ದೆಹಲಿ: ದೇಶದಲ್ಲಿ ಒಂದೆಡೆ ಕೊರೊನಾ ವೈರಸ್ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗುತ್ತಿದೆ. ಹಾಗೇ ಇನ್ನೊಂದೆಡೆ ದೆಹಲಿ ಗಡಿಗಳಲ್ಲಿ ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದ್ದಾರೆ. ಕೇಂದ್ರಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಶುರು ಮಾಡಿ, ಏಳು ತಿಂಗಳಾದ ಹಿನ್ನೆಲೆಯಲ್ಲಿ, ಜೂ.26ರಂದು ಎಲ್ಲ ರಾಜ್ಯಗಳ ರಾಜ್ಯಪಾಲರ ನಿವಾಸದ ಎದುರು ಧರಣಿ ನಡೆಸುವುದಾಗಿ ರೈತಸಂಘಟನೆಗಳು ಘೋಷಣೆ ಮಾಡಿವೆ.
ಸುಮಾರು 40 ರೈತಸಂಘಟನೆಗಳನ್ನೊಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ ಈ ಬಗ್ಗೆ ಹೇಳಿಕೆ ನೀಡಿದ್ದು, ಜೂ.26ರ ಪ್ರತಿಭಟನೆಯಂದು ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹೇಳಿಕೊಂಡಿದೆ. ಹಾಗೇ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಜ್ಞಾಪಕ ಪತ್ರವನ್ನೂ ಕಳಿಸಲಿದೆ. ಜೂ.26ರ ದಿನವನ್ನು ಖೇತಿ ಬಚಾವೋ, ಲೋಕತಂತ್ರ ಬಚಾವೋ ದಿವಸ್ (ಕೃಷಿಯನ್ನು ಉಳಿಸಿ, ಪ್ರಜಾಭುತ್ವ ರಕ್ಷಿಸಿ ದಿನವನ್ನಾಗಿ ಆಚರಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಇಂದ್ರಜಿತ್ ಸಿಂಗ್ ತಿಳಿಸಿದ್ದಾರೆ.
1975ರ ಜೂನ್ 26ರಂದು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಹಾಗೇ, ನಮ್ಮ ಪ್ರತಿಭಟನೆಗೂ ಜೂ.26ರಂದು ಏಳು ತಿಂಗಳಾಗುತ್ತದೆ. ನಮ್ಮ ದೇಶದಲ್ಲಿ ಸರ್ವಾಧಿಕಾರ ವಾತಾವರಣ ಸೃಷ್ಟಿಯಾಗಿದೆ. ಇಲ್ಲಿ ಕೃಷಿ, ಪ್ರಜಾಪ್ರಭುತ್ವ ಹಕ್ಕಿನ ಮೇಲೆ ದಾಳಿ ನಡೆತಯುತ್ತಿದೆ ಎಂದು ಇಂದ್ರಜಿತ್ ಸಿಂಗ್ ಆರೋಪಿಸಿದ್ದಾರೆ.
ನಾವು ರೈತರೊಂದಿಗೆ ಮಾತುಕತೆಗೆ ಸಿದ್ಧ
ರೈತರು ಒಂದೊಂದೇ ಹಂತವಾಗಿ ಪ್ರತಿಭಟನೆ ತೀವ್ರಗೊಳಿಸುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಮತ್ತೊಮ್ಮೆ ಮಾತುಕತೆಗೆ ಮುಂದಾಗಿದೆ. ಈ ಬಗ್ಗೆ ಬುಧವಾರ ಹೇಳಿಕೆ ನೀಡಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರು ಮಾತುಕತೆಗೆ ಆಗಮಿಸಬಹುದು. ಈ ಕೃಷಿ ಕಾಯ್ದೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದೂ ಹೇಳಿದ್ದಾರೆ.