ಬುರ್ಖಾ ಧರಿಸಿ ಬಂದು ಬೆಳ್ಳಿ ಲೋಟ ಖರೀದಿ ನಾಟಕ: 1.13 ಕೋಟಿ ರೂ. ಮೌಲ್ಯದ ಒಡವೆ ಕಳವು
ಚಿನ್ನದ ಕಳ್ಳರು ದಾವಣಗೆರೆ ಪೊಲೀಸರನ್ನು ಬೇನ್ನು ಬಿಡದೇ ಕಾಡುತ್ತಿದ್ದಾರೆ. ಇತ್ತೀಚೆಗೆ ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 17 ಕೆಜಿ ಚಿನ್ನ ವಶಪಡಿಸಿದ್ದ ಪೊಲೀಸರು, ದರೋಡ ಗ್ಯಾಂಗ್ ಸೆರೆ ಹಿಡಿದಿದ್ದರು. ಆದರೆ, ಈಗ ಲೇಡಿ ಗ್ಯಾಂಗ್ ಕಾಟ ಶುರುವಾಗಿದೆ. ಲೇಡಿ ಗ್ಯಾಂಗ್ ಒಂದು ಕೆಜಿಗೂ ಹೆಚ್ಚು ಚಿನ್ನ ಎಗರಿಸಿದೆ. ಬಂಗಾರದ ಅಂಗಡಿಯಲ್ಲಿ ಹೊಂಚುಹಾಕಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಬುರ್ಖಾಧಾರಿಗಳು ಎಗರಿಸಿದ್ದಾರೆ.

ದಾವಣಗೆರೆ, ಏಪ್ರಿಲ್ 4: ಚಿನ್ನದ ಅಂಗಡಿಯವರು ಮೈ ಎಲ್ಲಾ ಕಣ್ಣಾಗಿಸಿಕೊಂಡಿದ್ದರೂ ಸಾಕಾಗುವುದಿಲ್ಲ. ಅದ್ಹೇಗೋ ಕಣ್ತಪ್ಪಿಸಿ ಕಳವು ಮಾಡುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಅಂತಹದ್ದೇ ಒಂದು ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ. ಮಂಡಿಪೇಟೆಯಲ್ಲಿರುವ ರವಿ ಜ್ಯುವೆಲ್ಲರಿ ಶಾಪ್ಗೆ ವಾರದ ಹಿಂದೆ ಐದಾರು ಮಹಿಳೆಯರು ಬುರ್ಖಾ ಧರಿಸಿ ಬೆಳ್ಳಿ ಲೋಟ ಖರೀದಿಸಲು ಬಂದಿದ್ದರು. ಅದರಲ್ಲೂ ಮಧ್ಯಾಹ್ನದ ಸಮಯದಲ್ಲಿ ಕೆಲಸಗಾರರು ಊಟಕ್ಕೆ ಹೋಗಿದ್ದನ್ನು ನೋಡಿಕೊಂಡೇ ಬಂದಿದ್ದ ಮಹಿಳೆಯರು ಬೆಳ್ಳಿ ಲೋಟ (Silver Glass) ತೋರಿಸುವಂತೆ ಹೇಳಿದ್ದರು. ಅಲ್ಲಿದ್ದ ಕೆಲಸಗಾರರು ಬೆಳ್ಳಿ ಲೋಟಗಳನ್ನು ತೋರಿಸಿದ್ದಾರೆ. ಇದಕ್ಕಿಂತ ಒಳ್ಳೆಯ ಲೋಟಗಳನ್ನು ತೆಗೆದುಕೊಂಡು ಬನ್ನಿ ಎಂದಿದ್ದಾರೆ. ಆ ಸಂದರ್ಭದಲ್ಲಿ ಬೇರೆ ಡಿಸೈನ್ ಲೋಟಗಳನ್ನು ತರಲು ಕೆಲಸಗಾರರು ಹೋಗಿದ್ದೇ ತಡ ಬುರ್ಖಾ ಧರಿಸಿದ್ದ ಮಹಿಳೆಯರ ಗುಂಪಿನಲ್ಲಿದ್ದ ಒಬ್ಬಳು ಚಂಗನೆ ಎಗರಿ 1.13 ಕೋಟಿ ರೂ. ಮೌಲ್ಯದ 1 ಕೆಜಿ 400 ಗ್ರಾಂ ತೂಕದ ಬಂಗಾರದ ಜುಮುಕಿ, ಕಿವಿ ಓಲೆ ಇದ್ದ ಬಾಕ್ಸ್ ಅನ್ನು (Gold Theft) ಎಗರಿಸಿದ್ದಾಳೆ. ಅಲ್ಲದೆ, ಆ ನಂತರ ನಮಗೆ ಯಾವುದು ಕೂಡ ಬೆಳ್ಳಿ ಲೋಟ ಹಿಡಿಸಲಿಲ್ಲ ಎಂದು ಹೊರಟು ಹೋಗಿದ್ದಾರೆ.
