ಶಾಂತಿಯುತ ಪರಿಹಾರಕ್ಕಾಗಿ ರೈತರಿಗೆ ಮನವಿ; 5 ನೇ ಸುತ್ತಿನ ಮಾತುಕತೆಗೆ ಆಹ್ವಾನಿಸಿದ ಕೇಂದ್ರ

|

Updated on: Feb 21, 2024 | 5:40 PM

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಪ್ರಗತಿಗೆ ಆದ್ಯತೆ ನೀಡಿದ್ದು, ರೈತರಿಗಾಗಿ ತುಂಬಾ ಕೆಲಸ ಮಾಡಿದೆ ಎಂದು ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ನಮ್ಮ ಸರ್ಕಾರ ರೈತರಿಗಾಗಿ ಸಾಕಷ್ಟು ಕೆಲಸ ಮಾಡಿದೆ. ರೈತರ ಪ್ರಗತಿ ನಮ್ಮ ಆದ್ಯತೆಯಾಗಿದೆ ಮತ್ತು ಅದು ಮುಂದುವರಿಯುತ್ತದೆ ಎಂದು ಹೇಳಿದ ಅವರು ರೈತರ ಜತೆ 5ನೇ ಸುತ್ತಿನ ಮಾತುಕತೆಗೆ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ

ಶಾಂತಿಯುತ ಪರಿಹಾರಕ್ಕಾಗಿ ರೈತರಿಗೆ ಮನವಿ; 5 ನೇ ಸುತ್ತಿನ ಮಾತುಕತೆಗೆ ಆಹ್ವಾನಿಸಿದ ಕೇಂದ್ರ
ರವಿ ಶಂಕರ್ ಪ್ರಸಾದ್
Follow us on

ದೆಹಲಿ ಫೆಬ್ರುವರಿ 21: ‘ಶಾಂತಿಯುತವಾಗಿ’ ಪರಿಹಾರ ಕಂಡುಕೊಳ್ಳುವಂತೆ ಪ್ರತಿಭಟನಾ ನಿರತ ರೈತರನ್ನು ಒತ್ತಾಯಿಸಿದ ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರ ಮಾತುಕತೆಗ ಸಿದ್ಧ ಎಂದು ಬುಧವಾರ ಹೇಳಿದೆ. ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ನರೇಂದ್ರ ಮೋದಿ ಸರ್ಕಾರವು(Narendra Modi) ರೈತರಿಗಾಗಿ “ಇಷ್ಟೊಂದು ಕೆಲಸ” ಮಾಡಿದೆ ಎಂದು ಹೇಳಿದ್ದಾರೆ. ಏತನ್ಮಧ್ಯೆ,  ಕೃಷಿ ಸಚಿವ ಅರ್ಜುನ್ ಮುಂಡಾ (Arjun Munda) ಮತ್ತೊಮ್ಮೆ ರೈತರ ಮುಖಂಡರೊಂದಿಗೆ ಐದನೇ ಸುತ್ತಿನ ಮಾತುಕತೆ ನಡೆಸಲು ತಯಾರಿದ್ದಾರೆ ಎಂದು ಹೇಳಿದ್ದಾರೆ.

ಇಂದು ಕೂಡ ಅರ್ಜುನ್ ಮುಂಡಾ ಅವರು (ಪ್ರತಿಭಟನಾ ನಿರತ ರೈತರೊಂದಿಗೆ) ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಸಂವಾದ ಮತ್ತು ಚರ್ಚೆಗಳಿಂದಲೇ ಪರಿಹಾರ ಸಾಧ್ಯ . ರೈತರೊಂದಿಗೆ ಚರ್ಚೆಗೆ ಸರ್ಕಾರ ಸಿದ್ದವಾಗಿದೆ’ ಎಂದು ಪ್ರಸಾದ್ ಹೇಳಿದರು. ಪರಿಹಾರವು ಶಾಂತಿಯುತವಾಗಿ ಹೊರಬರಬೇಕು ಎಂದು ನಾವು ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.

ರವಿಶಂಕರ್ ಪ್ರಸಾದ್ ಸುದ್ದಿಗೋಷ್ಠಿ

ಮೋದಿ ಸರ್ಕಾರ ಬಹಳಷ್ಟು ಕೆಲಸ ಮಾಡಿದೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಪ್ರಗತಿಗೆ ಆದ್ಯತೆ ನೀಡಿದ್ದು, ರೈತರಿಗಾಗಿ ತುಂಬಾ ಕೆಲಸ ಮಾಡಿದೆ ಎಂದು ಬಿಜೆಪಿ ಹಿರಿಯ ನಾಯಕ ಹೇಳಿದ್ದಾರೆ. ನಮ್ಮ ಸರ್ಕಾರ ರೈತರಿಗಾಗಿ ಸಾಕಷ್ಟು ಕೆಲಸ ಮಾಡಿದೆ. ರೈತರ ಪ್ರಗತಿ ನಮ್ಮ ಆದ್ಯತೆಯಾಗಿದೆ ಮತ್ತು ಅದು ಮುಂದುವರಿಯುತ್ತದೆ ”ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು. ಬಿಜೆಪಿಯು ರೈತರ ಸಮಸ್ಯೆಗಳ ಬಗ್ಗೆ “ಸಂವೇದನಾಶೀಲವಾಗಿದೆ” . ಅವರ ಕಲ್ಯಾಣ ಮತ್ತು ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಪ್ರಸಾದ್ ಹೇಳಿದರು.

