್ಪ ದಿನಗಳ ಹಿಂದೆ ಪುಣೆಯಲ್ಲಿ ದಂಪತಿಯೊಬ್ಬರು ಹೀಗೆ ಮಾಡಿದ್ದರು. ತಮ್ಮ ನವಜಾತ ಹೆಣ್ಣುಮಗುವನ್ನು ಹೆಲಿಕಾಪ್ಟರ್ ಮೂಲಕವೇ ಮನೆಗೆ ಕರೆದುಕೊಂಡು ಹೋಗಿ ಸುದ್ದಿ ಮಾಡಿದ್ದರು. ಈ ಫೋಟೋ, ವಿಡಿಯೋಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದವು. ನಮ್ಮ ಕುಟುಂಬದಲ್ಲಿ ಹುಟ್ಟುತ್ತಿರುವ ಮೊದಲ ಹೆಣ್ಣು ಮಗು ಇದು. ಹೀಗಾಗಿ ಆಕೆಯನ್ನು ತುಂಬ ವಿಶೇಷ ರೀತಿಯಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ಸುಮಾರು 1 ಲಕ್ಷ ರೂಪಾಯಿ ಕೊಟ್ಟು ಚಾಪರ್ ಸಿದ್ಧಗೊಳಿಸಿದ್ದೇವೆ ಎಂದು ಹೆಣ್ಣು ಮಗುವಿನ ತಂದೆ ವಿಶಾಲ್ ಜಾರೇಕರ್ ತಿಳಿಸಿದ್ದರು.
ಇದನ್ನೂ ಓದಿ: ತುಮಕೂರಿನಲ್ಲಿ ದಲಿತರ ಬೀದಿಗೆ ದೇವರನ್ನ ಕಳುಹಿಸಲು ಹಿಂದೇಟು! ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ
Published On - 10:59 am, Wed, 27 April 22