ಮುಂಬೈನ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಮತ್ತು ಆತನ ಪುತ್ರ ನೀಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಇವರಿಬ್ಬರೂ ಐಎನ್ಎಸ್ ವಿಕ್ರಾಂತ್ ಯುದ್ಧವಿಮಾನ ವಾಹಕ ನೌಕೆಯ ಹೆಸರಲ್ಲಿ ಅಪಾರ ಪ್ರಮಾಣದ ದೇಣಿಗೆ ಸಂಗ್ರಹ ಮಾಡಿ, ಅದನ್ನು ದುರ್ಬಳಕೆ ಮಾಡಿದ್ದಾರೆ ಎಂಬುದಾಗಿ ಸೇನೆಯ ಮಾಜಿ ಅಧಿಕಾರಿಯೊಬ್ಬರು ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಮುಂಬೈ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಅಂದಹಾಗೇ, ಈ ಐಎನ್ಎಸ್ ವಿಕ್ರಾಂತ್ ಎಂಬುದು ಭಾರತದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಯುದ್ಧವಿಮಾನ ವಾಹಕ ನೌಕೆ. 1961ರಲ್ಲಿ ಕಾರ್ಯಾರಂಭ ಮಾಡಿತು. ಭಾರತೀಯ ನೌಕಾಪಡೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಅದರಲ್ಲೂ 1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನೌಕಾದಿಗ್ಬಂಧನ ಹಾಕುವಲ್ಲಿ ಇದರ ಪಾತ್ರ ಬಹು ಮಹತ್ವದ್ದಾಗಿತ್ತು. ಆದರೆ 1997ರಲ್ಲಿ ಇದನ್ನು ರದ್ದುಗೊಳಿಸಲಾಯಿತು. 2014 ಜನವರಿಯಲ್ಲಿ ಆನ್ಲೈನ್ ಹರಾಜು ಮೂಲಕ, ಸುಮಾರು 63.2 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಅದಕ್ಕೂ ಮೊದಲು ಈ ನೌಕೆಯನ್ನು ಮಾರಾಟ ಮಾಡುವುದನ್ನು ತಡೆದು, ಮತ್ತೆ ಪ್ರಾರಂಭ ಮಾಡಿಸುತ್ತೇವೆ ಎಂದು ಹೇಳಿ ಕಿರಿತ್ ಸೋಮಯ್ಯ ದೇಣಿಗೆ ಸಂಗ್ರಹ ಅಭಿಯಾನ ಶುರು ಮಾಡಿದ್ದರು. ಅಪಾರ ಹಣ ಸಂಗ್ರಹ ಮಾಡಿ ಅದನ್ನು ಸರ್ಕಾರಕ್ಕೆ ಹಸ್ತಾಂತರ ಮಾಡದೆ ವಂಚನೆ ಮಾಡಿದ್ದಾರೆ ಎಂಬುದು ಆರೋಪ.
ಇತ್ತೀಚೆಗೆ ಈ ಬಗ್ಗೆ ಮೊದಲು ಧ್ವನಿ ಎತ್ತಿದ್ದು ಶಿವಸೇನೆ ಸಂಸದ ಸಂಜಯ್ ರಾವತ್. 2013-14ರಲ್ಲಿ ಐಎನ್ಎಸ್ ವಿಕ್ರಾಂತ್ ಮಾರಾಟ ಮಾಡುವ ಸಂದರ್ಭದಲ್ಲಿ ಕಿರಿತ್ ಸೋಮಯ್ಯ ನೇತೃತ್ವದಲ್ಲಿ ಒಂದು ಅಭಿಯಾನ ಶುರುವಾಯಿತು. ವಿಕ್ರಾಂತ್ ನೌಕೆಯನ್ನು ಮತ್ತೆ ಪ್ರಾರಂಭ ಮಾಡಿಸಲಾಗುವುದು ಅದಾಗದೆ ಇದ್ದರೆ, ಈ ನೌಕೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುವುದು ಎಂದು ಆಗ ಹೇಳಿದ್ದರು. ಅನೇಕ ಜನರು ಇದಕ್ಕಾಗಿ ದೇಣಿಗೆ ನೀಡಿದ್ದರು. ಏನಿಲ್ಲವೆಂದರೂ ಸುಮಾರು 57 ಕೋಟಿ ರೂಪಾಯಿಗಳಷ್ಟು ಸಂಗ್ರಹಗೊಂಡಿದ್ದರ ಬಗ್ಗೆ ಮಾಹಿತಿ ಇದೆ. ನಂತರ ಆ ಹಣ ಏನಾಯಿತು. ಅದನ್ನು ರಾಜಭವನದಲ್ಲಿ ಡಿಪೋಸಿಟ್ ಮಾಡಲಾಗಿದೆ ಎಂದು ಕಿರಿತ್ ಸೋಮಯ್ಯ ಹೇಳಿದ್ದರು. ಆದರೆ ಆರ್ಟಿಐ ಮೂಲಕ ಮಾಹಿತಿ ಪಡೆದಾಗ, ಅಲ್ಲಿ ಯಾವುದೇ ಹಣವೂ ಠೇವಣಿಯಾಗಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಇದು ವಂಚನೆ ಪ್ರಕರಣ ಎಂದು ರಾವತ್ ಆರೋಪಿಸಿದ್ದರು. ಅಷ್ಟೇ ಅಲ್ಲ, ಇದು ರಾಷ್ಟ್ರೀಯ ಭದ್ರತೆ ವಿಚಾರ. ಮಹಾರಾಷ್ಟ್ರ ಸರ್ಕಾರ ಇದನ್ನು ತನಿಖೆಗೆ ಕೈಗೆತ್ತಿಕೊಳ್ಳಲಿದೆ ಎಂದೂ ಹೇಳಿದ್ದರು.
ಅದಾದ ಮೇಲೆ ಮಿಲಿಟರಿ ಮಾಜಿ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ. ಆದರೆ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸೋಮಯ್ಯ, ನಾನು ಯಾವುದೇ ಹಗರಣವನ್ನೂ ಮಾಡಿಲ್ಲ. ನಾನೇನೂ ತಪ್ಪು ಮಾಡಿಲ್ಲ. ಸಂಜಯ್ ರಾವತ್ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಬಿಟ್ಟರೆ, ಅದಕ್ಕೆ ಸಾಕ್ಷಿಯನ್ನೇನೂ ನೀಡುತ್ತಿಲ್ಲ. ಇಲ್ಲಿಯವರೆಗೆ ಎಫ್ಐಆರ್ ಕಾಪಿ ನನಗೆ ತಲುಪಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕನ್ನಡದ ‘ಪ್ರೀತ್ಸು’ ಚಿತ್ರಕ್ಕೆ ಇಳಯರಾಜಾ ಸಂಗೀತ ನಿರ್ದೇಶನ; ಆಡಿಯೋ ರಿಲೀಸ್ ಮಾಡಿಕೊಂಡ ಖುಷಿಯಲ್ಲಿ ಚಿತ್ರತಂಡ