Stop Food Waste Day 2022: ದಯವಿಟ್ಟು ಆಹಾರ ಪೋಲು ಮಾಡಬೇಡಿ; ಈ ಸಿಂಪಲ್​ ವಿಧಾನಗಳ ಮೂಲಕ ಫುಡ್​ ವೇಸ್ಟ್​ ತಡೆಯಿರಿ

Stop Food Waste Day 2022: ದಯವಿಟ್ಟು ಆಹಾರ ಪೋಲು ಮಾಡಬೇಡಿ; ಈ ಸಿಂಪಲ್​ ವಿಧಾನಗಳ ಮೂಲಕ ಫುಡ್​ ವೇಸ್ಟ್​ ತಡೆಯಿರಿ
ಸಾಂಕೇತಿಕ ಚಿತ್ರ

ಮಾರುಕಟ್ಟೆಯಿಂದ ಬೇಕಾಗಿದ್ದನ್ನೆಲ್ಲ ತಂದು, ಅದನ್ನು ಸರಿಯಾಗಿ ಸಂರಕ್ಷಿಸಿ ಇಟ್ಟುಕೊಳ್ಳದೆ ಹೋದರೆ ಖಂಡಿತ ಹಾಳಾಗುತ್ತದೆ. ಸಿಕ್ಕಿದ್ದನ್ನೆಲ್ಲ ಫ್ರಿಜ್​​ನಲ್ಲಿ ತುರುಕಿ ಇಡುವುದು ಸರಿಯಲ್ಲ.

TV9kannada Web Team

| Edited By: Lakshmi Hegde

Apr 27, 2022 | 8:40 AM

ಇಂದು ಆಹಾರ ಪೋಲು ತಡೆ ದಿನ (Stop Food Waste Day). ಇದೊಂದು ಅಂತಾರಾಷ್ಟ್ರೀಯ ದಿನಾಚರಣೆಯಾಗಿದ್ದು, 2017ರಿಂದ ಪ್ರತಿವರ್ಷ ಈ ದಿನ ಆಚರಿಸಲಾಗುತ್ತದೆ. ಅಂದಹಾಗೇ ಮೊಟ್ಟಮೊದಲು 2017ರಲ್ಲಿ ಇದನ್ನು ಪ್ರಾರಂಭಿಸಿದ್ದು ಕಂಪಾಸ್​ ಗ್ರೂಪ್​. ಇದೊಂದು ಬ್ರಿಟಿಷ್ ಬಹುರಾಷ್ಟ್ರೀಯ ಒಪ್ಪಂದದ ಆಹಾರ ಸೇವಾ ಕಂಪನಿಯಾಗಿದ್ದು, ಪ್ರಧಾನ ಕಚೇರಿ ಇಂಗ್ಲೆಂಡ್​​ನ ಚೆರ್ಟ್ಸೆಯಲ್ಲಿದೆ. ಆಹಾರಗಳು ವ್ಯರ್ಥವಾಗುವುದನ್ನು ತಡೆಯುವ ಉದ್ದೇಶವನ್ನಿಟ್ಟುಕೊಂಡು, ಜನರಲ್ಲಿ ಆಹಾರ ಪೋಲು ಮಾಡಬಾರದು ಎಂಬ ಅರಿವು ಮೂಡಿಸುವ ಸಲುವಾಗಿ ಶುರುವಾದ ಆಚರಣೆ ಇದಾಗಿದೆ. ಈ ಕಂಪಾಸ್​ ಗ್ರೂಪ್​​, ತಮ್ಮಲ್ಲಿ ಕೆಲಸ ಮಾಡುವ ಎಲ್ಲ ಚೆಫ್​​ಗಳಿಗೂ ಮೊದಲು ಕಲಿಸುವುದೇ ಆಹಾರ ಪೋಲು ತಡೆಯುವ ಮಾರ್ಗಗಳನ್ನು. ಇದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾದದ್ದು.

