ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್ ವಿರುದ್ಧ ಬಿಜೆಪಿ ಕೆಂಡಾಮಂಡಲ, ಯಾರು ಏನಂದ್ರು?
ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕುತ್ತಿದೆ. ಸ್ಟಾಲಿನ್ ಬಂಧನಕ್ಕೆ ಗಡಿನಾಡು ಚಾಮರಾನಗರದಲ್ಲಿನ ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಅಲ್ಲದೆ, ಆರ್ಯ ಹಾಗೂ ದ್ರಾವಿಡ ಸಮಸ್ಯೆ ಹುಟ್ಟುಹಾಕುವುದರ ಮುಂದುವರಿದ ಭಾಗ ಇದು ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರು, ಸೆ.4: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ವಿರುದ್ಧ ಬಿಜೆಪಿ (BJP) ಆಕ್ರೋಶ ಹೊರಹಾಕುತ್ತಿದೆ. ಸ್ಟಾಲಿನ್ ಬಂಧನಕ್ಕೆ ಗಡಿನಾಡು ಚಾಮರಾನಗರದಲ್ಲಿನ ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಅಲ್ಲದೆ, ಆರ್ಯ ಹಾಗೂ ದ್ರಾವಿಡ ಸಮಸ್ಯೆ ಹುಟ್ಟುಹಾಕುವುದರ ಮುಂದುವರಿದ ಭಾಗ ಇದು ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ನಳಿನ್ಕುಮಾರ್ ಕಟೀಲು, ತಮಿಳುನಾಡಿನ ರಾಜಕೀಯದಲ್ಲಿ ಆರ್ಯ ಹಾಗೂ ದ್ರಾವಿಡ ಸಮಸ್ಯೆ ಹುಟ್ಟು ಹಾಕುವುದನ್ನು ಕಂಡಿದ್ದೇವೆ. ಮುಂದುವರಿದ ಭಾಗವಾಗಿ ಇದೀಗ ಸನಾತನ ಧರ್ಮ ಅವಹೇಳನ ಮಾಡುತ್ತಿದ್ದಾರೆ ಎಂದರು.
ಡಿಎಂಕೆ ಇಂಡಿಯಾ ಒಕ್ಕೂಟ ಸೇರಿದೆ, ಇದಕ್ಕೆ ಅವರು ಏನಂತಾರೆ? ಇದಕ್ಕೆ ಬೆಂಬಲ ಮಾಡಿದ ಕಾಂಗ್ರೆಸ್ ನಾಯಕರ ವಾದ ಏನು? ಎಂದು ಪ್ರಶ್ನಿಸಿದ ಕಟೀಲ್, ಭಾರತದ ಆತ್ಮ ಹಿಂದತ್ವ, ಹಿಂದುತ್ವದ ಕಲ್ಪನೆ ಇರುವುದು ಭಾರತದಲ್ಲಿ ಮಾತ್ರ. ಹಿಂದೂಗಳ ಸಂಸ್ಕೃತಿ ಜಗತ್ತೇ ಒಪ್ಪಿಕೊಳ್ಳುತ್ತದೆ ಎಂದರು.
INDIA ಮೈತ್ರಿಕೂಟದ ಹಿಡನ್ ಅಜೆಂಡಾ ಹೇಳಿದ ಉದಯನಿಧಿ
ಉದಯನಿಧಿ ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಆರ್.ಅಶೋಕ, ದೇಶದಲ್ಲಿ ಇರುವುದು ಒಂದೇ ಭೂಮಿ, ಅದು ಹಿಂದೂಗಳ ಭೂಮಿ. ಸನಾತನ ಧರ್ಮ ನಮ್ಮ ರಕ್ತದ ಕಣ ಕಣದಲ್ಲಿ ಬಂದಿದೆ. ಉದಯನಿಧಿ INDIA ಮೈತ್ರಿಕೂಟದ ಹಿಡನ್ ಅಜೆಂಡಾ ಹೇಳಿದ್ದಾರೆ. ಇದರ ಬಗ್ಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೇಳಬೇಕು ಎಂದರು.
