ಅಹ್ಮದಾಬಾದ್: ದೇಶಾದ್ಯಂತ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಗುಜರಾತ್ನಲ್ಲಿ 15ವರ್ಷದ ಬಾಲಕನೊಬ್ಬನಲ್ಲಿ ಈ ಕಪ್ಪು ಶಿಲೀಂದ್ರ ಕಾಣಿಸಿಕೊಂಡಿದೆ. ನನಗೆ ಗೊತ್ತಿರುವ ಮಟ್ಟಿಗೆ ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡ ಮೊದಲ ಪ್ರಕರಣ ಇದು ಎಂದು ಅಹ್ಮದಾಬಾದ್ನ ಮಕ್ಕಳ ವೈದ್ಯ ಡಾ. ಅಭಿಷೇಕ್ ಬನ್ಸಾಲ್ ತಿಳಿಸಿದ್ದಾರೆ.
ಈ ಬಾಲಕ ಏಪ್ರಿಲ್ 14ರಂದು ಕೊವಿಡ್ ಸೋಂಕಿನಿಂದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ. ನಂತರ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸುಮಾರು 10 ದಿನ ಐಸಿಯುನಲ್ಲಿದ್ದು, ಆಕ್ಸಿಜನ್, ರೆಮ್ಡಿಸಿವಿರ್ ಮೂಲಕ ಆತನಿಗೆ ಚಿಕಿತ್ಸೆ ನೀಡಲಾಗಿದೆ. ಅದಾದ ಬಳಿಕ ಏಪ್ರಿಲ್ 24ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ. ಆಸ್ಪತ್ರೆಯಿಂದ ಬಂದು ಹಲವು ದಿನಗಳವರೆಗೆ ಆರೋಗ್ಯವಾಗಿಯೇ ಇದ್ದ ಹುಡುಗನಲ್ಲಿ ಮತ್ತೆ ಹಲ್ಲುನೋವು, ಬಾಯಿಯಲ್ಲಿ ಹುಣ್ಣು ಕಾಣಿಸಿಕೊಂಡಿತು. ಮತ್ತೆ ಆಸ್ಪತ್ರೆಗೆ ದಾಖಲಾದ ಆತನನ್ನು ಪರೀಕ್ಷಿಸಿದಾಗ ಮ್ಯೂಕೋರ್ಮೈಕೋಸಿಸ್ ಇರುವುದು ದೃಢಪಟ್ಟಿತು ಎಂದು ಡಾ. ಬನ್ಸಾಲ್ ಮಾಹಿತಿ ನೀಡಿದ್ದಾರೆ.
ಈ ಬಾಲಕನ ಬಾಯಿಯ ಬಲಭಾಗದ ಅರ್ಧದಷ್ಟು ಪೆಲೇಟ್ ಮತ್ತು ಮೇಲಿನ ಹಲ್ಲನ್ನು ತೆಗೆದುಹಾಕಲಾಗಿದೆ. ಸೈನಸ್ನ್ನು ಸ್ವಚ್ಛಗೊಳಿಸಲಾಗಿದೆ. ಸದ್ಯ ಆತನ ಸ್ಥಿತಿ ಸ್ಥಿರವಾಗಿದೆ. ಇನ್ನು ಮೂರು-ನಾಲ್ಕು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕಣ್ಣೀರಿನ ಬಗ್ಗೆ ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟವಾಗಿದೆ ಎನ್ನಲಾದ ಈ ಸುದ್ದಿಯ ಅಸಲಿ ವಿಷಯವೇನು?
Published On - 11:32 pm, Sat, 22 May 21