ಕೇರಳದ ಮೀನು ಮಾರಾಟಗಾರರಾದ ಪೂಕುಂಞು, ಬ್ಯಾಂಕ್‌ನಿಂದ (Bank) ಸಾಲ ಪಡೆದಿದ್ದು ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಇದ್ದಾಗ ಬ್ಯಾಂಕ್‌ನಿಂದ ಜಪ್ತಿ ನೋಟಿಸ್ ಬಂದಿತ್ತು. ಬ್ಯಾಂಕ್ ನೋಟಿಸ್ ಬಂದ ತಲೆ ಬಿಸಿಯಲ್ಲಿರುವಾಗಲೇ ಭಾಗ್ಯ ದೇವತೆ ಬಂದು ಅವರ ಕದ ತಟ್ಟಿದ್ದಾಳೆ. ರಾಜ್ಯ ಸರ್ಕಾರದ 70 ಲಕ್ಷ ರೂಪಾಯಿ ಅಕ್ಷಯ ಲಾಟರಿ (Akshaya lottery) ಪೂಕುಂಞುಗೆ ಒಲಿದಿದೆ. ಅಕ್ಟೋಬರ್ 12 ರಂದು ಪೂಕುಂಞು ಅವರು ಮೀನು ಸಂಗ್ರಹಿಸಲು ತೆರಳುತ್ತಿದ್ದಾಗ ಲಾಟರಿ ಖರೀದಿಸಿದ್ದು ಮೊದಲ ಬಹುಮಾನ 70 ಲಕ್ಷ ರೂಪಾಯಿಯನ್ನು ಅವರು ಗೆದ್ದಿದ್ದಾರೆ. ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ ಸುಮಾರು 9 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಬ್ಯಾಂಕ್ ತನ್ನ ಮನೆಗೆ ಸಂಬಂಧಿಸಿದಂತೆ ಜಪ್ತಿ ನೋಟಿಸ್ ಕಳುಹಿಸಿದೆ ಎಂದು ತಿಳಿದುಬಂದಿದೆ. “ಬ್ಯಾಂಕ್‌ನಿಂದ ನೋಟಿಸ್ ಬಂದ ನಂತರ ನಾವು ಬೇಸರದಲ್ಲಿದ್ದೆವು. ನಮಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ನಮ್ಮ ಆಸ್ತಿಯನ್ನು ಮಾರಾಟ ಮಾಡಬೇಕಾಗುತ್ತದೆಯೇ ಎಂದು ನಾವು ಯೋಚಿಸುತ್ತಿದ್ದೆವು” ಎಂದು ಪೂಕುಂಞು ಅವರ ಹೆಂಡತಿ ಹೇಳಿದ್ದಾರೆ.
ನೋಟಿಸ್ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ಲಾಟರಿಯ ವಿಜೇತ ಸಂಖ್ಯೆಯನ್ನು ಘೋಷಿಸಿದಾಗ ನಮಗೆ ಮೊದಲ ಬಹುಮಾನ ಬಂದಿತ್ತು ಅಂತಾರೆ ಈ ಮೀನುಗಾರರ ಕುಟುಂಬ. ಕೆಲವೇ ಗಂಟೆಗಳ ಹಿಂದೆ ಸಾಲದ ಸುಳಿಯಲ್ಲಿ ಸಿಲುಕಿದ್ದ ವ್ಯಕ್ತಿ ಈಗ ಲಕ್ಷಾಧಿಪತಿ!.
ಮೊದಲು ಎಲ್ಲಾ ಸಾಲಗಳನ್ನು ತೀರಿಸಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಇದರಿಂದ ಅವರು ಜೀವನದಲ್ಲಿ ಉತ್ತಮ ಮಟ್ಟವನ್ನು ತಲುಪುತ್ತಾರೆ ಎಂದು ತಮ್ಮ ಭಾವೀ ಯೋಜನೆಗಳ ಬಗ್ಗೆ ಪೂಕುಂಞು ಹೇಳಿದ್ದಾರೆ.
Published On - 5:10 pm, Fri, 14 October 22