ಕೊವಿಡ್ 3ನೇ ಅಲೆಯಿಂದ ಮಕ್ಕಳಿಗೆ ಹೆಚ್ಚಿನ ಅಪಾಯ, ಭಾರತದಲ್ಲಿ ತಯಾರಿಸಿದ ಮೂಗಿಗೆ ಹಾಕುವ ಲಸಿಕೆ ‘ಗೇಮ್ ಚೇಂಜರ್’ ಆಗುವ ಸಾಧ್ಯತೆ: ಸೌಮ್ಯ ಸ್ವಾಮಿನಾಥನ್
Soumya Swaminathan: ಸಮುದಾಯ ಪ್ರಸರಣದ ಅಪಾಯ ಕಡಿಮೆಯಾದಾಗ ಮಾತ್ರ ಶಾಲೆಗಳನ್ನು ಪುನಃ ತೆರೆಯಬೇಕು. ಕೊನೆಗೂ ನಾವು ಮಕ್ಕಳಿಗೆ ಲಸಿಕೆ ನೀಡುತ್ತೇವೆ ಎಂದು ನಾನು ತುಂಬಾ ಭರವಸೆ ಹೊಂದಿದ್ದೇನೆ ಎಂದು ವಿಶ್ವ ಆರೋಗ್ಯಸಂಸ್ಥೆಯ ಹಿರಿಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ದೆಹಲಿ: ಭಾರತದಲ್ಲಿ ತಯಾರಾಗುತ್ತಿರುವ ಮೂಗಿನ ಮೂಲಕ ಹಾಕುವ ಲಸಿಕೆಗಳು (Nasal Vaccines) ಮಕ್ಕಳಿಗೆ ಗೇಮ್ ಚೇಂಜರ್ ಆಗಿರಬಹುದು. ಆದಾಗ್ಯೂ, ಇದು ಈ ವರ್ಷ ಲಭ್ಯವಿಲ್ಲದಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಕೊವಿಡ್ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬ ಆತಂಕದ ನಡುವೆಯೇ ಈ ವಿಷಯ ಭರವಸೆ ನೀಡಿದೆ. ಭಾರತದಲ್ಲಿ ತಯಾರಾಗಲಿರುವ ಕೆಲವು ಮೂಗಿನ ಮೂಲಕ ಹಾಕು ಲಸಿಕೆಗಳು ಮಕ್ಕಳಿಗೆ ಗೇಮ್ ಚೇಂಜರ್ ಆಗಬಹುದು. ಇದು ನಿರ್ವಹಿಸಲು ಸುಲಭ, ಇದು ಶ್ವಾಸನಾಳದಲ್ಲಿ ರೋಗ ನಿರೋಧಕವನ್ನು ನೀಡುತ್ತದೆ ಎಂದು ಮಕ್ಕಳ ತಜ್ಞೆ ಸೌಮ್ಯ ಸ್ವಾಮಿನಾಥನ್ ಸಿಎನ್ಎನ್-ನ್ಯೂಸ್ 18 ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ಅಲ್ಲಿಯವರೆಗೆ ಹೆಚ್ಚು ವಯಸ್ಕರಿಗೆ, ವಿಶೇಷವಾಗಿ ಶಿಕ್ಷಕರಿಗೆ ಲಸಿಕೆ ಹಾಕುವ ಅವಶ್ಯಕತೆಯಿದೆ. ಸಮುದಾಯ ಪ್ರಸರಣದ ಅಪಾಯ ಕಡಿಮೆಯಾದಾಗ ಮಾತ್ರ ಶಾಲೆಗಳನ್ನು ಪುನಃ ತೆರೆಯಬೇಕು ಎಂದು ಅವರು ಒತ್ತಾಯಿಸಿದರು. ಕೊನೆಗೂ ನಾವು ಮಕ್ಕಳಿಗೆ ಲಸಿಕೆ ನೀಡುತ್ತೇವೆ ಎಂದು ನಾನು ತುಂಬಾ ಭರವಸೆ ಹೊಂದಿದ್ದೇನೆ. ಆದರೆ ಅದು ಈ ವರ್ಷ ಆಗುವುದಿಲ್ಲ, ಮತ್ತು