ಅತಿಯಾದ ಕೂದಲು ಉದುರುವ ಸಮಸ್ಯೆಗೆ ನೀವು ಸೇವಿಸುವ ಈ ಆಹಾರಗಳು ಕಾರಣ
ಕೂದಲು ಉದುರುವಿಕೆ ಬಹುತೇಕರನ್ನು ಕಾಡುವ ಬಹುದೊಡ್ಡ ಸಮಸ್ಯೆಯಾಗಿದೆ. ಅತಿಯಾದ ರಾಸಾಯನಿಕ ಉತ್ಪನ್ನಗಳ ಬಳಕೆ, ಕಳಪೆ ಜೀವನಶೈಲಿ ಮಾತ್ರವಲ್ಲದೆ ನೀವು ಸೇವಿಸುವ ಈ ಕೆಲವು ಆಹಾರಗಳು ಕೂಡ ಇದಕ್ಕೆ ಮುಖ್ಯ ಕಾರಣ. ಹಾಗಿದ್ದರೆ ಕೂದಲು ಉದುರುವ ಸಮಸ್ಯೆಗೆ ಯಾವ ಆಹಾರಗಳು ಕಾರಣ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಕೂದಲು ಉದುರುವಿಕೆ (hair loss) ಇಂದಿನ ದಿನಗಳಲ್ಲಿ ಬಹುತೇಕ ಮಂದಿ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಸಿಕ್ಕ ಸಿಕ್ಕ ಎಣ್ಣೆ, ರಾಸಾಯನಿಕ ಮಿಶ್ರಿತ ಶ್ಯಾಂಪೂಗಳ ಬಳಕೆ, ಒತ್ತಡ, ಕಳಪೆ ಜೀವನಶೈಲಿ ಇವೆಲ್ಲವೂ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಇದಲ್ಲದೆ ನಿಮ್ಮ ಆಹಾರಕ್ರಮವೂ ಕೂದಲು ಉದುರುವ ಸಮಸ್ಯೆಗೆ ಒಂದು ಕಾರಣ. ಹೌದು ಕೆಲವು ಆಹಾರಗಳ ಅತಿಯಾದ ಸೇವನೆಯು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವ ಸಮಸ್ಯೆಯನ್ನೂ ಹೆಚ್ಚು ಮಾಡುತ್ತದೆ. ಆ ಆಹಾರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೂದಲು ಉದುರುವ ಸಮಸ್ಯೆಗೆ ಕಾರಣವಾಗುವ ಆಹಾರಗಳು:
ಸಕ್ಕರೆ: ಅತಿಯಾದ ಸಕ್ಕರೆ ಸೇವನೆ ಸಹ ಕೂದಲು ಉದುರುವಿಕೆಗೆ ಕಾರಣ. ಹೆಚ್ಚು ಸಕ್ಕರೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಮತ್ತು ಆಂಡ್ರೊಜೆನ್ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು. ಈ ಹಾರ್ಮೋನುಗಳು ಕೂದಲು ಕಿರುಚೀಲಗಳನ್ನು ಕುಗ್ಗಿಸುತ್ತವೆ, ಇದು ಕೂದಲು ಉದುರುವಿಕೆ ಮತ್ತು ಕೂದಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಜಂಕ್ ಫುಡ್: ಫಾಸ್ಟ್ ಫುಡ್ ಮತ್ತುಎಣ್ಣೆಯಲ್ಲಿ ಕರಿದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಅನಾರೋಗ್ಯಕರ ಕೊಬ್ಬುಗಳಿದ್ದು, ಇವು ಕೂದಲನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.
ಉಪ್ಪು: ಅತಿಯಾದ ಉಪ್ಪಯ ಸೇವನೆಯಿಂದ ದೇಹ ನಿರ್ಜಲೀಕರಣಗೊಳ್ಳುವುದರ ಜೊತೆಗೆ ನೆತ್ತಿಯೂ ದುರ್ಬಲಗೊಳ್ಳುತ್ತದೆ. ಇದರಿಂದ ಕೂದಲಿನ ಬೇರು ದುರ್ಬಲಗೊಂಡು ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಮದ್ಯ: ಆಲ್ಕೋಹಾಲ್ ನಿರ್ಜಲೀಕರಣವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಸತು ಮತ್ತು ಇತರ ಅಗತ್ಯ ಪೋಷಕಾಂಶಗಳು ಕಡಿಮೆಯಾಗಲು ಕಾರಣವಾಗುತ್ತದೆ. ಸತುವಿನ ಕೊರತೆಯು ಕೂದಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಯಾವತ್ತಿಗೂ ಕೂದಲಿಗೆ ಎಣ್ಣೆ ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ
ಸಂಸ್ಕರಿಸಿದ ಆಹಾರಗಳು: ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಹಾರಗಳು DHT (ಡೈಹೈಡ್ರೊಟೆಸ್ಟೊಸ್ಟೆರಾನ್) ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಹಾರ್ಮೋನ್ ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಹೆಚ್ಚು ಕೆಫೀನ್: ಅತಿಯಾದ ಕೆಫೀನ್ ಸೇವನೆಯೂ ನಿರ್ಜಲೀಕರಣವನ್ನು ಉಂಟಾಗುತ್ತದೆ, ಇದು ನೆತ್ತಿಯನ್ನು ಒಣಗಿಸಿ ಕೂದಲಿನ ಬೆಳವಣಿಗೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




