ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್: ನ್ಯಾಯಾಂಗ ತನಿಖೆಗೆ ಆದೇಶಿದ ಕೋರ್ಟ್
ಬೆಳಗಾವಿ ಅಧಿವೇಶನ ವೇಳೆ ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿ ಪ್ರಹಾರ ಪ್ರಕರಣ ಮತ್ತೆ ಮುನ್ನೆಲೆ ಬಂದಿದೆ. ಪ್ರಕರಣವನ್ನು ಖಂಡಿಸಿ ಭಾರೀ ಪ್ರತಿಭಟನೆಗಳು ಆಗಿದ್ದು, ಲಾಠಿ ಬೀಸಿದ ಪೊಲೀಸರ ಅಮಾನತ್ತಿಗೆ ಪಂಚಮಸಾಲಿ ಸಮುದಾಯ ಆಗ್ರಹಿಸಿತ್ತು. ಇದರ ಮಧ್ಯ ಇದೀಗ ಧಾರವಾಡ ಹೈಕೋರ್ಟ್ ಪೀಠ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ಬೆಂಗಳೂರು, (ಏಪ್ರಿಲ್ 04): ಪಂಚಮಸಾಲಿ (panchamasali) ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ (judicial probe) ಧಾರವಾಡ ಹೈಕೋರ್ಟ್ ಪೀಠ (dharwad High Court Bench) ಆದೇಶಿಸಿದೆ. ಬೆಳಗಾವಿ ಅಧಿವೇಶನ ವೇಳೆ ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿ ಪ್ರಹಾರ ಪ್ರಕರಣ ಕುರಿತು ತನಿಖೆಗೆ ಆದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಿದ್ದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆಗೆ ನಡೆಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೇ ಕಾಲ ಮಿತಿಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದೆ.
ಕೋರ್ಟ್ ತೀರ್ಪು ಸ್ವಾಗತಿಸಿದ ಸ್ವಾಮೀಜಿ
ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಜಯಮೃತ್ಯುಂಜಯ ಸ್ವಾಮೀಜಿ, ಲಾಠಿ ಚಾರ್ಜ್ ಪ್ರಕರಣ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಧಾರವಾಡ ಹೈಕೋರ್ಟ್ ಆದೇಶ ಹಿನ್ನಲೆ ವಿಜಯಪುರ ನಗರದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ವಾಗತ ಹೈಕೋರ್ಟ್ ಅದೇಶದಿಂದ ನಮಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ಪೊಲೀಸ್ ಬಲ ಪ್ರಯೋಗಿಸಿ ಕಾಂಗ್ರೆಸ್ ಸರ್ಕಾರ ನಮ್ಮ ಹೋರಾಟ ಹತ್ತಿಕ್ಕೋ ಕೆಲಸ ಮಾಡಿತ್ತು. ಮಫ್ತಿಯಲ್ಲಿದ್ದ ಪೊಲೀಸರೇ ಗಲಾಟೆ ಮಾಡಿದ್ದರು. ಲಾಠಿ ಚಾರ್ಜ್ ಮಾಡಿಸೋ ಮೂಲಕ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಹತ್ತಿಕ್ಕೋ ಕೆಲಸ ಮಾಡಲಾಗಿತ್ತು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಿಲ್ಲ. ಯಾರನ್ನು ಅಮಾನತ್ತು ಮಾಡಲಿಲ್ಲ. ಸರ್ಕಾರ ಪೊಲೀಸರ ಪರವಾಗಿ ನಡೆದುಕೊಂಡಿತು. ಲಾಠಿ ಜಾರ್ಜ್ ಮಾಡಿದ್ದನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಪೀಠದ ಮೊರೆ ಹೋಗಿದ್ದೇವು. ವಿಚಾರಣೆ ನಡೆಸಿದ ಪೀಠ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶ ನೀಡಿದೆ. ನ್ಯಾಯಾಂಗ ತನಿಖೆಯಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್: ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ
2ಎ ಮೀಸಲಾತಿಗಾಗಿ ಸುವರ್ಣ ಸೌಧ ಮುತ್ತಿಗೆ ಯತ್ನಿಸಿದ್ದ ಪಂಚಮಸಾಲಿ ಸಮುದಾಯದ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸರ್ಕಾರದ ನಡೆ ಖಂಡಿಸಿ ಬಿಜೆಪಿ ಹಾಗೂ ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆ ನಡೆಸಿದ್ದು, ತಮ್ಮ ಸಮುದಾಯದ ಜನರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರನ್ನ ಅಮಾನತು ಮಾಡುವಂತೆ ಆಗ್ರಹಿಸಿದ್ದರು.
