
ಶ್ರೀನಗರ, ಅಕ್ಟೋಬರ್ 4: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (Farooq Abdullah) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಹೊಟ್ಟೆಯ ಸೋಂಕು ಕಾಣಿಸಿಕೊಂಡ ನಂತರ ಇಂದು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರು ತಿಳಿಸಿದ್ದಾರೆ.
87 ವರ್ಷದ ಫಾರೂಕ್ ಅಬ್ದುಲ್ಲಾ ಅವರಿಗೆ ಈ ವಾರದ ಆರಂಭದಲ್ಲಿ ಹೊಟ್ಟೆಯ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ಶ್ರೀನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ 2 ಬಾರಿ ಮುಖ್ಯಮಂತ್ರಿಯಾಗಿದ್ದ ಫಾರೂಕ್ ಅಬ್ದುಲ್ಲಾ ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ 26 ಜನರನ್ನು ಕೊಂದ ಮೂವರು ಉಗ್ರರ ಹತ್ಯೆ; ಸಂಸತ್ನಲ್ಲಿ ಅಮಿತ್ ಶಾ ಘೋಷಣೆ
“ಫಾರೂಕ್ ಅಬ್ದುಲ್ಲಾ ಕಳೆದ ಕೆಲವು ದಿನಗಳಿಂದ ಆರೋಗ್ಯವಾಗಿರಲಿಲ್ಲ. ಈಗ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ನಾಳೆ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ” ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕರೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಫಾರೂಕ್ ಅವರ ಆರೋಗ್ಯ ಸರಿಯಾಗಿಲ್ಲದಿದ್ದರೂ, ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ, ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದನೆಯು 26 ಜೀವಗಳನ್ನು ಬಲಿ ತೆಗೆದುಕೊಂಡಿತು. ಅದರಲ್ಲಿ ಬಹುತೇಕರು ಪ್ರವಾಸಿಗರಾಗಿದ್ದರು. ಇದು ಭಾರತ ಮತ್ತು ಪಾಕಿಸ್ತಾನದ ನಡುವೆ 4 ದಿನಗಳ ಮಿಲಿಟರಿ ಸಂಘರ್ಷಕ್ಕೆ ಕಾರಣವಾಯಿತು. ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಿದ್ದಕ್ಕೆ ಅವರು ತಮ್ಮ ಮಗ ಒಮರ್ ಅಬ್ದುಲ್ಲಾ ಅವರ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