Tv9 Digital Live | ಕೊರೊನಾ 2ನೇ ಅಲೆಯಿಂದ ಮಕ್ಕಳನ್ನು ಕಾಪಾಡುವುದು ಹೇಗೆ?
ಯಾವುದೇ ಸೋಂಕಿನ ಲಕ್ಷಣ ಕಂಡರೂ ಹತ್ತಿರದ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಕೊಳ್ಳುವುದು ಅಗತ್ಯ ಎಂದು ಸಾಂಕ್ರಾಮಿಕ ರೋಗ ತಜ್ಞರಾದ ಸುನೀಲ್ ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆಯು ಹೊಸರೂಪ ಪಡೆದುಕೊಂಡಿದ್ದು, ಜನರಿಗೆ ತಲೆನೋವು ತರುವಂತಿದೆ. ಮೊದಲ ಬಾರಿಗೆ 40ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಪಾಸಿಟಿವ್ ಆದ ವರದಿ ಬಂದಿದೆ. ಈ ವಿಷಯವನ್ನು ಇಂದಿನ ಡಿವಿ 9 ಡಿಜಿಟಲ್ ಲೈವ್ನಲ್ಲಿ ಚರ್ಚಿಸಿದ್ದೇವೆ. ಆ್ಯಂಕರ್ ಸೌಮ್ಯಾ ಹೆಗಡೆ ಈ ಚರ್ಚೆಯನ್ನು ನಡೆಸಿಕೊಟ್ಟಿದ್ದಾರೆ ಮತ್ತು ಇಂದಿನ ಸಂವಾದದಲ್ಲಿ ಸಾಂಕ್ರಾಮಿಕ ರೋಗ ತಜ್ಞರಾದ ಸುನೀಲ್, ಮಾನಸಿಕ ತಜ್ಞರಾದ ಸೌಜನ್ಯ ವಸಿಷ್ಠ, ಮಕ್ಕಳ ತಜ್ಞರಾದ ಶ್ರೀನಿವಾಸ ಭಾಗಿಯಾಗಿದ್ದರು.
ಮಕ್ಕಳಲ್ಲಿ ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದ್ದೆವು. ಬಿಟ್ಟರೆ ಮಕ್ಕಳಲ್ಲಿ ಸೋಂಕು ಹರಡುವುದಿಲ್ಲ ಎಂದು ನಾವು ಹೇಳಿಲ್ಲ. ಮಕ್ಕಳನ್ನು ಅಜ್ಜ, ಅಜ್ಜಿ ಜೊತೆ ಬಿಡಬೇಡಿ ಎಂದು ನಾವು ಯಾವಾಗಲೂ ಪೋಷಕರಿಗೆ ಹೇಳುತ್ತಲೇ ಇರುತ್ತೇವೆ. ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ಬೇಗ ಹರಡುತ್ತದೆ. ಆದರೆ ಮರಣ ಪ್ರಮಾಣ ತುಂಬಾ ಕಡಿಮೆ. ಪೋಷಕರು ಮಾರುಕಟ್ಟೆ, ಆಫೀಸ್ ಹೀಗೆ ಹೊರಗಡೆ ಹೋಗಿ ವಾಪಸ್ಸು ಬಂದವರು ಮಕ್ಕಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು ಎಂದು ಮಕ್ಕಳ ತಜ್ಞರಾದ ಶ್ರೀನಿವಾಸ ಹೇಳಿದರು.
ಮುಂಚೆ ಶಾಲೆಗಳು ಆರಂಭವಾಗಿರಲಿಲ್ಲ. ಹೀಗಾಗಿ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಎಲ್ಲವೂ ಆರಂಭವಾಗಿವೆ. ಹೀಗಾಗಿ ಎಚ್ಚರಿಕೆ ಅಗತ್ಯ. ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕೊರೊನಾ ಸೋಂಕು ವೇಗವಾಗಿ ಹರಡುತ್ತದೆ. ಅದರಲ್ಲೂ 5ರಿಂದ 15 ವರ್ಷದ ಒಳಗಿನ ಮಕ್ಕಳಲ್ಲಿ ಇದು ಹೆಚ್ಚು. ಮಕ್ಕಳಲ್ಲೂ ನಾನಾ ರೀತಿಯ ಕಾಯಿಲೆಗಳು ಇರುತ್ತವೆ. ಅಂತಹ ಮಕ್ಕಳು ಹೆಚ್ಚು ಜಾಗೃತರಾಗಿರಬೇಕು. ಇನ್ನು ಉಳಿದಂತೆ ಕೊರೊನಾ ಸೋಂಕು ಹರಡಿದರು ಮಕ್ಕಳು ಅದರಿಂದ ಆರಾಮವಾಗಿ ಗುಣಮುಖರಾಗುತ್ತಾರೆ ಎನ್ನುತ್ತಾರೆ ಅವರು.
