ಯಾವತ್ತಿಗೂ ಕೂದಲಿಗೆ ಎಣ್ಣೆ ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ
ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಲು, ಕೂದಲು ಆರೋಗ್ಯಕರವಾಗಿ ಬೆಳೆಯಲು ನಾವು ಕೂದಲಿಗೆ ಎಣ್ಣೆ ಹಚ್ಚುತ್ತೇವೆ. ಆದರೆ ಎಣ್ಣೆ ಹಚ್ಚುವ ಸಮಯದಲ್ಲಿ ಮಾಡುವ ಈ ಒಂದಷ್ಟು ತಪ್ಪುಗಳು ಹೇರ್ ಫಾಲ್ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಹಾಗಾಗಿ ಕೂದಲಿಗೆ ಎಣ್ಣೆ ಹಚ್ಚುವಾಗ ಈ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ.

ಸಾಂದರ್ಭಿಕ ಚಿತ್ರ Image Credit source: ಸಾಂದರ್ಭಿಕ ಚಿತ್ರ
ಕೂದಲ ಆರೈಕೆಗೆ ಎಣ್ಣೆ (hair oil) ಹಚ್ಚುವುದು ಬಹಳ ಮುಖ್ಯ. ಎಣ್ಣೆ ಹಚ್ಚುವ ಅಭ್ಯಾಸ ಕೂದಲ ಬೆಳವಣಿಗೆ, ನೆತ್ತಿಯ ಪೋಷಣೆ ಸೇರಿದಂತೆ ಒಟ್ಟಾರೆ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದಕ್ಕಾಗಿಯೇ ನಮ್ಮಲ್ಲಿ ಬಹಳ ಹಿಂದಿನಿಂದಲೂ ಕೂದಲಿಗೆ ಎಣ್ಣೆ ಹಚ್ಚುವ ರೂಢಿಯಲ್ಲಿದೆ. ಕೂದಲಿಗೆ ಎಣ್ಣೆ ಹಚ್ಚುವುದು ಒಳ್ಳೆಯ ಅಭ್ಯಾಸ, ಆದರೆ ಈ ಎಣ್ಣೆ ಹಚ್ಚುವಾಗ ಮಾಡುವ ಈ ಒಂದಷ್ಟು ತಪ್ಪುಗಳು ಹೇರ್ ಫಾಲ್ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಕೂದಲಿಗೆ ಸರಿಯಾದ ಪೋಷಣೆ ಲಭಿಸಲು ಎಣ್ಣೆ ಹಚ್ಚುವಾಗ ಈ ತಪ್ಪುಗಳನ್ನು ಮಾಡದಿರಿ.
ಕೂದಲಿಗೆ ಎಣ್ಣೆ ಹಚ್ಚುವಾಗ ಈ ತಪ್ಪುಗಳನ್ನು ಮಾಡದಿರಿ:
- ಸಿಕ್ಕುಗಳು ನಿವಾರಣೆಯಾಗುತ್ತವೆ ಎಂದು ಅನೇಕ ಜನರು ಎಣ್ಣೆ ಹಚ್ಚಿದ ತಕ್ಷಣವೇ ಕೂದಲನ್ನು ಬಾಚಿಕೊಳ್ಳುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಆದ್ದರಿಂದ, ಕೂದಲಿಗೆ ಎಣ್ಣೆ ಹಚ್ಚಿದ ಸ್ವಲ್ಪ ಹೊತ್ತಿನ ಬಳಿಕ ನಿಧಾನಕ್ಕೆ ಕೂದಲು ಬಾಚಿಕೊಳ್ಳಿ.
- ಅನೇಕರು ಕೂದಲಿಗೆ ಎಣ್ಣೆ ಹಚ್ಚಿ, ರಾತ್ರಿಯಿಡಿ ಹಾಗೆಯೇ ಬಿಟ್ಟು ಮರುದಿನ ತಲೆಸ್ನಾನ ಮಾಡುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಇದು ಕೂದಲಿನ ಕಿರುಚೀಲವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಸ್ನಾನ ಮಾಡುವ ಒಂದು ಗಂಟೆ ಮೊದಲು ಹೇರ್ ಆಯಿಲ್ ಹಚ್ಚಿ ನಂತರ ಸ್ನಾನ ಮಾಡುವುದು ಉತ್ತಮ.
- ಅನೇಕ ಜನರು ಸ್ನಾನ ಮಾಡಿದ ತಕ್ಷಣವೇ ಕೂದಲಿಗೆ ಎಣ್ಣೆ ಹಚ್ಚುತ್ತಾರೆ. ಕೂದಲು ಒದ್ದೆಯಾಗಿರುವಾಗಲೇ ಎಣ್ಣೆ ಹಚ್ಚುವುದರಿಂದ ಕೂದಲು ಬೇಗನೆ ಕೊಳೆಯಾಗುತ್ತವೆ, ಇದರಿಂದ ಕೂದಲು ದುರ್ಬಲವಾಗುತ್ತದೆ.
- ಕೂದಲಿಗೆ ಎಣ್ಣೆ ಹಚ್ಚುವಾಗ ಅನೇಕರು ಕೂದಲನ್ನು ಬಲವಾಗಿ ಉಜ್ಜಿ ಮಸಾಜ್ ಮಾಡುತ್ತಾರೆ. ಈ ತಪ್ಪಿನಿಂದ ಕೂದಲು ಹೆಚ್ಚು ಉದುರುತ್ತದೆ.
- ಎಣ್ಣೆ ಹಚ್ಚಿದ ನಂತರ ಕೂದಲನ್ನು ಬಿಗಿಯಾಗಿ ಕಟ್ಟುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಕೂದಲು ಒಡೆಯುವಿಕೆಗೆ ಕಾರಣವಾಗಬಹುದು. ಮತ್ತು ಕೂದಲು ಕಿರುಚೀಲಗಳು ದುರ್ಬಲಗೊಂಡು ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




