ನವದೆಹಲಿ: ಶಿರೋಮಣಿ ಅಕಾಲಿದಳದ ಮಾಜಿ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧ ಪಂಜಾಬ್ ಪೊಲೀಸರು ಸೋಮವಾರ ರಾತ್ರಿ ಡ್ರಗ್ ದಂಧೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. 2022ರಲ್ಲಿ ಪಂಜಾಬ್ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಿಂದ ಪಂಜಾಬ್ ರಾಜಕೀಯದಲ್ಲಿ ಭಾರೀ ಸಂಚಲನ ಉಂಟಾಗುವ ಸಾಧ್ಯತೆಯಿದೆ. ಈ ಬೆಳವಣಿಗೆಯನ್ನು ಸ್ವಾಗತಿಸಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. 5.5 ವರ್ಷಗಳ ಬಾದಲ್ ಕುಟುಂಬ ಮತ್ತು ಕ್ಯಾಪ್ಟನ್ ನಡೆಸುತ್ತಿರುವ ಭ್ರಷ್ಟ ವ್ಯವಸ್ಥೆಯ ವಿರುದ್ಧದ ಹೋರಾಟದ ಬಳಿಕ ಮತ್ತು ಮಜಿಥಿಯಾ ವಿರುದ್ಧ ಇಡಿ ಮತ್ತು ಎಸ್‌ಟಿಎಫ್ ವರದಿಯ ಮೇಲೆ ಕ್ರಮ ತೆಗೆದುಕೊಳ್ಳದೆ 4 ವರ್ಷಗಳ ನಂತರ ಕೊನೆಗೂ ಈಗ ಸತ್ಯಕ್ಕೆ ಜಯ ಸಿಕ್ಕಿದೆ. ಅಧಿಕಾರ ಮತ್ತು ಪ್ರಭಾವಿ ಸ್ಥಾನಗಳಲ್ಲಿ ವಿಶ್ವಾಸಾರ್ಹ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದರಿಂದ ಭ್ರಷ್ಟರ ವಿರುದ್ಧ ಕೇಸ್ ದಾಖಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
SAD ಅಧ್ಯಕ್ಷ ಸುಖ್ಬೀರ್ ಬಾದಲ್ ಅವರ ಸೋದರ ಮಾವ ಮಜಿಥಿಯಾ ಅವರು ಪಕ್ಷದಲ್ಲಿ ಪ್ರಬಲ ವ್ಯಕ್ತಿಯಾಗಿದ್ದಾರೆ ಮತ್ತು ಹಿಂದಿನ ಅಕಾಲಿ ಸರ್ಕಾರದಲ್ಲಿ ಭಾರೀ ಪ್ರಭಾವವನ್ನು ಹೊಂದಿದ್ದರು. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮಜಿಥಿಯಾ ಅವರು ರಾಜ್ಯದ ಡ್ರಗ್ ದಂಧೆಯೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಬಹಳ ಸಮಯದಿಂದ ಆರೋಪಿಸುತ್ತಿದ್ದವು. ಅದನ್ನು ಮಜಿಥಿಯಾ ನಿರಾಕರಿಸಿದ್ದರು.
2018ರಲ್ಲಿ, ಪಂಜಾಬ್‌ನ ಡ್ರಗ್ ವಿರೋಧಿ ವಿಶೇಷ ಕಾರ್ಯಪಡೆಯ ಮುಖ್ಯಸ್ಥ ಹರ್‌ಪ್ರೀತ್ ಸಿಂಗ್ ಸಿಧು ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಸೂಚನೆಯ ಮೇರೆಗೆ ರಾಜ್ಯದಲ್ಲಿ ಡ್ರಗ್ ದಂಧೆಯಲ್ಲಿ ವರದಿಯನ್ನು ಸಲ್ಲಿಸಿದ್ದರು. ಆದರೆ, ಆ ವರದಿ ಇನ್ನೂ ಬಹಿರಂಗವಾಗಿಲ್ಲ. ಎಸ್‌ಟಿಎಫ್ ವರದಿಯ ಆಧಾರದ ಮೇಲೆ ಮಜಿಥಿಯಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿಧು ಹೇಳಿಕೊಂಡಿದ್ದು, ನಾಲ್ಕು ವರ್ಷಗಳ ತಮ್ಮ ಬೇಡಿಕೆಗೆ ಅಂತಿಮವಾಗಿ ಮನ್ನಣೆ ನೀಡಲಾಗಿದೆ ಎಂದು ಹೇಳಿದ್ದಾರೆ.