ಬೆಳ್ಳಿ ಖರೀದಿಗೆ ಬಂದವರು ಚಿನ್ನ ಕಳವು ಮಾಡಿರುವ ಬಗ್ಗೆ ಒಂದು ವಾರದ ಬಳಿಕ ಅಂಗಡಿಯವರ ಗಮನಕ್ಕೆ ಬಂದಿದೆ. ಅಂಗಡಿಯ ಮಾಲೀಕರು ವಾರಕ್ಕೆ ಒಮ್ಮೆ ತಮ್ಮ ಅಂಗಡಿಯಲ್ಲಿ ಎಷ್ಟು ಬಂಗಾರ ಖರೀದಿಯಾಗಿದೆ? ಇನ್ನೆಷ್ಟು ಉಳಿದಿದೆ ಎಂದು ಲೆಕ್ಕಾ ಹಾಕುವಾಗ 1 ಕೆಜಿ 400 ಗ್ರಾಂ ಕಡಿಮೆ ಬಂದಿದೆ. ಎಷ್ಟು ಬಾರಿ ಲೆಕ್ಕ ಹಾಕಿದರೂ ವ್ಯತ್ಯಾಸ ಬಂದಿದ್ದು ನೋಡಿ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಬಸವನಗರ ಪೊಲೀಸ್ ಠಾಣೆಗೆ ಮಾಲೀಕರು ದೂರು ನೀಡಿದ್ದು, ಪೊಲೀಸರು ಖತರ್ನಾಕ್ ಕಳ್ಳೀಯರ ಜಾಡು ಹಿಡಿದಿದ್ದಾರೆ. ಮಂಡಿಪೇಟೆಯಲ್ಲಿರುವ ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಕಳ್ಳರ ಜಾಡು ದೊರೆತಿದೆ.
ಇದನ್ನೂ ಓದಿ: ದಾವಣಗೆರೆ: ಜಾತ್ರೆಗೆ ಬಂದಿದ್ದ ದಲಿತ ಮಹಿಳೆ ಮೇಲೆ ಬಸ್ನಲ್ಲಿ ಲೈಂಗಿಕ ದೌರ್ಜನ್ಯ ಯತ್ನ
ಇದೀಗ ಚಾಲಕಿ ಕಳ್ಳರ ಜಾಡು ಹಿಡಿದಿರುವ ಪೊಲೀಸರಿಗೆ ಅವರನ್ನು ಪತ್ತೆಹಚ್ಚುವುದೇ ಕಷ್ಟವಾಗಿದೆ. ಅಲ್ಲದೆ ಪ್ರಕರಣ ನಡೆದು ಒಂದು ವಾರದ ನಂತರ ಬೆಳಕಿಗೆ ಬಂದಿದ್ದು, ಇದೇ ಪೊಲೀಸರಿಗೆ ಸವಾಲಾಗಿದೆ. ದಾವಣಗೆರೆ ನಗರದ ಬಹುತೇಕ ಕಡೆ ಸುಮಾರು 526 ಸಿಸಿ ಕ್ಯಾಮರಾ ಇದ್ದು, ಅವುಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಕಳ್ಳತನ ಮಾಡಿದವರನ್ನು ಬಂಧಿಸುವ ಬಗ್ಗೆ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.