Delhi Flood: ಯಮುನಾ ನದಿ ನೀರಿನ ಮಟ್ಟ ಇಳಿಕೆಯಾದರೂ ದೆಹಲಿ ಪ್ರವಾಹ ತಗ್ಗಿಲ್ಲ ಯಾಕೆ?
ಯಮುನಾ ನದಿಯ ನೀರಿನಮಟ್ಟ ಕೊಂಚ ಇಳಿಕೆಯಾಗಿದೆ. ಆದರೂ ಪ್ರವಾಹದ ನೀರು ಕಡಿಮೆಯಾಗುತ್ತಿಲ್ಲ. ಯಾಕಂದ್ರೆ ಇಂದ್ರಪ್ರಸ್ಥದ ಬಳಿ ಡ್ರೈನ್ ರೆಗ್ಯುಲೇಟರ್ ಸಂಪೂರ್ಣ ಹಾನಿಗೊಳಗಾಗಿದೆ. ಹೀಗಾಗಿ ಐಟಿಒ ಮತ್ತು ರಾಜ್‌ಘಾಟ್‌ನ ಪ್ರದೇಶಗಳು ಮುಳುಗಿವೆ.
ನವದೆಹಲಿ, ಜುಲೈ 14: ರಾಷ್ಟ್ರರಾಜಧಾನಿಯ ಮೇಲಿನ ಯಮುನಾ ನದಿಯ (Yamuna River) ಮುನಿಸು ಕಡಿಮೆಯಾಗಿಲ್ಲ. ಕಳೆದ ಮೂರು ದಿನಗಳಿಂದ ಉಕ್ಕಿಹರಿಯುತ್ತಿರುವ ಯಮುನಾ ನದಿ ದೆಹಲಿಗೆ ಜಲದಿಗ್ಬಂಧನ (Delhi Flood) ಹೇರಿದೆ. ನಿನ್ನೆವರೆಗೂ ಹಳೆ ದೆಹಲಿಯ ತಗ್ಗು ಪ್ರದೇಶಗಳಲ್ಲಿದ್ದ ನೀರು ಇಂದು ನವದೆಹಲಿಯ ಸುಪ್ರೀಂಕೋರ್ಟ್ ಅಂಗಳದ ವರೆಗೂ ತಲುಪಿ ಭೀತಿ ಸೃಷ್ಟಿಸಿದೆ. ಯಮುನೆಯ ನೀರಿನ ಮಟ್ಟದಲ್ಲಿ ದಾಖಲೆಯ ಏರಿಕೆಯಿಂದ ದೆಹಲಿ ನಿವಾಸಿಗಳ ಕಷ್ಟ ಇನ್ನಷ್ಟು ಹೆಚ್ಚಾಗಿದೆ. ಯಮುನಾ ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗಿದ್ದರೂ ಬಿಕ್ಕಟ್ಟು ಮುಂದುವರಿದಿದೆ. ಪ್ರಸ್ತುತ ಯಮುನಾ ನದಿಯ ನೀರಿನ ಮಟ್ಟ 208.42 ಮೀಟರ್‌ಗೆ ಏರಿಕೆಯಾಗಿದೆ. ಅಪಾಯದ ಮಟ್ಟಕ್ಕಿಂತ ಮೂರುಮೀಟರ್ ಹೆಚ್ಚು ನೀರು ಹರಿಯುತ್ತಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ನ್ಯೂ ಉಸ್ಮಾನ್‌ಪುರ, ಶಾಸ್ತ್ರಿ ಪಾರ್ಕ್, ಮಯೂರ್ ವಿಹಾರ್ ಮತ್ತು ಸೋನಿಯಾ ವಿಹಾರ್‌ನ ಹಲವು ಪ್ರದೇಶಗಳಲ್ಲಿ ತಲಾ ಒಂದು ಮಹಡಿಗೆ ನೀರು ತಲುಪಿದೆ.