ಸಾಮಾನ್ಯವಾಗಿ ನಿತ್ಯದ ಜೀವನದಲ್ಲಿ ನಮಗೆ ಇದರ ಬಗ್ಗೆ ಕಲ್ಪನೆಯೇ ಇರುವುದಿಲ್ಲ. ಒಂದು ಕಡೆ ತಿನ್ನಲು ಏನೇನೂ ಸಿಗದೆ ಪರಿತಪಿಸುವ ಜನರು, ಬೇಡುವ ಮಂದಿಯನ್ನು ನೋಡುತ್ತೇವೆ. ಇನ್ನೊಂದೆಡೆ ತಟ್ಟೆತುಂಬ ಆಹಾರ ಹಾಕಿಕೊಂಡು ಚೆಲ್ಲುವವರನ್ನು ನೋಡುತ್ತೇವೆ. ದೊಡ್ಡದೊಡ್ಡ ಸಮಾರಂಭ, ಮದುವೆಗಳಲ್ಲಿ ಸಿಕ್ಕಾಪಟೆ ಅಡುಗೆ ಮಾಡಿ ಕೊನೆಗೆ ಅದು ಹೆಚ್ಚಾಯಿತೆಂದು ಪೋಲು ಮಾಡುವುದೆಲ್ಲ ಸಾಮಾನ್ಯವಾಗಿಬಿಟ್ಟಿದೆ. ಆದರೆ ಹೀಗೆ ಆಹಾರ ಪೋಲು ಮಾಡುವುದು ಸರಿಯಲ್ಲ. ಆಹಾರ ಕೊರತೆ ಎಂಬುದೊಂದು ಸ್ಥಿತಿ ಬಂದರೆ ತಿನ್ನಲು ಅದೆಷ್ಟು ಕಷ್ಟಪಡಬೇಕು ಎಂಬ ಅರಿವು ಆಗುತ್ತದೆ. ಹಾಗಾಗಿಯೇ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅಷ್ಟಕ್ಕೂ ಆಹಾರ ಪೋಲು ತಡೆಯಲು ಏನೆಲ್ಲ ಮಾಡಬಹುದು? ಇಲ್ಲಿದೆ ನೋಡಿ ಕೆಲವು ಮಾರ್ಗಗಳು.

1. ಅನಗತ್ಯ ಖರೀದಿ ಬೇಡ

ಇಲ್ಲಿ ಆಹಾರ ಪೋಲು ಅಂದರೆ ತಯಾರಿಸಿದ ತಿಂಡಿ ತಿನಿಸುಗಳನ್ನು ಚೆಲ್ಲುವುದು ಮಾತ್ರವಲ್ಲ.  ಬೇಳೆ, ಕಾಳು, ತರಕಾರಿ ಸೇರಿ ಅಡುಗೆಗೆ ಬೇಕಾದ ಪದಾರ್ಥಗಳನ್ನು ಕೊಂಡು ಅದನ್ನು ಸುಮ್ಮನೆ ವ್ಯರ್ಥಗೊಳಿಸುವುದೂ ಸೇರುತ್ತದೆ. ಕೆಲವರು ಕಿರಾಣಿ ಸಾಮಗ್ರಿಗಳು, ಪದಾರ್ಥಗಳನ್ನು ಖರೀದಿಸಲು ಹೋಗುತ್ತಾರೆ. ಬೇಕೋ ಬೇಡವೋ ಒಂದಷ್ಟನ್ನು ಕೊಂಡುಬಿಡುತ್ತಾರೆ. ಅದೊಂದಿರಲಿ, ಇದೊಂದು ಬೇಕಾಗಬಹುದು ಎಂದು ಯೋಚಿಸಿ ಅನಗತ್ಯವಾಗಿ ಖರೀದಿ ಮಾಡುತ್ತಾರೆ. ಆದರೆ ಹೀಗೆ ಮಾಡಬಾರದು. ಕರೆಕ್ಟ್​ ಆಗಿ ಒಂದು ಪ್ಲ್ಯಾನ್​ ಮಾಡಿಕೊಳ್ಳಬೇಕು. ಸದ್ಯ ನಮಗೆಷ್ಟು ಅಗತ್ಯವಿದೆ? ಏನೆಲ್ಲ ಬೇಕು ಎಂಬುದನ್ನು ಸರಿಯಾಗಿ ಲಿಸ್ಟ್​ ಮಾಡಿಕೊಂಡು ಅದರಂತೆ ಖರೀದಿ ಮಾಡಿ. ಆಗ ಸುಮ್ಮನೆ ತಂದು ಮನೆಯಲ್ಲಿ ಹಾಳು ಮಾಡುವುದು ತಪ್ಪುತ್ತದೆ. ಆ ಸಾಮಗ್ರಿಗಳು ವೇಸ್ಟ್ ಆಗದ ಜತೆಗೆ ನಿಮ್ಮ ಹಣ ಪೋಲಾಗುವುದೂ ತಪ್ಪುತ್ತದೆ. ಯಾಕೆಂದರೆ ಜಾಸ್ತಿ ಜಾಸ್ತಿ ತಂದು ಮನೆಯಲ್ಲಿ ತುಂಬ ಇಟ್ಟರೂ ಅದು ಇಟ್ಟಲ್ಲೇ ಹುಳ ಹಿಡಿದು ಹಾಳಾಗುತ್ತದೆ. ಅಲ್ಲಿಗೆ ಪೋಲಾದಂತೆ. ಇನ್ನು ಆಹಾರ ತಯಾರಿಸುವಾಗ, ಆನ್​ಲೈನ್​ನಲ್ಲಿ ಆರ್ಡರ್ ಮಾಡುವಾಗ ಅಥವಾ ಹೋಟೆಲ್​​ಗಳಿಗೆ ಹೋಗಿ ತಿನ್ನುವಾಗಲೂ ಅಷ್ಟೇ, ಅಗತ್ಯವಿರುವಷ್ಟೇ ತಯಾರಿಸಬೇಕು/ ಖರೀದಿಸಬೇಕು.