ಪೋಷಕರು ಎಷ್ಟರಮಟ್ಟಿಗೆ ಜವಾಬ್ದಾರಿಯಿಂದ ವರ್ತಿಸಿದರೆ ಅಷ್ಟೂ ಒಳ್ಳೆಯದು. ಪ್ರತಿಯೊಂದಕ್ಕೂ ಸರ್ಕಾರವನ್ನು ದೂರುವ ಬದಲು ತಂದೆ-ತಾಯಿ ಈ ಬಗ್ಗೆ ಗಮನ ಹರಿಸುವುದು ಮುಖ್ಯ. ಹೊರಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನೆಯಲ್ಲಿಯೂ ಮಕ್ಕಳೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಮಕ್ಕಳಿಂದ ಮಕ್ಕಳಿಗೆ ಸೋಂಕು ಹರಡಿದರೆ ಸಾಯುವುದಿಲ್ಲ. ಆದರೆ ಮಕ್ಕಳಿಂದ ಸೋಂಕು ದೊಡ್ಡವರಿಗೆ ಹರಡಿದರೆ ಅವರ ಪ್ರಾಣಕ್ಕೆ ಅಪಾಯ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ ಎನ್ನುತ್ತಾರೆ ಶ್ರೀನಿವಾಸ.
ಮೊದಲು ಕೂಡ ನಾವು ಕೊರೊನಾ ಮಕ್ಕಳಿಗೆ ಬರುವುದಿಲ್ಲ ಎಂದು ಹೇಳಿರಲಿಲ್ಲ. ಆದರೆ ದೊಡ್ಡವರಿಗೆ ಹೊಲಿಸಿದರೆ ಮಕ್ಕಳಲ್ಲಿ ಕಡಿಮೆ ಎಂದು ಹೇಳಿದ್ದೆವು. ಇದಕ್ಕೆ ಕಾರಣ ಪ್ರಾರಂಭದ ದಿನಗಳಲ್ಲಿ ಶಾಲಾ -ಕಾಲೇಜುಗಳು ಮುಚ್ಚಿತ್ತು. ಆ ಹಂತ ದಾಟಿ ಈಗ ಮುಂದೆ ಬಂದಿದ್ದೇವೆ. ಈಗ ಶಾಲಾ -ಕಾಲೇಜು ಪ್ರಾರಂಭವಾಗಿದೆ, ಪಾರ್ಕ್ ಓಪನ್ ಆಗಿದೆ. ಹೀಗಾಗಿ ಮಕ್ಕಳಲ್ಲಿ ಒಡನಾಟ ಹೆಚ್ಚಾಯಿತು. ಒಬ್ಬರಿಂದ ಒಬ್ಬರಿಗೆ ಸೋಂಕು ಹರಡಲು ಶುರುವಾಯಿತು. ಮಕ್ಕಳಲ್ಲಿನ ಕೊರೊನಾ ಸ್ವಲ್ಪ ಸವಾಲಿನ ಕೆಲಸ. ಕಾರಣ ಮಕ್ಕಳಿಗೆ ಮಾಸ್ಕ್ ಹಾಕಿ, ಸ್ಯಾನಿಟೈಜರ್ ಬಳಸಿ ಎಂದು ಹೇಳುವುದು ಕಷ್ಟದ ಕೆಲಸ. ಮಕ್ಕಳಿಗೆ ಈ ವಿಷಯದ ಬಗ್ಗೆ ಮನದಟ್ಟು ಮಾಡಿಸುವುದು ಪೋಷಕರ ಜವಾಬ್ದಾರಿ ಎಂದು ಸಾಂಕ್ರಾಮಿಕ ರೋಗ ತಜ್ಞರಾದ ಸುನೀಲ್ ಹೇಳಿದ್ದಾರೆ.
ಕೊರೊನಾ ಎರಡನೇ ಅಲೆ ಬಂದಿರುವುದರಿಂದ ಈಗ ಆತಂಕ ಹೆಚ್ಚಾಗಿದೆ. ಕೇವಲ ಮಕ್ಕಳು ಅಷ್ಟೇ ಅಲ್ಲ ದೊಡ್ಡವರಿಗೂ ಕಷ್ಟ. ಹೀಗಾಗಿ ಶಾಲೆಗಳನ್ನು ಸ್ವಲ್ಪ ದಿನದ ಮಟ್ಟಿಗೆ ತೆಗೆಯದೇ ಇರುವುದೇ ಒಳ್ಳೆಯದು ಎಂದು ಅನಿಸುತ್ತದೆ. 3 ಅಥವಾ 4 ತಿಂಗಳ ನಂತರ ಸೋಂಕಿನ ಪರಿಣಾಮ ಕಡಿಮೆಯಾದರೆ, ಆಗ ಶಾಲೆ ಶುರು ಮಾಡಬಹುದು. ಆದರೆ ಪೋಷಕರ ಎಚ್ಚರಿಕೆ ಮತ್ತು ಅವರ ಜವಾಬ್ದಾರಿ ಇದರಲ್ಲಿ ಹೆಚ್ಚು ಇರುತ್ತದೆ. ಯಾವುದೇ ಸೋಂಕಿನ ಲಕ್ಷಣ ಕಂಡರು ಹತ್ತಿರದ ಆಸ್ಪತ್ರೆಗೆ ತೆರಳಿ ಪರೀಕ್ಷೆ ನಡೆಸಿಕೊಳ್ಳುವುದು ಅಗತ್ಯ ಎನ್ನುತ್ತಾರೆ ಅವರು.
ಕಳೆದ ವರ್ಷ 2020ರ ಈ ಹೊತ್ತಿಗೆ ನಾವು ಕೊರೊನಾವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಸಮಯದಲ್ಲಿ ಮಕ್ಕಳು ಅಜ್ಜಿ ಮನೆಗಳಿಗೆ ಹೋಗುವುದಕ್ಕೆ ಪ್ಲಾನ್ ಮಾಡಿದ್ದರು. ಇದಕ್ಕೆ ಕಾರಣ ಬೇಸಿಗೆಯ ರಜೆ ಆಗತಾನೆ ಶುರುವಾಗಿತ್ತು. ಆದರೆ ಲಾಕ್ಡೌನ್ ಆಗಿ ಎಲ್ಲೂ ಹೋಗದೆ ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಮಕ್ಕಳು ಇರುವಂತೆ ಆಯ್ತು. ಇದರಿಂದಾಗಿ ಮಕ್ಕಳ ಮಾನಸಿಕ ಸ್ಥಿತಿ ಹದಗೆಟ್ಟಿತ್ತು ಮತ್ತು ಮಾನಸಿಕವಾಗಿ ಸಾಕಷ್ಟು ಪರಿಣಾಮ ಬೀರಿತು ಎಂದು ಮನಃಶಾಸ್ತ್ರಜ್ಞೆ ಸೌಜನ್ಯ ವಸಿಷ್ಠ ಅಭಿಪ್ರಾಯಪಟ್ಟರು.
