ತೆಲಂಗಾಣ (Telangana) ಮಾಜಿ ಸಚಿವ ಶ್ರೀನಿವಾಸ್ ಗೌಡ್ ಅವರ ಕಚೇರಿ ಹೈದರಾಬಾದಿನ (Hyderabd) ರವೀಂದ್ರ ಭಾರತಿಯಲ್ಲಿದ್ದು, ಅಲ್ಲಿಂದ ರಾತ್ರೋರಾತ್ರಿ ಕಂಪ್ಯೂಟರ್ ಮತ್ತು ಇತರ ವಸ್ತುಗಳ ಸಾಗಣೆಯನ್ನು ಉಸ್ಮಾನಿಯಾ ಯೂನಿವರ್ಸಿಟಿ ವಿದ್ಯಾರ್ಥಿಗಳು ತಡೆದಿದ್ದಾರೆ. ಆ ಸಂಚಲನಾತ್ಮಕ ವಿದ್ಯಾಮಾನ ನಡೆದಿರುವ ಬೆನ್ನಿಗೆ ತಾಜಾ ಆಗಿ ಇನ್ನೂ ಒಂದು ಕಡೆ ಸಚಿವೆಯೊಬ್ಬರ ಕಚೇರಿಯಲ್ಲಿನ ಕಡತಗಳು ಮಾಯವಾಗುವ ವರದಿ ಬಂದಿದೆ. ಬಶೀರ್ ಬಾಗ್‌ನಲ್ಲಿರುವ ಶೈಕ್ಷಣಿಕ ಸಂಶೋಧನಾ ತರಬೇತಿ ಸಂಸ್ಥೆಯಿಂದ ಕ್ರಿಮಿನಲ್‌ಗಳು ಆಟೊದಲ್ಲಿ ಕಡತಗಳನ್ನು (Files Missing) ತೆಗೆದುಕೊಂಡು ಹೋಗುತ್ತಿದ್ದಾಗ ಅಧಿಕಾರಿಗಳು ತಡೆದಿದ್ದಾರೆ. ಆರೋಪಿಗಳು ಆಟೋದಲ್ಲಿ ಪರಾರಿಯಾಗಿದ್ದಾರೆ. ಗಮನಾರ್ಹವೆಂದರೆ ಇದು ಮಾಜಿ ಸಚಿವೆ ಸಬಿತಾ ಅವರ ಚೇಂಬರ್ ಆಗಿತ್ತು. ಇದೀಗ ಮಾಜಿ ಸಚಿವರುಗಳ ಕಚೇರಿಯಿಂದ ಕಡತಗಳನ್ನು ಕದಿಯುವ ಯತ್ನ ಭಾರೀ ಚರ್ಚೆಗೆ ಗ್ರಾಸವಾಯಿತು.
ಈ ವಿದ್ಯಮಾನದ ಬಳಿಕ ಪಶುಸಂಗೋಪನಾ ಇಲಾಖೆಯಲ್ಲಿನ ಕಡತಗಳ ಕಳ್ಳತನ ಪ್ರಕರಣದಲ್ಲಿ ಮಾಜಿ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಹಾಗೂ ಅವರ ವಿಶೇಷಾಧಿಕಾರಿ (ಓಎಸ್ ಡಿ) ಕಲ್ಯಾಣ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲವು ಕಡತಗಳನ್ನು ತೆಗೆದುಕೊಂಡು ಹೋಗುvಉದರ ಜೊತೆಗೆ ಮತ್ತಷ್ಟು ಕಡತಗಳನ್ನು ಕಸದ ಬುಟ್ಟಿಗೆ ಎಸೆದು ಹೋಗಿದ್ದಾರೆ.
ಈ ವೇಳೆ ದುಷ್ಕರ್ಮಿಗಳು ಕಛೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸ ಮಾಡಿದ್ದು, ವಾಚ್‌ಮನ್ ದೂರಿನ ಮೇರೆಗೆ ನಾಂಪಲ್ಲಿ ಪೊಲೀಸರು ಓಎಸ್‌ಡಿ ಕಲ್ಯಾಣ್, ನಿರ್ವಾಹಕರಾದ ಮೋಹನ್, ವೆಂಕಟೇಶ್, ಪ್ರಶಾಂತ್ ವಿರುದ್ಧ ಐದು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಮುಖ ಕಡತಗಳು ಕಳ್ಳತನವಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಯಾವ ಫೈಲ್‌ಗಳಿವೆ ಮತ್ತು ಯಾವುವು ಕಾಣೆಯಾಗಿವೆ? ಎಂಬುದರ ದೃಢೀಕರಣಕ್ಕಾಗಿ ಪಶುಸಂಗೋಪನಾ ಇಲಾಖೆ ನಿರ್ದೇಶಕ ರಾಂಚೋಡರ್ ಅವರಿಗೆ ಕರೆ ಮಾಡಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ವಲಯ ಡಿಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ಕಡತಗಳ ಮಾಯ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.