2. ಆಹಾರವನ್ನು ಸರಿಯಾಗಿ ಸುರಕ್ಷಿತಗೊಳಿಸಿ

ಆಹಾರ ತಯಾರಿಸುವ ಜತೆಗೆ ಅದನ್ನು ಹಾಳಾಗದಂತೆ ಕಾಪಾಡಿಕೊಂಡರೆ ಫುಡ್​ ವೇಸ್ಟ್ ಮಾಡುವುದನ್ನು ತಡೆಯಬಹುದು. ಬೇಯಿಸಿಟ್ಟ ತರಕಾರಿಗಳು ಜಾಸ್ತಿಯಾದರೆ ಫ್ರಿಜ್​​ನಲ್ಲಿ ಏರ್​ಟೈಟ್​ ಕಂಟೇನರ್​ನಲ್ಲಿ ಹಾಕಿಡಿ. ಹೇಗೆಂದರೆ ಹಾಗಿಟ್ಟರೆ ಅದು ಹಾಳಾಗುತ್ತದೆ. ಫ್ರಿಜ್​​ನಲ್ಲಿ ತರಕಾರಿ, ಹಣ್ಣು ಗಳನ್ನೆಲ್ಲ ಇಡುವಾಗ, ಮೊದಲು ಖರೀದಿಸಿದ್ದನ್ನು ಮುಂದೆ ಇಟ್ಟುಕೊಳ್ಳಿ. ಆಗ ಮೊದಲು ಕೊಂಡಿದ್ದು ಬೇಗ ಖಾಲಿಯಾಗುತ್ತದೆ. ಅವು ಕೊಳೆತು ಹಾಳಾಗುವುದು ತಪ್ಪುತ್ತದೆ. ಹಾಗೇ, ಕಳೆದ ರಾತ್ರಿ ಮಾಡಿದ ಅನ್ನ, ಚಪಾತಿ, ರೊಟ್ಟಿಯಂಥ ಆಹಾರಗಳು ಉಳಿದಾಗ, ಅದನ್ನು ಮರುದಿನ ಬೆಳಗ್ಗೆ ಉಪಾಹಾರಕ್ಕೆ ಬಳಸಿಕೊಳ್ಳಬಹುದು. ಈ ಮೂಲಕ ಅವುಗಳನ್ನು ಚೆಲ್ಲುವುದನ್ನು ತಪ್ಪಿಸಬಹುದು.

