ಕಡತಗಳು ನಾಪತ್ತೆಯಾಗಿವೆ! ಅದರಲ್ಲಿ ಮದ್ದೂರು ಪುರಸಭೆಗೆ ಸೇರಿದ 500 ಕೋಟಿ ರೂ ಮೌಲ್ಯದ ನಿವೇಶನಗಳಿವೆ
Maddur municipality: ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಪುರಸಭೆ ಆಸ್ತಿಯನ್ನು ಉಳಿಸಬೇಕಾಗಿದೆ. ಒತ್ತುವರಿಯಾಗಿರುವ ನಿವೇಶನ ತೆರವು, ಅಕ್ರಮ ಕಟ್ಟಡಗಳ ತೆರವು ಮಾಡಬೇಕು.
ಎಲ್ಲಾ ಮಾಯ, ಇಲ್ಲಿ ನೀವು ಮಾಯ! ಈ ಮಾತು ಯಾಕೆ ಹೇಳುತ್ತಿದ್ದೇವೆ ಎಂದರೆ, ಮದ್ದೂರು ಪುರಸಭೆಯಲ್ಲಿ (Maddur municipality) ಎಲ್ಲವೂ ಮಾಯವಾಗುತ್ತಿದೆ. ಪುರಸಭೆಗೆ ಸೇರಿದ ಆಸ್ತಿ ನಿರ್ವಹಣೆ ಕಡತ (land records Files) ಸೇರಿದಂತೆ ಕೆಲವೊಂದು ಅಮೂಲ್ಯ ಕಡತಗಳು ನಾಪತ್ತೆಯಾಗಿವೆ. ಕಡತ ನಾಪತ್ತೆ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರದ ವಾಸನೆ ಮೂಗಿಗೆ ಬಡಿಯುತ್ತಿದೆ.
ಹೌದು, ಮದ್ದೂರು ಪುರಸಭೆಗೆ ಸೇರಿದ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ನಿವೇಶನಗಳಿವೆ. ಆದರೆ ನಿವೇಶನ ನಿರ್ವಹಣೆ, ಆಸ್ತಿ ಪರಬಾರೆ, ಆಸ್ತಿ ಮಾಲಿಕತ್ವ ಕುರಿತ ಫೈಲ್ ಮಾತ್ರ ನಾಪತ್ತೆಯಾಗಿವೆ. ಈಗಾಗಲೇ ಪುರಸಭೆಯಲ್ಲಿ ಆಸ್ತಿ ನಾಪತ್ತೆ ಪ್ರಕರಣ ಸದ್ದು ಮಾಡಿತ್ತು. ಪುರಸಭೆಗೆ ಸೇರಿದ ಆಸ್ತಿಯನ್ನು 2018ರಲ್ಲಿ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಲಾಗಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅಧಿಕಾರಿಗಳು ಕೈ ಚಳಕ ತೋರಿದ್ದರು.
ಇದನ್ನೂ ಓದಿ:
ಮಂಡ್ಯದ ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಈ ಅತಿಥಿಯ ಆಗಮನದ ನಂತರವೇ ಮಂಗಳಾರತಿ ನಡೆಯುತ್ತದೆ
ಅದೇ ಮಾದರಿಯಲ್ಲಿ ಮತ್ತಷ್ಟು ಆಸ್ತಿಗಳು ಪರಭಾರೆ ಮಾಡಿದ ಅನುಮಾನ ಬಂದ ಹಿನ್ನೆಲೆಯಲ್ಲಿ ಪುರಸಭೆ ನಾಮನಿರ್ದೇಶಿತ ಸದಸ್ಯ ಮ.ನ. ಪ್ರಸನ್ನ ಹೋರಾಟ ಶುರು ಮಾಡಿದ್ದಾರೆ. ಮೊದಲ ಹಂತದಲ್ಲಿ ಸರ್ಕಾರಿ ಆಸ್ತಿ ನಿರ್ವಹಣೆ ಕುರಿತು ಕಡತ ಪರಿಶೀಲನೆ ವೇಳೆ, ಕಡತವೇ ನಾಪತ್ತೆ ಆಗಿರೋದು ಬೆಳಕಿಗೆ ಬಂದಿದೆ.
ಕಡತ ನಿರ್ವಹಣೆ ಬಗ್ಗೆ ಅನುಮಾನ ಮೂಡಿ ಬರುತ್ತಿದೆ. ಕಂದಾಯ ಅಧಿಕಾರಿ ಗೀತಾ ಎಂಬವರು ಕಡತವನ್ನು ಕೋರ್ಟ್ ಗೆ ನೀಡಲಾಗಿದೆ ಎಂದು ಹಿಂಬರಹ ನೀಡಿದ್ದಾರೆ. ಆದರೆ ಕೋರ್ಟ್ ಗೆ ಕಡತ ನೀಡಿರುವ ಬಗ್ಗೆ ಯಾವುದೇ ದಾಖಲಾತಿಯೂ ಪುರಸಭೆಯಲ್ಲಿ ಇಲ್ಲ. ಪುರಸಭೆ ಸುಮಾರು 250ಕ್ಕೂ ಹೆಚ್ಚು ನಿವೇಶನಗಳು, ಮೂಲೆ ನಿವೇಶನಗಳು, ರೆವಿನ್ಯೂ ನಿವೇಶನಗಳನ್ನು ಹೊಂದಿದೆ.
ಇದನ್ನೂ ಓದಿ: ಧಾರವಾಡ: ಹಳೆಯ ಬೆಲೆಯಲ್ಲಿಯೇ ಜಮೀನು ಸ್ವಾಧೀನಕ್ಕೆ ಮುಂದಾಗಿದೆ ಸರ್ಕಾರ, ಭೂಮಿ ಕಳೆದುಕೊಂಡ ರೈತರ ಗೋಳು ಕೇಳೋರೇ ಇಲ್ಲ
ಆದರೆ ಈ ಬಗ್ಗೆ ನಿರ್ವಹಣೆ ಮಾಡಬೇಕಾದ ಕಡತವೇ ನಾಪತ್ತೆಯಾಗಿದೆ. ಸದರಿ ನಿವೇಶಗಳಲ್ಲಿ ಬಹುತೇಕ ಒತ್ತುವರಿಯಾಗಿವೆ, ಮತ್ತೆ ಕೆಲವು ನಿವೇಶನಗಳಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ, ಅಂಗಡಿಗಳನ್ನು ನಿರ್ಮಿಸಿ ಬಾಡಿಗೆಗೆ ಕೊಡಲಾಗಿದೆ. ಪುರಸಭೆಗೆ ಇಷ್ಟೆಲ್ಲಾ ನಷ್ಟವಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡರಾಗಿದ್ದಾರೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಪುರಸಭೆ ಆಸ್ತಿಯನ್ನು ಉಳಿಸಬೇಕಾಗಿದೆ. ಒತ್ತುವರಿಯಾಗಿರುವ ನಿವೇಶನ ತೆರವು, ಅಕ್ರಮ ಕಟ್ಟಡಗಳ ತೆರವು ಮಾಡಬೇಕು. ಕಡತ ನಾಪತ್ತೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಎಂಬ ಕೂಗು ಮದ್ದೂರಿನಲ್ಲಿ ಕೇಳಿ ಬಂದಿದೆ. (ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ)