10 ಸಾವಿರ ಕೋಟಿ ರೂ. ನಷ್ಟದ ಆತಂಕ: ನ. 1ರ ರ‍್ಯಾಲಿ ಮುಂದೂಡಲು ರಾಹುಲ್ ಗಾಂಧಿಗೆ ವ್ಯಾಪಾರಿಗಳ ಮನವಿ

ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿರುವ ರ‍್ಯಾಲಿಯಿಂದ 10 ಸಾವಿರ ಕೋಟಿ ರೂ. ವ್ಯಾಪಾರ ನಷ್ಟವಾಗುವ ಆತಂಕ ವ್ಯಕ್ತಪಡಿಸಿರುವ ಸಿಟಿಐ ವ್ಯಾಪಾರಿಗಳ ಸಂಘಟನೆ, ರ‍್ಯಾಲಿ ಮುಂದೂಡುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದೆ. ರ‍್ಯಾಲಿಯನ್ನು ಮುಂದೂಡಲು ಸಾಧ್ಯವಾಗದಿದ್ದರೆ ಬುರಾರಿ ಮೈದಾನ ಅಥವಾ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸುವಂತೆ CTI ಪರ್ಯಾಯ ಸಲಹೆ ನೀಡಿದೆ.

10 ಸಾವಿರ ಕೋಟಿ ರೂ. ನಷ್ಟದ ಆತಂಕ: ನ. 1ರ ರ‍್ಯಾಲಿ ಮುಂದೂಡಲು ರಾಹುಲ್ ಗಾಂಧಿಗೆ ವ್ಯಾಪಾರಿಗಳ ಮನವಿ
ಸಾಂದರ್ಭಿಕ ಚಿತ್ರ
Image Credit source: PTI

Updated on: Oct 27, 2026 | 1:57 PM

ನವದೆಹಲಿ, ಅಕ್ಟೋಬರ್​​ 27: ದೆಹಲಿಯ ರಾಮಲೀಲಾ ಮೈದಾನದಲ್ಲಿ ನವೆಂಬರ್ 1ರಂದು ಕಾಂಗ್ರೆಸ್ ಆಯೋಜಿಸಲು ಉದ್ದೇಶಿಸಿರುವ ರ‍್ಯಾಲಿಯನ್ನು ಮುಂದೂಡುವಂತೆ ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದೆ. ಹಬ್ಬದ ಖರೀದಿಯ ಪ್ರಮುಖ ಸಮಯದಲ್ಲಿ ಈ ರ‍್ಯಾಲಿಯಿಂದ ಸಗಟು ಮತ್ತು ಚಿಲ್ಲರೆ ವ್ಯಾಪಾರದ 21 ಪ್ರಮುಖ ಮಾರುಕಟ್ಟೆಗಳ ವಹಿವಾಟಿಗೆ ಅಡ್ಡಿಯಾಗಬಹುದು. ಇದರಿಂದ 10,000 ಕೋಟಿ ರೂ.ವರೆಗೆ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳ ಸಂಘಟನೆ ಆತಂಕ ವ್ಯಕ್ತಪಡಿಸಿದೆ.

ನವೆಂಬರ್ 10ರವರೆಗೆ ರ‍್ಯಾಲಿಯನ್ನು ಮುಂದೂಡಬೇಕು ಅಥವಾ ವಾಣಿಜ್ಯ ಪ್ರದೇಶಗಳಿಂದ ದೂರವಿರುವ ಪರ್ಯಾಯ ಸ್ಥಳದಲ್ಲಿ ಆಯೋಜಿಸಬೇಕು ಎಂದು CTI ಕಾಂಗ್ರೆಸ್‌ಗೆ ಮನವಿ ಮಾಡಿದೆ. ರಾಹುಲ್ ಗಾಂಧಿಗೆ ಬರೆದ ಪತ್ರದ ಪ್ರತಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕಳುಹಿಸಲಾಗಿದೆ. ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ಬ್ಯಾರಿಕೇಡ್‌ಗಳನ್ನು ಅಳವಡಿಸುವುದು ಹಾಗೂ ರಸ್ತೆಗಳನ್ನು ಬಂದ್ ಮಾಡುವ ಸಾಧ್ಯತೆಯ ಬಗ್ಗೆ CTI ಅಧ್ಯಕ್ಷ ಬೃಜೇಶ್ ಗೋಯಲ್ ಕಳವಳ ವ್ಯಕ್ತಪಡಿಸಿದ್ದಾರೆ. ಹಬ್ಬದ ಪ್ರಮುಖ ಸಮಯದಲ್ಲಿ ಗ್ರಾಹಕರು ಅಂಗಡಿಗಳಿಗೆ ಬರಲು ಸಾಧ್ಯವಾಗುತ್ತದೆಯೇ ಎಂಬ ಆತಂಕ ವ್ಯಾಪಾರಿಗಳಲ್ಲಿದೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ ಆರೋಪ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟಿಸ್