ಆದ್ರೆ, ಸರ್ಕಾರ ಯಾವುದೇ ಪ್ರತಿಭಟನೆಗೆ ಸ್ಪಂದಿಸದ ಕಾರಣ ಸಿಡಿದೆದ್ದ ಬಸವ ಜಯಮೃತ್ಯುಂಜಯ ಸ್ವಾಮಿ ಹಾಗೂ ಮತ್ತಿತರರು ಈ ಲಾಠಿ ಚಾರ್ಜ್ ಪ್ರಕರಣ ಕುರಿತು ತನಿಖೆಗೆ ಆದೇಶಿಸಲು ಕೋರಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇನ್ನು ಹೋರಾಟಗಾರರ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದಿಸಿದ್ದು, ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟಿಸುವಾಗ ದುರುದ್ದೇಶಪೂರಿತವಾಗಿ ಲಾಠಿ ಚಾರ್ಜ್ ನಡೆಸಲಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಏನಿದು ಪ್ರಕರಣ?
ಪಂಚಮಸಾಲಿ ಸಮುದಾಯದವನ್ನು 2 ಎ ಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಚಳಿಗಾಲದ ಅಧಿವೇಶನದ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆದಿತ್ತು. ಕಲ್ಲು ತೂರಾಟ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ಲಾಠಿ ಚಾರ್ಜ್ನಲ್ಲಿ ಹಲವು ಪ್ರತಿಭಟನೆಕಾರರಿಗೆ ಗಾಯಗಳಾಗಿದ್ದವು. ಇದರಿಂದ ಸಿಡಿದೆದ್ದ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರ ವಿರುದ್ಧ ಬೀದಿಗಳಿದು ಪ್ರತಿಭಟನೆ ಮಾಡಿದ್ದರು.
ಇದನ್ನೂ ಓದಿ: ಪಂಚಮಸಾಲಿ ಹೋರಾಟ: ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್: ಆದೇಶ ಪಾಲನೆ ಸರಿಯಾದ ಕ್ರಮವೆಂದ ಸಿಎಂ ಸಿದ್ದರಾಮಯ್ಯ
ಕಲಾಪದಲ್ಲೂ ಗದ್ದಲ ಎಬ್ಬಿಸಿದ್ದ ಪ್ರಕರಣ
ಇನ್ನು ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲೂ ಪಂಚಮಸಾಲಿ ಹೋರಾಟದ ಗದ್ದಲ ತೀವ್ರಗೊಂಡಿತ್ತು. ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಡೆಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು ಈ ವೇಳೆ ಉತ್ತರ ಕೊಟ್ಟ ಗೃಹ ಸಚಿವ ಡಾ. ಜಿ ಪರಮೇಶ್ವರ್, ಹತ್ತು ಸಾವಿರ ಜನರನ್ನು ಸುವರ್ಣಸೌಧದ ಒಳಗಡೆ ಬಿಡಲು ಆಗುತ್ತಾ? ಅಧಿವೇಶನ ನಡೆಯುವಾಗ ನಿಷೇಧಾಜ್ಞೆ ಜಾತಿಯಲ್ಲಿತ್ತು. ಇದನ್ನು ಪ್ರತಿಭಟನಾಕಾರರಿಗೆ ಪೊಲೀಸರು ತಿಳಿಸಿದ್ದಾರೆ. ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರಲು ಸಾಧ್ಯವೇ? ಜವಾಬ್ದಾರಿಯುತ ಸರ್ಕಾರವಾಗಿ ಪ್ರತಿಭಟನಾಕಾರರು ಸುವರ್ಣ ಸೌಧಕ್ಕೆ ನುಗ್ಗಲು ಹೊರಟಾಗ ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ಇದನ್ನು ತಪ್ಪು, ಸರಿ ಎಂದು ಹೇಳಲ್ಲ ಎಂದು ಪೊಲೀಸರ ಲಾಠಿ ಚಾರ್ಜ್ ಅನ್ನು ಸಮರ್ಥಿಸಿಕೊಂಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Fri, 4 April 25