ಇದನ್ನೂ ಓದಿ: ಸಚಿವ ಉದಯನಿಧಿ ಸ್ಟಾಲಿನ್ ಬಂಧನ ಕೋರಿ ಚೆನ್ನೈ ಪೊಲೀಸರಿಗೆ ನೋಟಿಸ್ ನೀಡಿದ ಆರ್‌ಎಸ್‌ಎಸ್
ಇವರು ದೇವಸ್ಥಾನಕ್ಕೆ ಹೋಗಿ ನಾಮ ಹಾಕಿಕೊಂಡು ಬಂದು ನಾನು ಹಿಂದೂ ಹಿಂದೂ ಅಂತ ಹೇಳುತ್ತಾರೆ. ಬಳಿಕ ಹಿಂದೂಗಳಿಗೆ ಬೈಯ್ಯುತ್ತಾರೆ. ಇದು ಕಾಂಗ್ರೆಸ್ ನವರ ಚಾಳಿಯಾಗಿದೆ. ಉದಯನಿಧಿ ಹುಚ್ಚನ ರೀತಿ ಮಾತಾಡುತ್ತಿದ್ದಾನೆ. ಮೊದಲು ಈತ ಹಿಂದೂನಾ? ಅಥವಾ ಅಲ್ಲವಾ ಎನ್ನುವುದನ್ನು ಹೇಳಲಿ. ಹಿಂದೂಗಳ ಭಾವನೆಗೆ ಕೊಡಲಿ ಪೆಟ್ಟನ್ನು ದೇಶದ ಜನರು ಕ್ಷಮಿಸಲ್ಲ ಎಂದರು.
ಹಿಂದೂಗಳ ಭಾವನೆಗೆ ಕೊಡಲಿ ಪೆಟ್ಟನ್ನು ದೇಶದ ಜನರು ಕ್ಷಮಿಸುವುದಿಲ್ಲ ಎಂದು ಹೇಳಿದ ಅಶೋಕ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಉಚಿತವಾಗಿ ಕಾವೇರಿ ನೀರು ಬಿಟ್ಟು ಕೊಟ್ಟಿದ್ದಾರೆ. ಈಗ ಧರ್ಮದ ಬಗ್ಗೆ ಉಚಿತವಾಗಿ ಬಿಟ್ಟರೆ ಮುಂದೆ ಕಾಂಗ್ರೆಸ್ನ ಪರಿಸ್ಥಿತಿ ಏನಾಗುತ್ತದೆ ಎಂಬುದು ಗೊತ್ತಾಗಲಿ ಎಂದರು.
ಹಿಂದೂ ಧರ್ಮವನ್ನು ಟೀಕೆ ಮಾಡುವುದೇ ಇವರ ಅಜೆಂಡಾ
ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸುನಿಲ್ ಕುಮಾರ್, ಇಂಡಿಯಾ ಒಕ್ಕೂಟದ ಆಲೋಚನೆ ಏನು ಅಂತಾ ಗೊತ್ತಾಗುತ್ತಿದೆ. ಹಿಂದೂ ಧರ್ಮವನ್ನು ಟೀಕೆ ಮಾಡುವುದೇ ಇವರ ಅಜೆಂಡಾವಾಗಿದೆ. ಕಾಂಗ್ರೆಸ್ಸಿಗರು ಇಂತಹ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು. ಅಲ್ಲದೆ, ಬಿಜೆಪಿ ಕಾನೂನು ವಿಭಾಗ ದೂರು ಕೊಡಲು ನಿರ್ಧಾರ ಮಾಡುತ್ತದೆ ಎಂದರು.
ನಿರಂತರವಾಗಿ ಸನಾತನ ಧರ್ಮವನ್ನ ಟೀಕೆ ಮಾಡುವುದು ಹಿಂದಿನಿಂದಲೂ ನಡೆದಿದೆ. ಜಾರಕಿಹೊಳಿ ಅಶ್ಲೀಲ ಅಂದಾಗ ಎಲ್ಲರೂ ಮೌನವಾಗಿಯೇ ಇದ್ದರು. ಈಗ ಆ ಒಕ್ಕೂಟ ಏನು ಮಾತಾಡುತ್ತೆ ನೋಡಬೇಕಿದೆ ಎಂದ ಸುನೀಲ್ ಕುಮಾರ್, ಸಮಾನತೆ ಭಾಷಣ ಮಾಡುತ್ತಾ ಅವರವರ ಕುಟುಂಬಕ್ಕೆ ಅಧಿಕಾರ ಕೊಡಲು ಹೊರಟಿದ್ದಾರೆ. ಅಧಿಕಾರ ಮಾತ್ರ ಕುಟುಂಬದ ಜೊತೆಗೆ ಇರಬೇಕು ಅನ್ನೋದು ಅವರ ಪ್ರಯತ್ನ. ಸಮಾನತೆ ಹೆಸರು ಹೊರಗೆ ಹೇಳುವುದು, ಒಳಗೆ ಮಾತ್ರ ತಮ್ಮ ಮಕ್ಕಳಿಗೆ ಅಧಿಕಾರ ವಹಿಸುವುದು ಎಂದು ಹೇಳುವ ಮೂಲಕ ಸ್ಟಾಲಿನ್ ಹೇಳಿಕೆ ಸಮರ್ಥಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ಸ್ಟಾಲಿನ್ ಮಗ ಉದಯನಿಧಿಗೆ ನಾವಲ್ಲ, ತಮಿಳುನಾಡು ಜನ ಉತ್ತರ ಕೊಡುತ್ತಾರೆ: ಡಿಕೆ ಶಿವಕುಮಾರ್, ಡಿಸಿಎಂ
ಯಾರು ಸನಾತನ ಧರ್ಮ ಟೀಕೆ ಮಾಡುತ್ತಾರೋ ಅವರು ಮನೆಯಲ್ಲಿ ದೇವರ ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ಬಿಜೆಪಿ ಕಾನೂನು ವಿಭಾಗ ಕೇಸ್ ಕೊಡುವ ವಿಚಾರವಾಗಿ ನಿರ್ಧಾರ ಮಾಡುತ್ತದೆ ಎಂದು ಸುನಿಲ್ ಕುಮಾರ್ ಹೇಳಿದರು.
