ಬೆಂಗಳೂರು: ಸನಾತನ ಧರ್ಮವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದ್ದ ಡಿಎಂಕೆ ನಾಯಕ ಹಾಗೂ ತಮಿಳುನಾಡು ಯುವಜನ ಕಲ್ಯಾಣ ಇಲಾಖೆ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ವಿರುದ್ಧ ದೇಶಾದ್ಯಂತಹ ಭಾರೀ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಮಗನಾಗಿರುವ ಉದಯನಿಧಿ ನೀಡಿದ್ದ ಹೇಳಿಕೆಯನ್ನು ಬೆಂಬಲಿಸಿದ್ದ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಇದೀಗ ಉದಯನಿಧಿ ಸ್ಟಾಲಿನ್ ಹಾಗೂ ಪ್ರಿಯಾಂಕ್ ಖರ್ಗೆ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ.
ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಮಾಜಿ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಸೇರಿದಂತೆ 260ಕ್ಕೂ ಹೆಚ್ಚು ಗಣ್ಯರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಉತ್ತರ ಪ್ರದೇಶದ ರಾಂಪುರದಲ್ಲಿ ‘ಸನಾತನ ಧರ್ಮ’ ಹೇಳಿಕೆಗೆ ಸಂಬಂಧಿಸಿದಂತೆ ಕೇಸ್ ದಾಖಲಿಸಲಾಗಿದೆ.
An FIR was registered against Tamil Nadu Minister Udhayanidhi Stalin & Karnataka Minister Priyank Kharge in Uttar Pradesh’s Rampur over ‘Sanatan Dharma’ remarks after a complaint from Advocates.
— ANI (@ANI) September 6, 2023
ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮ’ ಹೇಳಿಕೆ ಖಂಡಿಸಿ ಸಿಜೆಐಗೆ ಪತ್ರ ಬರೆದ 262 ಗಣ್ಯರು
ಏನಿದು ವಿವಾದ?:
ಭಾನುವಾರ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಮಗ ಹಾಗೂ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಕೊರೋನಾವೈರಸ್, ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿ ಮಾತನಾಡಿದ್ದರು. ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ, ಕೊರೊನಾವೈರಸ್ ಇದ್ದಂತೆ. ಸನಾತನ ಧರ್ಮವನ್ನು ಕೇವಲ ವಿರೋಧಿಸಿದರಷ್ಟೇ ಸಾಲದು. ಅದನ್ನು ನಿರ್ಮೂಲನೆ ಮಾಡಬೇಕು ಎಂದಿದ್ದರು.
ಉದಯ್ ಸ್ಟಾಲಿನ್ ಅವರ ಈ ಹೇಳಿಕೆಗೆ ದೇಶಾದ್ಯಂತ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವು ನಾಯಕರು ಇದು ನರಮೇಧದ ಕರೆ ಎಂದು ಆರೋಪಿಸಿದ್ದರೆ, ಇನ್ನು ಕೆಲವರು ಉದಯನಿಧಿ ಸ್ಟಾಲಿನ್ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮಕ್ಕೆ ಹುಟ್ಟಿಲ್ಲ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಎಂದೆ; ಗೌರಿನೆನಪು ಕಾರ್ಯಕ್ರಮದಲ್ಲಿ ಪ್ರಕಾಶ್ ರೈ
ಇದರ ಬೆನ್ನಲ್ಲೇ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ನಿರ್ಮೂಲನೆ ಕುರಿತು ನೀಡಿದ್ದ ಹೇಳಿಕೆಗೆ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲ ವ್ಯಕ್ತಪಡಿಸಿದ್ದರು. ಮನುಷ್ಯನ ಘನತೆಯನ್ನು ಎತ್ತಿಹಿಡಿಯದ, ಸಮಾಜದಲ್ಲಿ ಸಮಾನತೆಯನ್ನು ಸಾರದ ಯಾವುದೇ ಒಂದು ಧರ್ಮ ಧರ್ಮವೇ ಅಲ್ಲ. ಸಮಾನ ಹಕ್ಕುಗಳನ್ನು ನೀಡದ ಮತ್ತು ಮನುಷ್ಯರನ್ನು ಮನುಷ್ಯರಂತೆ ನಡೆಸಿಕೊಳ್ಳದೆ ಕೀಳಾಗಿ ಕಾಣುವ ಧರ್ಮ ರೋಗದಷ್ಟೇ ಕೆಟ್ಟದ್ದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು.
ಉದಯನಿಧಿ ಸ್ಟಾಲಿನ್ ಯಾವ ಸಂದರ್ಭದಲ್ಲಿ ಆ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಯಾವ ಧರ್ಮದಲ್ಲಿ ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಇರುವುದಿಲ್ಲವೋ, ಯಾವ ಧರ್ಮದಲ್ಲಿ ಮನುಷ್ಯರ ನಡುವೆ ಭೇದ-ಭಾವ ಇರುವುದೋ ಅದು ಧರ್ಮವೇ ಅಲ್ಲ. ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಇದ್ದೇವೆ. ಸಂವಿಧಾನವೇ ನಮ್ಮ ಧರ್ಮ. ಬುದ್ಧ, ಬಸವಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು ಎಂದು ಪ್ರಿಯಾಂಕ್ ಖರ್ಗೆ ಉದಯನಿಧಿಗೆ ಬೆಂಬಲ ಸೂಚಿಸಿದ್ದರು.
ಕರ್ನಾಟಕಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