ನವದೆಹಲಿ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರಕ್ಕೆ ಕೇಂದ್ರ ಸರ್ಕಾರ ಗಣೇಶನ ಹಬ್ಬದ ಗಿಫ್ಟ್ ಕೊಟ್ಟಿದೆ. ನಾಗಾಲ್ಯಾಂಡ್ ಗವರ್ನರ್, ಮಾಜಿ ಐಪಿಎಸ್, ಕೇಂದ್ರದ ಮಧ್ಯಸ್ಥಿಕೆದಾರ ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥ ಆರ್ ಎನ್ ರವಿ ತಮಿಳುನಾಡಿಗೆ ಹೊಸ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.
ಆಡಳಿತಾರೂಢ ಡಿಎಂಕೆ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಆಗಾಗ ತಿಕ್ಕಾಟ ಜೋರಾಗಿ ಕೇಳಿಬರುವ ಹಿನ್ನೆಲೆಯಲ್ಲಿ ಅತ್ಯುನ್ನತ ಮಾಜಿ ಪೊಲೀಸ್ ಅಧಿಕಾರಿಯನ್ನು ಅದರಲ್ಲೂ ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥನನ್ನು (R.N. Ravi ) ತಮಿಳುನಾಡಿಗೆ ಹೊಸ ಗವರ್ನರ್ ಆಗಿ ನೇಮಕ ಮಾಡಿರುವುದು ಕುತೂಹಲಕಾರಿಯಾಗಿದೆ.
ಗುರುವಾರ ರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ram Nath Kovind) ಈ ಸಂಬಂಧ ವರ್ಗಾವಣೆ ಆಜ್ಞಗೆ ಸಹಿ ಹಾಕಿದ್ದಾರೆ. ಇದಲ್ಲದೆ ಇನ್ನೂ ಕೆಲ ರಾಜ್ಯಪಾಲರುಗಳನ್ನು ಸಹ ವರ್ಗ/ ಆಯ್ಕೆ ಮಾಡಲಾಗಿದೆ.
ಈ ಮಧ್ಯೆ, ಉತ್ತರಾಖಂಡದ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ( Baby Rani Maurya) ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಮುಂದಿನ ವರ್ಷ ಉತ್ತರಾಖಂಡದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು ಬೇಬಿ ರಾಣಿ ಮೌರ್ಯ ಸಕ್ರಿಯ ರಾಜಕೀಯಕ್ಕೆ ಮರಳಲು ಉದ್ದೇಶಿಸಿದ್ದು, ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನಿತರೆ ಬದಲಾವಣೆಗಳಲ್ಲಿ ಪಂಜಾಬ್ ರಾಜ್ಯಪಾಲರಾಗಿಯೂ ಹೆಚ್ಚುವರಿ ಜವಾಬ್ದಾರಿ ಹೊತ್ತಿದ್ದ ತಮಿಳುನಾಡು ಹಾಲಿ ಗವರ್ನರ್ ಬನ್ವರಿಲಾಲ್ ಪುರೋಹಿತ್ (Banwarilal Purohit) ಅವರನ್ನು ಪೂರ್ಣ ಪ್ರಮಾಣದಲ್ಲಿ ಪಂಜಾಬ್ ರಾಜ್ಯಪಾಲರಾಗಿ ನೇಮಿಸಲಾಗಿದೆ.
Also read:
3 ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕಾರ ಮಾಡಿದ ತಮಿಳುನಾಡು ವಿಧಾನಸಭೆ; ಹೊರನಡೆದ ಬಿಜೆಪಿ, ಎಐಎಡಿಎಂಕೆ ಶಾಸಕರು
(former IB chief Governor of Nagaland R.N. Ravi transferred as the next Governor of Tamil Nadu)
Published On - 9:03 am, Fri, 10 September 21