- Kannada News Photo gallery Cricket photos RCB IPL 2026 Champions: Unsung Heroes Behind Consecutive Title Win
ಆರ್‌ಸಿಬಿ ಗೆಲುವಿಗಾಗಿ ಶ್ರಮಿಸಿದ ಈ ತೆರೆ ಮರೆಯ ಹೀರೋಗಳನ್ನು ಮರೆಯುವುದುಂಟೆ..!
RCB Unsung Heroes: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026 ಪ್ರಶಸ್ತಿಯನ್ನು ಸತತ ಎರಡನೇ ಬಾರಿಗೆ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಭವ್ಯ ಯಶಸ್ಸಿನ ಹಿಂದೆ, ಆಂಡಿ ಫ್ಲವರ್, ದಿನೇಶ್ ಕಾರ್ತಿಕ್, ಮೋ ಬೊಬಟ್, ಓಂಕಾರ್ ಸಾಲ್ವಿ, ರಿಚರ್ಡ್ ಹಲ್ಸಾಲ್ ಮುಂತಾದ ತೆರೆಮರೆಯ ಹೀರೋಗಳ ಶ್ರಮ, ತಂತ್ರಗಾರಿಕೆ ಮತ್ತು ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ತಂಡದ ಈ ಸಾಧನೆಗೆ ಪ್ರತಿಯೊಬ್ಬರ ಕೊಡುಗೆಯೂ ಅಪಾರ.
Updated on: Jun 01, 2026 | 7:10 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2026 ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಆರ್‌ಸಿಬಿ ಸತತ ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿತು. ತಂಡದ ಈ ಯಶಸ್ಸಿನಲ್ಲಿ ಎಲ್ಲಾ ಆಟಗಾರರ ಶ್ರಮವಿದೆ. ಆಟಗಾರರ ಜೊತೆಗೆ ತಂಡದ ಯಶಸ್ಸಿಗಾಗಿ ದುಡಿದ ತೆರೆಮರೆಯ ಹೀರೋಗಳನ್ನು ನೆನಪಿಸಿಕೊಳ್ಳುವುದು ಅವಶ್ಯಕವಾಗಿದೆ (PC- IPL X).

ಆರ್‌ಸಿಬಿ ತಂಡದ ಗೆಲುವಿನ ಕೀರ್ತಿಯಲ್ಲಿ ಮುಖ್ಯ ಕೋಚ್ ಆಂಡಿ ಫ್ಲವರ್ ಸಿಂಹ ಪಾಲು ಪಡೆಯುತ್ತಾರೆ. ಫ್ಲವರ್ ಮುಖ್ಯ ಕೋಚ್ ಆದ ನಂತರ, ಆರ್‌ಸಿಬಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದೆ. ತಮ್ಮ ನೇತೃತ್ವದಲ್ಲಿ ತಂಡವನ್ನು 2022 ರಿಂದ 2024 ರವರೆಗೆ ಪ್ಲೇಆಫ್‌ಗೆ ಕರೆದೊಯ್ದ್ದಿದ್ದ ಫ್ಲವರ್, 2025 ಮತ್ತು 2026 ರಲ್ಲಿ ಚಾಂಪಿಯನ್ ಮಾಡಿದ್ದಾರೆ (PC- PTI).

ತಂಡದ ಮಾರ್ಗದರ್ಶಕ ಮತ್ತು ಬ್ಯಾಟಿಂಗ್ ಕೋಚ್ ಆಗಿರುವ ದಿನೇಶ್ ಕಾರ್ತಿಕ್, ಆರ್‌ಸಿಬಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದಿನೇಶ್ ಕಾರ್ತಿಕ್ ಅವರ ದೊಡ್ಡ ಶಕ್ತಿ ಎಂದರೆ ಅವರು ಪ್ರತಿಯೊಬ್ಬ ಆಟಗಾರನಿಗೂ ಸಾಕಷ್ಟು ಸಮಯವನ್ನು ಮೀಸಲಿಟ್ಟು ಅವರೊಂದಿಗೆ ಮುಕ್ತವಾಗಿ ಸಂವಹನ ನಡೆಸುತ್ತಾರೆ. ಆಟಗಾರನಿಗೆ ಅವರ ದೌರ್ಬಲ್ಯಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಸುಧಾರಿಸುವುದು ಎಂಬುದರ ಬಗ್ಗೆ ನೇರವಾಗಿ ಹೇಳುತ್ತಾರೆ. ಐಪಿಎಲ್ ಹರಾಜಿನಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದ ಕಾರ್ತಿಕ್ ಅವರ ಸಲಹೆಗಳಿಂದಲೇ ಆರ್‌ಸಿಬಿ ಹಲವಾರು ಆಟಗಾರರನ್ನು ಖರೀದಿಸಿತು. ಭುವನೇಶ್ವರ್ ಕುಮಾರ್ ಅವರನ್ನು ಆರ್‌ಸಿಬಿಗೆ ಸೇರಿಸಿಕೊಳ್ಳುವ ಹಿಂದಿನ ಪ್ರೇರಕ ಶಕ್ತಿ ದಿನೇಶ್ ಕಾರ್ತಿಕ್ (PC- PTI).