3. ದಾನ ಮಾಡಿ

ಇದೊಂದು ಮಹತ್ವದ ಕಾರ್ಯ. ನೀವು ಹುಡುಕಿದರೆ ನಿಮ್ಮ ಮನೆ, ಪ್ರದೇಶದ ಸುತ್ತಮುತ್ತ ಒಂದಷ್ಟು ಜನರಾದರೂ ಆಹಾರಕ್ಕಾಗಿ ಕಾಯುತ್ತಿರುವವರು, ತಿನ್ನಲೇನೂ ಇಲ್ಲದೆ ಕಷ್ಟಪಡುತ್ತಿರುವವರು ಇದ್ದೇ ಇರುತ್ತಾರೆ. ಒಮ್ಮೆ ನಿಮಗೆ ಆಗಿಯೂ ಹೆಚ್ಚಾಯಿತು ಎಂದರೆ ಅವರಿಗೆ ಕೊಡಿ ಸಂತೋಷವಾಗಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಹಳಸಿದ್ದೋ, ಹಾಳಾಗಿದ್ದೋ ಕೊಡುವುದು ಎಳ್ಳಷ್ಟೂ ಸರಿಯಲ್ಲ. ನೀವು ಊಟ ಮಾಡಿದ ಮೇಲೆಯೂ ಆಹಾರ ಹೆಚ್ಚಾದರೆ ಅದನ್ನು ಕೊಡುವುದರಲ್ಲಿ ತಪ್ಪಿಲ್ಲ. ಇನ್ನು ಯಾವುದೋ ಸಮಾರಂಭ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ಆಹಾರ ಉಳಿದು ಹೋಯಿತು ಅಂದರೆ ಅದನ್ನೂ ಕೂಡ ಹೀಗೆ ಅಗತ್ಯ ಇರುವವರಿಗೆ ಹಂಚಬಹುದು. ಕೆಲವು ಅನಾಥಾಶ್ರಮಗಳು, ನಿರಾಶ್ರಿತರ ಸಂಘ-ಸಂಸ್ಥೆಗಳು ಆಹಾರವನ್ನು ತೆಗೆದುಕೊಳ್ಳುತ್ತವೆ. ಅವುಗಳಿಗೆ ಕೊಟ್ಟುಬಿಡಿ.  ಒಟ್ಟಿನಲ್ಲಿ ಆಹಾರ ವೇಸ್ಟ್ ಮಾಡಬೇಡಿ.

4. ಆಹಾರ ಮತ್ತು ಆಹಾರ ಪದಾರ್ಥಗಳ ಸಂಗ್ರಹ ಸರಿಯಾಗಿರಲಿ

ಇದು ಕೂಡ ತುಂಬ ಮುಖ್ಯ. ಮಾರುಕಟ್ಟೆಯಿಂದ ಬೇಕಾಗಿದ್ದನ್ನೆಲ್ಲ ತಂದು, ಅದನ್ನು ಸರಿಯಾಗಿ ಸಂರಕ್ಷಿಸಿ ಇಟ್ಟುಕೊಳ್ಳದೆ ಹೋದರೆ ಖಂಡಿತ ಹಾಳಾಗುತ್ತದೆ. ಸಿಕ್ಕಿದ್ದನ್ನೆಲ್ಲ ಫ್ರಿಜ್​​ನಲ್ಲಿ ತುರುಕಿ ಇಡುವುದು ಸರಿಯಲ್ಲ. ಹಾಗೇ, ತಂದ ಕಿರಾಣಿ ಸಾಮಗ್ರಿಗಳು, ಅಡುಗೆ ಪದಾರ್ಥಗಳ ಅವಧಿ ಮುಗಿಯುವ ದಿನವನ್ನೆಲ್ಲ ಸರಿಯಾಗಿ ಗಮನಿಸಿ ಇಟ್ಟುಕೊಳ್ಳಬೇಕು. ಹಿಟ್ಟುಗಳು, ಬೇಳೆ-ಕಾಳು, ಮಸಾಲೆ ಪದಾರ್ಥಗಳನ್ನೆಲ್ಲ ಸರಿಯಾಗಿ ಸಂರಕ್ಷಿಸಬೇಕು. ಹಣ್ಣು-ತರಕಾರಿಗಳನ್ನೂ ಕೊಳೆಯದಂತೆ ಜೋಪಾನ ಮಾಡಬೇಕು. ಹಾಗೇ, ಫ್ರಿಜ್​​ಗಳನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳಬೇಕು.  ಆಹಾರ ಪೋಲು ಎಂಬುದು ಈಗ ಜಾಗತಿಕ ಸಮಸ್ಯೆಯಾಗಿ ಬೆಳೆದುನಿಂತಿದೆ. ನಾವಿದನ್ನು ಈಗಲೇ ಸರಿ ಪಡಿಸಿಕೊಳ್ಳದೆ ಹೋದರೆ ಮುಂದೆ ಪರಿತಪಿಸಬೇಕಾಗುತ್ತದೆ.

ಇದನ್ನೂ ಓದಿ: ವೈದರೊಬ್ಬರಿಂದ 1522 ಮಹಿಳೆಯರ ಗರ್ಭಕೋಶ ಶಸ್ತ್ರಚಿಕಿತ್ಸೆ; ಜಿಲ್ಲಾಡಳಿತ ಭರವಸೆ ಮೇರೆಗೆ ಪ್ರತಿಭಟನೆ ಹಿಂತೆಗೆತ

Follow us on

Related Stories

Most Read Stories

Click on your DTH Provider to Add TV9 Kannada