ಜಮ್ಮು: ಮುಸ್ಲಿಮರ ವಿರುದ್ಧ ಅನುಚಿತವಾಗಿ ಮಾತನಾಡಿದ ಬಿಜೆಪಿ ನಾಯಕ (BJP Leader) ವಿಕ್ರಮ್ ರಾಂಧವಾ ವಿರುದ್ಧ ಜಮ್ಮು-ಕಾಶ್ಮೀರ (Jammu-Kashmir)ದಲ್ಲಿ ಪ್ರಕರಣ ದಾಖಲಾಗಿದೆ. ಇವರ ಹೇಳಿಕೆಯನ್ನು ಬಿಜೆಪಿ ಪಕ್ಷವೇ ವಿರೋಧಿಸಿದೆ. ರಾಂಧವಾ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅವರು ಕೂಡಲೇ ಕ್ಷಮೆ ಕೋರಬೇಕು ಎಂದು ಪಕ್ಷ ಹೇಳಿದೆ. ಪಾಕಿಸ್ತಾನ ಟಿ-20 ವಿಶ್ವಕಪ್ ಪಂದ್ಯದಲ್ಲಿ ಗೆದ್ದ ಬಳಿಕ, ಜಮ್ಮು-ಕಾಶ್ಮೀರದ ಮಾಜಿ ಶಾಸಕ ವಿಕ್ರಮ್ ರಾಂಧವಾ ವಿಡಿಯೋ ಮೂಲಕ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದರು.
ವಿಕ್ರಮ್ ರಾಂಧವ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ. ನಿಮ್ಮ ಹೇಳಿಕೆಯ ಬಗ್ಗೆ 48 ಗಂಟೆಗಳಲ್ಲಿ ಸ್ಪಷ್ಟನೆ ನೀಡಿ ಮತ್ತು ಸಾರ್ವಜನಿಕವಾಗಿ ಕ್ಷಮೆ ಕೇಳಿ ಎಂದು ಹೇಳಿದೆ. ಟಿ 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಗೆದ್ದಾಗ ಕಾಶ್ಮೀರದ ವಿವಿಧೆಡೆ ಸಂಭ್ರಮಿಸಿದ್ದನ್ನು ವಿರೋಧಿಸುವ ಭರದಲ್ಲಿ ವಿಕ್ರಮ್ ರಾಂಧವ ಕಾಶ್ಮೀರದ ಮುಸ್ಲಿಮರ ಬಗ್ಗೆ ಕೀಳಾಗಿ ಕಾಮೆಂಟ್ ಮಾಡಿದ್ದರು. ಅದನ್ನು ವಿರೋಧಿಸಿರುವ ಪಕ್ಷ, ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ನೀವು ನಿರ್ದಿಷ್ಟ ಸಮುದಾಯವೊಂದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಕಾಣುತ್ತಿದೆ. ಇದನ್ನು ನಮ್ಮ ಪಕ್ಷ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ನಮ್ಮ ಪಕ್ಷಕ್ಕೆ ಮುಜುಗರ ತರುವಂತ ವಿಚಾರ ಎಂದು ನೋಟಿಸ್ನಲ್ಲಿ ಉಲ್ಲೇಖಿಸಿದೆ.
ಅಂದಹಾಗೆ ಬಿಜೆಪಿ ಈ ವರ್ಷದಲ್ಲೇ ಇದು ಎರಡನೇ ಬಾರಿಗೆ ರಾಂಧವಾಗೆ ಶೋಕಾಸ್ ನೋಟಿಸ್ ನೀಡುತ್ತಿದೆ. ಈ ಹಿಂದೆ ರಾಂಧವಾ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ವಿರುದ್ಧ ಮಾತನಾಡಿದ್ದರು. ಜಿತೇಂದ್ರ ಸಿಂಗ್ ಅಕ್ರಮ ಗಣಿಗಾರಿಕೆ ಮತ್ತು ಬೃಹತ್ ಕಿಕ್ಬ್ಯಾಕ್ಗಳನ್ನು ಪೋಷಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಆಗಲೂ ಸಹ ಬಿಜೆಪಿ ಅಸಮಾಧಾನ ಹೊರಹಾಕಿತ್ತು. ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಕಳಂಕ ತಂದಿದ್ದೀರಿ ಎಂದು ಶೋಕಾಸ್ ನೋಟಿಸ್ನಲ್ಲಿ ಹೇಳಿತ್ತು.
ಇದನ್ನೂ ಓದಿ: NEET ಫಲಿತಾಂಶ 2021: ಕಟ್ ಆಫ್ ಮಾರ್ಕ್, ಲಿಂಗ ಮತ್ತು ಜಾತಿ ಆಧಾರಿತ ವರ್ಗೀಕರಣ ಹೇಗಿದೆ?
ಹಾನಗಲ್, ಸಿಂದಗಿ ಉಪಚುನಾವಣೆ ಅಂತಿಮ ಫಲಿತಾಂಶ: ಯಾರಿಗೆ ಎಷ್ಟು ಅಂತರದ ಗೆಲುವು? ಇಲ್ಲಿದೆ ವಿವರ