ತೇರು ಎಳೆಯುವಾಗ ವಿದ್ಯುತ್ ಸ್ಪರ್ಶ: ಇಬ್ಬರು ಮಕ್ಕಳು ಸೇರಿ 11 ಮಂದಿ ಸಾವು
ತೇರು ಎಳೆಯುವಾಗ ವಿದ್ಯುತ್ ತಂತಿ ಸ್ಪರ್ಶವಾಗಿ ಇಬ್ಬರು ಮಕ್ಕಳು ಸೇರಿ 10 ಮಂದಿ ಸಾವನ್ನಪ್ಪಿರುವ ಘಟನೆ ತಂಜಾವೂರು ಜಿಲ್ಲೆಯ ಕಲಿಮೇಡು ಗ್ರಾಮದಲ್ಲಿ ಸಂಭವಿಸಿದೆ.
ಚೆನ್ನೈ: ತೇರು ಎಳೆಯುವಾಗ ವಿದ್ಯುತ್ ತಂತಿ ಸ್ಪರ್ಶವಾಗಿ ಇಬ್ಬರು ಮಕ್ಕಳು ಸೇರಿ 10 ಮಂದಿ ಸಾವನ್ನಪ್ಪಿರುವ ಘಟನೆ ತಂಜಾವೂರು ಜಿಲ್ಲೆಯ ಕಲಿಮೇಡು ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಅಪ್ಪರ್ ಸ್ವಾಮಿ ದೇವಸ್ಥಾನದ ತೇರು ಹೈಟೆನ್ಶನ್ ವೈರ್ಗೆ ತಗುಲಿದ್ದರಿಂದ ದುರಂತ ಸಂಭವಿಸಿದೆ. ದುರಂತದಲ್ಲಿ 15 ಮಂದಿಗೆ ತೀವ್ರ ಗಾಯಗಳಾಗಿವೆ. ಘಟನೆಯಲ್ಲಿ ಗಾಯಗೊಂಡ ಸುಮಾರು 50 ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರ್ಘಟನೆ ನಡೆದಾಗ ಸ್ಥಳದಲ್ಲೇ ನಾಲ್ವರು ಭಕ್ತರ ಸಾವನ್ನಪ್ಪಿದ, ಆಸ್ಪತ್ರೆಗಳಲ್ಲಿ ಏಳು ಮಂದಿ ಮೃತಪಟ್ಟರು.
ಮೃತರ ಕುಟುಂಬಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಗಳಿಗೆ ಅತ್ಯುತ್ತಮ ಚಿಕಿತ್ಸೆ ಸಿಗುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಪ್ಪರ್ ಗುರುಪೂಜೆಗಾಗಿ (ಅಯ್ಯಪ್ಪ ಉತ್ಸವ) ದೊಡ್ಡ ಗುಂಪು ನೆರೆದಿತ್ತು. ತಮಿಳುನಾಡಿನ ಶೈವ ಸಂತ ತಿರುನವುಕ್ಕರಸರ್ ಅವರ ಸ್ಮರಣಾರ್ಥ ನಡೆಯುತ್ತಿದ್ದ ಉತ್ಸವದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಈ ಪ್ರದೇಶದಲ್ಲಿ ಕಳೆದ 90 ವರ್ಷಗಳಿಂದ ಸಕ್ರಿಯವಾಗಿರುವ ಭಜನಾ ಮಂಡಲಿಯನ್ನು ತಿರುನವುಕ್ಕರಸರ್ ಆರಂಭಿಸಿದ್ದರು. ನಸುಕಿನ 3 ಗಂಟೆ ಸುಮಾರಿಗೆ ತೇರು ಕಲಿಮೇಡು ಸಮೀಪದ ತಂಜಾವೂರು-ಪುತಲೂರು ರಸ್ತೆಯ ತಿರುವಿನಲ್ಲಿ ತಿರುಗಿದಾಗ ವಿದ್ಯುತ್ ಕಂಬಕ್ಕೆ ಬಡಿದು, ವಿದ್ಯುತ್ ತಂತಿ ಸ್ಪರ್ಶಿಸಿತು. ಈ ವೇಳೆ ತೇರಿಗೆ ವಿದ್ಯುತ್ ಹರಿದು, ಭಕ್ತರು ಮೃತಪಟ್ಟರು.
ತೇರಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ ತಕ್ಷಣ ಸಾಕಷ್ಟು ಜನರು ರಸ್ತೆಯಿಂದ ತಕ್ಷಣ ಹಿಮ್ಮೆಟ್ಟಿದರು. ಈ ವೇಳೆ ರಸ್ತೆಯಲ್ಲಿ ನೀರು ನಿಂತಿತ್ತು. ಜನರು ರಸ್ತೆಯಿಂದ ಸಕಾಲದಲ್ಲಿ ಹಿಮ್ಮೆಟ್ಟದಿದ್ದರೆ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿ, ತಕ್ಷಣ ತಂಜಾವೂರು ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದರು. ಈ ಪೈಕಿ ನಾಲ್ವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ವಿದ್ಯುತ್ ತಂತಿಗಳನ್ನು ಸ್ಪರ್ಶಿಸುವಷ್ಟು ಎತ್ತರದಲ್ಲಿ ತೇರು ಇರಲಿಲ್ಲ. ಹೀಗಾಗಿ ಈ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಿರಲಿಲ್ಲ. ಆದರೆ ತೇರಿನ ಅಲಂಕಾರಕ್ಕಾಗಿ ಅಳವಡಿಸಿದ್ದ ವಸ್ತುಗಳಿಂದಾಗಿ ತೇರಿನ ಎತ್ತರ ಹೆಚ್ಚಾಗಿತ್ತು. ಹೀಗಾಗಿಯೇ ತೇರಿಗೆ ವಿದ್ಯುತ್ ಸ್ಪರ್ಶವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
Tamil Nadu | At least 10 people died after a temple car (of chariot festival) came in contact with a live wire in the Thanjavur district. More details are awaited. pic.twitter.com/clhjADE6J3
— ANI (@ANI) April 27, 2022
ಇದನ್ನೂ ಓದಿ: CUET ತಮಿಳುನಾಡು ವಿಧಾನಸಭೆಯಲ್ಲಿ ಸಿಯುಇಟಿ ವಿರುದ್ಧ ನಿರ್ಣಯ ಅಂಗೀಕಾರ
ಇದನ್ನೂ ಓದಿ: ತಮಿಳುನಾಡು ನವದಂಪತಿಗೆ ವಿವಾಹ ಮಂಟಪದಲ್ಲಿ ಪೆಟ್ರೋಲ್ ಡೀಸೆಲ್ ಕೊಡುಗೆ
Published On - 8:46 am, Wed, 27 April 22