ಪಕ್ಷವು ರೈತರ ಸಮಸ್ಯೆಗಳ ಬಗ್ಗೆ ಬಹಳ ಸೂಕ್ಷ್ಮವಾಗಿದೆ. ಅವರ ಜತೆ ಸಚಿವರು ಮಾತನಾಡುತ್ತಿದ್ದಾರೆ. ಹಲವು ಸುತ್ತಿನ ಮಾತುಕತೆ ನಡೆದಿದೆ. ಇದು ಮುಂದುವರಿಯಲಿ”ಎಂದು ಹೇಳಿದ ಅವರು “ರೈತರ ಪ್ರಗತಿಗೆ ಮೋದಿ ಸರ್ಕಾರದ ಬದ್ಧತೆ ಬಹಳ ಸ್ಪಷ್ಟವಾಗಿದೆ” ಎಂದಿದ್ದಾರೆ.

ಭಾನುವಾರ ಪ್ರತಿಭಟನಾನಿರತ ರೈತ ಮುಖಂಡರೊಂದಿಗೆ ನಡೆದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಮೂವರು ಕೇಂದ್ರ ಸಚಿವರ ಸಮಿತಿಯು ರೈತರೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಐದು ವರ್ಷಗಳವರೆಗೆ ಎಂಎಸ್‌ಪಿ ದರದಲ್ಲಿ ಖರೀದಿಸಲು ಪ್ರಸ್ತಾಪಿಸಿತು. ಆದರೆ ಅವರು ಅದನ್ನು ತಿರಸ್ಕರಿಸಿದ್ದು ಅಚ್ಚರಿಯುಂಟುಮಾಡಿದೆ. ಮಾತುಕತೆಗಳು ಇನ್ನೂ ನಡೆಯಬೇಕು ಎಂದು ನಂಬುತ್ತೇವೆ” ಎಂದಿದ್ದಾರೆ ಪ್ರಸಾದ್.

ಮತ್ತೊಂದು ಸುತ್ತಿನ ಮಾತುಕತೆಗೆ ರೈತರನ್ನು ಆಹ್ವಾನಿಸಿದ ಮುಂಡಾ

ಇಂದು ಬೆಳಗ್ಗೆ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಐದನೇ ಸುತ್ತಿನ ಚರ್ಚೆಗೆ ಪ್ರತಿಭಟನಾ ನಿರತ ರೈತರನ್ನು ಆಹ್ವಾನಿಸಿದರು.ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾಂತಿ ಕಾಪಾಡಿ ಸಂವಾದದಲ್ಲಿ ತೊಡಗುವಂತೆ ಸಚಿವರು ಮನವಿ ಮಾಡಿದರು.

“ಎಂಎಸ್‌ಪಿ ಅಥವಾ ಬೆಳೆ ವೈವಿಧ್ಯೀಕರಣವೇ ಆಗಿರಲಿ, ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ನಾವು ಸಿದ್ಧರಿದ್ದೇವೆ. ಸಂವಾದದ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು. ನಾನು ಅವರನ್ನು ಚರ್ಚೆಗೆ ಆಹ್ವಾನಿಸಿದ್ದೇನ. ಶಾಂತಿ ಕಾಪಾಡಲು ಮತ್ತು ಎಲ್ಲರಿಗೂ ಒಪ್ಪುವ ದಾರಿ ಕಂಡುಕೊಳ್ಳಲು ನಾನು ಅವರಿಗೆ ಮನವಿ ಮಾಡಿದ್ದೇನೆ ಎಂದು ಮುಂಡಾ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ಕೇಂದ್ರ-ರೈತರ ಒಕ್ಕೂಟದ ಮಾತುಕತೆ ವಿಫಲವಾಗಿದ್ದಕ್ಕೆ ಭಗವಂತ್ ಮಾನ್ ಕಾರಣ: ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನೀಲ್ ಜಾಖರ್

ರೈತರ ಪ್ರತಿಭಟನೆ

ಪಂಜಾಬ್ ಮತ್ತು ಹರ್ಯಾಣ ನಡುವಿನ ಎರಡು ಗಡಿ ಬಿಂದುಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಬುಧವಾರ ತಮ್ಮ “ದೆಹಲಿ ಚಲೋ” ಮೆರವಣಿಗೆಯನ್ನು ಪುನರಾರಂಭಿಸಿದ್ದಾರೆ. ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಮೇಲೆ ಕಾನೂನು ಖಾತರಿ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ ಮತ್ತು ಕೃಷಿ ಸಾಲ ಮನ್ನಾ ಇವು ಪ್ರತಿಭಟನಾ ನಿರತ ರೈತರ ಪ್ರಮುಖ ಬೇಡಿಕೆಗಳಾಗಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