2023-24ರ ಆವೃತ್ತಿಯಲ್ಲಿ ಮೈಕ್ ಹೆಸ್ಸನ್ ಬದಲಿಗೆ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಆಯ್ಕೆಯಾದ ಮೊ ಬೊಬಟ್ ಆರ್‌ಸಿಬಿ ತಂಡದ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಆಗಮನದ ಬಳಿಕ ತಂಡದ ಆಟದ ವಿಧಾನವೇ ಬದಲಾಗಿದೆ. ಅವರು ತಂಡದಲ್ಲಿ ನಿರ್ಭೀತ ಆಟದ ಮನಸ್ಥಿತಿಯನ್ನು ಹುಟ್ಟುಹಾಕಿದ್ದು, ಕಷ್ಟಕರ ಮತ್ತು ಒತ್ತಡದ ಸಂದರ್ಭಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡುವುದರಲ್ಲಿ ಬೊಬಟ್ ಅವರ ಕೊಡುಗೆಯೂ ಗಮನಾರ್ಹವಾಗಿದೆ. ರಜತ್ ಪಾಟಿದಾರ್ ಅವರನ್ನು ನಾಯಕನನ್ನಾಗಿ ನೇಮಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ (PC- PTI).

ಓಂಕಾರ್ ಸಾಲ್ವಿ ಆರ್‌ಸಿಬಿಯ ವೇಗದ ಬೌಲಿಂಗ್ ತರಬೇತುದಾರರಾಗಿದ್ದು, ತಮ್ಮ ಸ್ಪಷ್ಟ ಯೋಜನೆಗಳೊಂದಿಗೆ ತಂಡವನ್ನು ವಿಭಿನ್ನ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಸಾಲ್ವಿ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗೂ ವಿಶಿಷ್ಟ ತಂತ್ರವನ್ನು ರೂಪಿಸುತ್ತಾರೆ ಎಂದು ಹೇಳಲಾಗುತ್ತದೆ. ಫೈನಲ್‌ನಲ್ಲಿ, ಗುಜರಾತ್‌ನ ಬ್ಯಾಟ್ಸ್‌ಮನ್‌ಗಳನ್ನು ಶಾರ್ಟ್-ಆಫ್-ಲೆಂಗ್ತ್ ಎಸೆತಗಳಿಂದ ತೊಂದರೆಗೊಳಿಸುವುದು ಅವರ ತಂತ್ರವಾಗಿತ್ತು. ರಸಿಕ್ ಸಲಾಂ ಅವರಂತಹ ಯುವ ಬೌಲರ್‌ಗಳಲ್ಲಿ ಆತ್ಮವಿಶ್ವಾಸ ತುಂಬುವುದಾಗಲಿ ಅಥವಾ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರನ್ನು ಬಳಸಿಕೊಳ್ಳುವುದಾಗಲಿ, ಸಾಲ್ವಿ ಅದರಲ್ಲಿ ಪ್ರಮುಖ ಪಾತ್ರ ವಹಿಸಿದರು (PC- IPL X).

ಫೀಲ್ಡಿಂಗ್ ಕೋಚ್ ಆಗಿದ್ದ ರಿಚರ್ಡ್ ಹಲ್ಸಾಲ್ ಕೂಡ ಆರ್‌ಸಿಬಿಯ ಗೆಲುವಿನ ನಾಯಕರಲ್ಲಿ ಒಬ್ಬರು. ಒತ್ತಡದ ಸಂದರ್ಭಗಳಲ್ಲಿ ಆರ್‌ಸಿಬಿಯ ಫೀಲ್ಡಿಂಗ್ ಅತ್ಯುತ್ತಮವಾಗಿತ್ತು. ಅದು ಗ್ರೌಂಡ್ ಫೀಲ್ಡಿಂಗ್ ಆಗಿರಲಿ ಅಥವಾ ಕ್ಯಾಚಿಂಗ್ ಆಗಿರಲಿ, ಇತರ ತಂಡಗಳಿಗೆ ಹೋಲಿಸಿದರೆ ಆರ್‌ಸಿಬಿಯ ಪ್ರದರ್ಶನ ಸಾಕಷ್ಟು ಉತ್ತಮವಾಗಿತ್ತು. ಅವರ ಜೊತೆಗೆ, ಸ್ಕೌಟ್ ಮುಖ್ಯಸ್ಥ ಎಂ. ರಂಗರಾಜನ್ ಮತ್ತು ವಿಶ್ಲೇಷಕ ಫ್ರೆಡ್ಡಿ ವೈಲ್ಡಿ ಕೂಡ ತಂಡದ ಯಶಸ್ಸಿಗೆ ಗಣನೀಯ ಕೊಡುಗೆ ನೀಡಿದ್ದಾರೆ (PC- IPL X).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



