3 ರಾಜ್ಯಗಳು, 4 ರೈಲ್ವೆ ಯೋಜನೆ; 18,658 ಕೋಟಿ ರೂ ಹೂಡಿಕೆ: ಕೇಂದ್ರ ಸಂಪುಟ ಅನುಮೋದನೆ
₹18,658 Crore Rail Projects Approved: ಭಾರತೀಯ ರೈಲ್ವೆ ಸಂಸ್ಥೆ ಮೂರು ರಾಜ್ಯಗಳಲ್ಲಿ ಕೈಗೊಂಡಿರುವ ವಿವಿಧ ನಾಲ್ಕು ರೈಲ್ವೆ ಯೋಜನೆಗಳಿಗೆ 18,658 ಕೋಟಿ ರೂ ಹೂಡಿಕೆ ಮಾಡಲಾಗುತ್ತಿದೆ. ಕೇಂದ್ರ ಸಂಪುಟ ಈ ಯೋಜನೆಗಳಿಗೆ ಹಸಿರು ನಿಶಾನೆ ತೋರಿದೆ. ಮಹಾರಾಷ್ಟ್ರ, ಛತ್ತೀಸ್ಗಡ ಮತ್ತು ಒಡಿಶಾ ರಾಜ್ಯಗಳಲ್ಲಿ ನಡೆಯಲಿರುವ ಈ ಯೋಜನೆಗಳಿಂದ ಬಹಳಷ್ಟು ಉಪಯೋಗವಾಗುವ ನಿರೀಕ್ಷೆ ಇದೆ.

ನವದೆಹಲಿ, ಏಪ್ರಿಲ್ 4: ಮಹಾರಾಷ್ಟ್ರ, ಒಡಿಶಾ ಮತ್ತು ಛತ್ತೀಸ್ಗಡ ರಾಜ್ಯಗಳಲ್ಲಿ ನಾಲ್ಕು ರೈಲ್ವೆ ಯೋಜನೆಗಳಿಗೆ (Railway projects) 18,658 ಕೋಟಿ ರೂ ಹೂಡಿಕೆ ಮಾಡಲು ಕೇಂದ್ರ ಸಂಪುಟ ಅಸ್ತು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಅನುಮೋದನೆ ಸಿಕ್ಕಿದೆ. ಈ ನಾಲ್ಕು ರೈಲ್ವೆ ಯೋಜನೆಗಳು ಪೂರ್ಣಗೊಂಡ ಬಳಿಕ ಭಾರತೀಯ ರೈಲ್ವೆಯ ಒಟ್ಟು ನೆಟ್ವರ್ಕ್ ಸುಮಾರು 1,247 ಕಿಮೀಯಷ್ಟು ಹೆಚ್ಚು ವಿಸ್ತಾರ ಪಡೆಯಲಿದೆ.
‘ಮಹಾರಾಷ್ಟ್ರ, ಛತ್ತೀಸ್ಗಡ್ ಮತ್ತು ಒಡಿಶಾ ರಾಜ್ಯಗಳ 15 ಜಿಲ್ಲೆಗಳಲ್ಲಿ ನಡೆಯುವ ನಾಲ್ಕು ಮಲ್ಟಿಟ್ರ್ಯಾಕಿಂಗ್ ಪ್ರಾಜೆಕ್ಟ್ಗಳು 2030-31ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಪ್ರಯಾಣಿಕ ಸಾಗಣೆ ಮತ್ತು ಸರಕು ಸಾಗಣೆ ಎರಡೂ ಕೂಡ ಹೆಚ್ಚು ಸುಗಮಗೊಳ್ಳಲಿದೆ. ಸಾಗಣೆ ವೆಚ್ಚವೂ ಕಡಿಮೆ ಆಗುತ್ತದೆ. ರೈಲ್ವೆ ಕಾರ್ಯಾಚರಣೆಯ ಕ್ಷಮತೆಯೂ ವೃದ್ಧಿಸುತ್ತದೆ’ ಎಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಹೇಳಿಕೆ ನೀಡಿದೆ.
