ರನ್ಯಾ ಪೊಲೀಸ್ ಪ್ರೋಟೋಕಾಲ್ ಬಳಸುತ್ತಿದ್ದು ಮಲತಂದೆ ಡಿಜಿಪಿ ರಾಮಚಂದ್ರಗೆ ಗೊತ್ತಿತ್ತಾ? ವರದಿಯಲ್ಲಿ ಸ್ಫೋಟಕ ಅಂಶ ಬಯಲು
ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಪೊಲೀಸ್ ಶಿಷ್ಟಾಚಾರ ದುರುಪಯೋಗ ಆರೋಪದ ಕುರಿತು ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅವರು ಸರ್ಕಾರಕ್ಕೆ 230 ಪುಟಗಳ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ಡಿಜಿಪಿ ರಾಮಚಂದ್ರರಾವ್ ಅವರ ಪಾತ್ರದ ಬಗ್ಗೆಯೂ ವಿವರಗಳಿವೆ. ರನ್ಯಾ ರಾವ್ ತಂದೆಯ ಪಾತ್ರವನ್ನೂ ತನಿಖೆ ಮಾಡಲಾಗಿದೆ. ಈ ವರದಿಯು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಭದ್ರತಾ ಕ್ರಮಗಳನ್ನು ಪ್ರಶ್ನಿಸಿದೆ.

ಬೆಂಗಳೂರು, ಮಾರ್ಚ್ 30: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) 14.2 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟಮಾಡುವಾಗ (Gold Smuggling) ಡಿಆರ್ಐ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ರನ್ಯಾ ರಾವ್ (Ranya Rao) ಅವರನ್ನು ಬಂಧಿಸಿದ್ದರು. ಬಳಿಕ ಪ್ರಕರಣದಲ್ಲಿ ಪೊಲೀಸ್ ಪ್ರೋಟೋಕಾಲ್ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಸರ್ಕಾರ, ಈ ಪ್ರಕರಣದಲ್ಲಿ ಪ್ರೋಟೋಕಾಲ್ ದುರ್ಬಳಕೆಯ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಗೆ ಆದೇಶಿಸಿತ್ತು. ಈಗ ವರದಿ ಸಿದ್ದವಾಗಿದ್ದು ರವಿವಾರ (ಮಾ.30) ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಪೊಲೀಸ್ ಪ್ರೋಟೋಕಾಲ್ ಬಳಕೆಗೆ ರನ್ಯಾ ರಾವ್ ಮಲತಂದೆ, ಡಿಜಿಪಿ ರಾಮಚಂದ್ರರಾವ್ ಸೂಚಿಸಿರಲಿಲ್ಲ. ಆದರೆ, ರನ್ಯಾ ರಾವ್ ಪ್ರೋಟೋಕಾಲ್ ಬಳಕೆ ಮಾಡುತ್ತಿದ್ದು ಗೊತ್ತಿತ್ತು ಎಂದು ವಿಚಾರಣೆ ವೇಳೆ ಹೇಳಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ದುರ್ಬಳಕೆ ಹಾಗೂ ಇದರಲ್ಲಿ ಡಿಜಿಪಿ ರಾಮಚಂದ್ರರಾವ್ ಅವರ ಪಾತ್ರ ಕುರಿತು ತನಿಖೆ ಪೂರ್ಣಗೊಳಿಸಿರುವ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 230 ಪುಟಗಳ ವರದಿ ಸಲ್ಲಿಸಿದ್ದಾರೆ.
ಸರ್ಕಾರಿ ವಾಹನದಲ್ಲೇ ರನ್ಯಾ ಚಿನ್ನ ಸಾಗಾಟ
ರನ್ಯಾ ರಾವ್ ಚಿನ್ನವನ್ನು ಅಕ್ರಮವಾಗಿ ವಿಮಾನ ನಿಲ್ದಾಣದಿಂದ ಹೇಗೆ ಸಾಗಿಸುತ್ತಿದ್ದಳು ಎಂಬುವುದು ಪತ್ತೆಹಚ್ಚಿದ್ದಾರೆ. ದುಬೈನಿಂದ ಅಕ್ರಮವಾಗಿ ತಂದ ಚಿನ್ನವನ್ನು ನಟಿ ರನ್ಯಾ ರಾವ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸರ್ಕಾರಿ ವಾಹನದಲ್ಲಿ ಸಾಗಿಸುತ್ತಿದ್ದರು ಎಂಬುವುದು ಡಿಆರ್ಐ ತನಿಖೆ ವೇಳೆ ಬಹಿರಂಗವಾಗಿತ್ತು.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳಿಗೆ ಎರಡು ಹೆಚ್ಚುವರಿ ಕಾರುಗಳನ್ನು ನೀಡಲಾಗುತ್ತದೆ. ಈ ಹೆಚ್ಚುವರಿ ಕಾರು ಅಧಿಕಾರಿಯವರ ಕುಟುಂಬದವರಿಗೆ ಬಳಕೆಯಾಗುತ್ತದೆ. ಅದೇ ರೀತಿ, ಡಿಜಿಪಿ ರಾಮಚಂದ್ರ ರಾವ್ ಅವರಿಗೂ ಕೂಡ ಸರ್ಕಾರ ಹೆಚ್ಚುವರಿ ಕಾರು ನೀಡಲಾಗಿತ್ತು. ಈ ಸರ್ಕಾರಿ ವಾಹನದಲ್ಲೇ ರನ್ಯಾ ರಾವ್ ಚಿನ್ನವನ್ನು ಸಾಗಿಸಿದ್ದಾರೆ. ರನ್ಯಾ ರಾವ್ ಇದೇ ವಾಹನದಲ್ಲಿ ಹಲವು ಬಾರಿ ವಿಮಾನ ನಿಲ್ದಾಣಕ್ಕೆ ಓಡಾಡುತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿತ್ತು.
ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಂಗ್ಲಿಂಗ್ ಕೇಸ್: 2ನೇ ಆರೋಪಿ ತರುಣ್ಗೆ ಬಿಗ್ ಶಾಕ್!
ರನ್ಯಾಗೆ ಇಡಿ, ಸಿಬಿಐ ಸೆರೆ ಭೀತಿ
ಚಿನ್ನ ಕಳ್ಳಸಾಗಾಣಿಕೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐ ತನಿಖಾ ಸಂಸ್ಥೆಗಳು ಕೂಡ ತನಿಖೆ ನಡೆಸುತ್ತಿವೆ. ಬಂಧಿತ ನಟಿ ರನ್ಯಾ ರಾವ್ ಜಾಮೀನು ಅರ್ಜಿ ತಿರಸ್ಕೃತ ಬೆನ್ನಲ್ಲೇ ಇಡಿ, ಸಿಬಿಐನಿಂದ ಬಂಧನ ಭೀತಿ ಎದುರಾಗಿದೆ. ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಗೆ ರನ್ಯಾ ರಾವ್ರನ್ನು ಮೊದಲು ಇಡಿ ಅಧಿಕಾರಿಗಳು ಬಳಿಕ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.