An FIR has been registered in Punjab Police Crime Branch against the main culprits of Drug Trade on basis of February 2018 STF report, wherein i demanded this 4 years ago – It is a slap on the face of all those powerful who slept for years on issues at the heart of Punjab’s soul
— Navjot Singh Sidhu (@sherryontopp) December 21, 2021
58 ವರ್ಷದ ನವಜೋತ್ ಸಿಂಗ್ ಸಿಧು ಅವರು 45 ವರ್ಷದ ಮಜಿಥಿಯಾ ಅವರ ರಾಜಕೀಯ ವಿರೋಧಿಯಾಗಿದ್ದಾರೆ. ಮಜಿಥಿಯಾ ಅಮೃತಸರ ಗಡಿ ಜಿಲ್ಲೆಯ ಮಜಿತಾ ಕ್ಷೇತ್ರದಿಂದ ಮೂರು ಬಾರಿ SAD ಶಾಸಕರಾಗಿದ್ದಾರೆ. ಫೆಬ್ರವರಿ 2018ರ ಎಸ್‌ಟಿಎಫ್ ವರದಿಯ ಆಧಾರದ ಮೇಲೆ ಮಾದಕವಸ್ತು ವ್ಯಾಪಾರದ ಪ್ರಮುಖ ಅಪರಾಧಿಗಳ ವಿರುದ್ಧ ಪಂಜಾಬ್ ಪೊಲೀಸ್ ಕ್ರೈಂ ಬ್ರಾಂಚ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದು ಕೇವಲ ಮೊದಲ ಹೆಜ್ಜೆ. ತಲೆಮಾರುಗಳವರೆಗೆ ತಡೆಯುವ ಶಿಕ್ಷೆಯನ್ನು ನೀಡುವವರೆಗೆ ನಾನು ಹೋರಾಡುತ್ತೇನೆ. ನಾವು ಪ್ರಾಮಾಣಿಕ ಮತ್ತು ನೀತಿವಂತರನ್ನು ಆಯ್ಕೆ ಮಾಡಬೇಕು ಮತ್ತು ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಅವರ ರಕ್ಷಕರನ್ನು ದೂರವಿಡಬೇಕು ಎಂದು ಸಿಧು ಹೇಳಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಮಜಿಥಿಯಾ ಅವರನ್ನು ಡ್ರಗ್ ಪ್ರಕರಣದಲ್ಲಿ ಬಂಧಿಸಲು ಚರಂಜಿತ್ ಸಿಂಗ್ ಚನ್ನಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಯತ್ನಗಳು ಹಲವಾರು ತಿರುವುಗಳನ್ನು ಕಂಡಿವೆ. ಕಳೆದ ಸೋಮವಾರ, ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಬಿಒಐ) ಮುಖ್ಯಸ್ಥ ಎಎಸ್ ಅಸ್ಥಾನಾ ಅವರು ಬರೆದಿರುವ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆಗಿನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ ಅವರನ್ನು ಉದ್ದೇಶಿಸಿ ಡಿಸೆಂಬರ್ 11ರ ದಿನಾಂಕದ ನಾಲ್ಕು ಪುಟಗಳ ಪತ್ರವನ್ನು ಬರೆಯಲಾಗಿತ್ತು.
ಇದನ್ನೂ ಓದಿ: ಧಾರ್ಮಿಕ ಗ್ರಂಥಗಳನ್ನು ಅಪವಿತ್ರಗೊಳಿಸಿದ ಅಪರಾಧಿಗಳನ್ನು ಗಲ್ಲಿಗೇರಿಸಿ: ನವಜೋತ್ ಸಿಂಗ್ ಸಿಧು
ಅಮರಿಂದರ್ ಸಿಂಗ್ ದುರಹಂಕಾರಿ ರಾಜ; ಪಂಜಾಬ್ ಲೋಕ ಕಾಂಗ್ರೆಸ್-ಬಿಜೆಪಿ ಮೈತ್ರಿ ಬಗ್ಗೆ ನವಜೋತ್ ಸಿಂಗ್ ಸಿಧು ವಾಗ್ದಾಳಿ