ಚೆನ್ನೈ: ನ್ಯಾಯಮೂರ್ತಿಗಳ ಪತ್ನಿಯರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತ್ತಾ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಸಿ ಎಸ್ ಕರ್ಣನ್ ಅವರನ್ನು ಇಂದು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಈ ಮೊದಲು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕರ್ಣನ್ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದರು.
ಕರ್ಣನ್ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಪತ್ನಿಯರ ಬಗ್ಗೆ ಹಾಗೂ ಮಹಿಳಾ ನ್ಯಾಯಮೂರ್ತಿಗಳನ್ನು ನಿಂದಿಸಿದ್ದರು. ಅಷ್ಟೇ ಅಲ್ಲ ಈ ಹೇಳಿಕೆಗಳನ್ನು ಅವರು ಯೂಟ್ಯೂಬ್ನಲ್ಲೂ ಅಪ್ಲೋಡ್ ಮಾಡಿದ್ದರು.
ಆದರೆ, ಈ ಪ್ರಕರಣದಲ್ಲಿ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಕಾರಣಕ್ಕೆ ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ಛೀಮಾರಿ ಹಾಕಿತ್ತು. ಇದಾದ ನಂತರದಲ್ಲಿ ಎಚ್ಚೆತ್ತುಕೊಂಡಿರುವ ಚೆನ್ನೈ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ನ್ಯಾಯಾಂಗ ನಿಂದನೆ ಮಾಡಿದ್ದಕ್ಕೆ ಕರ್ಣನ್ ಅವರನ್ನು ಜೈಲಿಗೆ ಹಾಕಲಾಗಿತ್ತು. ಅಧಿಕಾರದಲ್ಲಿದ್ದಾಗಲೇ ಜೈಲು ಸೇರಿದ ಮೊದಲ ನ್ಯಾಯಮೂರ್ತಿ ಎನ್ನುವ ಕುಖ್ಯಾತಿಗೆ ಕರ್ಣನ್ ಪಾತ್ರರಾಗಿದ್ದರು. 6 ತಿಂಗಳು ಜೈಲು ಶಿಕ್ಷೆ ಪಡೆದ ನಂತರ ಅವರು ಜೈಲಿನಿಂದ ಹೊರ ಬಂದಿದ್ದರು.
ಕರ್ಣನ್ 2009ರಲ್ಲಿ ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2016ರಲ್ಲಿ ಇವರನ್ನು ಕೋಲ್ಕತ್ತಾ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಗಿತ್ತು. ಹಿರಿಯ ನ್ಯಾಯಮೂರ್ತಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದರು.
ಮಾಸ್ಕ್ ಇಲ್ಲದೆ ಸಂಚರಿಸಿದರೆ ಸೋಂಕಿತರ ಸೇವೆ ಮಾಡುವ ಶಿಕ್ಷೆ: ಗುಜರಾತ್ ಹೈಕೋರ್ಟ್ ವಿನೂತನ ಕ್ರಮ
Published On - 5:14 pm, Wed, 2 December 20