ಆನ್ಲೈನ್ ತರಗತಿಯ ಕಾರಣದಿಂದಲೂ ಕೂಡ ಮಕ್ಕಳಲ್ಲಿ ಸಮಸ್ಯೆ ಎದುರಾಯಿತು. ಬೇಜಾರು ವಾತಾವರಣ, ಆರೋಗ್ಯಯುತವಲ್ಲದ ಆಹಾರದ ಅಭ್ಯಾಸ, ಮಕ್ಕಳು ಅತ್ತರೆ ಸಾಕು ಮೊಬೈಲ್ ಕೊಟ್ಟು ಸಮಾಧಾನ ಮಾಡುವ ಪೋಷಕರ ನಡುವೆ ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗಿದೆ. ಮುಂಚೆ ಶಾಲೆಗಳಲ್ಲಿ ನಾಳೆ ಏನಾಗುತ್ತದೆ ಎನ್ನುವ ಕೂತುಹಲ ಇತ್ತು. ಶಾಲೆಗೆ ಹೋಲಿಸಿದರೆ ಈಗೀನ ಆನ್ಲೈನ್ ತರಗತಿ ಒಂದು ರೀತಿಯ ಹೊಸ ಪರಿಕಲ್ಪನೆ. ಇದರಿಂದ ಮಕ್ಕಳಲ್ಲಿ ಮಾನಸಿಕ ಒತ್ತಡ ಶುರುವಾಯಿತು ಎನ್ನುತ್ತಾರೆ ಅವರು.
ಲಾಕ್ಡೌನ್ನಂತರ ಪೋಷಕರಲ್ಲಿ ಆರ್ಥಿಕ ಸಮಸ್ಯೆ ಉಂಟಾಗಿದ್ದು, ಇದು ಒಂದು ರೀತಿಯಲ್ಲಿ ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ. ಮತ್ತೆ ಪುನಃ ಎರಡನೇ ಅಲೆ ಪ್ರಾರಂಭವಾಗಿದ್ದು, ಇದು ಮುಂದುವರಿದರೆ ಮತ್ತೆ ಆತಂಕ ಇದೆ. ಇನ್ನು ಶಾಲೆಗಳಲ್ಲಿ ಒಂದು ಮಗು ಕೆಮ್ಮಿದರೆ ಅದರಿಂದ ಕೊರೊನಾ ಎಂದು ಹೆದರಿ ಪರೀಕ್ಷೆ ಸಂದರ್ಭದಲ್ಲಿ ಮಗು ಎಲ್ಲವನ್ನು ಮರೆತುಬಿಡಬಹುದು. ಮಕ್ಕಳಿಗೆ ಶಾಲೆಯಲ್ಲಿ ಮೊದಲು ಚಟುವಟಿಕೆಗಳು ಇತ್ತು .ಆದರೆ ಈಗ ಅದು ಇಲ್ಲ. ಈಗ ಮನೆಯೇ ಎಲ್ಲವೂ ಆಗಿದೆ. ಪೋಷಕರು ಹೀಗಾಗಿ ಮಕ್ಕಳಿಗೆ ಉತ್ತಮ ವಾತಾವರಣ ಸೃಷ್ಟಿ ಮಾಡಬೇಕು. ಮನೆಯಲ್ಲಿಯೇ ಯೋಗ ಇನ್ನಿತರ ಚಟವಟಿಕೆ ನಡೆಸಿ ಮಕ್ಕಳನ್ನು ಖುಷಿಯಾಗಿ ಇಡಬೇಕು. ಮಕ್ಕಳಲ್ಲಿ ಹೊಸ ಹವ್ಯಾಸ ಬೆಳೆಸಲು ಗಮನ ಕೊಡಬೇಕು. ಉದಾಹರಣೆಗೆ ಸಂಗೀತ ಅಥವಾ ಮಕ್ಕಳ ಆಸಕ್ತಿಗೆ ತಕ್ಕ ಹವ್ಯಾಸ ಬೆಳೆಸುವ ಪ್ರಯತ್ನ ಮಾಡಬೇಕು. ಭಗವಂತನ ಆಶೀರ್ವಾದ ಇದ್ದರೆ ಏನೂ ಆಗಲ್ಲ ಎನ್ನುವ ಧೈರ್ಯ ಹುಟ್ಟಿಸಿದರೆ ಮಕ್ಕಳು ಖುಷಿಯಾಗಿರುತ್ತಾರೆ ಎಂದು ಸೌಜನ್ಯ ವಸಿಷ್ಠ ತಿಳಿಸಿದರು.
ಇದನ್ನೂ ಓದಿ: Tv9 Digital Live | ಬೆಳಗಾವಿ ಉಪಚುನಾವಣೆ ಕಣದಲ್ಲಿ ಯಾವೆಲ್ಲಾ ವಿಷಯಗಳು ಚರ್ಚೆಗೆ ಬರಬಹುದು?
Published On - 9:38 pm, Mon, 29 March 21