ಕಾಶ್ಮೀರಿ ಗೇಟ್, ರೆಡ್ ಪೋರ್ಟ್, ಅಕ್ಷರ್ ಧಾಮ್, ಐಟಿಓ, ವಜಿರಾಬಾದ್, ನಿಗಮ್ ಭೋದ್ ಘಾಟ್ ಹಾಗೂ ದೆಹಲಿಯ ರಾಷ್ಟ್ರೀಯ ಸ್ಮೃತಿಯಲ್ಲಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಮಾಧಿ ‘ಅಟಲ್ ಸದೈವ್’, ಶಾಂತಿವನದಲ್ಲಿರುವ ನೆಹರೂ ಅವರ ಸಮಾಧಿ, ಮಹಾತ್ಮಗಾಂಧಿ ಸಮಾಧಿ ಇರುವ ರಾಜ್ ಘಾಟ್ ಸೇರಿದಂತೆ ಅನೇಕ ಗಣ್ಯರ ಸಮಾಧಿಗಳು ನೀರಿನಿಂದ ಜಲಾವೃತವಾಗಿವೆ. ನವದೆಹಲಿಗೂ ಯಮುನಾ ನದಿ ಪ್ರವಾಹ ಎಂಟ್ರಿಕೊಟ್ಟಿದ್ದು ಸುಪ್ರೀಂಕೋರ್ಟ್ ಕಾಂಪೌಂಡ್ ವರೆಗೂ ನೀರು ಬಂದಿದೆ. ಸುಪ್ರೀಂಕೋರ್ಟ್ ಬಳಿಯಿಂದ ನೀರನ್ನು ಹೊರಹಾಕಲು ಟ್ರಾಕ್ಟರ್ ಯಂತ್ರಗಳನ್ನು ಬಳಿಸಿಕೊಳ್ಳಲಾಗುತ್ತಿದೆ.
ದೆಹಲಿಯ ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಐಟಿಒ ಬಳಿ ಪ್ರವಾಹದ ನೀರು ತಲುಪಿದೆ. ಆದಾಯ ತೆರಿಗೆ ಕಚೇರಿ ನೀರಿನಿಂದ ಆವೃತವಾಗಿದೆ. ಕಚೇರಿಯ ಗ್ರೌಂಡ್ ಫ್ಲೋರ್ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿದೆ. ಇಂದು ಬೆಳಗ್ಗೆ ಐಟಿಒ ಬಳಿ ಪರಿಶೀಲನೆ ನಡೆಸಿದ ಸಿಎಂ ಅರವಿಂದ್ ಕೇಜ್ರೀವಾಲ್ ನೀರು ಹೋಗಲಾಡಿಸಲು ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಹಾಯ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಒಂದು ಕಡೆ ಯಮುನಾ ನದಿಯ ನೀರಿನಮಟ್ಟ ಕೊಂಚ ಇಳಿಕೆಯಾಗಿದೆ. ಆದರೂ ಪ್ರವಾಹದ ನೀರು ಕಡಿಮೆಯಾಗುತ್ತಿಲ್ಲ. ಯಾಕಂದ್ರೆ ಇಂದ್ರಪ್ರಸ್ಥದ ಬಳಿ ಡ್ರೈನ್ ರೆಗ್ಯುಲೇಟರ್ ಸಂಪೂರ್ಣ ಹಾನಿಗೊಳಗಾಗಿದೆ. ಹೀಗಾಗಿ ಐಟಿಒ ಮತ್ತು ರಾಜ್‌ಘಾಟ್‌ನ ಪ್ರದೇಶಗಳು ಮುಳುಗಿವೆ.
ಇದನ್ನೂ ಓದಿ: Delhi Rain: ಮಳೆ ಕಡಿಮೆ ಇದ್ದರೂ ದೆಹಲಿಯಲ್ಲಿ ಯಮುನೆ ಉಕ್ಕಿ ಹರಿದಿದ್ದಾದರು ಯಾಕೆ?
ಡ್ರೈನ್ ರೆಗ್ಯೂಲೆಟರ್ ಹಾಳಾಗಿರುವುದರಿಂದ ದೆಹಲಿಯ ಮಧ್ಯ ಭಾಗದಲ್ಲಿರುವ ತಿಲಕ್ ಮಾರ್ಗ್ ಪ್ರದೇಶದಲ್ಲಿರುವ ಸುಪ್ರಿಂ ಕೋರ್ಟ್‌ಗೂ ಪ್ರವಾಹದ ನೀರು ತಲುಪಿದೆ. ನಿಯಂತ್ರಕಕ್ಕೆ ಆಗಿರುವ ಹಾನಿಯನ್ನು ಆದ್ಯತೆ ಮೇಲೆ ಸಮಸ್ಯೆ ಬಗೆಹರಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚಿಸಿದ್ದಾರೆ.
ಇನ್ನು ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿ ಪ್ರವಾಹದ ಕುರಿತು ಗೃಹ ಸಚಿವ ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದಾರೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿದ್ದಾರೆ.
ಯಮುನೆಯ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಆದರೆ ಡ್ರೈನೇಜ್ ವ್ಯವಸ್ಥೆ ಕೆಟ್ಟು ಹೋಗಿರುವ ಪರಿಣಾಮ ದೆಹಲಿಗೆ ನುಗ್ಗಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ನೀರನ್ನು ಹೋರಹಾಕುವ ಪ್ರಯತ್ನ ನಡೆಯುತ್ತಲೇ ಇದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Fri, 14 July 23