ಕೊವಿಡ್ 19 ಲಸಿಕೆ ಪ್ರಮಾಣಪತ್ರದ ಮೇಲೆ ಪ್ರಧಾನಿ ಬದಲು ಮುಖ್ಯಮಂತ್ರಿ ಫೋಟೋ; ನೋಂದಣಿ ಆ್ಯಪ್ ಕೂಡ ಬದಲಿಸಿದ ಛತ್ತೀಸ್ಗಡ್
ಛತ್ತೀಸ್ಗಡ್ನಲ್ಲಿ 18-44ವರ್ಷದವರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಲು CGTEEKA ಎಂಬ ಪೋರ್ಟಲ್ ಪರಿಚಯಿಸಲಾಗಿದೆ.
ರಾಯ್ಪುರ: ಕೊವಿಡ್ 19 ಲಸಿಕೆ ತೆಗೆದುಕೊಂಡವರಿಗೆ ನೀಡುವ ಪ್ರಮಾಣ ಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಇರುವ ಬಗ್ಗೆ ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳ ಮುಖಂಡರು ಪ್ರಶ್ನೆ ಎತ್ತುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಸರ್ಕಾರ ಇರುವ ಛತ್ತೀಸ್ಗಡ್ನಲ್ಲಿ ಕೊವಿಡ್ 19 ಲಸಿಕೆ ಪ್ರಮಾಣ ಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ತೆಗೆಯಲಾಗಿದ್ದು, ಬದಲಿಗೆ ಅಲ್ಲಿನ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ಫೋಟೋವನ್ನು ಹಾಕಲಾಗಿದೆ. ಸದ್ಯ ಅಲ್ಲಿ 18-44ವರ್ಷದವರಿಗೆ ಲಸಿಕೆ ನೀಡಲಾಗುತ್ತಿದೆ. ಈ ವರ್ಗದಡಿ ಲಸಿಕೆ ಪಡೆದವರಿಗೆ ನೀಡಲಾದ ಸರ್ಟಿಫಿಕೇಟ್ನಲ್ಲಿ ಸಿಎಂ ಭೂಪೇಶ್ ಬಾಘೇಲ್ರ ಫೋಟೋವೇ ಇದೆ.
ಲಸಿಕೆ ಪಡೆಯುವವರು ಕೊವಿನ್ ಆ್ಯಪ್ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಹೇಳಿದೆ. ಹಾಗೇ Cowin ಆ್ಯಪ್ನ್ನು ಕೇಂದ್ರ ಸರ್ಕಾರವೇ ಪ್ರಾರಂಭಿಸಿದೆ. ಆದರೆ ಛತ್ತೀಸ್ಗಡ್ನಲ್ಲಿ 18-44ವರ್ಷದವರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಲು CGTEEKA ಎಂಬ ಪೋರ್ಟಲ್ ಪರಿಚಯಿಸಲಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಕೂಡ ತೆಗೆಯಲಾಗಿದೆ.
ಲಸಿಕೆ ಪ್ರಮಾಣಪತ್ರದ ಮೇಲೆ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ರ ಫೋಟೋ ಬಳಕೆ ಮಾಡುವುದರಲ್ಲಿ ಏನು ಸಮಸ್ಯೆ ಇದೆ ಎಂಬುದು ಗೊತ್ತಾಗುತ್ತಿಲ್ಲ. ಕೊವಿಡ್ 19 ಲಸಿಕೆಯನ್ನು ಕೇಂದ್ರ ಸರ್ಕಾರ ನೀಡಿದಾಗ ಸರ್ಟಿಫಿಕೇಟ್ನಲ್ಲಿ ಪ್ರಧಾನಿ ಮೋದಿಯವರ ಫೋಟೋ ಬಳಸುವುದರಲ್ಲಿ ಅರ್ಥವಿತ್ತು. ಆದರೆ ಈಗ ರಾಜ್ಯ ಸರ್ಕಾರವೇ ಲಸಿಕೆ ಖರೀದಿಸಿ, ವಿತರಣೆ ಮಾಡುತ್ತಿದೆ. ಹಾಗಾಗಿ ಮುಖ್ಯಮಂತ್ರಿ ಫೋಟೋವನ್ನು ಬಳಸುತ್ತಿದ್ದೇವೆ. ಆಯಾ ರಾಜ್ಯಸರ್ಕಾರಗಳು ತಮ್ಮ ಹಣದಲ್ಲಿ ಲಸಿಕೆ ಖರೀದಿಸಿ ಜನರಿಗೆ ನೀಡುತ್ತಿರುವಾಗ ಅದರಲ್ಲಿ ಮೋದಿಯವರ ಫೋಟೋವನ್ನೇಕೆ ಬಳಸಬೇಕು ಎಂದು ಅಲ್ಲಿನ ಆರೋಗ್ಯ ಸಚಿವ ಟಿಎಸ್ ಸಿಂಗ್ ಡಿಯೋ ತಿಳಿಸಿದ್ದಾರೆ.
ಛತ್ತೀಸ್ಗಡ್ ಸರ್ಕಾರ ಪ್ರತಿಬಾರಿಯೂ ಹೀಗೆ ಮಾಡುತ್ತದೆ. ಕೇಂದ್ರದ ಯೋಜನೆಗಳ ಹೆಸರಲ್ಲಿ ಇಲ್ಲಿನ ಮುಖ್ಯಮಂತ್ರಿಗಳು, ಸಚಿವರು ಮನ್ನಣೆ ಪಡೆಯುತ್ತಾರೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಬೇಕು ಎಂಬುದು ಕೇಂದ್ರ ಸರ್ಕಾರದ ನಿರ್ಧಾರ. 18 ರಿಂದ 44ವರ್ಷದವರೆಗಿನವರಿಗೂ ಲಸಿಕೆ ಕೊಡಲು ಪ್ರಾರಂಭಿಸಿ ಎಂದು ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಅಂದ ಮೇಲೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನೇ ಬಳಸಬೇಕು ಎಂದು ಛತ್ತೀಸ್ಗಡ್ ಬಿಜೆಪಿ ನಾಯಕ ಧರ್ಮಾಲಾಲ್ ಕೌಶಿಕ್ ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 7 ವರ್ಷ: ಕೊವಿಡ್ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಸಹಾಯ ಮಾಡಲು ಬಿಜೆಪಿ ಚಿಂತನೆ
ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಬೆಡ್ಗಳ ವ್ಯವಸ್ಥೆ ಏಕೆ ಕಡಿಮೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗರಂ
Chhattisgarh uses Chief Minister Bhupesh Baghel photo on Covid 19 Certificate instead of PM Narendra Modi Photograph