ಉದಯನಿಧಿ ಸ್ಟ್ಯಾಲಿನ್ ಬಂಧನಕ್ಕೆ ಆಗ್ರಹ
ತಮಿಳುನಾಡು ಸಿಎಂ ಪುತ್ರ ಉದಯನಿಧಿ ಸ್ಟ್ಯಾಲಿನ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಗಡಿ ನಾಡು ಚಾಮರಾಜನಗರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತ ಸರ್ವ ಧರ್ಮ ಸಮನ್ವಯ ದೇಶ ಈ ದೇಶದಲ್ಲಿ ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ಕನ್ನಡಪರ ಹೋರಾಟಗಾರರು ಹೇಳಿದ್ದಾರೆ.
ಆಯಾ ಧರ್ಮ ಅದರದ್ದೆ ಆದ ಸ್ಥಾನವಿರುತ್ತದೆ. ಒಂದು ಧರ್ಮದ ಕುರಿತು ಹೀಯಾಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಕನ್ನಡ ಪರ ಹೋರಾಟಗಾರರು, ಈ ರೀತಿಯ ಹೇಳಿಕೆ ನೀಡಿದ ಉದಯನಿಧಿ ಸ್ಟ್ಯಾಲೀನ್ ಅವರನ್ನ ಬಂಧಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸನಾತನ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ
ಉದಯನಿಧಿ ಸ್ಟ್ಯಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಈ ದೇಶ ಉಳಿದಿರುವುದೇ ಸನಾತನ ಧರ್ಮದಿಂದ. ಅವರ ಅಪ್ಪ ಬಂದರೂ ಸನಾತನ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಅಯೋಗ್ಯರು ರಾಕ್ಷಸರು ಈ ರೀತಿ ಮಾತನಾಡುತ್ತಾರೆ. ಈ ಹಿಂದೆಯೇ ಸಾಕಷ್ಟು ಜನ ಈ ರೀತಿ ಮಾತನಾಡಿದ್ದಾರೆ. ಅವರೆಲ್ಲಾ ನಾಶವಾಗಿದ್ದಾರೆ. ಇವರು ಕೂಡ ನಾಶವಾಗುತ್ತಾರೆ. ಎಂದರು.
ವಿಷ ಬೀಜವನ್ನು ಬಿತ್ತುವುದು ಸರಿಯಲ್ಲ
ಸನಾತನ ಧರ್ಮ ಮಲೇರಿಯಾ, ಡೆಂಘೀ ಇದ್ದಂತೆ ಎಂಬ ಸ್ಟಾಲಿನ್ ಹೇಳಿಕೆಯನ್ನು ವಿಡಿಯೋ ಮೂಲಕ ಖಂಡಿಸಿದ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ, ಒಂದು ರಾಜ್ಯದ ಮಂತ್ರಿಯಾಗಿ ಸಮಾಜದಲ್ಲಿ ಇಂತಹ ವಿಷ ಬೀಜವನ್ನು ಬಿತ್ತುವುದು ಸರಿಯಲ್ಲ ಎಂದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದರು.
ಸನಾತನ ಎಂದರೇ ಸದಾ ಕಾಲವೂ ಇರುವಂತಹದ್ದು ಎಂದರ್ಥ. ಎಲ್ಲರೂ ಸುಖವಾಗಿ ಬದುಕಲು ಅಳವಡಿಸಿಕೊಳ್ಳುವ ಸೂತ್ರವೇ ಧರ್ಮ. ನಮ್ಮ ಸುಖದಿಂದ ಅಕ್ಕಪಕ್ಕದವರಿಗೆ ದುಃಖವಾಗಬಾರದು. ಬದಲಾಗಿ ನಮ್ಮ ಸುಖದಿಂದ ಅಕ್ಕಪಕ್ಕದವರಿಗೂ ಸಂತೋಷ ಲಭಿಸಬೇಕು. ಇದು ಸನಾತನ ಧರ್ಮದ ಮೂಲ ಆಶಯವಾಗಿದೆ. ಅಂತಹ ಧರ್ಮವನ್ನು ನಿರ್ಮೂಲಿಸಬೇಕು ಎನ್ನುವ ಪ್ರವೃತ್ತಿ ಸರಿಯಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