ತಲಸಾನಿ ಮತ್ತು ಸಬಿತಾ ಕಚೇರಿಗಳಲ್ಲಿ ಕಡತಗಳನ್ನು ಸ್ಥಳಾಂತರಿಸಲು ಯತ್ನಿಸಲಾಗಿದೆ ಎಂಬ ಆರೋಪ ರಅಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ರವೀಂದ್ರ ಭಾರತಿ ಕ್ಯಾಂಪಸ್‌ನಲ್ಲಿರುವ ಮಾಜಿ ಸಚಿವ ಶ್ರೀನಿವಾಸ್‌ಗೌಡ ಕಚೇರಿಯಲ್ಲಿ ಕಂಪ್ಯೂಟರ್, ಪೀಠೋಪಕರಣ ಸೇರಿದಂತೆ ದಾಖಲೆಗಳನ್ನು ತೆಗೆದಿರುವ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಸರ್ಕಾರಿ ಸ್ವಾಮ್ಯದ ವಸ್ತುಗಳನ್ನು ಹೇಗೆ ಸಾಗಿಸಿದರು ಎಂದು ಉಸ್ಮಾನಿಯಾ ಯೂನಿವರ್ಸಿಟಿ -ಒಯು ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪ್ರಕರಣವೂ ದಾಖಲಾಗಿದೆ.
Also Read: ಕಡತಗಳು ನಾಪತ್ತೆಯಾಗಿವೆ! ಅದರಲ್ಲಿ ಮದ್ದೂರು ಪುರಸಭೆಗೆ ಸೇರಿದ 500 ಕೋಟಿ ರೂ ಮೌಲ್ಯದ ನಿವೇಶನಗಳಿವೆ
ತೆಲಂಗಾಣ ಮುಖ್ಯ ಕಾರ್ಯದರ್ಶಿ ಶಾಂತಕುಮಾರಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶಾಸಕರ ಕ್ಯಾಂಪ್ ಕಛೇರಿಗಳು, ಸಚಿವರ ಕಛೇರಿಗಳಲ್ಲಿರುವ ಎಲ್ಲಾ ಸಾಮಗ್ರಿ, ಉಪಕರಣಗಳು ಸರ್ಕಾರಿ ಸ್ವಾಮ್ಯಕ್ಕೆ ಸೇರಿರುತ್ತವೆ. ಒಂದು ವೇಳೆ ವೈಯಕ್ತಿಕ ವಸ್ತುಗಳು ಇದ್ದರೂ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿಯಿಲ್ಲದೆ ಅವುಗಳನ್ನು ತೆಗೆದುಕೊಂಡುಹೋಗಲು ಅವಕಾಶ ಇರುವುದಿಲ್ಲ. ಯಾರಾದರೂ ನಿಯಮಗಳಿಗೆ ವಿರುದ್ಧವಾಗಿ ಸರಕುಗಳು ಅಥವಾ ಫೈಲ್‌ಗಳನ್ನು ಸಾಗಿಸಿದ್ದರೆ, ಅವುಗಳನ್ನು ಮರುಪಡೆಯಲಾಗುತ್ತದೆ ಎಂದು CS ಸ್ಪಷ್ಟಪಡಿಸಿದ್ದಾರೆ.
ಹೀಗೇಕೆ ನಡೆಯುತ್ತಿದೆ. ನಿಜವಾಗಿಯೂ ಪೀಠೋಪಕರಣಗಳು, ಕಂಪ್ಯೂಟರ್‌ಗಳು ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದರಾ? ಅಥವಾ ಪ್ರಮುಖ ಫೈಲ್‌ಗಳನ್ನು ಮಾಯ ಮಾಡಲು ಪ್ರಯತ್ನಿಸಿದ್ದಾರಾ? ನಿಯಮಗಳ ಪ್ರಕಾರವೇ ಕಡತಗಳು ಮತ್ತಿತ್ತರ ವಸ್ತುಗಳನ್ನು ಜಿಎಡಿಗೆ ಹಸ್ತಾಂತರಿಸುವ ಪ್ರಯತ್ನ ನಡೆಸಲಾಗಿದೆಯೇ ಹೊರತು ಕಡತಗಳನ್ನು ಹೊತ್ತುಕೊಂಡು ಹೋಗಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಕಡತಗಳನ್ನು ಕದಿಯಲು ಯತ್ನಿಸಿದ ಆರೋಪಿಗಳ ವಿರುದ್ಧವೂ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