ಸಮುದಾಯ ಸೋಂಕು ಹರಡುವಿಕೆ ಕಡಿಮೆಯಾದಾಗ ನಾವು ಶಾಲೆಗಳನ್ನು ತೆರೆಯಬೇಕು. ಇತರ ಮುನ್ನೆಚ್ಚರಿಕೆಗಳೊಂದಿಗೆ ಉಳಿದ ದೇಶಗಳು ಅದನ್ನೇ ಮಾಡಿವೆ. ಶಿಕ್ಷಕರಿಗೆ ಲಸಿಕೆ ಹಾಕಿದರೆ, ಅದು ಒಂದು ದೊಡ್ಡ ಹೆಜ್ಜೆಯಾಗಲಿದೆ ಎಂದು ವಿಶ್ವ ಆರೋಗ್ಯಸಂಸ್ಥೆಯ ಹಿರಿಯ ವಿಜ್ಞಾನಿ ಸೌಮ್ಯ ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳು ಸೋಂಕಿನಿಂದ ರಕ್ಷಿಸಲ್ಪಟ್ಟಿಲ್ಲ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ. ಆದರೆ ಇದರ ಪರಿಣಾಮ ಕಡಿಮೆ ಎಂದು ಸರ್ಕಾರ ಒತ್ತಿಹೇಳಿದೆ . ಮಕ್ಕಳಿಗೆ ಕೊವಿಡ್ ತಗುಲಿದರೆ ಅವರಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ ಅಥವಾ ಕನಿಷ್ಠ ಲಕ್ಷಣಗಳು ಕಂಡುಬರುತ್ತವೆ. ಅವರಿಗೆ ಸಾಮಾನ್ಯವಾಗಿ ಆಸ್ಪತ್ರೆಗೆ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ.ಪೌಲ್ ಹೇಳಿದ್ದಾರೆ.
ಮಕ್ಕಳಲ್ಲಿ ಕೊವಿಡ್ -19 ಗೆ ಚಿಕಿತ್ಸೆ ನೀಡಲು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು, ಆದರೆ ಅವರು ಮೊದಲಿಗೆ ಪ್ರಸರಣ ಸರಪಳಿಯ ಭಾಗವಾಗಲು ಬಿಡದಿರುವುದು ಬಹಳ ಮುಖ್ಯ ಎಂದು ಅವರು ಹೇಳಿದರು. ಭಾರತ ಮತ್ತು ವಿಶ್ವದ ಇತರ ದೇಶಗಳಲ್ಲಿ ಸುಮಾರು 3-4 ರಷ್ಟು ಮಕ್ಕಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಪೌಲ್ ಹೇಳಿದರು, 10 ರಿಂದ 12 ವರ್ಷದೊಳಗಿನವರು ಬಹಳ ಚಲನಶೀಲರಾಗಿರುವುದರಿಂದ ವಿಶೇಷ ಗಮನ ಹರಿಸಬೇಕು ಎಂದಿದ್ದಾರೆ ಅವರು.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಯುವಕರು ಮತ್ತು ಮಕ್ಕಳಲ್ಲಿ ಸೋಂಕು ಹರಡುವಿಕೆ ಮತ್ತು ತೀವ್ರತೆಯ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಕೇಳಿಕೊಂಡಿದ್ದರು.
ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಈಗಾಗಲೇ 12 ರಿಂದ 17 ವರ್ಷ ವಯಸ್ಸಿನ ಯುವಕರಿಗೆ ಫೈಜರ್-ಬಯೋಟೆಕ್ ಲಸಿಕೆಗೆ ತುರ್ತು ಅನುಮತಿಯನ್ನು ನೀಡಿದೆ. ಮುಂಬರುವ ತಿಂಗಳುಗಳಲ್ಲಿ ಇತರ ಎರಡು ಲಸಿಕೆಗಳಿಗೆ ಮಕ್ಕಳಿಗೆ ತುರ್ತು ಅನುಮತಿ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಮಾಡರ್ನಾ ತನ್ನ ಲಸಿಕೆಯನ್ನು 12 ರಿಂದ 17 ವರ್ಷ ವಯಸ್ಸಿನ 3,000 ಮಕ್ಕಳಲ್ಲಿ ಪರೀಕ್ಷಿಸುತ್ತಿದೆ ಮತ್ತು ವಾರಗಳಲ್ಲಿ ಆ ವಯಸ್ಸಿನವರ ಫಲಿತಾಂಶವನ್ನು ಪಡೆಯಬಹುದು. ಏಪ್ರಿಲ್ ತಿಂಗಳಲ್ಲಿ ಜಾನ್ಸನ್ ಆಂಡ್ ಜಾನ್ಸನ್ 12 ರಿಂದ 17 ವರ್ಷದ ಮಕ್ಕಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅನೇಕ ಲಸಿಕೆ ತಯಾರಿಕೆ ಕಂಪನಿಗಳು ಈಗಾಗಲ ಮಕ್ಕಳ ಮೇಲೆ ಪ್ರಯೋಗಗಳನ್ನು ಪ್ರಾರಂಭಿಸಿದ್ದಾರೆ, ಫೈಜರ್ ಲಸಿಕೆಯನ್ನು ಈಗ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಅನುಮೋದಿಸಲಾಗಿದೆ ಮತ್ತು ಕಿರಿಯ ಮಕ್ಕಳಲ್ಲಿ ಪ್ರಯೋಗಗಳು ನಡೆಯುತ್ತಿವೆ. ಒಂದೆರಡು ತಿಂಗಳಲ್ಲಿ ಫೈಜರ್ ಮತ್ತು ಮಾಡರ್ನಾ ಲಸಿಕೆಗಳಿಗೆ ಅನುಮೋದನೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಅಸ್ಟ್ರಾಜೆನೆಕಾ ಮತ್ತು ಕಿರಿಯ ಜನರಿಗೆ ಇತರ ಲಸಿಕೆಗಳು – ಅಡೆನೊವೈರಲ್ ಲಸಿಕೆಗಳನ್ನು ನೀಡಿದ ಯುವ ಪೀಳಿಗೆಯಲ್ಲಿ ಕಂಡುಬರುವ ಅಪರೂಪದ ಅಡ್ಡಪರಿಣಾಮಗಳ ಕಾರಣ ಅಲ್ಲಿ ನಿಧಾನಗತಿಯ ಬೆಳವಣಿಗೆ ಇದೆ ಎಂದು ಸ್ವಾಮಿನಾಥನ್ ಹೇಳಿದರು.
2 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಸೆಪ್ಟೆಂಬರ್‌ನಲ್ಲಿ ಯುಎಸ್‌ನಲ್ಲಿ ತುರ್ತು ದೃಢೀಕರಣವನ್ನು ಪಡೆಯುವ ಯೋಜನೆಯನ್ನು ಫೈಜರ್ ಹೊಂದಿದೆ. 6 ತಿಂಗಳ ವಯಸ್ಸಿನ ಮಕ್ಕಳಲ್ಲಿ ಮಾಡರ್ನಾ ಅವರ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು ವರ್ಷದ ಅಂತ್ಯದ ವೇಳೆಗೆ ನಿರೀಕ್ಷಿಸಲಾಗಿದೆ. ಇತ್ತೀಚೆಗೆ, ಕೆನಡಾ, ಸಿಂಗಾಪುರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಹ 12-15 ವಯೋಮಾನದವರಲ್ಲಿ ತುರ್ತು ಬಳಕೆಗಾಗಿ ಫೈಜರ್-ಬಯೋಟೆಕ್ ಕೊವಿಡ್ -19 ಲಸಿಕೆಯನ್ನು ಅನುಮೋದಿಸಿವೆ.
ಇದನ್ನೂಓದಿ: ಪ್ರಧಾನಿ ಮೋದಿ ಕಣ್ಣೀರಿನ ಬಗ್ಗೆ ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟವಾಗಿದೆ ಎನ್ನಲಾದ ಈ ಸುದ್ದಿಯ ಅಸಲಿ ವಿಷಯವೇನು?
Tv9 Digital Live | ಕೊರೊನಾ 2ನೇ ಅಲೆಯಿಂದ ಮಕ್ಕಳನ್ನು ಕಾಪಾಡುವುದು ಹೇಗೆ?