ಚೆನೈ: ಸಾರ್ಸ್-ಕೋವ್-2 (ಕೋವಿಡ್-19) ವೈರಸ್ ರೂಪಾಂತರಿ ಡೆಲ್ಟಾ ಪ್ಲಸ್ನಿಂದ ತಮಿಳುನಾಡಿನಲ್ಲಿ ಮೊದಲ ಸಾವು ಸಂಭವಿಸಿದ್ದು, ರಾಜ್ಯದ ಅರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮದುರೈನಲ್ಲಿ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಶನಿವಾರ ಅದಕ್ಕೆ ಬಲಿಯಾಗಿದ್ದಾರೆ. ಎವೈ.1 ರೂಪಾಂತರಿಯ ಅಪಾಯಕಾರಿ ಆವೃತ್ತಿಯಾಗಿರುವ ಡೆಲ್ಟಾ ಪ್ಲಸ್ ಡೆಲ್ಟಾ ರೂಪಾಂತರಿಯ ಒಂದು ಪ್ರಬೇಧವಾಗಿದ್ದು, ತೀವ್ರಗತಿಯಲ್ಲಿ ಹರಡುವುದರ ಜೊತೆಗೆ ಬೇರೆ ಕೊರೋನಾವೈರಸ್ಗಳಿಗಿಂತ ಹೆಚ್ಚು ಮಾರಣಾಂತಿಕವಾಗಿರುವುದರಿಂದ ದೇಶದಲ್ಲಿ ಹೊಸ ತಲ್ಲಣ ಸೃಷ್ಟಿಯಾಗುವುದಕ್ಕೆ ಕಾರಣವಾಗಿದೆ. ವೈದ್ಯಕೀಯ ಮೂಲಗಳ ಪ್ರಕಾರ ದೇಶದಲ್ಲಿ ಈಗ ನೀಡಲಾಗುತ್ತಿರುವ ಕೊವಿಡ್ -19 ಲಸಿಕೆಗಳು ಅದರ ವಿರುದ್ಧ ಹೆಚ್ಚು ಪ್ರಭಾವ ಬೀರುತ್ತಿಲ್ಲ. ಡೆಲ್ಟಾ ಪ್ಲಸ್ ರೂಪಾಂತರಿಯಿಂದ ಸೋಂಕಿತರಾಗಿರುವ ಮೂವರಲ್ಲಿ ಇಬ್ಬರು ಗುಣಮುಖರಾಗಿದ್ದಾರೆ ಎಂದು ತಮಿಳುನಾಡಿನ ಆರೋಗ್ಯ ಸಚಿವ ಎಮ್ ಸುಬ್ರಮಣಿಯನ್ ಅವರು ಹೇಳಿದ್ದಾರೆ. ಚೇತರಿಸಿಕೊಂಡವರಲ್ಲಿ ಒಬ್ಬರು ಚೆನೈ ನಗರದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯಾಗಿದ್ದರೆ ಮತ್ತೊಬ್ಬರು ಕಂಚೀಪುರಂ ನಿವಾಸಿಯಾಗಿದ್ದಾರೆ.
ಮದುರೈ ರೋಗಿ ಸಾವಿಗೀಡಾದ ನಂತರ ಅವರ ದೇಹದಿಂದ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ ಡೆಲ್ಟಾ ಪ್ಲಸ್ ರೂಪಾಂತರಿ ಪತ್ತೆಯಾಗಿದೆ ಎಂದು ಸುಬ್ರಮಣಿಯನ್ ಹೇಳಿದರು.
ಸಮಾಧಾನಕರ ಸಂಗತಿಯೆಂದರೆ ಮೃತ ರೋಗಿಯ ಜೊತೆಗಿದ್ದವರಲ್ಲಿ ಯಾರಿಗೂ ಸೋಂಕು ತಾಕಿಲ್ಲ.
ಶುಕ್ರವಾರದವರೆಗೆ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿಯಿಂದ ಸೋಂಕಿತರಾಗಿರುವ 20 ಪ್ರಕರಣಗಳು ವರದಿಯಾಗಿವೆ ಮತ್ತು ತಮಿಳುನಾಡಿನಲ್ಲಿ 9 ಜನ ಸೋಂಕಿತರಾಗಿದ್ದಾರೆ. ಡೆಲ್ಟಾ ಪ್ಲಸ್ ರೂಪಾಂತರಿಯ ಸುಮಾರು ಶೇಕಡಾ 30 ರಷ್ಟು ಪ್ರಕರಣಗಳು ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮತ್ತು ಕೇರಳದಲ್ಲಿ ವರದಿಯಾಗಿವೆ.
ಅಪಾಯಕಾರಿ ಡೆಲ್ಟಾ ಪ್ಲಸ್ ರೂಪಾಂತರಿಯಿಂದ ಕಳವಳಕ್ಕೀಡಾಗಿರುವ ಕೇಂದ್ರ ಆರೋಗ್ಯ ಇಲಾಖೆಯು ಶುಕ್ರವಾರದಂದು ಏಳು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ; ಕೂಡಲೇ ಅದನ್ನು ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ. ತಮಿಳುನಾಡಿನ ಮದುರೈ, ಕಂಚೀಪುರಂ ಮತ್ತು ಚೆನೈಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿಯಿಂದ ಬಳಲುತ್ತಿರುವ ಪ್ರಕರಣಗಳು ಪತ್ತೆಯಾದ ನಂತರ ಸೋಂಕಿನ ವಿರುದ್ಧ ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ಸೂಚಿಸಲಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು ಸೋಂಕನ್ನು ನಿಯಂತ್ರಿಸಲು ಮತ್ತು ಕೋವಿಡ್-19 ನಿಯಮಗಳಿಗೆ ಜನ ಬದ್ಧರಾಗಿರುವಂತೆ ಎಚ್ಚರಿಸಲು ಸೂಚಿಸಿದ್ದಾರೆ.
ಭಾರತದ ಸಾರ್ಸ್-ಕೊವ್-2 ಜಿನೋಮಿಕ್ ಕನ್ಸಾರ್ಟಿಯಾದಿಂದ ಲಭ್ಯವಾದ ದತ್ತಾಂಶದ ಆಧಾರದ ಮೇಲೆ ಆರೋಗ್ಯ ಇಲಾಖೆಯು ವೈರಸ್ ತಳಿಗಳ ಜೀನೋಮ್ ಅನುಕ್ರಮವನ್ನು ಅಧ್ಯಯನ ಮತ್ತು ಮಾನಿಟರ್ ಮಾಡಲು ಸ್ಥಾಪಿಸಿದ ವೇದಿಕೆಯು ಡೆಲ್ಟಾ ಪ್ಲಸ್ ರೂಪಾಂತರಿಗಳು ಮೂರು ಪ್ರಮುಖ ಗುಣಲಕ್ಷಣ- ಹೆಚ್ಚಿನ ಪ್ರಮಾಣದ ಹಬ್ಬುವಿಕೆ; ಶ್ವಾಸಕೋಶದ ಗ್ರಾಹಕಗಳೊಂದಿಗೆ ಬಲವಾದ ಬಾಂಧವ್ಯ; ಮತ್ತು ಮೊನೊಕ್ಲೋನಲ್ ಪ್ರತಿಕಾಯ ಪ್ರತಿಕ್ರಿಯೆಯಲ್ಲಿ ಸಂಭಾವ್ಯ ಕಡಿತ ಹೊಂದಿರುವುದನ್ನು ಪತ್ತೆ ಮಾಡಿದೆ.