ಇದನ್ನೂ ಓದಿ: ಸ್ಟಾರ್ಟಪ್ ಅಂದ್ರೆ ಐಸ್ಕ್ರೀಮ್ ರೀಪ್ಯಾಕೇಜ್ ಮಾಡೋದಲ್ಲ ಎಂದ ಸಚಿವ ಗೋಯಲ್; ಉದ್ಯಮಿಗಳ ಅಸಮಾಧಾನ
ಐದು ವರ್ಷದವರೆಗೂ ನಡೆಯಲಿರುವ ಈ ನಾಲ್ಕು ಯೋಜನೆಗಳು 3 ರಾಜ್ಯಗಳ 15 ಜಿಲ್ಲೆಗಳ 3,350 ಗ್ರಾಮಗಳಿಗೆ ಉತ್ತಮ ಸಂಪರ್ಕ ಕಲ್ಪಿಸಲು ನೆರವಾಗುತ್ತದೆ. ಈ ಯೋಜನೆಗಳಲ್ಲಿ 19 ಹೊಸ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಲಿವೆ. 47 ಲಕ್ಷ ಜನರಿಗೆ ಅನುಕೂಲವಾಗಲಿದೆ. ನಿರ್ಮಾಣ ಕಾಮಗಾರಿಗಳ ಮೂಲಕ 379 ಲಕ್ಷ ಮಾನವ ದಿನಗಳಷ್ಟು ಪ್ರಮಾಣದಲ್ಲಿ ಕಾರ್ಮಿಕರಿಗೆ ಕೆಲಸ ಸಿಗುತ್ತದೆ.
19 ಕೋಟಿ ಮರಗಳಿಗೆ ಸಮನಾದಷ್ಟು ಮಾಲಿನ್ಯ ಇಳಿಕೆ
ಭಾರತೀಯ ರೈಲ್ವೆ ಈ ಬೃಹತ್ ನಾಲ್ಕು ಯೋಜನೆಗಳಿಂದ ಇನ್ನೂ ಹಲವು ಮಹತ್ವದ ಲಾಭಗಳು ಸಿಗುವ ನಿರೀಕ್ಷೆ ಇದೆ. ಹೆಚ್ಚು ಸರಕು ಸಾಗಣೆ ಸಾಧ್ಯವಾಗುತ್ತದೆ. ಕಡಿಮೆ ಸಾಗಣೆ ವೆಚ್ಚ ಸಾಕಾಗುತ್ತದೆ. 95 ಕೋಟಿ ಲೀಟರ್ನಷ್ಟು ತೈಲ ಆಮದು ಕಡಿಮೆ ಆಗುತ್ತದೆ. 477 ಕೋಟಿ ಕಿಲೋನಷ್ಟು ಕಾರ್ಬನ್ ಡೈಆಕ್ಸೈಡ್ ಎಮಿಷನ್ ಕಡಿಮೆ ಆಗುತ್ತದೆ. 19 ಕೋಟಿ ಮರಗಳನ್ನು ನೆಡುವುದಕ್ಕೆ ಸಮ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: Crop Insurance: ರೈತರಿಗೆ ಬೆಳೆ ವಿಮೆ ಯೋಜನೆ ಪಿಎಂಎಫ್ಬಿವೈ; ಪಿಎಂ ಫಸಲ್ ಬಿಮಾ ಯೋಜನೆಯ ಸಮಗ್ರ ಮಾಹಿತಿ
ನಾಲ್ಕು ರೈಲ್ವೆ ಯೋಜನೆಗಳು ಎಲ್ಲೆಲ್ಲಿ?
- ಒಡಿಶಾದ ಸಂಬಲಪುರ್ನಲ್ಲಿ ಜರಪದದ 3ನೇ ಮತ್ತು 4ನೇ ಮಾರ್ಗ ನಿರ್ಮಾಣ.
- ಒಡಿಶಾದ ಝರಸುಗುದದ ಸಾಸೋನ್ನಲ್ಲಿ 3ನೇ ಮತ್ತು 4ನೇ ಮಾರ್ಗ ನಿರ್ಮಾಣ.
- ಛತ್ತೀಸ್ಗಡದ ಖಾರ್ಸಿಯಾ – ನಯಾ ರಾಯಪುರ್ – ಪರ್ಮಾಲಕಸದಲ್ಲಿ 5ನೇ ಮತ್ತು 6ನೇ ಮಾರ್ಗ ನಿರ್ಮಾಣ
- ಮಹಾರಾಷ್ಟ್ರದ ಗೋಂಡಿಯಾ ಮತ್ತು ಬಲ್ಹರ್ಶಾದಲ್ಲಿ ರೈಲು ಡಬ್ಲಿಂಗ್ ಕಾರ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