ದಾವಣಗೆರೆ: ಜಾತ್ರೆಗೆ ಬಂದಿದ್ದ ದಲಿತ ಮಹಿಳೆ ಮೇಲೆ ಬಸ್‌ನಲ್ಲಿ ಲೈಂಗಿಕ ದೌರ್ಜನ್ಯ ಯತ್ನ
ದಾವಣಗೆರೆಯಲ್ಲಿ ಖಾಸಗಿ ಬಸ್‌ನಲ್ಲಿ ದಲಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಚಾಲಕ, ನಿರ್ವಾಹಕ ಮತ್ತು ಏಜೆಂಟ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಕಿರುಚಾಟದಿಂದಾಗಿ ಸಾರ್ವಜನಿಕರು ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಉಚ್ಚಂಗಿದುರ್ಗದ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ, ಏಪ್ರಿಲ್ 02: ಬಸ್‌ನಲ್ಲಿ ದಲಿತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ (Sexual Assault) ಯತ್ನಿಸಿದ್ದ ಖಾಸಗಿ ಬಸ್ ಚಾಲಕ, ನಿರ್ವಾಹಕ ಮತ್ತು ಬಸ್ ಏಜೆಂಟ್ನನ್ನು ಅರಸೀಕೆರೆ (Arasikere) ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಟ್ಟೂರು ತಾಲೂಕಿನ ಅಲಬೂರ ನಿವಾಸಿ ಪ್ರಕಾಶ ಮಡಿವಾಳರ (42), ಹರಪನಹಳ್ಳಿ ತಾಲೂಕಿನ ಅರಸೀಕೆರೆ ನಿವಾಸಿಗಳಾದ ಕಂಡಕ್ಟರ್ ರಾಜಶೇಖರ್ (40) ಹಾಗೂ ಬಸ್ ಎಜೆಂಟ್ ಸುರೇಶ್ (46) ಬಂಧಿತ ಆರೋಪಿಗಳು. ಆರೋಪಿಗಳು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸುತ್ತಿದ್ದ ವೇಳೆ ಮಹಿಳೆ ಕಿರುಚಾಡಿದ್ದಾರೆ. ಮಹಿಳೆಯ ಕಿರುಚಾಟ ಕೇಳಿ ಸಾರ್ವಜನಿಕರು ರಕ್ಷಣೆ ಮಾಡಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಚನ್ನಾಪುರ ಗ್ರಾಮದ ಬಳಿ ಘಟನೆ ನಡೆದಿದೆ.
ಬೆಳಗಾವಿ ಮೂಲದ ಮಹಿಳೆ ಉಚ್ಚಂಗಿದುರ್ಗದ ಉಚ್ಚಂಗೆಮ್ಮನ ಜಾತ್ರೆಗೆ ಬಂದಿದ್ದರು. ಜಾತ್ರೆ ಮುಗಿಸಿಕೊಂಡು ದಾವಣಗೆರೆಗೆ ಹೋಗಲು ಮಹಿಳೆ ಮಂಗಳವಾರ ರಾತ್ರಿ ಬಸ್ಸಿಗಾಗಿ ಕಾಯುತ್ತಿದ್ದರು. ಬನಶಂಕರಿ ಎಂಬ ಹೆಸರಿನ ಖಾಸಗಿ ಬಸ್ ಬಂದಿತ್ತು. ಆಗ, ಬಸ್‌ನಲ್ಲಿ ಹತ್ತು ಜನ ಪ್ರಯಾಣಿಕರಿದ್ದರು. ಮಹಿಳೆ ಬಸ್ ಹತ್ತಿದ್ದಾರೆ. ಮುಂದಿನ ನಿಲ್ದಾಣದಲ್ಲಿ ಬಸ್ನಲ್ಲಿದ್ದ 10 ಮಂದಿ ಪ್ರಯಾಣಿಕರು ಇಳಿದಿದ್ದಾರೆ. ನಂತರ. ಬಸ್‌ನಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಮಾತ್ರ ಇದ್ದರು. ಎರಡು ಸಣ್ಣ ಮಕ್ಕಳೊಂದಿಗೆ ಒಬ್ಬಂಟಿ ಮಹಿಳೆ ಇರುವುದನ್ನು ಮೂರು ಜನ ಆರೋಪಿಗಳು ಗಮನಿಸಿದ್ದಾರೆ.
ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ಸೂಟ್ಕೇಸ್ನಲ್ಲಿ ತುಂಬಿದ್ದ ಕೇಸ್: ಕೊಲೆಗೆ ಕಾರಣ ಬಿಚ್ಚಿಟ್ಟ ಪತಿ
ನಂತರ, ಬಸ್ ಚಾಲಕ ಮಾರ್ಗ ಬದಲಿಸಿದ್ದಾನೆ. ಉಚ್ಚಂಗಿದುರ್ಗದಿಂದ ದಾವಣಗೆರೆ ಕಡೆಗೆ ಹೋಗುವ ಬದಲು ಚನ್ನಾಪುರದ ಕಡೆಗೆ ಬಸ್ ತೆಗೆದುಕೊಂಡು ಹೋಗಿದ್ದಾನೆ. ಬಳಿಕ, ಅಲ್ಲಿ, ಮೂವರು ಸೇರಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಕಿರುಚಾಡಿದ್ದಾರೆ. ಆಗ, ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಮಹಿಳೆಯನ್ನು ರಕ್ಷಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.