ಚಂಡಿಗಡ್: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನವೆಂಬರ್ನಿಂದಲೂ ದೆಹಲಿಯ ಗಡಿಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗೆ ಪ್ರತಿಭಟನೆ ನಡೆಸುತ್ತಿರುವ ಸುಮಾರು 350 ಮಂದಿಯ ವಿರುದ್ಧ ಹರ್ಯಾಣದ ಹಿಸ್ಸಾರ್ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದಾರೆ. ಈ ಕ್ರಿಮಿನಲ್ ಪ್ರಕರಣವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ನಾಳೆ ಹರ್ಯಾಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನಿವಾಸಕ್ಕೆ ಮುತ್ತಿಗೆ ಹಾಕಲು ರೈತರು ಯೋಜನೆ ರೂಪಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಅಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕೊಲೆ ಯತ್ನ, ಗಲಭೆ, ಕಾನೂನು ವಿರೋಧಿ ಚಟುವಟಿಕೆ, ಕೊರೊನಾ ಸೋಂಕು ಹರಡಿದ್ದು..ಹೀಗೆ ಹಲವು ಕಾರಣಗಳಿಗೆ ಸುಮಾರು 350 ಮಂದಿಯ ವಿರುದ್ಧ ಹಿಸ್ಸಾರ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಇದನ್ನು ವಾಪಸ್ ಪಡೆಯಲು ಆಗ್ರಹಿಸಿ ನಾಳೆ (ಮೇ 24) ಹಿಸಾರ್ ವಲಯದ ಐಜಿ ನಿವಾಸಕ್ಕೆ ಮುತ್ತಿಗೆ ಹಾಕಲು ರೈತರು ಯೋಜನೆ ರೂಪಿಸಿದ್ದಾರೆ. ಅವರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು, ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಲುವಾಗಿ ಇಂದು ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF)ನ ಸುಮಾರು 3000 ಸಿಬ್ಬಂದಿ ಹಿಸ್ಸಾರ್ಗೆ ತೆರಳಿದ್ದಾರೆ.
ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇಲ್ಲಿಗೆ ಬಾರದಂತೆ ತಡೆಯಲು ನಾವು ರೈತ ಮುಖಂಡರಿಗೆ ತಿಳಿಸಿದ್ದೇವೆ. ಕೊರೊನಾ ವೈರಸ್ ಸಾಂಕ್ರಾಮಿಕ ಉಲ್ಬಣಗೊಂಡಿರುವ ಕಾರಣ ಪ್ರತಿಭಟನೆ ನೆಪದಲ್ಲಿ ಗುಂಪುಗೂಡುವುದು ಸರಿಯಲ್ಲ. ಇದನ್ನು ನಾವು ರೈತಮುಖಂಡರೊಂದಿಗೆ ಚರ್ಚಿಸಿದ್ದೇವೆ ಎಂದು ಹಿಸ್ಸಾರ್ ಜಿಲ್ಲಾಧಿಕಾರಿ ಪ್ರಿಯಾಂಕಾ ಸೋನಿ ತಿಳಿಸಿದ್ದಾರೆ. ಸದ್ಯ ಜಿಲ್ಲೆಯಲ್ಲೂ ಲಾಕ್ಡೌನ್ ಸ್ಥಿತಿ ಇದೆ. ಈ ಮಧ್ಯೆ ನಾಳಿನ ಪ್ರತಿಭಟನೆಯಲ್ಲಿ ಗುಂಪುಗೂಡದಂತೆ ತಡೆಯಲು, ಶಾಂತಿ ಕಾಪಾಡಲು ಬೇಕಾಗಿರುವ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ತಿಳಿಸಿದ್ದಾರೆ.
‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್ಫ್ರೆಂಡ್ ಬಗ್ಗೆ ಶಾರುಖ್ ಖಡಕ್ ವಾರ್ನಿಂಗ್