Farmers Protest: ಜೂನ್ 26ರಂದು ದೇಶಾದ್ಯಂತ ರೈತರ ಪ್ರತಿಭಟನೆ; ರಾಜಭವನದ ಮುಂದೆ ಕಪ್ಪು ಬಾವುಟ ಹಿಡಿದು ಧರಣಿ
Farm Laws: ಜೂನ್ 26, 1975ರಂದು ತುರ್ತು ಪರಿಸ್ಥಿಯನ್ನು ಹೇರಲಾಗಿತ್ತು. ಅದೇ ದಿನದಂದು ನಾವು ಪ್ರತಿಭಟನೆಯ ಏಳನೇ ತಿಂಗಳು ಪೂರೈಸುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ವಾಧಿಕಾರಿ ಧೋರಣೆ ಮೂಲಕ ಕೃಷಿ ಸಂಸ್ಕೃತಿ ಹಾಗೂ ಪ್ರಜೆಗಳ ಹಕ್ಕು ಎರಡನ್ನೂ ಹತ್ತಿಕ್ಕಲಾಗುತ್ತಿದೆ. ಇದೊಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ ಎಂದು ಇಂದ್ರಜಿತ್ ಸಿಂಗ್ ಕಿಡಿಕಾರಿದ್ದಾರೆ.
ದೆಹಲಿ: ಭಾರತ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ನಡೆದಿದ್ದ ಚಳವಳಿ ಕೊರೊನಾ ಎರಡನೇ ಅಲೆ ಆರಂಭವಾದ ನಂತರ ಕೊಂಚ ನೇಪಥ್ಯಕ್ಕೆ ಸರಿದಂತಾಗಿತ್ತು. ಆದರೆ, ಈಗ ಮತ್ತೆ ಪ್ರತಿಭಟನೆಯನ್ನು ಬಲಗೊಳಿಸಲು ಕರೆ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ಜೂನ್ 26ರಿಂದ ಎಲ್ಲಾ ರಾಜ್ಯಗಳ ರಾಜಭವನದ ಎದುರು ಧರಣಿ ಕೂರುವುದಾಗಿ ತಿಳಿಸಿದ್ದಾರೆ. ಜೂನ್ 26ಕ್ಕೆ ರೈತರ ಪ್ರತಿಭಟನೆ ಆರಂಭವಾಗಿ ಏಳು ತಿಂಗಳು ತುಂಬುತ್ತಿದ್ದು, ಅಂದು ತಮ್ಮ ನಿಲುವು ಎಷ್ಟು ದೃಢವಾಗಿದೆ ಎಂಬುದನ್ನು ಸಾಬೀತುಪಡಿಸಲು ರೈತ ಮುಖಂಡರು ರಾಜಭವನದ ಎದುರು ಪ್ರತಿಭಟನೆ ನಡೆಸಲಿದ್ದಾರೆ.
ಧರಣಿ ಬಗ್ಗೆ ಮಾತನಾಡಿರುವ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ಜೂನ್ 26ರಂದು ಎಲ್ಲಾ ರಾಜ್ಯಗಳ ರಾಜಭವನದ ಎದುರು ನಡೆಸುವ ಪ್ರತಿಭಟನೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು. ಜತೆಗೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ, ಆ ದಿನವನ್ನು ಕೃಷಿಯನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ ಎಂಬ ಘೋಷಣೆಯೊಂದಿಗೆ ಆಚರಿಸಲಾಗುವುದು ಎಂದು ರೈತ ಮುಖಂಡ ಇಂದ್ರಜಿತ್ ಸಿಂಗ್ ತಿಳಿಸಿದ್ದಾರೆ.
ಪ್ರತಿ ರಾಜ್ಯಗಳ ರಾಜ್ಯಪಾಲರ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಪತ್ರ ಕಳುಹಿಸುವ ಅಭಿಯಾನ ನಡೆಸಲಿದ್ದೇವೆ. ಜತೆಗೆ ರಾಜಭವನದ ಮುಂದೆ ಕಪ್ಪು ಬಾವುಟ ತೋರಿಸುವುದು ನಮ್ಮ ಪ್ರತಿಭಟನೆಯ ಸಂಕೇತ. ಜೂನ್ 26, 1975ರಂದು ತುರ್ತು ಪರಿಸ್ಥಿಯನ್ನು ಹೇರಲಾಗಿತ್ತು. ಅದೇ ದಿನದಂದು ನಾವು ಪ್ರತಿಭಟನೆಯ ಏಳನೇ ತಿಂಗಳು ಪೂರೈಸುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ವಾಧಿಕಾರಿ ಧೋರಣೆ ಮೂಲಕ ಕೃಷಿ ಸಂಸ್ಕೃತಿ ಹಾಗೂ ಪ್ರಜೆಗಳ ಹಕ್ಕು ಎರಡನ್ನೂ ಹತ್ತಿಕ್ಕಲಾಗುತ್ತಿದೆ. ಇದೊಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ ಎಂದು ಇಂದ್ರಜಿತ್ ಸಿಂಗ್ ಕಿಡಿಕಾರಿದ್ದಾರೆ.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳ ಸಾವಿರಾರು ರೈತರು ಏಳು ತಿಂಗಳಿನಿಂದ ನಿರಂತರ ಪ್ರತಿಭಟನೆ ಮಾಡುತ್ತಲೇ ಇದ್ದು, ಯಾವುದೇ ಕಾರಣಕ್ಕೂ ಮೂರು ನೂತನ ಕೃಷಿ ಕಾಯ್ದೆಗಳನ್ನು ಒಪ್ಪಿಕೊಳ್ಳುವಿದಿಲ್ಲವೆಂದು ಪಟ್ಟುಹಿಡಿದಿದ್ದಾರೆ. ಆದರೆ, ಈ ವಾರ ಸದರಿ ವಿಚಾರವಾಗಿ ಮಾತನಾಡಿದ್ದ ಕೇಂದ್ರ ಸರ್ಕಾರ ರೈತರ ಹೋರಾಟ ಅನಾವಶ್ಯಕವಾಗಿದ್ದು, ಈ ಕಾಯ್ದೆಗಳನ್ನು ವಿರೋಧಿಸುವುದಕ್ಕೆ ಅರ್ಥವೇ ಇಲ್ಲ. ಇದು ರೈತರ ಪರವಾಗಿಯೇ ಇರುವ ಕಾಯ್ದೆಗಳೆಂದು ಪುನರುಚ್ಛರಿಸಿತ್ತು.
ಇತ್ತ ಕೇಂದ್ರದ ಸಮರ್ಥನೆಯನ್ನು ಖಡಾಖಂಡಿತವಾಗಿ ನಿರಾಕರಿಸಿರುವ ರೈತ ಹೋರಾಟಗಾರರು ನಾವು ಪ್ರತಿಭಟನೆಯನ್ನು ಮುಂದುವರೆಸಿಯೇ ಸಿದ್ಧ ಎಂದಿದ್ದಾರೆ. ಇನ್ನು ಹೋರಾಟದ ಸ್ಥಳಗಳಲ್ಲಿ ಮಹಿಳಾ ಹೋರಾಟಗಾರರಿಗೆ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಪರಿಹರಿಸಲು ಪ್ರತ್ಯೇಕ ಕಮಿಟಿ ರಚಿಸುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ: Farmers Protest: ರೈತ ಹೋರಾಟ ಡಿಸೆಂಬರ್ವರೆಗೂ ಮುಂದುವರಿಯಬಹುದು: ರೈತ ಮುಖಂಡ ರಾಕೇಶ್ ಟಿಕಾಯತ್