ದೆಹಲಿ ಜುಲೈ 14: ದೆಹಲಿ (Delhi Flood) ವಾಯುವ್ಯ ಜಿಲ್ಲೆಯ ಮುಕುಂದಪುರದ (Mukundpur) ಬಳಿ ನೀರಿನ ಪ್ರವಾಹದಲ್ಲಿ ಮೂವರು ಅಪ್ರಾಪ್ತ ಮಕ್ಕಳು ಸಾವಿಗೀಡಾಗಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಪ್ರವಾಹ ನೀರಿನಲ್ಲಿ ಈಜಲು ಪ್ರಯತ್ನಿಸುತ್ತಿದ್ದಾಗ ಮೂವರು ಬಾಲಕರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತರಲ್ಲಿ ಒಬ್ಬನಿಗೆ 10 ವರ್ಷ ಮತ್ತು ಇಬ್ಬರು 13 ವರ್ಷದವರು. ಸಂಜೆ 4:30 ರ ಸುಮಾರಿಗೆ ಸ್ನಾನಕ್ಕಾಗಿ ಈಶಾನ್ಯ ದೆಹಲಿಯ ಮುಕುಂದಪುರ ಪ್ರದೇಶದಲ್ಲಿನ ಮೆಟ್ರೋ ನಿರ್ಮಾಣ ಸ್ಥಳದಲ್ಲಿನ ಹಳ್ಳದಲ್ಲಿ ಪ್ರವಾಹಕ್ಕೆ ಧುಮುಕಿದ ಇವರು ಮುಳುಗಿ ಸಾವಿಗೀಡಾಗಿದ್ದಾರೆ. ಅವರನ್ನು ಹೊರತೆಗೆದು ಬಿಜೆಆರ್‌ಎಂ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಮೂವರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಲಕರನ್ನು ಪಿಯೂಷ್ (13), ನಿಖಿಲ್ (10) ಮತ್ತು ಆಶಿಶ್ (13) ಎಂದು ಗುರುತಿಸಲಾಗಿದೆ. ಅವರೆಲ್ಲರೂ ಜಹಾಂಗೀರ್ಪುರಿ ಎಚ್-ಬ್ಲಾಕ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಯಮುನಾ ನದಿಯ ಮಟ್ಟವು ದಾಖಲೆಯ ಮಟ್ಟಕ್ಕೆ ಏರುವುದರೊಂದಿಗೆ, ಮುಖ್ಯಮಂತ್ರಿಗಳ ಕಚೇರಿ ವಸತಿ ಸೇರಿದಂತೆ ದೆಹಲಿಯ ಹಲವಾರು ಪ್ರಮುಖ ಪ್ರದೇಶಗಳು ಜಲಾವೃತವಾಗಿವೆ. ಮಳೆಯಿಂದಾಗಿ ಸಾಮಾನ್ಯ ಜೀವನ ಅಸ್ತವ್ಯಸ್ತವಾಗಿದ್ದು, ಸಂಚಾರ ದಟ್ಟಣೆಯುಂಟಾಗಿದೆ. ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳನ್ನು ನಡೆಸಲು ಹರಸಾಹಸ ಪಡುತ್ತಿದ್ದಾರೆ. ಯಮುನಾ ನೀರಿನ ಮಟ್ಟ ಬೆಳಗ್ಗೆ 10 ಗಂಟೆಗೆ 208.53 ಮೀಟರ್ ತಲುಪಿ 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ.
ನದಿಯ ಸಮೀಪವಿರುವ ಶಾಲೆಗಳನ್ನು ಮುಚ್ಚುವುದಾಗಿ ಮತ್ತು ನೀರು ಸಂಸ್ಕರಣಾ ಘಟಕಗಳನ್ನು ಮುಚ್ಚುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದರು. ರಾಷ್ಟ್ರ ರಾಜಧಾನಿಗೆ ವಾಹನಗಳ ಪ್ರವೇಶಕ್ಕೂ ನಿರ್ಬಂಧಗಳನ್ನು ಹಾಕಲಾಗಿದೆ,
ಇದನ್ನೂ ಓದಿ: Delhi Flood: ಯಮುನಾ ನದಿ ನೀರಿನ ಮಟ್ಟ ಇಳಿಕೆಯಾದರೂ ದೆಹಲಿ ಪ್ರವಾಹ ತಗ್ಗಿಲ್ಲ ಯಾಕೆ?
ಸಂಜೆ 5 ಗಂಟೆಗೆ ಯಮುನಾ ನೀರಿನ ಮಟ್ಟ 208.20 ಮೀಟರ್‌ಗೆ ಇಳಿದಿದೆ.ಕೇಂದ್ರ ಜಲ ಆಯೋಗದ ಪ್ರಕಾರ ಸಂಜೆ 5 ಗಂಟೆಗೆ ಯಮುನಾ ನೀರಿನ ಮಟ್ಟ 208.20 ಮೀಟರ್‌ಗೆ ಇಳಿದಿದೆ.
ದೆಹಲಿಯ ಟ್ರಾಫಿಕ್ ಪೊಲೀಸರು ದೆಹಲಿಯ ಹಲವೆಡೆ ಪ್ರವಾಹ ಪರಿಸ್ಥಿತಿಯಿಂದಾಗಿ ಭಾನುವಾರ ನಡೆಯಬೇಕಿದ್ದ ವಿಶೇಷ ಲೋಕ ಅದಾಲತ್ ಅನ್ನು ಜುಲೈ 30 ಕ್ಕೆ ಮುಂದೂಡಲಾಗಿದೆ ಎಂದು ದೆಹಲಿ ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