10 ಲಕ್ಷ ಜನ, 20 ಸಾವಿರ ವಾಹನಗಳ ಸಂಚಾರ ಸಾಧ್ಯತೆ

10 ಲಕ್ಷ ಜನರು ಸೇರಬಹುದಾದ ರ‍್ಯಾಲಿಯಿಂದ ದೆಹಲಿಗೆ 15,000ರಿಂದ 20,000 ವಾಹನಗಳು ಆಗಮಿಸುವ ಸಾಧ್ಯತೆಯಿದೆ ಎಂದು CTI ಅಂದಾಜಿಸಿದೆ. ಇವುಗಳಲ್ಲಿ 10,000ರಿಂದ 12,000 ಬಸ್‌ಗಳು ಹಾಗೂ ಕಾರುಗಳು, ಮಿನಿಬಸ್‌ಗಳು ಮತ್ತು ಟೆಂಪೊ ಟ್ರಾವೆಲರ್‌ಗಳಂತಹ 5,000ರಿಂದ 7,000 ಸಣ್ಣ ವಾಹನಗಳು ಇರಬಹುದು ಎಂದು ಸಂಘಟನೆ ತಿಳಿಸಿದೆ. ಈ ವಾಹನಗಳನ್ನು ಎಲ್ಲಿ ನಿಲುಗಡೆ ಮಾಡಲಾಗುತ್ತದೆ ಎಂದು CTI ಪ್ರಶ್ನಿಸಿದೆ. ರಾಮಲೀಲಾ ಮೈದಾನದ ಸಮೀಪ 200 ವಾಹನಗಳಿಗೂ ಅಧಿಕೃತ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಎಂದು ಅದು ಹೇಳಿದೆ.

21 ಮಾರುಕಟ್ಟೆಗಳಿಗೆ ತೊಂದರೆ ಆತಂಕ

ಚಾಂದನಿ ಚೌಕ್, ಸದರ್ ಬಜಾರ್, ಖಾರಿ ಬಾವೊಲಿ, ಭಾಗೀರಥ್ ಪ್ಯಾಲೇಸ್, ಚಾವ್ರಿ ಬಜಾರ್, ಕಾಶ್ಮೀರಿ ಗೇಟ್, ಕರೋಲ್ ಬಾಗ್, ದರಿಯಾಗಂಜ್, ಪಹಾಡ್‌ಗಂಜ್, ಜಾಮಾ ಮಸೀದಿ ಮತ್ತು ಲಜಪತ್ ರೈ ಮಾರ್ಕೆಟ್ ಸೇರಿ ರ‍್ಯಾಲಿಯಿಂದ 21 ಮಾರುಕಟ್ಟೆಗಳಿಗೆ ತೊಂದರೆಯಾಗಬಹುದು ಎಂದೂ CTI ತಿಳಿಸಿದೆ. ರ‍್ಯಾಲಿಯನ್ನು ಮುಂದೂಡಲು ಸಾಧ್ಯವಾಗದಿದ್ದರೆ ಬುರಾರಿ ಮೈದಾನ ಅಥವಾ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸುವಂತೆ CTI ಪರ್ಯಾಯ ಸಲಹೆ ನೀಡಿದೆ. ಹಬ್ಬದ ಸಮಯದಲ್ಲಿ ವ್ಯಾಪಾರಕ್ಕೆ ಉಂಟಾಗುವ ಅಡಚಣೆಯನ್ನು ಕಡಿಮೆ ಮಾಡಲು ವ್ಯಾಪಾರಿಗಳ ಕಳವಳವನ್ನು ಪರಿಗಣಿಸುವಂತೆ ಕಾಂಗ್ರೆಸ್ ನಾಯಕರನ್ನು ಒತ್ತಾಯಿಸಿದೆ.

‘ಜ್ಞಾನೇಶ್ ಕುಮಾರ್ ವಜಾಗೊಳಿಸುವಂತೆ ಮೋದಿಗೆ ಹೇಳಿ’

ಇನ್ನೊಂದೆಡೆ ದೆಹಲಿಯ ವ್ಯಾಪಾರಿಗಳಿಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸರ್ಕಾರದ ನಿರ್ಬಂಧಗಳಿಂದ ವ್ಯಾಪಾರಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ. ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸುವುದು, ರಸ್ತೆಗಳನ್ನು ಬಂದ್ ಮಾಡುವುದು ಮತ್ತು ರಾಜಧಾನಿಯನ್ನು ನಿರ್ಬಂಧಗಳ ಮೂಲಕ ಸುತ್ತುವರಿಯುವುದು ವ್ಯಾಪಾರಕ್ಕೆ ಅಡ್ಡಿಯಾಗಿದೆ ಎಂದು ಅವರು ಹೇಳಿದ್ದಾರೆ. ದೆಹಲಿಯ ಪ್ರತಿಯೊಬ್ಬ ವ್ಯಾಪಾರಿಗೂ ಹೇಳುವುದಿಷ್ಟೇ, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಮತ್ತು ನಿಮ್ಮ ಮಾತು ಕೇಳುತ್ತಿದ್ದೇವೆ. ಸರ್ಕಾರ ಮೆಟ್ರೋವನ್ನು ಸ್ಥಗಿತಗೊಳಿಸಿದೆ, ನಮ್ಮ ರಸ್ತೆಗಳನ್ನು ಬಂದ್ ಮಾಡಿದೆ ಮತ್ತು ನಮ್ಮ ರಾಜಧಾನಿಯನ್ನು ನಿರ್ಬಂಧಿಸಿದೆ. ಮತ ಕಳವಾಗಿದ್ದರೆ ನಿಮ್ಮ ಅಂಗಡಿ, ನಿಮ್ಮ ಉಳಿತಾಯ ಮತ್ತು ನಿಮ್ಮ ಮಕ್ಕಳ ಭವಿಷ್ಯವೂ ಸುರಕ್ಷಿತವಾಗಿರುವುದಿಲ್ಲ. ಆರೋಪಿ ನಂಬರ್ 4 ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಮೋದಿಗೆ ಹೇಳಿ. ಪ್ರತಿಭಟನೆಗಳು 30 ಸೆಕೆಂಡ್‌ಗಳಲ್ಲಿ ನಿಲ್ಲುತ್ತವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:56 pm, Tue, 27 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us