ಮಣಿಪುರದಲ್ಲಿ ಮೇ 4 ರಂದು ನಡೆದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣ ಸಂಬಂಧ ಘಟನೆ ನಡೆದ ಪ್ರದೇಶದ ಠಾಣಾಧಿಕಾರಿ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಮಣಿಪುರ ಪೊಲೀಸರು ಅಮಾನತುಗೊಳಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮೇ 4 ರಂದು ನಡೆದ ಪ್ರಕರಣದ ವಿಡಿಯೋ ಜುಲೈ 19 ರಂದು ವೈರಲ್ ಆದ ತಕ್ಷಣ ಮಣಿಪುರ ಪೊಲೀಸರು ತೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಇತರ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 3 ರಂದು ಬಿಷ್ಣುಪುರದಲ್ಲಿ ಶಸ್ತ್ರಾಗಾರದ ಲೂಟಿಗೆ ಕಾರಣವಾದ ಘಟನೆಗಳನ್ನು ತನಿಖೆ ಮಾಡಲು ರಾಜ್ಯ ಪೊಲೀಸರು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶಿಸಿದ್ದಾರೆ ಎಂದು ಅವರು ಹೇಳಿದರು. ಬಿಷ್ಣುಪುರ್ ಜಿಲ್ಲೆಯ ನರನ್ಸೇನಾದಲ್ಲಿರುವ 2 ನೇ ಇಂಡಿಯಾ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ಕೇಂದ್ರ ಕಚೇರಿಯಿಂದ ಇತ್ತೀಚೆಗೆ ಶಸ್ತ್ರಾಸ್ತ್ರಗಳು ಮತ್ತು ಸುಮಾರು 19,000 ಬುಲೆಟ್‌ಗಳನ್ನು ಲೂಟಿ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಇನ್‌ಸ್ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯೊಬ್ಬರು ವಿಚಾರಣೆಯ ನೇತೃತ್ವ ವಹಿಸಿದ್ದು, ಆರು ವಾರಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಕಳೆದ 24 ಗಂಟೆಗಳಲ್ಲಿ 6 ಮಂದಿ ಸಾವು
ಮೇ 3 ರಂದು ಬಹುಸಂಖ್ಯಾತ ಮೈತೆಯಿ ಮತ್ತು ಕುಕಿ ಸಮುದಾಯದ ನಡುವೆ ಪ್ರಾರಂಭವಾದ ಹಿಂಸಾಚಾರವನ್ನು ನಿಗ್ರಹಿಸಲು ಮಣಿಪುರ ಪೊಲೀಸರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನರ್ಸ್ಥಾಪಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ವಿವಿಧ ಹಿಂಸಾಚಾರ ಪ್ರಕರಣಗಳ ಸಂಬಂಧ ಇದುವರೆಗೆ ಸುಮಾರು 300 ಮಂದಿಯನ್ನು ಬಂಧಿಸಲಾಗಿದೆ. ಜನಾಂಗೀಯ ಘರ್ಷಣೆಯ ಸಮಯದಲ್ಲಿ ಅನೇಕ ಝೀರೋ ಎಫ್‌ಐಆರ್‌ಗಳು ದಾಖಲಾಗಿವೆ ಮತ್ತು ಪ್ರತಿ ಪ್ರಕರಣಗಳನ್ನು ಪರಿಶೀಲನೆ ನಡೆಸಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:54 pm, Sun, 6 August 23